ಅಶಾಶ್ವತದ ಅರಿವು ನಮಗೆ ವಿಶ್ವಾಸ ,ಶಾಂತಿ, ಸಂತೋಷಗಳನ್ನು ನೀಡುತ್ತದೆ. ಅಶಾಶ್ವತವು ವೇದನೆಯ, ದುಃಖದ ಕಾರಣವಲ್ಲ. ಅಶಾಶ್ವತ ಎಂಬುದು ಇರದಿದ್ದರೆ ಬದುಕೇ ಇರದು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 2.3: ಅರಿವಿನ ಬೆಳಕು । ಅಶಾಶ್ವತ
ಎಲ್ಲವೂ—ಹೂವು, ಮೇಜು, ಪರ್ವತ ಶ್ರೇಣಿ, ರಾಜಕೀಯ ವ್ಯವಸ್ಥೆ, ದೇಹ, ಭಾವ, ಗ್ರಹಿಕೆ, ಮನಸಿನಲ್ಲಿ ಮೂಡುವ ಕಲ್ಪನೆ, ಪ್ರಜ್ಞೆ ಎಲ್ಲವೂ—ಅಶಾಶ್ವತ ಎಂದು ಬುದ್ಧ ಬೋಧಿಸಿದ. ಶಾಶ್ವತವಾಗಿರುವ ಯಾವುದನ್ನೂ ನಾವು ಕಾಣಲಾರೆವು. ಹೂವು ಕೊಳೆಯುತವೆ. ಹೂವನ್ನು ಇಷ್ಟಪಡುವಲ್ಲಿ, ಮೆಚ್ಚುವಲ್ಲಿ ಈ ತಿಳಿವಳಿಕೆ ಅಡ್ಡಬರುವುದಿಲ್ಲ. ಹೂವು ಶಾಶ್ವತವಲ್ಲ ಎಂಬ ಕಾರಣಕ್ಕೇ ಅದು ಜೀವಂತವಾಗಿರುವಾಗ ನೋಡಿ, ಸಂತೋಷಪಡುವುದು ಹೇಗೆಂದು ಕಲಿತಿದ್ದೇವೆ. ಅಶಾಶ್ವತತೆಯ ತಿಳಿವು ನಮಗೆ ಇರುವುದರಿಂದಲೇ ಹೂವು ಸತ್ತಾಗ ನಾವು ನರಳುವುದಿಲ್ಲ.
ಅಶಾಶ್ವತ ಎಂಬುದು ಕೇವಲ ಐಡಿಯ ಅಲ್ಲ. ಅದು ಸತ್ಯವನ್ನು ಸ್ಪರ್ಶಿಸಲು ನಮಗೆ ಸಹಾಯ ಮಾಡುವ ಅಭ್ಯಾಸ.
“ನನ್ನ ದಿನನಿತ್ಯದ ಬದುಕಿಗೆ, ಕಷ್ಟಗಳಿಗೆ, ವೇದನೆಗೆ ಸಂಬಂಧಿಸಿದ್ದು ಏನಾದರೂ ಅಶಾಶ್ವತತೆಯ ಈ ಬೋಧನೆಯಲ್ಲಿ ಇದೆಯೇ?” ಎಂದು ಕೇಳಿಕೊಳ್ಳಬೇಕು. ಅಶಾಶ್ವತ ಅನ್ನುವುದು ಕೇವಲ ಫಿಲಾಸಫಿಯಾದರೆ ಅದು ಬುದ್ಧನ ಬೋಧನೆಯಲ್ಲ. ಏನನ್ನೇ ಆಗಲಿ ಪ್ರತಿ ಬಾರಿ ನೋಡುವಾಗಲೂ ಕೇಳುವಾಗಲೂ ಇದು ಅಶಾಶ್ವತವೆಂಬ ಗ್ರಹಿಕೆ ನಮಗೆ ವ್ಯಕ್ತವಾಗಬೇಕು. ನಾವು ಕಂಡದ್ದರ, ಕೇಳಿದ್ದರ ಅಶಾಶ್ವತತೆಯನ್ನು ಕುರಿತ ಒಳನೋಟ ದಿನವಿಡೀ ನಮ್ಮೊಡನೆ ಇರಬೇಕು.
