ತನ್ನನ್ನು ತಾನು ತನ್ನಿಷ್ಟದಂತೆ ವ್ಯಕ್ತಗೊಳಿಸುವ ಬದುಕುವ ಅತಿ ಕಷ್ಟದ ದಾರಿಯಲ್ಲಿ ಸಾಗಿದ ಜೀವದ ಮಾತು ಎಂಬಂತೆ ಅಕ್ಕನ ವಚನಗಳಿವೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ
ಒಲುಮೆ ಒಚ್ಚತವಾದವರು ಕುಲಛಲವನರಸುವರೆ
ಮರುಳುಗೊಂಡವರು ಲಜ್ಜೆನಾಚಿಕೆಯ ಬಲ್ಲರೆ
ಚೆನ್ನಮಲ್ಲಿಕಾರ್ಜುನದೇವಗೊಲಿದವರು ಲೋಕಾಭಿಮಾನವ ಬಲ್ಲರೆ [೧೩೦]
[ಒಚ್ಚತ=ಅರ್ಪಿತ, ಖಚಿತ, ದೇಹ-ಮನಸುಗಳ ಮೂಲಕ ಒಂದಾಗು, ಪ್ರಶಾಂತ, ಮಿತಿಗಳನ್ನು ಮೀರು ಎಂಬೆಲ್ಲ ಅರ್ಥಗಳಿವೆ]
ಪ್ರೀತಿಯಲ್ಲಿ ಅರ್ಪಿಸಿಕೊಂಡು ಆದಮೇಲೆ, ಮೈ ಮನಸು ನಿನ್ನಲ್ಲಿ ಒಂದಾದ ಮೇಲೆ, ಎಲ್ಲ ಲೌಕಿಕ ಕಟ್ಟುಪಾಡುಗಳನ್ನು ಮೀರಿದ ಮೇಲೆ ಕುಲದ ಮಾತು ಯಾಕೆ, ಅಭಿಮಾನ, ಹಟದ ಮಾತು ಯಾಕೆ; ಪ್ರೀತಿಗೆ ಮರುಳಾದವರಿಗೆ ಲಜ್ಜೆ ನಾಚಿಕೆಗಳ ಅರಿವೂ ಇರದು. ಚೆನ್ನಮಲ್ಲಿಕಾರ್ಜುನನಿಗೆ ಒಲಿದ ಮೇಲೆ ಲೋಕದ ಅಭಿಮಾನ, ಮರ್ಯಾದೆ ಇವೆಲ್ಲ ಅರಿಯದ ಸಂಗತಿಗಳು.
ಅಕ್ಕ, ಸತ್ಯಕ್ಕ, ನೀಲಮ್ಮ ಇಂಥ ವಚನಕಾರರು ಒಚ್ಚತ ಅನ್ನುವ ಪದ ಬಳಸಿರುವ ಹಾಗೇ ಇನ್ನೂ ಹತ್ತು ಜನ ಒಚ್ಚತ ಅನ್ನುವ ಪದ ಬಳಸಿದ್ದಾರೆ. ಒಚ್ಚತ ಅನ್ನುವ ಪದಕ್ಕೆ ಸಾಹಿತ್ಯಪರಿಷತ್ತಿನ ದೊಡ್ಡ ನಿಘಂಟಿನಲ್ಲಿ ಸುಮಾರು ಒಂದೂವರೆ ಪುಟದಷ್ಟು ವಿವರವಿದೆ. ಅಕ್ಕಮಹಾದೇವಿಯನ್ನು ಕುರಿತು ಮಡಿವಾಳಮಾಚಯ್ಯನವರ ವಚನದಲ್ಲಿ ʻನಿಮ್ಮನೊಲಿಸಿ ಒಚ್ಚತವೋದ ಮಹದೇವಿಯಕ್ಕʼ ಅನ್ನುವ ಮಾತಿದೆ. ತುಂಬ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಈ ಪದ ಈಗ ಕನ್ನಡ ಬಳಕೆಯಲ್ಲಿ ಅಪರೂಪವಾಗಿದೆ. ಮೀಸಲು, ನಿಶ್ಚಿತ, ಅಚ್ಚುಕಟ್ಟು, ಒಮ್ಮೆಗೆ, ನೆಮ್ಮದಿ, ಸೊಬಗು, ಸಮರ್ಪಣೆ, ಇಂಬು, ಐಕ್ಯವಾಗು, ಗಾಢವಾಗಿ, ಸಂತೋಷವಾಗಿ, ದಿಟವಾಗಿ, ತಟಕ್ಕನೆ, ಸ್ವಲ್ಪಹೊತ್ತು ಅನ್ನುವ ಹಲವು ಅರ್ಥಗಳು ಇವೆ. ಚೆನ್ನಮಲ್ಲಿಕಾರ್ಜುನನನ್ನು ಕುರಿತ ಅಕ್ಕಮಹಾದೇವಿಯ ಭಾವವನ್ನು ಒಚ್ಚತವೆಂಬ ಮಾತು ಚೆನ್ನಾಗಿ ವಿವರಿಸುವಂತಿಎ.
