ವಿಶ್ರಾಂತಿ ಕೇವಲ ವಾರಾಂತ್ಯದ ಎರಡು ದಿನಗಳಿಗೆ ಮಾತ್ರ ಸೀಮಿತವಲ್ಲ. ಪೈಪರ್ ಅವರ ಪ್ರಕಾರ, ವಿಶ್ರಾಂತಿ ಎಂದರೆ ಜೀವನದ ಆಳವಾದ ಅಂಶಗಳಾದ ಅರ್ಥ, ಸೌಂದರ್ಯ, ಸತ್ಯ, ಸ್ನೇಹ, ಹಾಗೆಯೇ ದೇವರತ್ತ ಮನಸ್ಸನ್ನು ತೆರೆದುಕೊಳ್ಳುವ ಅವಕಾಶ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ವಾರಾಂತ್ಯವನ್ನು ಕೇವಲ “ಬದುಕಿನ “ಬ್ಯಾಟರಿಗಳನ್ನು ರೀಚಾರ್ಜ್” ಮಾಡುವ ಸಮಯವಾಗಿ ನೋಡುವುದು, ಅಥವಾ ನಿರಂತರ ಕೆಲಸದ ಮಧ್ಯೆ ಸಿಕ್ಕಿರುವ ಸ್ವಲ್ಪ ಉಸಿರಾಟದ ವಿರಾಮವೆಂದು ಕಾಣುವುದು, ಪರಿಸ್ಥಿತಿ ಎಷ್ಟು ಕೆಟ್ಟುಹೋಗಿದೆ ಎನ್ನುವುದರ ಸಂಕೇತವಾಗಿದೆ.
ಜರ್ಮನ್ ತತ್ವಜ್ಞಾನಿ Josef Pieper ಅವರು, “ವಿಶ್ರಾಂತಿ”ಯನ್ನು ಕೇವಲ ಕೆಲಸದ ಅಭಾವವೆಂದು ನೋಡಬಾರದು ಎಂದು ವಾದಿಸುತ್ತಾರೆ. ವಿಶ್ರಾಂತಿ ಕೇವಲ ವಾರಾಂತ್ಯದ ಎರಡು ದಿನಗಳಿಗೆ ಮಾತ್ರ ಸೀಮಿತವಲ್ಲ. ಅದು ಹೆಚ್ಚು ಹೊತ್ತು ನಿದ್ರೆ ಮಾಡುವುದು, Spa ಗೆ ಹೋಗುವುದು, ಅಥವಾ “ಸ್ವಯಂ ಆರೈಕೆ” ಮಾತ್ರವೂ ಅಲ್ಲ. ಪೈಪರ್ ಅವರ ಪ್ರಕಾರ, ವಿಶ್ರಾಂತಿ ಎಂದರೆ ಜೀವನದ ಆಳವಾದ ಅಂಶಗಳಾದ ಅರ್ಥ, ಸೌಂದರ್ಯ, ಸತ್ಯ, ಸ್ನೇಹ, ಹಾಗೆಯೇ ದೇವರತ್ತ ಮನಸ್ಸನ್ನು ತೆರೆದುಕೊಳ್ಳುವ ಅವಕಾಶ.
