ಮಧ್ಯವಯಸ್ಸಿನ ಸಂಕಟ ಎನ್ನುವುದು ನಿಜವಾಗಿ ಸಂಕಟವೇ ಅಲ್ಲ; ಅದು ಒಂದು ಮೌಲ್ಯಯುತ ದೃಷ್ಟಿಕೋನದ ಬದಲಾವಣೆ । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಬಹಳಷಷ್ಟು ಜನರ ಜೀವನದಲ್ಲಿ ಒಮ್ಮಿಲ್ಲ ಒಮ್ಮೆಯಾದರೂ ಅಂಥ ಸಮಯ ಬಂದೇ ಬರುತ್ತದೆ – ತಾವು ಚಿಕ್ಕವರಾಗಿದ್ದಾಗ ಬಯಸಿದ ಎಲ್ಲವನ್ನೂ ಪಡೆಯುವುದು ನಿಜವಾಗಿಯೂ ತಮಗೆ ಯಾವ ಅಂಥ ಸಂತೋಷವನ್ನು ತರಲಿಲ್ಲ ಎನ್ನುವುದನ್ನ ಅರಿಯುವ ಕ್ಷಣ. ವಾಸ್ತವವಾಗಿ, ನಿಮ್ಮ ಬಳಿ ಏನೂ ಇರದಿದ್ದಾಗಲೇ ನೀವು ಹೆಚ್ಚು ಸಂತೋಷವಾಗಿದ್ದಿರಿ.
MIT ಪ್ರೊಫೆಸರ್ Kieran Setiya ಅವರ ಪ್ರಕಾರ, ಮಧ್ಯವಯಸ್ಕ ಸಂಕಟ (midlife crisis) ವನ್ನು ವ್ಯಾಖ್ಯಾನ ಮಾಡುವುದು, ವಯಸ್ಸು, ಆರೋಗ್ಯ ಅಥವಾ ಮರಣದ ಕುರಿತಾದ ಅರಿವು ಅಲ್ಲ. ಅದು ನಿಜವಾದ ಸಂತೋಷ ಎಂದರೆ ಏನು ಎನ್ನುವುದನ್ನು ಮರು ವ್ಯಾಖ್ಯಾನಿಸುವ ಬಗ್ಗೆ.
ಸೇಟಿಯಾ ಅವರ ಪ್ರಕಾರ, ನಾವು ಯುವಕರಾಗಿದ್ದಾಗ ನಮ್ಮ ಜೀವನವನ್ನು ‘ಟೆಲಿಕ್’ (telic) ಚಟುವಟಿಕೆಗಳು ನಿರ್ಧರಿಸುತ್ತವೆ. ಹಾಗೆಂದರೆ, ಒಂದು ನಿರ್ದಿಷ್ಟ ಗುರಿಗಾಗಿ ಮಾಡುವ ಕಾರ್ಯಗಳು—ಪದವಿ ಪಡೆಯುವುದು, ಉದ್ಯೋಗ ಪಡೆಯುವುದು, ಮನೆ ಕಟ್ಟುವುದು, ಜೀವನ ಸಂಗಾತಿಯನ್ನು ಕಂಡುಕೊಳ್ಳುವುದು, ನೆಲೆಗೊಳ್ಳುವುದು ಇತ್ಯಾದಿ. ಈ ಪ್ರತಿಯೊಂದು ಗುರಿಯೂ ನಮಗೆ ದಿಕ್ಕು, ಚಲನೆ ಮತ್ತು ಉದ್ದೇಶವನ್ನು ನೀಡುತ್ತದೆ.
ಆದರೆ, ಟೆಲಿಕ್ ಚಟುವಟಿಕೆಗಳು ತಮ್ಮನ್ನು ತಾವೇ ನಾಶಮಾಡಿಕೊಳ್ಳುತ್ತವೆ. ಏಕೆಂದರೆ, ನೀವು ಆ ಗುರಿಯನ್ನು ಸಾಧಿಸಿದ ಕ್ಷಣದಲ್ಲೇ ಅವುಗಳ ಅಂತ್ಯವಾಗುತ್ತದೆ.
ಮತ್ತು ನೀವು ಅಂತಿಮವಾಗಿ ನಿಮ್ಮ ಕನಸಿನ ಗುರಿಯನ್ನು ತಲುಪಿ, ನಿಮ್ಮದೇ ಆದ ‘ಶಾಂಗ್ರಿ-ಲಾ’ಯಲ್ಲಿ ಕುಳಿತಾಗ, ನಿಮಗೆ ಒಳಗಿನಿಂದ ಖಾಲಿಯಾಗಿರುವಂತೆ ಅನುಭವವಾಗುತ್ತದೆ. ನಿಮಗೆ ಮೋಸಗೊಂಡ ಎಂಬ ಭಾವನೆ ಬರುತ್ತದೆ. ನಿಮಗೆ ಸಂತೋಷವನ್ನು ಭರವಸೆಯಾಗಿ ನೀಡಲಾಗಿತ್ತು, ಆದರೆ ಈಗ ಅದರ ಬದಲು ನಿರಾಶೆಯೇ ನಿಮ್ಮನ್ನು ಹೆಚ್ಚು ತುಂಬಿಕೊಂಡಿದೆ.
ಸೆಟಿಯಾ ಅವರು ಹೇಳುವದೇನೆಂದರೆ, ಇನ್ನಷ್ಟು ಗುರಿಗಳನ್ನು ನಿಗದಿಪಡಿಸಿಕೊಳ್ಳುವುದು ಇದಕ್ಕೆ ಪರಿಹಾರವಲ್ಲ. ಅದು ಸಮಸ್ಯೆಯನ್ನು ಕೇವಲ ಮುಂದೂಡುವುದನ್ನಷ್ಟೇ ಮಾಡುತ್ತದೆ. ಅದರ ಬದಲು, ನಾವು ‘ಅಟೆಲಿಕ್’ (atelic) ಚಟುವಟಿಕೆಗಳಿಗೆ ಬದ್ಧರಾಗಬೇಕು — ಅಂದರೆ, ಸ್ವತಃ ನಾವು ನಮಗಾಗಿ ಮಾಡುವ ಕಾರ್ಯಗಳು.
ಉದಾಹರಣೆಗೆ, ವಾಕ್ ಮಾಡುವುದು — ವಾಕ್ ಮಾಡುವುದು ಇಷ್ಟ ಆದ್ದರಿಂದ. ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು, ಕಲಿಯುವುದು — ಏಕೆಂದರೆ ಕಲಿಯುವುದು ಬಹಳ ಒಳ್ಳೆಯದು. ಈ ಕೆಲಸಗಳಿಗೆ ಯಾವ ಅಂತಿಮ ಗುರಿಯೂ ಇಲ್ಲ. ನಾವು ಇವುಗಳನ್ನು ಮಾಡುವುದೇ ಮುಖ್ಯ, ಮತ್ತು ಅವುಗಳನ್ನು ಆನಂದಿಸುವುದೇ ನಮ್ಮ ಮುಖ್ಯ ಉದ್ದೇಶ.
ಮಧ್ಯವಯಸ್ಸಿನ ಸಂಕಟ ಎನ್ನುವುದು ನಿಜವಾಗಿ ಸಂಕಟವೇ ಅಲ್ಲ; ಅದು ಒಂದು ಮೌಲ್ಯಯುತ ದೃಷ್ಟಿಕೋನದ ಬದಲಾವಣೆ. ಅದು ಜೀವನವೆಂದರೆ, ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಮಾಡಿ ಮುಗಿಸುವುದಲ್ವ, ಮತ್ತು ಸಂತೋಷವೆಂದರೆ ಕೇವಲ ಉತ್ಪಾದಕತೆಯಲ್ಲ ಎನ್ನುವುದು ಅರಿವಾಗುವ ಸಮಯ.
ಅದು ಸಂತೋಷವೆಂದರೆ ಗಮ್ಯಸ್ಥಾನದ ಬಗ್ಗೆ ಯಾವುದೇ ಚಿಂತೆಯಿಲ್ಲದೆ, ಪ್ರಯಾಣವನ್ನು — ಓಟವನ್ನು — ಆನಂದಿಸುವುದೇ ಎನ್ನುವುದನ್ನು ತಿಳಿಯುವ ಕ್ಷಣ.

