ಅಧ್ಯಾತ್ಮದಲ್ಲಿ ಕನ್ನಡಿಯ ರೂಪಕ : ಭಾಗ 1

ನಾವು ನಮ್ಮಲ್ಲಿ ಜಗತ್ತನ್ನು ಕಾಣ್ಬೇಕು ಅಂದ್ರೆ ಎಲ್ಲಕ್ಕಿಂತ ಮೊದಲು ನಮ್ಮ ಅಹಂಕಾರವನ್ನು ಉಜ್ಜಿ ತೊಳೆದುಕೊಳ್ಬೇಕು. ಅಹಂಕಾರ ಅಷ್ಟು ಸುಲಭಕ್ಕೆ ಹೋಗುವಂಥದ್ದಲ್ಲ. ಗಾಜಿಗೆ ಪಾದರಸದ ಲೇಪ ಮೆತ್ತಿರೋ ಹಾಗೇ ಅಹಂಕಾರವೂ ನಮ್ಮ ಮನಸ್ಸಿಗೆ ಮೆತ್ಕೊಂಡಿರುತ್ತೆ. ಅದನ್ನ ನಿವಾರಿಸಿಕೊಳ್ಬೇಕು ಅಂದ್ರೆ ಸಾಕಷ್ಟು ಸಂಘರ್ಷ ನಡೆಸ್ಬೇಕು… । ಚೇತನಾ ತೀರ್ಥಹಳ್ಳಿ

ನನ್ನ
ಪ್ರತಿಬಿಂಬಿಸುವ ಕನ್ನಡಿಗೆ
ಪಾದರಸದ ಲೇಪವಿಲ್ಲ.
ಗಾಜಿನಾಚೆಯ ಚಿತ್ರ
ನನ್ನದಲ್ಲ.

ಒಂದು ಗಾಜಿನ ಫಲಕ ಕನ್ನಡಿಯಾಗೋದು, ಅದಕ್ಕೆ ಪಾದರಸದ ಲೇಪ ಹಚ್ಚಿದಾಗ ಮಾತ್ರ. ಗಾಜಿನ ಫಲಕದ ಆಚೆ ಬದಿಯಲ್ಲೊಂದು ಲೇಪ ಇರಲೇಬೇಕು, ಆಗ ಮಾತ್ರ ಅದು ನಮ್ಮನ್ನು ಪ್ರತಿಬಿಂಬಿಸುತ್ತೆ. ಇಲ್ಲದಿದ್ರೆ, ಆ ಫಲಕದ ಆಚೆಗಿನದು ಗೋಚರಿಸುತ್ತೆ. ಇದು ವಿಜ್ಞಾನ.
ನನ್ನ ಪ್ರತಿಬಿಂಬಿಸುವ ಕನ್ನಡಿಗೆ ಪಾದರಸದ ಲೇಪವಿಲ್ಲ ಅನ್ನುವ ಸಾಲಿನ ಅರ್ಥ ಇಷ್ಟೇ; ನನ್ನ ಕೈಲಿರೋದು ನಿಜಕ್ಕೂ ಕನ್ನಡಿಯೇ, ಆದರೆ ಅದು ಲೇಪವಿಲ್ಲದ ಕನ್ನಡಿ. ಆದ್ದರಿಂದಲೇ ಅಲ್ಲಿ ಕಾಣಿಸ್ತಾ ಇರೋ ಪ್ರತಿಬಿಂಬ ಕೇವಲ ನನ್ನ ರೂಪವಲ್ಲ, ಇಡಿಯ ಜಗತ್ತಿನದು. ಹಾಗಾದರೆ ಅದನ್ನು ಸಿಂಪಲ್ಲಾಗಿ ಗಾಜು ಅಂತಲೇ ಅನ್ನಬಹುದಲ್ಲ, ಕನ್ನಡಿ ಅಂತ ಯಾಕೆ ಕರೆದಿರೋದು? ಇಲ್ಲೇ ಇರೋದು ಸ್ವಾರಸ್ಯ. ನಾನೇನೋ ಕೈಗೆತ್ತಿಕೊಂಡಿದ್ದು ಕನ್ನಡಿಯನ್ನೇ, ಆದರೆ ಅದರ ಲೇಪ ಕಳಚಿ ಬಿದ್ದಿದ್ರಿಂದ ಅದರಲ್ಲಿ ನನ್ನ ರೂಪ ಮೂಡಲಿಲ್ಲ, ಬದಲಿಗೆ ಆಚೆಗಿನ ಜಗತ್ತು ನನ್ನ ಪ್ರತಿಬಿಂಬವಾಗಿ ಕಾಣಿಸ್ತು. ಈ ಪಾದರಸದ ಲೇಪ ಮತ್ತೇನೂ ಅಲ್ಲ, ನನ್ನ ಅಹಂಕಾರ. ಯಾವಾಗ ನಾನು ಅನ್ನೋ ಅಹಂಕಾರ ಕಳಚಿಬಿತ್ತೋ, ಆಗ ನನಗೆ ನಾನಷ್ಟೆ ಕಾಣುವ ಮಿತಿಯೂ ಕೊನೆಯಾಯ್ತು, ಪ್ರತಿಯೊಂದು ಜಡ – ಚೇತನದಲ್ಲೂ ನನ್ನನ್ನು ನಾನು ಕಾಣತೊಡಗಿದೆ… ಇದು ಈ ಸಾಲುಗಳ ಅರ್ಥ.

