ತತ್ತ್ವಜ್ಞಾನಿ Plutarch, ನೈತಿಕ ಆದರ್ಶ ವ್ಯಕ್ತಿಯ (moral exemplar) ಮಹತ್ವವನ್ನು ಒತ್ತಿ ಹೇಳಿದ. ಅವನ ಪ್ರಕಾರ, ಪೋಷಕರ ಕೆಲಸವೆಂದರೆ ಮಗುವು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಅದಕ್ಕೆ ಬೆಂಬಲ ನೀಡುವುದು ಮತ್ತು ಸರಿಯಾದ ಮಾರ್ಗದರ್ಶನ ಮಾಡುವುದು… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನಿಮ್ಮ ತಂದೆ-ತಾಯಿ ಒಳ್ಳೆಯವರಾಗಿದ್ದರೆ, ಎನ್ನುವುದನ್ನ ಹೇಗೆ ತಿಳಿಯುವುದು? ನಿಮ್ಮ ಅಮ್ಮ ಅಥವಾ ಅಪ್ಪ ನಿಮ್ಮನ್ನು ಸರಿಯಾಗಿ ಬೆಳೆಸಿದ್ದಾರೆಯೇ ಎನ್ನುವುದನ್ನ ಹೇಗೆ ತಿಳಿಯುವುದು? ರೋಮನ್ ತತ್ತ್ವಜ್ಞಾನಿ Plutarch ಅವರ ಪ್ರಕಾರ, ಅದನ್ನು ಖಚಿತವಾಗಿ ತಿಳಿಯುವ ಒಂದು ಮಾರ್ಗವಿದೆ : ನೀವು ಅವರಂತೆಯೇ ನಡೆದುಕೊಳ್ಳಲು ಬಯಸುತ್ತೀರಿ.
ಮಕ್ಕಳ ಸ್ವಭಾವದ ಕುರಿತಾದ ಒಂದು ಉಲ್ಲೇಖ ಹೀಗಿದೆ:
“ಮಕ್ಕಳು ಅತ್ಯುತ್ತಮ ಅನುಕರಣೆಕಾರರು”. ಆದ್ದರಿಂದ ನಾವು ಅವರಿಗೆ ಅನುಕರಿಸಲು ಯೋಗ್ಯವಾದುದನ್ನು ನೀಡಬೇಕು. ಏಕೆಂದರೆ, ಮಕ್ಕಳಿಗೆ ನಮ್ಮನ್ನು ನಿರ್ಲಕ್ಷಿಸಲು ಇಷ್ಟವಿರುವಂತೆ ಕಾಣಬಹುದು; ಅವರು ನಮ್ಮ ಮಾತುಗಳನ್ನು ವಿರೋಧಿಸಬಹುದು, ಪ್ರಶ್ನಿಸಬಹುದು ಮತ್ತು ಕೆಲವೊಮ್ಮೆ ನಮ್ಮ ವಿರುದ್ಧ ಬಂಡಾಯವನ್ನೂ ಮಾಡಬಹುದು. ಆದರೆ ವಾಸ್ತವದಲ್ಲಿ, ಅವರು ನಮ್ಮ ನೆರಳಿನಲ್ಲೇ ರೂಪುಗೊಳ್ಳುತ್ತಿರುತ್ತಾರೆ.
ಅಮ್ಮ ಮತ್ತು ಅಪ್ಪ ಮಾತನಾಡುವ ರೀತಿ, ನಡೆಯುವ ರೀತಿ, ಆಟವಾಡುವ ರೀತಿ, ಅಳುವ ರೀತಿ ಮತ್ತು ನಗುವ ರೀತಿ — ಇವೆಲ್ಲವೂ ಮಕ್ಕಳಿಗೆ ಜೀವನದ ಮಾನದಂಡ (Standard) ಆಗಿ ಪರಿಣಮಿಸುತ್ತದೆ.
