ಓಶೋ ಹೇಳಿದ ಬುದ್ಧನ ಕತೆ

“ಮಕ್ಕಳಂತೆ ನೀವು ಕಾಡಿನ ಒಣ ಎಲೆಗಳ ಮೇಲೆ ಓಡಾಡಿ ಕಾಡಿನ ಸಮಸ್ತದೊಂದಿಗೆ ಒಂದಾಗಿ. ನನ್ನ ಕೆಲವು ಮಾತುಗಳನ್ನ ಹಿಡಿದುಕೊಂಡು ಹಿಂಜುತ್ತಾ ಅದೇ ಸಮಸ್ತ ಎನ್ನುವ ಭ್ರಮೆಯಲ್ಲಿ ಬೀಳಬೇಡಿ. ಸ್ವತಃ ನೀವು ಕಾಡಿನ ಜೊತೆ ಒಂದಾಗಿ, ಆಗ ನಿಮ್ಮ ಪ್ರಶ್ನೆಗಳೇ ಇಲ್ಲವಾಗುತ್ತವೆ” ಅಂದ ಬುದ್ಧ. ~ ಓಶೋ ರಜನೀಶ್ । ಕನ್ನದಕ್ಕೆ: ಚಿದಂಬರ ನರೇಂದ್ರ

ಒಂದು ದಿನ ಬುದ್ಧ ಶಿಷ್ಯ ಆನಂದನೊಡನೆ ಕಾಡಿನ ಮೂಲಕ ಹಾಯ್ದು ಹೋಗುತ್ತಿದ್ದ. ಅದು ಶರತ್ಕಾಲದ ಸಂಜೆಯಾಗಿದ್ದರಿಂದ ಕಾಡಿನ ತುಂಬ ಒಣ ಎಲೆಗಳು ರಾಶಿ ರಾಶಿಯಾಗಿ ಬಿದ್ದಿದ್ದವು. ಸಂಜೆಯ ಗಾಳಿ ಆ ಎಲೆಗಳನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಕೊಂಡೊಯ್ಯುತ್ತ ಮಧುರ ಸಂಗೀತವನ್ನು ಕಾಡಿನ ತುಂಬ ಹರಡಿತ್ತು. ಆ ಒಣಗಿದ ಎಲೆಗಳ ಮೇಲೆ ನಡೆಯುವುದೇ ಒಂದು ದಿವ್ಯ ಅನುಭವವಾಗಿತ್ತು.

ಆನಂದ, ಬುದ್ಧನನ್ನು ಪ್ರಶ್ನೆ ಮಾಡಿದ……

“ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲೊಂದು ಪ್ರಶ್ನೆ ಇದೆ.
ಇಂದು ನಮ್ಮ ಸುತ್ತ ಮುತ್ತ ಬೇರೆ ಯಾರೂ ಇಲ್ಲ. ಇಂಥ ಸಮಯ ನನಗೆ ಅಪರೂಪಕ್ಕೆ ಸಿಕ್ಕಿದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ನಾನು ನಿನ್ನ ಜೊತೆ ಇರುತ್ತೇನಾದರೂ, ಬೇರೆ ಯಾರಾದರೊಬ್ಬರು ನಮ್ಮ ನಡುವೆ ಬಂದೇ ಬರುತ್ತಾರೆ ಮತ್ತು ಪ್ರಶ್ನೆ ಕೇಳುವ ಆದ್ಯತೆ ಯಾವಾಗಲೂ ಅವರದಾಗಿರುತ್ತದೆ. ನಾನು ಸದಾ ನಿನ್ನ ಜೊತೆ ಇರುತ್ತೇನೆ ಆದ್ದರಿಂದ ಇವತ್ತು ಕೇಳಿದರಾಯ್ತು ನಾಳೆ ಕೇಳಿದರಾಯ್ತು ಎಂದು ನನ್ನ ಪ್ರಶ್ನೆ ನನ್ನೊಳಗೇ ಉಳಿದುಕೊಂಡುಬಿಟ್ಟಿದೆ. ಇವತ್ತು ನಮ್ಮ ಸುತ್ತೆ ಬೇರೆ ಯಾರೂ ಇಲ್ಲವಾದ್ದರಿಂದ ನನ್ನ ಪ್ರಶ್ನೆಯನ್ನ ಕೇಳಿಯೇ ಬಿಡುತ್ತೇನೆ, ನನ್ನ ಪ್ರಶ್ನೆ ಏನೆಂದರೆ… ನಿನಗೆ ಗೊತ್ತಿರುವ ಎಲ್ಲವನ್ನೂ ನೀನು ಹೇಳಿಬಿಟ್ಟಿದ್ದೀಯಾ? ಅಥವಾ ಕೆಲವಾದರೂ ಸಂಗತಿಗಳನ್ನು ನಮಗೆ ಹೇಳದೆ ನಿನ್ನೊಳಗೇ ಇಟ್ಟುಕೊಂಡಿದ್ದೀಯಾ? “

