ಆಲಿಸುವ ಬಗೆ ಹೀಗೆ…

ಯಾವಾಗ ನೀವು ಒಬ್ಬ ವ್ಯಕ್ತಿಯ ಕಾರುಣ್ಯ, ತಿಳುವಳಿಕೆ, ಸಮಾಧಾನ ಮತ್ತು ಪ್ರೀತಿ ತುಂಬಿದ ದನಿಯನ್ನ ಕೇಳುತ್ತೀರಿ, ಆಗ ನೀವು ಒಂದು ಪರಿಪೂರ್ಣ ಆಹಾರವನ್ನು ಸೇವಿಸುತ್ತೀರಿ… ~ Thich Nhat Hanh; How to Listen | ಕನ್ನಡಕ್ಕೆ: ಚಿದಂಬರ ನರೇಂದ್ರ

ಬುದ್ಧನ ಪ್ರಕಾರ ಇಂದ್ರಿಯಗಮ್ಯ ಪ್ರಭಾವಗಳು (sensory impressions) ಒಂದು ಬಗೆಯ ಆಹಾರ ಇದ್ದಂತೆ. ನಾವು “ತಿನ್ನುವುದು” ನಮ್ಮ ಆರು ಇಂದ್ರಿಯಗಳ ಸಹಾಯದಿಂದ : ನಮ್ಮ ಕಣ್ಣುಗಳು, ಕಿವಿ, ಮೂಗು, ನಾಲಿಗೆ, ದೇಹ ಮತ್ತು ಮನಸ್ಸು (mind). ಟೆಲಿವಿಜನ್ ಕಾರ್ಯಕ್ರಮ ಒಂದು ಬಗೆಯ ಆಹಾರ ; ನಮ್ಮ ಸಂಭಾಷಣೆಗಳು ಆಹಾರ ; ಸಂಗೀತ ಆಹಾರ ; ಕಲೆ ಆಹಾರ ; ಜಾಹೀರಾತು ಫಲಕಗಳು ಆಹಾರ. ಸಿಟಿಯಲ್ಲಿ ಓಡಾಡುವಾಗ ಈ ಸಂಗತಿಗಳನ್ನ ನೀವು ಯಾವುದೇ ಅರಿವಿಲ್ಲದೆ, ಸ್ವತಃ ನಿಮ್ಮ ಒಪ್ಪಿಗೆ ಇಲ್ಲದೆ ಸೇವಿಸುತ್ತೀರಿ (consume). ಯಾವುದನ್ನ ನೀವು ನೋಡುತ್ತೀರೋ, ಯಾವುದನ್ನ ನೀವು ಮುಟ್ಟುತ್ತೀರೋ, ಯಾವುದನ್ನ ನೀವು ಕೇಳುತ್ತೀರೋ ಅದು ನಿಮ್ಮ ಆಹಾರವಾಗುತ್ತದೆ.

ನಾವು ಸೇವಿಸುವ ಈ ಸಂಗತಿಗಳು ನಮ್ಮ ತಿಳುವಳಿಕೆಯನ್ನ ನಮ್ಮ ಅಂತಃಕರಣವನ್ನ ಪೋಷಿಸಬಹುದು ಅಥವಾ ಅವು ನಮಗೆ ಅತ್ಯಂತ ವಿಷಕಾರಿಯಾಗಬಹುದು. ಇವುಗಳಲ್ಲಿ ಬಹುತೇಕ ಸಂಗತಿಗಳು ನಮ್ಮೊಳಗಿನ ಬಯಕೆಗಳಿಗೆ, ದುಗುಡಗಳಿಗೆ, ಹಿಂಸೆಗೆ ನೀರೆರೆಯುತ್ತವೆ. ಮತ್ತು ಇವುಗಳ ಕುರಿತಾದ ಹಸಿವು ನಮ್ಮ ಅಸ್ತಿತ್ವದ ತಿರುಳನ್ನ ಪೆನಿಟ್ರೇಟ್ ಮಾಡುತ್ತದೆ. ಇಂಥವನ್ನು ಹೆಚ್ಚು ಸೇವಿಸುವುದು ಅಥವಾ ಕಡಿಮೆ ಸೇವಿಸುವುದು ಸಮಸ್ಯೆ ಅಲ್ಲ, ಸಮಸ್ಯೆ ನಾವು ಇವನ್ನು ಸಂಪೂರ್ಣ ಅರಿವಿನಿಂದ (ಮೈಂಡ್ ಫುಲ್ ) ಸೇವಿಸದಿರುವುದು.

ಯಾವಾಗ ನೀವು ಒಬ್ಬ ವ್ಯಕ್ತಿಯ ಕಾರುಣ್ಯ, ತಿಳುವಳಿಕೆ, ಸಮಾಧಾನ ಮತ್ತು ಪ್ರೀತಿ ತುಂಬಿದ ದನಿಯನ್ನ ಕೇಳುತ್ತೀರಿ, ಆಗ ನೀವು ಒಂದು ಪರಿಪೂರ್ಣ ಆಹಾರವನ್ನು ಸೇವಿಸುತ್ತೀರಿ. ಒಮ್ಮೆ ನೀವು ತಿಳುವಳಿಕೆ ಮತ್ತು ಅಂತಃಕರಣಗಳ ಸಹಾಯದಿಂದ ನಿಮ್ಮನ್ನ ಹೇಗೆ ಪೋಷಿಸಿಕೊಳ್ಳಬೇಕು ಎನ್ನುವುದನ್ನ ಕಲಿತುಬಿಟ್ಟಿರಾದರೆ, ಮುಂದೆ ನೀವು ಪರಿಪೂರ್ಣ, ಪೋಷಿಸುವ ವಿಚಾರ ಗಳನ್ನು ನೀವೇ ನಿರ್ಮಿಸಿಕೊಳ್ಳಬಲ್ಲಿರಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.