ಪ್ರೀತಿ, ಕಾಮ, ಭಕ್ತಿ, ಸಿಟ್ಟು, ಹೀಗೆ ತೀವ್ರವಾದ ಭಾವ ಯಾವುದೇ ಇದ್ದರೂ ಲೋಕದ ವರ್ತನೆಯ ಕಟ್ಟುಪಾಡುಗಳನ್ನು ಉಲ್ಲಂಘಿಸಿದರೂ ಸರಿ ಅನ್ನುವ ನಿಲುವು ಮೂಡುತ್ತದೆ. ʻಒಲವಿನ ಕೂಟಕ್ಕೆ ಹಾಸಿಗೆಯ ಹಂಗೇಕೆʼ ಎಂದು ಆರಂಭವಾಗುವ ಅಲ್ಲಮ ವಚನವನ್ನು ನೋಡಿ. ತನ್ನನ್ನು ತಾನು ತನ್ನಿಷ್ಟದಂತೆ ವ್ಯಕ್ತಗೊಳಿಸುತ್ತಾ ಬದುಕುವ ಅತಿ ಕಷ್ಟದ ದಾರಿಯಲ್ಲಿ ಸಾಗಿದ ಜೀವದ ಮಾತು ಎಂಬಂತೆ ಅಕ್ಕನ ವಚನಗಳಿವೆ.
“ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ/ಕಾಯದ ಸುಖವ ನಾನೇನೆಂದರಿಯೆನು/ ಆರು ಸೋಂಕಿದರೆಂದರಿಯೆನು. ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚತವಾದ ಬಳಿಕ/ಹೊರಗೇನಾಯಿತ್ತೆಂದರಿಯೆನು” (೫.೧೦೪) ಎಂಬ ಇನ್ನೊಂದು ವಚನದಲ್ಲಿ ತನ್ನ ಮನಸ್ಸು, ಪ್ರಾಣ, ಭಾವಗಳು ಚೆನ್ನಮಲ್ಲಿಕಾರ್ಜುನನಲ್ಲಿ ನಿಂತವು, ಹಾಗಾಗಿ ಮೈಯ ಸುಖ ಅರಿಯೆ, ಯಾರು ಮುಟ್ಟಿದರೂ ನನಗೆ ತಿಳಿಯುತ್ತಿಲ್ಲ, ನನ್ನೊಳಗೇನಾಯಿತೋ, ಹೊರಗೆ ಏನಾಯಿತೋ ಅರಿಯೆ ಎಂದು ಹೇಳಿಕೊಳ್ಳುವ ಮಾತನ್ನು ನೋಡಿ. ತೀವ್ರಭಾವವನ್ನು ಸಂಶಯದಿಂದಲೇ ನೋಡುವುದು ಅಭ್ಯಾಸವಾಗಿರುವ ಲೋಕದ ಬದುಕಿಗೆ ಅಕ್ಕ ವಿಚಿತ್ರವಾಗಿ, ಅದ್ಭುತವಾಗಿ ಕಂಡಿರಬಹುದು. ಒಲುಮೆ ಒಚ್ಚತವಾದವರು ಯಾರೇ ಆಗಿರಲಿ, ಅವರೆಲ್ಲರೂ ಕಟ್ಟುಪಾಡು, ಸಾಮಾಜಿಕ ಮರ್ಯಾದೆಗಳನ್ನೇ ಮುಖ್ಯವೆಂದು ಭಾವಿಸುವ ಮನಸುಗಳಿಗೆ ನಾಚಿಕೆ ಇಲ್ಲದವರಾಗಿ, ಮರುಳರಾಗಿ ಕಾಣುತ್ತಾರೆ ಅನ್ನುವ ಧ್ವನಿಯೂ ಇಲ್ಲಿದೆ.