Josef Pieper ಅವರ ಪ್ರಕಾರ, ವಿಶ್ರಾಂತಿಯ ಕುರಿತಾದ ಈ ಗ್ರಹಿಕೆಯನ್ನು (receptivity) ನಾವು ಎರಡು ಕಾರಣಗಳಿಂದ ನಿರಾಕರಿಸುತ್ತೇವೆ. ಮೊದಲ ಕಾರಣವೆಂದರೆ, ವಿಶ್ರಾಂತಿಗೆ ಅದರದೇ ಆದ ಸ್ವಂತ ಮೌಲ್ಯ ಇದೆ ಎನ್ನುವ ನಂಬಿಕೆಯನ್ನು ನಾವು ಕಳೆದುಕೊಂಡಿದ್ದೇವೆ. ನಾವು ಕೆಲಸ ಮಾಡುತ್ತಿಲ್ಲ ಎಂದರೆ, ಸಮಯ ವ್ಯರ್ಥ ಮಾಡುತ್ತಿದ್ದೇವೆ ಎನ್ನುವ ಭಾವನೆ ನಮ್ಮೊಳಗೆ ಬೇರೂರಿದೆ. ಎರಡನೆಯ ಕಾರಣ ಇನ್ನೂ ಹೆಚ್ಚು ಚಿಂತಾಜನಕವಾಗಿದೆ. ನಾವು ವಿಶ್ರಾಂತಿಯನ್ನು ಭವಿಷ್ಯದ ಉತ್ಪಾದಕತೆಯನ್ನು ಹೆಚ್ಚಿಸಲು ಬಳಸುವ ಅವಕಾಶವೆಂದು ನೋಡುತ್ತೇವೆ. ಸೋಮವಾರ ಬೆಳಗ್ಗೆ ಮತ್ತೆ ಕೆಲಸಕ್ಕೆ ಸಿದ್ಧರಾಗಲು ನಾವು ಭಾನುವಾರ ಸೋಫಾದ ಮೇಲೆ ಮಲಗುತ್ತೇವೆ. ವಾರಾಂತ್ಯದಲ್ಲಿ ವಿಶ್ರಾಂತಿ ಪಡೆಯುವುದು, ಮುಂದಿನ ಕೆಲಸದ ವಾರದಲ್ಲಿ ಇನ್ನಷ್ಟು ಪ್ರೊಡಕ್ಟಿವ್ ಆಗಿರುವುದಕ್ಕೆ ಮಾತ್ರ ಎಂದು ತಿಳಿದುಕೊಂಡಿದ್ದೇವೆ.
Josef Pieper ಅವರು ಹೇಳುವಂತೆ , ವಿಶ್ರಾಂತಿಯ ನಿಜವಾದ ಅರ್ಥವನ್ನು ಕಳೆದುಕೊಂಡ ಸಮಾಜವು ಅತ್ಯವಶ್ಯಕವಾದ ಯಾವುದೋ ಮಹತ್ವದ ಸಂಗತಿಯನ್ನು ಕಳೆದುಕೊಳ್ಳುತ್ತದೆ. ಏಕೆಂದರೆ, ನಾವು ನಮ್ಮನ್ನು ನಿಜವಾದ ವಿಶ್ರಾಂತಿಯ ಅವಕಾಶದಿಂದ ವಂಚಿಸಿಕೊಂಡಾಗ, ಜೀವನದ ಅರ್ಥ, ಮಾನವೀಯ ಸಂಪರ್ಕ, ಮತ್ತು ನಿಜವಾದ ಸ್ನೇಹಗಳಂತಹ ಮಹತ್ವದ ಸಂಗತಿಗಳನ್ನೂ ಕಳೆದುಕೊಳ್ಳುತ್ತೇವೆ.
ವಿಶ್ರಾಂತಿಯ ಉಸಿರನ್ನು ಕಟ್ಟಿಹಾಕುವ, ಮತ್ತು ಯಾವುದೇ ಕಾರಣವಿಲ್ಲದೆ ವಿಶ್ರಾಂತಿಯನ್ನು ನಿರಾಕರಿಸುವ ಜಗತ್ತು — ಮನುಷ್ಯರಾಗಿ ಬದುಕುವುದರ ಅತ್ಯಂತ ಆಳವಾದ ಮತ್ತು ಪ್ರಮುಖ ಅಂಶಗಳತ್ತ ನಮ್ಮನ್ನು ಕರೆದೊಯ್ಯುವ ದಾರಿಯನ್ನೇ ನಮ್ಮಿಂದ ಕಸಿದುಕೊಳ್ಳುತ್ತಿದೆ.