ನಾವು ನಮ್ಮಲ್ಲಿ ಜಗತ್ತನ್ನು ಕಾಣ್ಬೇಕು ಅಂದ್ರೆ ಎಲ್ಲಕ್ಕಿಂತ ಮೊದಲು ನಮ್ಮ ಅಹಂಕಾರವನ್ನು ಉಜ್ಜಿ ತೊಳೆದುಕೊಳ್ಬೇಕು. ಅಹಂಕಾರ ಅಷ್ಟು ಸುಲಭಕ್ಕೆ ಹೋಗುವಂಥದ್ದಲ್ಲ. ಗಾಜಿಗೆ ಪಾದರಸದ ಲೇಪ ಮೆತ್ತಿರೋ ಹಾಗೇ ಅಹಂಕಾರವೂ ನಮ್ಮ ಮನಸ್ಸಿಗೆ ಮೆತ್ಕೊಂಡಿರುತ್ತೆ. ಅದನ್ನ ನಿವಾರಿಸಿಕೊಳ್ಬೇಕು ಅಂದ್ರೆ ಸಾಕಷ್ಟು ಸಂಘರ್ಷ ನಡೆಸ್ಬೇಕು. ಅಹಂಕಾರ ಬಿಡೋದು ಅಂದ್ರೆ ನಮ್ಮ ಅಸ್ತಿತ್ವವನ್ನೇ ಬಿಟ್ಟುಕೊಡೋದು ಅನ್ನುವ ಅಭದ್ರತೆಯನ್ನ ಮೀರಿ ಧೈರ್ಯವಾಗಿ ಮುನ್ನಡಿಬೇಕು. ನನ್ನ ಅಸ್ತಿತ್ವ ಬರೀ ಈ ದೇಹಕ್ಕೆ ಸೀಮಿತವಾಗಿಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ಬೇಕು. ಈ ಧೈರ್ಯದ ಕಾವಿನ ಮುಂದೆ ಮನಸ್ಸಿನ ಕನ್ನಡಿಗೆ ಮೆತ್ತಿರೋ ಅಹಂಕಾರ ಕರಗಿ ಕಳಚಿ ಬೀಳ್ಬೇಕು. ಆಗಷ್ಟೆ ನಮಗೆ ಅದರಾಚೆಗಿನ ಜಗತ್ತು ಕಾಣೋದು, ಸತ್ಯದರ್ಶನವಾಗೋದು.

ಆಧ್ಯಾತ್ಮಿಕ ಚಿಂತನೆಯಲ್ಲಿ ಕನ್ನಡಿಯ ರೂಪಕಕ್ಕೆ ಬಹಳ ಮುಖ್ಯವಾದ ಸ್ಥಾನವಿದೆ. ಅದೇನು ಅಂತ ಮುಂದಿನ ಸಂಚಿಕೆಯಲ್ಲಿ ನೋಡೋಣ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.