ಜಾನ್ ಮಿಲ್ಟನ್ ನ ವಾದವೇನೆಂದರೆ ಸವಾಲಿಗೆ ಒಳಪಡದ ಯಾವ ಮೌಲ್ಯವನ್ನೂ ನಿಜವಾದ ಮೌಲ್ಯ ಎಂದು ಒಪ್ಪುವದಕ್ಕಾಗುವುದಿಲ್ಲ. ನನ್ನನ್ನು ನಾನು ಏನು ಬೇಕಾದರೂ ಕರೆದುಕೊಳ್ಳಬಹುದು । ಸಂಗ್ರಹಾನುವಾದ: ಚಿದಂಬರ ನರೇಂದ್ರ
ಕೆಲವು ಜನರು, ಯಾವ ಪರೀಕ್ಷೆಯನ್ನೂ ಎದುರಿಸದೇ ತಮ್ಮನ್ನು ತಾವು ಬಲಿಷ್ಠರು ಎಂದು ಕರೆದುಕೊಳ್ಳುತ್ತಾರೆ. ಪ್ರಲೋಭನೆ ಎಂದರೆ ಏನು ಎನ್ನುವುದನ್ನು ಅನುಭವಿಸದೇ ತಮ್ಮನ್ನು ತಾವು ಶಿಸ್ತಿನ ಜನ ಎಂದು ಹೇಳಿಕೊಳ್ಳುತ್ತಾರೆ. ನಿಜವಾದ ಸಂಕಷ್ಟಗಳನ್ನು ಎದುರಿಸದೇ ತಮ್ಮನ್ನು ತಾವು ಸ್ಥೈರ್ಯಶಾಲಿಗಳು (resilient) ಎಂದು ಭಾವಿಸುತ್ತಾರೆ.
1644ರಲ್ಲಿ ಕವಿ ಜಾನ್ ಮಿಲ್ಟನ್, ಜನರ ಈ ಬಗೆಯ ವರ್ತನೆಯನ್ನು ವಿವರಿಸಲು ಒಂದು ಪದ ಉಪಯೋಗ ಮಾಡಿದ. ಆ ಪದ ಯಾವುದೆಂದರೆ fugitive and cloistered virtue (ಮೌಲ್ಯದಿಂದ ಪಲಾಯನ ಮಾಡಿ ಅಡಗುತಾಣದಲ್ಲಿ ಬಚ್ಚಿಟ್ಟುಕೊಳ್ಳುವುದು), ಮತ್ತು ಅಂತಹ ಸದ್ಗುಣಕ್ಕೆ ಯಾವುದೇ ವಿಶೇಷ ಮೌಲ್ಯವಿಲ್ಲ ಎಂದು ಗುರುತಿಸಿದ. ಹಾಗೆಂದರೆ — ಪರೀಕ್ಷೆ, ಪ್ರಲೋಭನೆ, ಸಂಕಷ್ಟಗಳನ್ನು ಎದುರಿಸಿ ಉಳಿದ ಮೌಲ್ಯವೇ ನಿಜವಾದ ಮೌಲ್ಯ. ಅನುಭವವಿಲ್ಲದ ಸ್ವಘೋಷಿತ ಮೌಲ್ಯಕ್ಕೆ ಯಾವುದೇ ಬೆಲೆ ಇಲ್ಲ.
ಜಾನ್ ಮಿಲ್ಟನ್ ನ ವಾದವೇನೆಂದರೆ ಸವಾಲಿಗೆ ಒಳಪಡದ ಯಾವ ಮೌಲ್ಯವನ್ನೂ ನಿಜವಾದ ಮೌಲ್ಯ ಎಂದು ಒಪ್ಪುವದಕ್ಕಾಗುವುದಿಲ್ಲ. ನನ್ನನ್ನು ನಾನು ಏನು ಬೇಕಾದರೂ ಕರೆದುಕೊಳ್ಳಬಹುದು. ನಾನು ಧೈರ್ಯಶಾಲಿ, ದುಡಿಮೆಯವನು, ದಯಾಳು, ಸ್ಥೈರ್ಯಶಾಲಿ (resilient) ಎಂದೆಲ್ಲ ಹೇಳಿಕೊಳ್ಳಬಹುದು. ಆದರೆ ನಾನು ಆ ಗುಣಗಳನ್ನು ನನ್ನ ಕೆಲಸಗಳಲ್ಲಿ ತೋರಿಸದಿದ್ದರೆ, ಅವು ಕೇವಲ ಖಾಲಿ ಪದಗಳಷ್ಟೇ. ಅವು ಯಾವ ಪರೀಕ್ಷೆಗೂ ಒಳಗಾಗದವರ ಬಡಾಯಿ ಮಾತುಗಳು ಮಾತ್ರ.
