ಎಚ್ಚರದ ಗಮನ: ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #1.3

ಕೈಯಲ್ಲಿ ಚಹಾದ ಕಪ್‌ ಹಿಡಿದಿರುವಾಗ ನೀವು ನೂರಕ್ಕೆ ನೂರರಷ್ಟು ಮಗ್ನರಾಗಿರಬೇಕು. ಹೇಗೆ ಅನ್ನುವುದು ನಿಮಗೆ ಗೊತ್ತಿದೆ. ಆಳವಾಗಿ ಉಸಿರೆಳೆದುಕೊಳ್ಳಿ, ಸಾವಕಾಶ ಉಸಿರು ಬಿಡಿ. ನಿಮ್ಮ ದೇಹ ಮನಸುಗಳು ಒಂದಾಗುತ್ತವೆ. ಇದಕ್ಕೆ ಹತ್ತರಿಂದ ಹದಿನೈದು ಕ್ಷಣ ಸಾಕು.  ಚಹಾದ ಪರಿಮಳ, ಬೆರಗು, ರುಚಿ ಎಲ್ಲವೂ ಅರಿವಾಗುತ್ತವೆ. ಚಹಾ ಪ್ರತ್ಯಕ್ಷವಾಗುತ್ತದೆ ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 1: ಗಮನದ ಎಚ್ಚರ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 1.3: ಗಮನದ ಎಚ್ಚರ । ಎಚ್ಚರದ ಗಮನ

ನಮ್ಮ ಗಮನದ ಎಚ್ಚರದಲ್ಲಿ ಸಂತೋಷ, ಆನಂದಗಳು ಹುಟ್ಟುತ್ತವೆ.  ಟೀ ಕುಡಿಯುತ್ತಿರುವಾಗ ನಮ್ಮ ಗಮನ ಎಷ್ಟು ಪೂರ್ಣವಾಗಿ ಅದರ ಮೇಲೆ ಇದೆಯೋ ಅಷ್ಟು ಟೀ ಅಪರೂಪದ್ದು ಅನಿಸುತ್ತದೆ. ಟೀ ಕುಡಿಯುವಾಗ ನಿಮ್ಮ ಇಡೀ ಗಮನ, ನೂರಕ್ಕೆ ನೂರರಷ್ಟು ಟೀ ಮೇಲೆ ಇರಬೇಕು. ನಡೆಯುವಾಗ ನೂರರಕ್ಕೆ ನೂರರಷ್ಟು ಗಮನ ನಡಿಗೆಯ ಮೇಲಿರಬೇಕು. ಹಾಗೆ ಗಮನವಿಟ್ಟು ತೊಡಗುವುದರಿಂದ ಸಿಗುವ ಆನಂದ ಗಮನವಿಲ್ಲದೆ ಮಾಡುವ ಕೆಲಸಗಳಿಂದ ದೊರೆಯದು. ಹಾಗೆ ದೇಹ, ಮನಸು ಪೂರಾ ನಡಿಗೆಯಲ್ಲೇ ಮಗ್ನವಾದಾಗ ಜೀವಂತವಾಗಿರುತ್ತೀರಿ, ಈ ಗ್ರಹದ ಮೇಲೆ ಇಡುವ ಒಂದೊಂದು ಹೆಜ್ಜೆಯೂ ಒಂದೊಂದು ಪವಾಡ ಅನಿಸುತ್ತದೆ.

“ನೀರಿನ ಮೇಲೆ, ಬೆಂಕಿಯ ಮೇಲೆ ನಡೆಯುವುದಲ್ಲ—ಭೂಮಿಯ ಮೇಲೆ ನಡೆಯುವುದೇ ನಿಜವಾದ ಪವಾಡ” ಎಂದು ಝೆನ್‌ ಗುರು ಲಿನ್‌ಜಿ ಹೇಳಿದರು. ನಡೆಯುತ್ತ ನಡೆಯುತ್ತ ನೀವೂ ಪವಾಡ ಮಾಡಬಾರದು ಯಾಕೆ? ಮನಸಿಟ್ಟು ಇಡುವ ಹೆಜ್ಜೆ ನಿಮ್ಮನ್ನು ದೇವರ ರಾಜ್ಯಕ್ಕೆ ಒಯ್ಯಬಲ್ಲದು.