ಬುದ್ಧ ಒಂದು ಜಾಗದಲ್ಲಿ ನಿಂತು ಕೆಳಗೆ ಬಿದ್ದಿದ್ದ ಒಣಗಿದ ಎಲೆಗಳನ್ನ ತನ್ನ ಮುಷ್ಟಿಯಲ್ಲಿ ತುಂಬಿಕೊಂಡ.

“ಏನು ಮಾಡುತ್ತಿದ್ದೀಯ ತಥಾಗತ ? “ ಆನಂದ ಬುದ್ಧನನ್ನು ಮತ್ತೆ ಪ್ರಶ್ನೆ ಮಾಡಿದ.

“ ನಿನ್ನ ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ . ನನ್ನ ಕೈಯೊಳಗೆ ನಿನಗೆ ಏನು ಕಾಣಿಸುತ್ತಿದೆ? “ ಬುದ್ಧ ಆನಂದನನ್ನು ಕೇಳಿದ.

“ ಕೆಲವು ಒಣಗಿದ ಎಲೆಗಳು”

“ ಮತ್ತು ಈ ಕಾಡಿನ ತುಂಬ ನಿನಗೆ ಏನು ಕಾಣಿಸುತ್ತಿದೆ?”

“ ಕೋಟ್ಯಾಂತರ ಒಣ ಎಲೆಗಳು” ಆನಂದ ಉತ್ತರಿಸಿದ.

“ನಾನು ಜಗತ್ತಿಗೆ ಹೇಳಿದ್ದು ನನ್ನ ಕೈಯಲ್ಲಿರುವ ಒಣ ಎಲೆಗಳಷ್ಟು ಮಾತ್ರ. ನಾನು ಹೇಳದೇ ಇರುವುದು ಇಡೀ ಕಾಡಿನ ತುಂಬ ತುಂಬಿಕೊಂಡಿರುವ ಎಲೆಗಳಷ್ಟು. ನನ್ನ ಬಯಕೆ ನಿಮಗೆ ಮುಷ್ಟಿ ತುಂಬ ಎಲೆಗಳನ್ನು ಕೊಡುವುದಲ್ಲ ನನ್ನ ಆಸೆ ನಿಮಗೆ ಇಡೀ ಕಾಡಿನ ಪರಿಚಯ ಮಾಡಿಸುವುದು, ಕಾಡಿನ ಸಂಗೀತವನ್ನು ಕೇಳುವಂತೆ ಮಾಡುವುದು. ಮಕ್ಕಳಂತೆ ನೀವು ಕಾಡಿನ ಒಣ ಎಲೆಗಳ ಮೇಲೆ ಓಡಾಡಿ ಕಾಡಿನ ಸಮಸ್ತದೊಂದಿಗೆ ಒಂದಾಗಿ. ನನ್ನ ಕೆಲವು ಮಾತುಗಳನ್ನ ಹಿಡಿದುಕೊಂಡು ಹಿಂಜುತ್ತಾ ಅದೇ ಸಮಸ್ತ ಎನ್ನುವ ಭ್ರಮೆಯಲ್ಲಿ ಬೀಳಬೇಡಿ. ಸ್ವತಃ ನೀವು ಕಾಡಿನ ಜೊತೆ ಒಂದಾಗಿ, ಆಗ ನಿಮ್ಮ ಪ್ರಶ್ನೆಗಳೇ ಇಲ್ಲವಾಗುತ್ತವೆ.” ಬುದ್ಧ ಆನಂದನ ಪ್ರಶ್ನೆಗೆ ಸಮಾಧಾನ ಹೇಳಿದ.

Leave a Reply