ನಾವೂ ಪರಸ್ಪರ ಇಂಥಾ ಕಣ್ಣಾಮುಚ್ಚೆಯಾಡುತಿದ್ದೇವೆ. ಹುಟ್ಟಿ, ಬದುಕಿ ನಿರ್ವಾಣ ಪಡೆದವನಂತೆ ನಟಿಸಿದ್ದು ಬುದ್ಧ ಮಾತ್ರವಲ್ಲ. ನಾವು ಕೂಡ ಹುಟ್ಟಿದೆವು, ಬದುಕಿದೆವು, ಸಾಯುವೆವು ಎಂದು ನಟಿಸುತ್ತೇವೆ… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 2.8: ಅರಿವಿನ ಬೆಳಕು । ಕಣ್ಣಾ ಮುಚ್ಚೆ
ಒಂದು ದಿನ ಪ್ಲಮ್ ವಿಲೇಜ್‌ನಲ್ಲಿ ಧ್ಯಾನದ ನಡಿಗೆಯಲ್ಲಿರುವಾಗ ನನ್ನ ಮುಂದಿನ ಹೆಜ್ಜೆ ಇಡಬೇಕಾದ ಜಾಗದಲ್ಲಿ ಹೊಂಬಣ್ಣದ ಎಲೆ ಕಂಡಿತು. ಎಲೆ ಉದುರುವ ಕಾಲ. ಚಿನ್ನದ ಬಣ್ಣದ ಎಲೆಗಳು ತುಂಬ ಚೆಲುವಾಗಿರುತ್ತವೆ. ಆ ಎಲೆಯ ಮೇಲೆ ಕಾಲಿಡಲು ಒಂದು ಕ್ಷಣ ಹಿಂಜರಿದೆ. ತಕ್ಷಣವೇ ನಗುವಿನ ಜೊತೆಗೆ ಹೀಗೆ ಯೋಚನೆ ಬಂದಿತು—“ಈ ಎಲೆ ತಾನು ಚಿನ್ನವೆಂದು ನಟಿಸುತಿದೆ, ಮರದಿಂದ ಕೆಳಕ್ಕೆ ಬಿದ್ದೆನೆಂದು ನಟಿಸುತಿದೆ.”
ಚಾರಿತ್ರಿಕ ಆಯಾಮದಲ್ಲಿ ನೋಡಿದರೆ ಆ ಎಲೆ ವಸಂತ ಕಾಲದಲ್ಲಿ ಮರದ ಹಸಿರು ಟೊಂಗೆಯಲ್ಲಿ ಹುಟ್ಟಿತ್ತು. ಎಷ್ಟೋ ತಿಂಗಳ ಕಾಲ ಕೊಂಬೆಗೆ ಅಂಟಿಕೊಂಡಿತ್ತು. ಎಲೆ ಉದುರುವ ಕಾಲದಲ್ಲಿ ಬಣ್ಣ ಬದಲಿಸಿಕೊಂಡಿತು. ಥಂಡಿ ಗಾಳಿ ಬೀಸಿದಾಗ ನೆಲಕ್ಕೆ ಬಿದ್ದಿತ್ತು.
ಪರಮಸತ್ಯದ ಆಯಾಮದಲ್ಲಿ ನೋಡಿದರೆ ಎಲೆಯು ತಾನು ಹುಟ್ಟಿದೆ ಎಂದು ನಟಿಸುತಿತ್ತು, ಕೆಲವು ಕಾಲ ಬದುಕಿದೆ, ಮುದಿಯಾಗಿ ಸತ್ತೆ ಎಂದು ನಟಿಸುತಿತ್ತು. ಒಳ ಇರುವಿನ ಬೋಧನೆ ಮತ್ತು ಅನಾತ್ತದ ತಿಳಿವು ಲೋಕದ ಎಲ್ಲ ಸಂಗತಿಗಳೂ ಸೃಷ್ಟಿಗಳೂ ನಿಜವಾಗಿ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ ಎಂದು ತೋರಿಸಿಕೊಡುತ್ತವೆ. ಇನ್ನೊಂದು ದಿನ ಇದೇ ಎಲೆ ಇನ್ನೊಂದು ಮರದ ಕೊಂಬೆಯ ಮೇಲೆ ಹುಟ್ಟಿದೆನೆಂದು ನಟಿಸುತ್ತದೆ. ಈ ಎಲೆ ನಮ್ಮೊಡನೆ ಕಣ್ಣಾಮುಚ್ಚೆ ಆಡುತಿದೆ.