ಅಶಾಶ್ವತವನ್ನು ಆಳವಾಗಿ ಗಮನಿಸಿದಾಗ ವಸ್ತು, ಸಂಗತಿಗಳೆಲ್ಲವೂ ಬದಲಾಗುತ್ತವೆ; ಅವು ಹುಟ್ಟುವುದಕ್ಕೆ ಕಾರಣ, ಅವು ಇರುವ ಪರಿಸ್ಥಿತಿಗಳು ಬದಲಾಗುತ್ತವೆ; ಇರುವ ಪ್ರತಿಯೊಂದೂ “ಇಲ್ಲದಿರುವ” ಮಿಕ್ಕೆಲ್ಲದರ ಕಾರಣದಿಂದಲೇ ಅವಲಂಬನೆಯಲ್ಲೇ ಇದೆ ಎಂದು ತಿಳಿಯುತ್ತದೆ. ಪ್ರತಿಯೊಂದಲ್ಲೂ ಎಲ್ಲವೂ ಇದೆ ಎಂದು ಅರಿವಾಗುತ್ತದೆ.
ಕಾಲದ ದೃಷ್ಟಿಯಿಂದ “ಅಶಾಶ್ವತ” ಅನ್ನುತ್ತೇವೆ, ದೇಶದ ದೃಷ್ಟಿಯಿಂದ “ಅನಾತ್ತ” [ಅನಾತ್ಮ, ಇಲ್ಲಿ ಇಲ್ಲದ್ದು] ಎನ್ನುತ್ತೇವೆ. ಇರುವ ಯಾವುದೂ ಎರಡು ಕ್ಷಣಗಳ ಕಾಲ ಹಾಗೇ ಇರಲು ಸಾಧ್ಯವಿಲ್ಲ. ಹಾಗಾಗಿ ಶಾಶ್ವತವಾದದ್ದು, ಸದಾ ಇದ್ದೇ ಇರುವಂಥದ್ದು [ಆತ್ಮ] ಎಂಬುದಿಲ್ಲ. ಈ ಕೋಣೆಯೊಳಕ್ಕೆ ಬಂದ ನೀವು ಹೊರ ಹೋಗುವಾಗ ದೈಹಿಕವಾಗಿ, ಮಾನಸಿಕವಾಗಿ ಬೇರೆಯೇ ಆಗಿರುತ್ತೀರಿ.
ಅಶಾಶ್ವತದ ಆಳಕ್ಕೆ ದೃಷ್ಟಿ ಹಾಯಿಸಿದರೆ ಇಲ್ಲದಿರುವುದು, ಅನಾತ್ಮ ಕಾಣುತ್ತದೆ. ಅನಾತ್ಮವನ್ನು ದಿಟ್ಟಿಸಿ ನೋಡಿದರೆ ಅಶಾಶ್ವತ ತಿಳಿಯುತ್ತದೆ. ಅಶಾಶ್ವತವನ್ನು ಒಪ್ಪುತ್ತೇನೆ, ಅನಾತ್ಮ ಬಹಳ ಕಷ್ಟ ಅನ್ನುವುದಕ್ಕೆ ಅರ್ಥವಿಲ್ಲ. ಅಶಾಶ್ವತ, ಅನಾತ್ಮ ಎರಡೂ ಒಂದೇ.
ಅಶಾಶ್ವತದ ಅರಿವು ನಮಗೆ ವಿಶ್ವಾಸ ,ಶಾಂತಿ, ಸಂತೋಷಗಳನ್ನು ನೀಡುತ್ತದೆ. ಅಶಾಶ್ವತವು ವೇದನೆಯ, ದುಃಖದ ಕಾರಣವಲ್ಲ. ಅಶಾಶ್ವತ ಎಂಬುದು ಇರದಿದ್ದರೆ ಬದುಕೇ ಇರದು. ಅಶಾಶ್ವತವಿರದಿದ್ದರೆ ನಿಮ್ಮ ಪುಟ್ಟ ಮಗು ಬೆಳೆದು ಸುಂದರ ಯುವತಿಯಾಗುತ್ತಿರಲಿಲ್ಲ. ಅಶಾಶ್ವತವಿರದಿದ್ದರೆ ದುಷ್ಟ ರಾಜಕೀಯ ವ್ಯವಸ್ಥೆ ಬದಲಾಗುತ್ತಲೇ ಇರಲಿಲ್ಲ. ಅಶಾಶ್ವತದ ಕಾರಣಕ್ಕೆ ನಾವು ನರಳುತಿದ್ದೇವೆ ಅಂದುಕೊಂಡಿದ್ದೇವೆ. ಅಲ್ಲ. ಕಲ್ಲಿನ ಏಟು ತಿಂದ ನಾಯಿ ಕಲ್ಲಿನ ಮೇಲೆ ಸಿಟ್ಟುಗೊಳ್ಳುವ ಉದಾಹರಣೆಯನ್ನು ಬುದ್ಧ ನೀಡುತ್ತಾನೆ. ಅಶಾಶ್ವತವು ದುಃಖಕ್ಕೆ ಕಾರಣವಲ್ಲ, ಇಲ್ಲದ ಶಾಶ್ವತತೆಯ ಹಂಬಲವೇ ದುಃಖಕ್ಕೆ ಕಾರಣ.