ತತ್ತ್ವಜ್ಞಾನಿ Plutarch, ನೈತಿಕ ಆದರ್ಶ ವ್ಯಕ್ತಿಯ (moral exemplar) ಮಹತ್ವವನ್ನು ಒತ್ತಿ ಹೇಳಿದ. ಅವನ ಪ್ರಕಾರ, ಪೋಷಕರ ಕೆಲಸವೆಂದರೆ ಮಗುವು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಅದಕ್ಕೆ ಬೆಂಬಲ ನೀಡುವುದು ಮತ್ತು ಸರಿಯಾದ ಮಾರ್ಗದರ್ಶನ ಮಾಡುವುದು. ನಿಸ್ಸಂಶಯವಾಗಿ, ಪೋಷಕರು ತಮ್ಮ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಮತ್ತು ಪೋಷಿಸಬೇಕು. ಅವರು ಮಗುವಿಗೆ ಆಹಾರ, ಆಶ್ರಯ ಹಾಗೂ ಸುರಕ್ಷಿತ ವಾತಾವರಣವನ್ನು ಒದಗಿಸಬೇಕು. ಆದರೆ ಅಷ್ಟೇ ಸಾಕಾಗುವುದಿಲ್ಲ. ಅವರು, ಒಳ್ಳೆಯ ವ್ಯಕ್ತಿ ಹೇಗಿರುತ್ತಾನೆ ಎಂಬುದನ್ನು ತಮ್ಮ ನಡವಳಿಕೆಯ ಮೂಲಕ ತೋರಿಸಬೇಕು. ಅವರು ಇತರರೊಂದಿಗೆ ವಿನಯದಿಂದ ವರ್ತಿಸಬೇಕು. ಕಠಿಣ ಪರಿಶ್ರಮದ ಮಾದರಿಯಾಗಿರಬೇಕು. ಕಾಳಜಿಯುಳ್ಳವರಾಗಿರಬೇಕು, ದಯಾಳುಗಳಾಗಿರಬೇಕು ಮತ್ತು ಉದಾರ ಮನಸ್ಸಿನವರಾಗಿರಬೇಕು. ಏಕೆಂದರೆ ಆಗ ಮಗು ಈ ಗುಣಗಳನ್ನು ಕೇವಲ ಒಳ್ಳೆಯ ಗುಣಗಳು ಅಥವಾ ಸದ್ಗುಣಗಳು ಎಂದು ನೋಡುವುದಿಲ್ಲ; ಬದಲಿಗೆ, ಹಾಗೆ ಬದುಕುವುದು ತನ್ನ ಜೀವನದಲ್ಲಿ ಸಹಜವಾಗಿ ಮತ್ತು ಸಾಮಾನ್ಯವಾಗಿ ವರ್ತಿಸಬೇಕಾದ ವಿಧಾನವೆಂದು ಅರ್ಥಮಾಡಿಕೊಳ್ಳುತ್ತದೆ.
ಆದ್ದರಿಂದ, ಒಳ್ಳೆಯ ಪೋಷಕರು ಎಂದರೆ ನೀವು ಆಗಾಗ ನೆನಪಿಸಿಕೊಳ್ಳುವವರು. ಯಾವುದೇ ಪರಿಸ್ಥಿತಿಯಲ್ಲಿ ನೀವು, “ಈ ಸಂದರ್ಭದಲ್ಲಿ ಅಮ್ಮ ಏನು ಮಾಡುತ್ತಿದ್ದರು?” ಅಥವಾ “ಅಪ್ಪ ಇದನ್ನು ಹೇಗೆ ಎದುರಿಸುತ್ತಿದ್ದರು?” ಎಂದು ನಿಮ್ಮನ್ನು ನೀವು ಕೇಳಿಕೊಳ್ಳುವಂತಿದ್ದರೆ, ಅದು ಅವರ ಉತ್ತಮ ಪೋಷಣೆಯ ಸಂಕೇತವಾಗಿದೆ. ಏಕೆಂದರೆ ನಮ್ಮ ತಂದೆ-ತಾಯಿಗಳು ಬಹಳ ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋಗಿದ್ದರೂ, ಅವರು ನಮ್ಮೊಂದಿಗೇ ಇರುತ್ತಾರೆ. ಅವರ ಮಾತುಗಳು, ಮೌಲ್ಯಗಳು, ಅಭ್ಯಾಸಗಳು ಮತ್ತು ಜೀವನದ ಪಾಠಗಳು ನಮ್ಮ ವ್ಯಕ್ತಿತ್ವದ ನೂಲಿನಲ್ಲೇ ಹೆಣೆದುಕೊಂಡಿರುತ್ತವೆ. ಹೀಗಾಗಿ, ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರು ನಮ್ಮ ಅಸ್ತಿತ್ವದ ಮೂಲಭೂತ ಭಾಗವಾಗಿ ಜೀವಿಸುತ್ತಲೇ ಇರುತ್ತಾರೆ.

