ಒಂದು ಬದಿಯ ಪ್ರೇಮ…

ಪ್ರೇಮ ಎಂದೂ ಸಾಯುವುದಿಲ್ಲ, ಮತ್ತು one sided ಪ್ರೇಮವೇ, ಪ್ರೇಮದ ಅತ್ಯಂತ ಶುದ್ಧ ರೂಪ ಎಂದೆಲ್ಲ ಜನ ಮಾತನಾಡಿಕೊಳ್ಳುವುದನ್ನ ನೀವು ಕೇಳಿರಬಹುದು. ಈ ಮಾತಿನ ಹಿಂದಿನ ತರ್ಕ ಏನೆಂದರೆ ಇಲ್ಲಿ ಯಾವ ನಿರೀಕ್ಷೆಗಳೂ ಇರುವುದಿಲ್ಲ, ಇಲ್ಲಿ ಕೇವಲ ಸಮರ್ಪಣೆ ಇರುತ್ತದೆ… । ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಹಾಸಿಲ್ ತೋ ಮುಝೆ ಕಲ್ ಭೀ ನಹೀ ಥಾ
ಔರ್ ಖೋಯಾ ಮೈ ನೇ ತುಝೇ ಆಜ್ ಭೀ ನಹೀ

ದೊರಕಿರಲಿಲ್ಲ ನೀನು ನಿನ್ನೆಯೂ ನನಗೆ
ಕಳೆದುಕೊಂಡಿಲ್ಲ ನಾನು ಇಂದೂ ನಿನ್ನ

ಪ್ರೇಮ ಎಂದೂ ಸಾಯುವುದಿಲ್ಲ, ಮತ್ತು one sided ಪ್ರೇಮವೇ, ಪ್ರೇಮದ ಅತ್ಯಂತ ಶುದ್ಧ ರೂಪ ಎಂದೆಲ್ಲ ಜನ ಮಾತನಾಡಿಕೊಳ್ಳುವುದನ್ನ ನೀವು ಕೇಳಿರಬಹುದು. ಈ ಮಾತಿನ ಹಿಂದಿನ ತರ್ಕ ಏನೆಂದರೆ ಇಲ್ಲಿ ಯಾವ ನಿರೀಕ್ಷೆಗಳೂ ಇರುವುದಿಲ್ಲ, ಇಲ್ಲಿ ಕೇವಲ ಸಮರ್ಪಣೆ ಇರುತ್ತದೆ. ಮಿರ್ಜಾ ಗಾಲೀಬ್ ನ ಒಂದು ಶೇರ್ ಹೀಗಿದೆ….

ಮೊಹೊಬ್ಬತ್ ಮೇ ನಹೀ ಹೈ ಫರ್ಕ್
ಜೀನೇ ಔರ್ ಮರನೇ ಕಾ,
ಉಸೀ ಕೋ ದೇಖಕರ್ ಜೀತೇ ಹೈ
ಜಿಸ್ ಕಾಫಿರ್ ಪೇ ದಮ್ ನಿಕಲೇ.

ಪ್ರೇಮದಲ್ಲಿ ಯಾವ ವ್ಯತ್ಯಾಸವಿಲ್ಲ
ಬದುಕು ಮತ್ತು ಸಾವಿನ ನಡುವೆ,
ಯಾರನ್ನು ನೋಡಿದರೆ ಪ್ರಾಣ ಹೋಗುತ್ತದೆಯೋ
ಬದುಕುತ್ತೇವೆ ಆ ಕೊಲೆಗಾರರನ್ನೇ ನೋಡುತ್ತ.

ಆದರೆ ಬದುಕಿನ ಸತ್ಯ ಇನ್ನೊಂದು ಕೂಡ ಇದೆ. ಯಾವುದೇ ಸಂಬಂಧ, ಯಾವುದೇ ಭಾವನೆ, ಅದು ಎಷ್ಟೇ ಸುಂದರವಾಗಿದ್ದರೂ, ಎಷ್ಟೇ ಪವಿತ್ರವಾಗಿದ್ದರೂ, ಅದು one sided ಆಗಿದ್ದರೆ, ಅಲ್ಲಿ ಭಾವನೆಗಳ, ಅನುಭವಗಳ, ವಿನಿಮಯ ಇಲ್ಲದಿದ್ದರೆ, ಸ್ವಲ್ಪ ದಿನಗಳ ನಂತರ ಅದು ನಿಮ್ಮನ್ನು ಘಾಸಿ ಮಾಡಿಯೇ ಮಾಡುತ್ತದೆ. ಏಕೆಂದರೆ ಕೊನೆಗೂ ನೀವು ಮನುಷ್ಯರೇ ಮತ್ತು ಯಾವುದೋ ಒಂದು ಹಂತದಲ್ಲಿ ನಿರೀಕ್ಷೆಗಳು ನಿಮ್ಮೊಳಗೆ ಹುಟ್ಟೇ ಹುಟ್ಟಿಕೊಳ್ಳುತ್ತವೆ. ಈ ಬಗ್ಗೆ ನೀವು ಯಾರ ಬಳಿ ಹೇಳಿಕೊಳ್ಳದಿದ್ದರೂ ನನಗೆ ಮೋಸ ಆಯಿತು ಎಂದು ನೀವು ಅಂದುಕೊಳ್ಳುವುದು ಮಾತ್ರ ಖಂಡಿತ.