ನಮ್ಮ ಐಡಿಯ, ನಮ್ಮ ಕಲ್ಪನೆ, ನಮ್ಮ ಕೋಪ, ನಮ್ಮ ಹತಾಶೆಗಳಲ್ಲಿ ಚೆದುರಿ ಹೋಗಿ ಅಮೂಲ್ಯವಾದ ಬದುಕನ್ನು ಕಳೆದುಕೊಳ್ಳುತ್ತೇವೆ. ಬದುಕಿನ ನಿಜ ಅನ್ನುವ ವಾಸ್ತವದ ಅಚ್ಚರಿಯನ್ನು ಅರಿಯುವುದಕ್ಕೆ ನಾವು ಪೂರಾ ಎಚ್ಚರವಾಗಿರಬೇಕು. ನಮ್ಮ ದಿನ ನಿತ್ಯದ ಬದುಕಿನ ಪ್ರತಿ ಕ್ಷಣವನ್ನೂ ಇಡಿಯಾಗಿ, ನಿಜವಾಗಿ ಬದುಕಲು ಶುರು ಮಾಡಬೇಕು.

ಕೈಯಲ್ಲಿ ಚಹಾದ ಕಪ್‌ ಹಿಡಿದಿರುವಾಗ ನೀವು ನೂರಕ್ಕೆ ನೂರರಷ್ಟು ಮಗ್ನರಾಗಿರಬೇಕು. ಹೇಗೆ ಅನ್ನುವುದು ನಿಮಗೆ ಗೊತ್ತಿದೆ. ಆಳವಾಗಿ ಉಸಿರೆಳೆದುಕೊಳ್ಳಿ, ಸಾವಕಾಶ ಉಸಿರು ಬಿಡಿ. ನಿಮ್ಮ ದೇಹ ಮನಸುಗಳು ಒಂದಾಗುತ್ತವೆ. ಇದಕ್ಕೆ ಹತ್ತರಿಂದ ಹದಿನೈದು ಕ್ಷಣ ಸಾಕು.  ಚಹಾದ ಪರಿಮಳ, ಬೆರಗು, ರುಚಿ ಎಲ್ಲವೂ ಅರಿವಾಗುತ್ತವೆ. ಚಹಾ ಪ್ರತ್ಯಕ್ಷವಾಗುತ್ತದೆ.

ಪುಸ್ತಕ ಕೈಗೆತ್ತಿಕೊಂಡಾಗ, ಬಾಗಿಲು ತೆರೆಯುವಾಗ ನಾನು ಆ ಸಂಗತಿಗಳಲ್ಲೇನೂರಕ್ಕೆ ನೂರರಷ್ಟು ಮಗ್ನವಾಗಲು ಬಯಸುತ್ತೇನೆ. ಸನ್ಯಾಸ ಶಿಕ್ಷಣದಲ್ಲಿ ನಾನಿದನ್ನು ಕಲಿತೆ. ನನ್ನ ಉಪಾದ್ಯರು ಗಂಧದ ಕಡ್ಡಿಯನ್ನು ಹೇಗೆ ನೀಡಬೇಕು ಎಂದು ಕಲಿಸಿದರು. ಗಂಧದ ಕಡ್ಡಿ ತುಂಬ ತೆಳು, ತುಂಬ ಹಗುರ. ಆದರೂ ಅನನ್ನು ಎರಡೂ ಕೈಯಲ್ಲಿ ಹಿಡಿಯುವುದೇ ಸರಿಯಾದ ಕ್ರಮ. ಗಂಧದ ಕಡ್ಡಿಯನ್ನು ಬೆಳಗುವಾಗ ಇಡೀ ನಿಮ್ಮತನವನ್ನು ನಿಮ್ಮ ಕೈಗೆ, ಎರಡು ಬೆರಳುಗಳಿಗೆ ಒಪ್ಪಿಸಿ ತೊಡಗಿಸಬೇಕು. ಗಮನದ ಬಲ ಆ ಎರಡು ಬೆರಳಲ್ಲಿ ಏಕಾಗ್ರಗೊಳ್ಳಬೇಕು.