ನಾವೂ ಪರಸ್ಪರ ಇಂಥಾ ಕಣ್ಣಾಮುಚ್ಚೆಯಾಡುತಿದ್ದೇವೆ. ಹುಟ್ಟಿ, ಬದುಕಿ ನಿರ್ವಾಣ ಪಡೆದವನಂತೆ ನಟಿಸಿದ್ದು ಬುದ್ಧ ಮಾತ್ರವಲ್ಲ. ನಾವು ಕೂಡ ಹುಟ್ಟಿದೆವು, ಬದುಕಿದೆವು, ಸಾಯುವೆವು ಎಂದು ನಟಿಸುತ್ತೇವೆ. ನಿಮ್ಮ ತಾಯಿ ತೀರಿಹೋಗಿದ್ದಾರೆ, ನಿಮ್ಮೊಡನೆ ಇಲ್ಲವೆಂದು ನಿಮಗೆ ಅನಿಸಬಹುದು. ಸೂಕ್ತವಾದ ಪರಿಸರ, ಸಂದರ್ಭ ಒದಗಿದರೆ ನಿಮ್ಮ ತಾಯಿ ಒಂದಲ್ಲಾ ಒಂದು ರೂಪದಲ್ಲಿ ನಿಮಗೆ ಕಾಣಿಸಿಕೊಳ್ಳುತ್ತಾರೆ. ಕಾಣಬಲ್ಲ ಶಕ್ತಿ ನಿಮಗಿದ್ದರೆ ನಿಮ್ಮ ತಾಯಿಯನ್ನು ಅವರ ಇನ್ನೊಂದು ರೂಪದಲ್ಲಿ ಗುರುತಿಸಬಲ್ಲಿರಿ.
ನೀವು ಪ್ರೀತಿಸುವವರನ್ನೆಲ್ಲ ಗಮನಿಸಿ ನೋಡಿ, ಅವರ ನಿಜ ಸ್ವಭಾವವನ್ನು ಅರಿಯಿರಿ. ನಮ್ಮ ಮೇಷ್ಟರು, ಅಪ್ಪ, ಅಮ್ಮ, ಅಕ್ಕ, ತಂಗಿ, ಹೀಗೆ ನಮ್ಮ ಪ್ರೀತಿ ಪಾತ್ರರಾದವರು ತೀರಿಕೊಂಡಾಗ ಅವರನ್ನು ಶಾಶ್ವತವಾಗಿ ಕಳೆದುಕೊಂಡೆವು ಅಂದುಕೊಳ್ಳುತ್ತೇವೆ.
ನಿಜವಾಗಿ ನೋಡಿದರೆ ಯಾರನ್ನೂ ಏನನ್ನೂ ಕಳೆದುಕೊಂಡಿರುವುದಿಲ್ಲ. ನಿಜ ಸ್ವಭಾವಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ. ಪರಮ ಸತ್ಯದ ಆಯಾಮವನ್ನು ನಾವು ಸ್ಪರ್ಶಿಸಿದರೆ ಹೊನ್ನಿನ ಬಣ್ಣದ ಎಲೆಯ ನಟನೆಯಂತೆಯೇ ನಮ್ಮ ಬದುಕಿನಲ್ಲಿ ನಡೆಯುವ ಎಲ್ಲ ಬಗೆಯ ಬದಲಾವಣೆಗಳ ನಾಟಕವನ್ನು ಕಾಣುತ್ತೇವೆ.
*
ಸತ್ತು ಹುಟ್ಟಿ ಕೆಟ್ಟವರೆಲ್ಲರು
ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು
ಸಾಯದ ಮುನ್ನ ಸ್ವಯವನರಿದಡೆ
ದೇವನೊಲಿವ ನಮ್ಮ ಗುಹೇಶ್ವರನು
ಮೊದಲ ಎರಡು ಸಾಲು ಚಾರಿತ್ರಿಕ ಆಯಾಮದ ಸತ್ಯವನ್ನು ಹೇಳುತ್ತದೆ, ಕೊನೆಯ ಎರಡು ಸಾಲು ಆತ್ಯಂತಿಕ ಅರಿವನ್ನು ಪಡೆದರೆ, ಅಂದರೆ ಬದುಕಿರುವಾಗಲೇ ಸಾವನ್ನು ಅರಿತರೆ ಅದರ ಸ್ಥಿತಿಯನ್ನು ಹೇಳುತ್ತದೆ ಅನಿಸುತ್ತದೆ. ಜೆಕೆಯವರು ಕೂಡ ದಿನದಿನವೂ, ಪ್ರತಿಕ್ಷಣವೂ ಸಾವಿನ ಅನುಭವ ಪಡೆಯುವ ಬಗ್ಗೆ, ಅದರ “ಸುಖ”ದ ಬಗ್ಗೆ ಹೇಳುತ್ತಾರೆ. ಇವು ಕೂಡ ಸಾವಿನ ಭಯಕ್ಕೆ ಮುಲಾಮು ಹಚ್ಚುವ ಮಾತುಗಳೋ…ಗೊತ್ತಿಲ್ಲ.