ಕನಸುಗಳ ಸಾವು, ನಿರೀಕ್ಷೆಗಳ ಸಾವು ಬದುಕಿನ ಸಾವು ಖಂಡಿತ ಆಗಿರುತ್ತದೆ. ಮತ್ತು ಇದು ಪ್ರೇಮದ ಅತ್ಯಂತ ದೊಡ್ಡ ದುರಂತ ಕೂಡ ಹೌದು. ಜಾನ್ ಏಲಿಯಾ ಸಾಹೇಬರ ಈ ಶೇರ್ ಪ್ರೇಮದ ಇದೇ ಅಸಹಾಯಕತೆಯನ್ನು ಬಣ್ಣಿಸುತ್ತದೆ. ಇಲ್ಲಿ ಕನಸುಗಳು ಸಾಯುತ್ತಿವೆ, ನಿರೀಕ್ಷೆಗಳು ಮಣ್ಣಾಗುತ್ತಿವೆ ಆದರೆ ನಿಮ್ಮ ದೂರು ನಿಮ್ಮ ಪ್ರೇಮಿಯ ಬಗ್ಗೆ ಇಲ್ಲ, ನೀವು ನಿಮ್ಮನ್ನೇ ದೋಷಿಯಾಗಿಸಿಕೊಳ್ಳುತ್ತಿದ್ದೀರಿ.

ಮೈ ಭೀ ಬಹುತ್ ಅಜೀಬ್ ಹೂಂ ಕೀ
ಇತನಾ ಅಜೀಬ್ ಹೂಂ ಬಸ್ ,
ಖುದ್ ಕೋ ತಬಾಹ್ ಕರ್ ಲಿಯಾ
ಔರ್ ಮಲಾಲ್ ಭೀ ನಹೀಂ.

ನಾನು ಬಹಳ ವಿಚಿತ್ರ
ಎಷ್ಟು ವಿಚಿತ್ರ ಎಂದರೆ,
ನನ್ನನ್ನೇ ನಾಶ ಮಾಡಿಕೊಂಡರೂ
ಕಣ್ಣಲ್ಲಿ ಒಂದು ಹನಿಯೂ ಇಲ್ಲ.

ಇನ್ನೊಂದು ಶೇರ್ ಹೀಗಿದೆ…..

ಸೋಚೂಂ ತೋ ಸಾರೀ ಉಮ್ರ
ಮೊಹೊಬ್ಬತ್ ಮೇ ಕಟ್ ಗಯೀ,
ದೇಖೂ ತೋ ಕೋಯಿ ಶಕ್ಸ್
ಮೇರಾ ನಹೀಂ ಹುಆ.

ಯೋಚಿಸಿದರೆ ಕಳೆದು ಹೋಯಿತು
ಇಡೀ ಬದುಕು ಪ್ರೇಮದಲ್ಲಿ,
ನೋಡಿದರೆ ಯಾರು ಕೂಡ
ಆಗಲಿಲ್ಲ ನನ್ನವರು.

ಪ್ರೇಮದ ಅಸಹಾಯಕತೆಯನ್ನು ಗಮನಿಸಿ. ಆದರೆ ಇದರ ಹೊರತಾಗಿಯೂ, ಪ್ರೇಮಿ ತನ್ನ ಪ್ರಿಯ ವ್ಯಕ್ತಿಯನ್ನ ಮರೆಯುವುದಿಲ್ಲ, ಅವರು ಎಲ್ಲಿಯೇ ಇರಲಿ, ಯಾರ ಜೊತೆಗಾದರೂ ಇರಲಿ. ಹೊತ್ತಿಲ್ಲದ ಹೊತ್ತಲ್ಲಿ ಪ್ರೇಮಿಯ ನೆನಪು ಆಗಿಯೇ ಆಗುತ್ತದೆ, ಮನಸ್ಸಿನ ಅಂಗಳವನ್ನು ಮಳೆಯ ಸಿಂಚನದಂತೆ ಒದ್ದೆ ಮಾಡಿ ಮತ್ತೆ ವಾಪಸ್ ಹೋಗಿ ಬಿಡುತ್ತದೆ. ಫಿರಾಕ್ ಗೋರಖಪುರಿ ಅವರ ಶೇರ್ ಒಂದು ಹೀಗಿದೆ….

ಏಕ್ ಮುದ್ದತ್ ಸೇ ತೇರಿ ಯಾದ್ ಭೀ
ಆಯೀ ನ ಮುಝೇ,
ಔರ್ ಹಂ ಭೂಲ್ ಗಯೇ ಹೋ ತುಝೇ
ಐಸಾ ಭೀ ನಹೀ.

ಒಂದಿಷ್ಟು ಸಮಯದಿಂದ
ನಿನ್ನ ನೆನಪೂ ಆಗುತ್ತಿಲ್ಲ,
ಮತ್ತು ನಿನ್ನ ಮರೆತಿದ್ದೇನೆ ನಾನು
ಎನ್ನುವುದೂ ಸಾಧ್ಯವಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.