ಇದೊಂದು ಆಚರಣೆ ಅನಿಸಬಹುದು. ಅಷ್ಟೇ ಅಲ್ಲ. ಎಚ್ಚರದ ಗಮನವನ್ನು ತೊಡಗಿಸಿ ಮಾಡುವ ಕ್ರಿಯೆ ಅದು. ಸುಗಂಧವನ್ನು ಬುದ್ಧನಿಗೆ ಅರ್ಪಿಸುವ ಕ್ರಿಯೆ. ನಾನು ನೂರಕ್ಕೆ ನೂರರಷ್ಟು ಅದರಲ್ಲಿ ಒಂದಾಗಿರಬೇಕು.  ಎಡಗೈಯನ್ನು ಬಲದ ಕೈಯ ಮೇಲಿರಿಸಿಕೊಳ್ಳುವಾಗ ನೂರಕ್ಕೆನೂರು ಅದರಲ್ಲೇ ಮಗ್ನನಾಗಿರುತ್ತೇನೆ.

ಸುಗಂಧವನ್ನು ಬುದ್ದನಿಗೆ ಅರ್ಪಿಸುತ್ತೇವೆ. ಬುದ್ಧನಿಗೆ ಸುಗಂಧ ನಿಜವಾಗಲೂ ಬೇಕೇ?

ಮೂರು ಗಂಧದ ಕಡ್ಡಿಗಳನ್ನು ಅರ್ಪಿಸುವುದೆಂದರೆ ನಮ್ಮ ಶಾಂತಿ, ಆನಂದ, ಮತ್ತು ಗಮನವನ್ನು ಬುದ್ಧನಿಗೆ ಅರ್ಪಿಸಿದ ಹಾಗೆ.

*

[ಕಣ್ಣುಗಳು ತುಂಬಿದ ಬಳಿಕ ಮತ್ತೆ ನೋಡಲು ಇನ್ನೇನೂ ಇಲ್ಲ. ಕಿವಿಗಳು ತುಂಬಿದ ಬಳಿಕ ಕೇಳಲು ಮತ್ತೇನೂ ಇಲ್ಲ. ಕೈಗಳು ತುಂಬಿದ ಮೇಲೆ ಪೂಜೆ ಮಾಡುವುದೂ ಇಲ್ಲ. ಮನಸು ತುಂಬಿದ ಮೇಲೆ ಧ್ಯಾನವೂ ಇಲ್ಲ ಎಂಬ ಬಸವ ವಚನ ನೆನಪಾಯಿತು. ಅದು ಕೂಡ ಗಮನದ ಎಚ್ಚರದ ವರ್ಣನೆಯೇ ಅನಿಸಿತು.

ಆದರೆ ನಮ್ಮಲ್ಲಿ ಅನೇಕರ ಸ್ಥಿತಿಯನ್ನು ಅಲ್ಲಮ ಪ್ರಭುಗಳ ಈ ವಚನ ಹೇಳುತಿದೆ ಅನಿಸಿತು. “ಹಿಡಿವ ಕೈಯ ಮೇಲೆ ಕತ್ತಲೆಯಯ್ಯಾ/ನೋಡುವ ಕಂಗಳ ಮೇಲೆಕತ್ತಲೆಯಯ್ಯಾ/ನೆರೆವ ಮನದ ಮೇಲೆ
ಕತ್ತಲೆಯಯ್ಯಾ/ಕತ್ತಲೆ ಎಂಬುದು ಇತ್ತಲೆಯಯ್ಯಾ/ಗುಹೇಶ್ವರನೆಂಬುದು ಅತ್ತಲೆಯಯ್ಯಾ”

ಗಮನದ ಎಚ್ಚರವಿರದಿದ್ದರೆ ಕಣ್ಣು, ಮನಸು, ದೇಹ ಯಾವುದೂ ಏನನ್ನೂ ಪೂರ್ತಿಯಾಗಿ ಅನುಭವಿಸುವುದಿಲ್ಲ, ಅಲ್ಲವೇ?]

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.