ಸ್ಟೋಯಿಕ್ ತತ್ವಜ್ಞಾನಿ Marcus Aurelius ಪ್ರಕಾರ, ಒಳ್ಳೆಯ ವ್ಯಕ್ತಿ ಯಾರು ಎನ್ನುವುದರ ಬಗ್ಗೆ ಚರ್ಚೆ ಮಾಡುತ್ತ ಕಾಲ ವ್ಯರ್ಥ ಮಾಡಬೇಡಿ. ಸರಳವಾಗಿ ಬದುಕಿ ನೀವೇ ಆ ಒಳ್ಳೆಯ ವ್ಯಕ್ತಿಯಾಗಿ. ಅವನು ತನ್ನ ಬಹುತರ್ಚಿತ Meditations ಕೃತಿಯನ್ನು ಬಹಳ ಖಾಸಗಿಯಾಗಿ ರಚಿಸಿದ. ಅವನಿಗೆ ಅದನ್ನು ಪ್ರಕಟಿಸುವ ಉದ್ದೇಶವೇ ಇರಲಿಲ್ಲ, ಏಕೆಂದರೆ ಔರೇಲಿಯಸ್ ನ ನಂಬಿಕೆಯಂತೆ, ಸದ್ಗುಣ ಎನ್ನುವುದು ಒಂದು ಅಭ್ಯಾಸ (practice), ಅದು ಅಕಾಡಮಿಕ್ ಉಪನ್ಯಾಸ ಅಲ್ಲ. ರೋಮನ್ ಸಾಮ್ರಾಜ್ಯದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದ ಈ ವ್ಯಕ್ತಿ ಯಾರೂ ಓದಲು ಸಾಧ್ಯವಾಗದ ಒಂದು ದಿನಚರಿಯಲ್ಲಿ ತನ್ನನ್ನು ತಾನು ಹೊಣೆಗಾರನಾಗಿಸಿಕೊಂಡಿದ್ದ.
ಜಾನ್ ಮಿಲ್ಟನ್ ಮತ್ತು ಮಾರ್ಕಸ್ ಔರೆಲಿಯಸ್ ದೃಷ್ಟಿಯಲ್ಲಿ, ಒಳ್ಳೆಯ ವ್ಯಕ್ತಿಯನ್ನು ಒಳ್ಳೆಯ ಕಾರ್ಯಗಳಿಂದಲೇ ಗುರುತಿಸ ಬೇಕು ಮತ್ತು ವ್ಯಾಖ್ಯಾನಿಸಬೇಕು. ಅವರ ಬಗ್ಗೆ ಸುಮ್ಮನೇ ಮಾತನಾಡುವುದು, ಅವರನ್ನು ಸಂಭ್ರಮಿಸುವುದು ಸರಿಯಾದ ರೀತಿ ಅಲ್ಲ. ಅಂಥ ಮೌಲ್ಯಾಧಾರಿತ ಜನ ಲೋಕದಿಂದ ದೂರ ಸರಿಯುವುದಿಲ್ಲ, ನೈತಿಕ ಪರೀಕ್ಷೆಯಿಂದ ಓಡಿಹೋಗುವುದಿಲ್ಲ. ಅವರು ತಮ್ಮ ನೆಲೆಯಲ್ಲೇ ದೃಢವಾಗಿ ನಿಂತುಕೊಳ್ಳುತ್ತಾರೆ, ಮತ್ತು ಎದುರಾಗುವ ಸಾವಾಲುಗಳನ್ನು ಎದುರಿಸಿ ಗೆಲ್ಲುತ್ತಾರೆ. ಪರೀಕ್ಷೆಗೆ ಒಳಗಾಗದ ಯಾವ ಮೌಲ್ಯವನ್ನೂ ಮೌಲ್ಯ ಎಂದು ಗುರುತಿಸುವುದು ಸರಿ ಅಲ್ಲ.

