ನಾನು ಅನ್ನುವುದು ಇರದಿದ್ದರೆ ನೀನೂ ಅನ್ನುವುದೂ ಇಲ್ಲ. ನಾನು ಪ್ರತ್ಯೇಕ ಅನ್ನಿಸುವವರೆಗೆ ನೀನು ನನ್ನ ಒಳಗೇ ಇರುತ್ತೀಯ. ಚಿನ್ನವನ್ನೂ ಬಣ್ಣವನ್ನೂ ಬೇರೆ ಮಾಡಲು ಆಗದ ಹಾಗೆ ನನ್ನನ್ನೂ ನಿನ್ನನ್ನೂ ಬೇರೆ ಮಾಡಲು ಆಗದು. ಹಾಗೆ ನನ್ನೊಳಗೆಲ್ಲ ನೀನೇ ಇದ್ದರೂ ನೀನು ಕಾಣದೆ ಬೇರೆಯಾಗೇ ಇದ್ದೀಯಲ್ಲಾ ಅನ್ನುವ ಬೆರಗಿನ ಪ್ರಶ್ನೆ ಇಲ್ಲಿದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ
ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ
ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ
ಅಯ್ಯಾ
ಎನ್ನೊಳಗೆ ಇನಿತಿರ್ದು ಮೈದೋರದ ಭೇದವ ನಿಮ್ಮಲ್ಲಿ ಕಂಡೆ
ಕಾಣಾ
ಚೆನ್ನಮಲ್ಲಿಕಾರ್ಜುನಾ [೯೯]
[ಅಱಿ=ತಿಳಿವು, ಎಲ್ಲಿರ್ದೆ=ಎಲ್ಲಿದ್ದೆ, ಎನ್ನೊಳಗಿರ್ದೆ=ನನ್ನೊಳಗಿದ್ದೆ, ಇನಿತಿರ್ದು=ಇಷ್ಟು/ಇಷ್ಟೊಂದು ಇದ್ದೂ]
ʻನಾನುʼ ಎಂಬ ಅರಿವು ನನ್ನಲ್ಲಿ ಮೂಡುವವರೆಗೆ ನೀನು ಎಲ್ಲಿದ್ದೆ? ನನ್ನೊಳಗೇ ಇದ್ದೆ-ಚಿನ್ನದೊಳಗೆಲ್ಲ ಬಣ್ಣ ಇರುವ ಹಾಗೆ. ನನ್ನೊಳಗೆ ಇಷ್ಟೊಂದು ಇದ್ದರೂ ಮೈತೋರದೆ ಇದ್ದೀಯಲ್ಲಾ ಆ ಪ್ರತ್ಯೇಕತೆಯನ್ನು ನಿಮ್ಮಲ್ಲಿ ಕಂಡೆ, ಚೆನ್ನಮಲ್ಲಿಕಾರ್ಜುನಾ.
ಮನಶ್ಶಾಸ್ತ್ರದ ಜಟಿಲ ತತ್ವವೊಂದಿದೆ. ಅದು ಮಗುವಿನಲ್ಲಿ ನಾನತ್ವ ರೂಪುಗೊಳ್ಳುವ ಕ್ರಮವನ್ನು ಕುರಿತದ್ದು. ನಾನು ಎಂಬುದು ನನಗೆ ಕಾಣುವ ಎಲ್ಲ ವಸ್ತು, ಸಂಗತಿ, ಚಲನೆಗಳಿಗಿಂತ ಬೇರೆ ಅನ್ನುವ ಭಾವ ಸ್ಥಿರವಾಗುವುದು ಯಾವಾಗ ಅನ್ನುವ ಚರ್ಚೆಗಳೂ ಇವೆ. ನಾನು ಅನ್ನುವುದು ಇರದಿದ್ದರೆ ನೀನೂ ಅನ್ನುವುದೂ ಇಲ್ಲ. ನಾನು ಪ್ರತ್ಯೇಕ ಅನ್ನಿಸುವವರೆಗೆ ನೀನು ನನ್ನ ಒಳಗೇ ಇರುತ್ತೀಯ. ಚಿನ್ನವನ್ನೂ ಬಣ್ಣವನ್ನೂ ಬೇರೆ ಮಾಡಲು ಆಗದ ಹಾಗೆ ನನ್ನನ್ನೂ ನಿನ್ನನ್ನೂ ಬೇರೆ ಮಾಡಲು ಆಗದು. ಹಾಗೆ ನನ್ನೊಳಗೆಲ್ಲ ನೀನೇ ಇದ್ದರೂ ನೀನು ಕಾಣದೆ ಬೇರೆಯಾಗೇ ಇದ್ದೀಯಲ್ಲಾ ಅನ್ನುವ ಬೆರಗಿನ ಪ್ರಶ್ನೆ ಇಲ್ಲಿದೆ. ʻನೀನುʼ ಅನ್ನುವುದು ನನ್ನ ಇನ್ನೊಂದು ಬಿಂಬವೊ, ನಾನು ನಿನ್ನ ಬಿಂಬವೋ ಕೊನೆಯಿರದಷ್ಟು ಚರ್ಚೆ ಮಾಡಬಹುದು. ನಾನು ಮತ್ತು ಅನ್ಯದ ಸಂಬಂಧ ಬಲು ದೊಡ್ಡ ತಾತ್ವಿಕ ಚರ್ಚೆಯೂ ಹೌದು. ನನ್ನ ಉಗುರಿನ ತುದಿಯಾಚೆಗೆ ಇರುವುದೆಲ್ಲ ಅನ್ಯವೇ, ಪರ-the other, ನಾನಲ್ಲದ್ದು-foreign ಎಂದು ಲಾರೆನ್ಸ್ ಎಲ್ಲೋ ಹೇಳಿದ್ದು ನೆನಪಾಗುತ್ತದೆ. ನನ್ನೊಳಗೇ ಇದ್ದೂ ನನಗೆ ಕಾಣದಿರುವುದನ್ನು ಹೇಗೆ, ಯಾವಾಗ
ಕಾಣಲಿ , ಸಾಧ್ಯವೇ ಅದು ಅನ್ನುವ ಪ್ರಶ್ನೆ ಎಲ್ಲ ಆಧ್ಯಾತ್ಮಿಕ ಸಾಧಕರನ್ನೂ ಕಾಡುವ ಪ್ರಶ್ನೆ.
ʻನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ, ಎನ್ನೊಳಗಿದ್ದು ನಿನ್ನ ತೋರಲಿಕೆ ನಿನ್ನ ರೂಪಾದೆʼ ಎಂಬ ಬಸವ ವಚನವಿದೆ [೧.೮೨೩] ʻಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ?ʼ ಅನ್ನುವುದು ಅಲ್ಲಮ ಕೇಳುವ ಪ್ರಶ್ನೆ [೨.೧೦] ನಾನರಿತು, ನಿನ್ನ ಕುರಿತೆಹೆನೆಂದಡೆ ನಿನಗೆ ಭಿನ್ನವಾದೆ/ನಿನ್ನನರಿತು, ಎನ್ನನರಿದಿಹೆನೆಂದಡೆ ಪ್ರತಿರೂಪನಾದೆ/ ನಾನಿನ್ನೇತರಿಂದರಿವೆ ? ಅನ್ನುವುದು ಮೋಳಿಗೆ ಮಾರಯ್ಯನ ಪ್ರಶ್ನೆ.[೮.೧೮೪೬]


[…] ಸಂವಾದದ ನೆನ್ನೆಯ ಕಂತಿಗೆ ( https://aralimara.com/2025/04/03/vsamvada-3/ ) ಎರಡು ಮುಖ್ಯ ಪ್ರತಿಕ್ರಿಯೆಗಳು ಬಂದಿದ್ದು, […]
LikeLike
ನನ್ನನ್ನು ನಾನು ಸರಿಯಾಗಿ ತಿಳಿದುಕೊಳ್ಳದೆ ಅಜ್ಞಾನದ ಸ್ಥಿತಿಯಲ್ಲಿಯೂ ನೀನು ನನ್ನ ಒಳಗಡೆ ಇದ್ದೇ ಇರುತ್ತೀಯ.
ಅದು ಚಿನ್ನದೊಳಗಿನ ಬಣ್ಣದ ಹಾಗೆ ಸರ್ವವ್ಯಾಪಿ. ಇದು ನಿಜವಾಗಲು ಚೆನ್ನಮಲ್ಲಿಕಾರ್ಜುನ ಪ್ರಿಯಕರನಿಗಾಗಿ ಬೇಕಿಲ್ಲ. ಇದು ಎಲ್ಲ ಮನುಷ್ಯರಿಗೂ ದಿಟ.
LikeLike