ಅಶಾಶ್ವತವು ಎಷ್ಟು ಮೌಲಿಕ ಎಂದು ಅರಿತು ಮೆಚ್ಚುವುದನ್ನು ನಾವು ಕಲಿಯಬೇಕು. ಆರೋಗ್ಯವಾಗಿರುವಾಗ ಸ್ವಸ್ಥತೆಯನ್ನು ಕಾಪಾಡಿಕೊಳ್ಳಬೇಕು, ನಾವು ಇಷ್ಟಪಡುವ ವ್ಯಕ್ತಿಗಳು ಅಶಾಶ್ವತವೆಂದು ಅರಿತು ಅವರ ಬಗ್ಗೆ ಒಲವು, ಗೌರವ ತೋರಬೇಕು. ಪ್ರತಿಯೊಂದು ಕ್ಷಣವನ್ನೂ ಇಡಿಯಾಗಿ ಅನುಭವಿಸುವ, ನಮ್ಮ ಸುತ್ತಲ ಸಂಗತಿಗಳನ್ನು, ನಮ್ಮೊಳಗಿನ ಭಾವಗಳನ್ನು ಅವು ಇರುವಾಗಲೇ ಅನುಭವಿಸಿ ಆನಂದಿಸುವುದನ್ನು ಕಲಿಯಬೇಕು.
ಎಚ್ಚರದ ಗಮನದ ಮೂಲಕ ಎಲ್ಲ ಸಂಗತಿ, ವಸ್ತುಗಳ ಅಶಾಶ್ವತತೆಯನ್ನು ಗಹನವಾಗಿ ಅರಿಯಬಹದು.ಯಾವುದೂ ಶಾಶ್ವತವಲ್ಲ, ಆದ್ದರಿಂದ ಬದುಕುವುದರಲ್ಲಿ ಅರ್ಥವಿಲ್ಲ ಎಂದು ದೂರುವುದು ತಪ್ಪಿ ಅಶಾಶ್ವತಯೇ ಬದಲಾವಣೆಗೆ ಕಾರಣ, ದುಃಖವು ಸಂತೋಷವಾಗಿ ಬದಲಾಗುವುದಕ್ಕೂ ಅಶಾಶ್ವತತೆಯೇ ಕಾರಣ ಎಂದು ಅರಿಯಬಹುದು.
*
ವಚನಗಳಲ್ಲಿ ಕಾಮಿತ ಸತ್ಯ-ನಾವು ಆಸೆಪಡುವ ಸತ್ಯ, ಭಾವಿತ ಸತ್ಯ-ಇದು, ಇದೇ ಸತ್ಯವಾಗಿರಬೇಕು ಎಂದು ನಾವು ಭಾವಿಸುವುದು, ಮತ್ತು ಕಲ್ಪಿತ ಸತ್ಯ-ನಾವು ಕಲ್ಪನೆ ಮಾಡಿಕೊಂಡಿರುವುದೇ ಸತ್ಯ ಎಂಬ ಮೂರು ಸಾಧ್ಯತೆಗಳನ್ನೂ ಮೀರಿದ ಸತ್ಯವನ್ನು ಅರಿಯುವ ಹುಡುಕಾಟ ಕಾಣುತ್ತದೆ. ಅದರೊಂದಿಗೆ ಟಿಕ್ ನಾಟ್ ಹಾನ್ ಅವರ ಮಾತುಗಳನ್ನೂ ಇರಿಸಿಕೊಂಡು ನೋಡಿದರೆ ಸತ್ಯವೆಂಬುದು ಸ್ಥಿರ, ಶಾಶ್ವತ ಅಲ್ಲ; ಹಾಗೆ ಸತ್ಯವು ಸ್ಥಿರವೂ ಶಾಶ್ವತವೂ ಆಗಿದ್ದರೆ ಅದನ್ನು ಹುಡುಕುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಹೊಳೆಯುತ್ತದೆ.

