‘ಅಮಾಥಿಯಾ’ ಅನ್ನುವ ಅಪಾಯಕಾರಿ ಸ್ಥಿತಿ

ಅಮಾಥಿಯಾ ಎನ್ನುವ ಪದವನ್ನು ಸಾಮಾನ್ಯವಾಗಿ “ಅಜ್ಞಾನ” ಎಂದು ಅನುವಾದಿಸಲಾಗುತ್ತದೆ. ಆದರೆ ಇದು ಸಾಮಾನ್ಯ ಅಜ್ಞಾನಕ್ಕೆ ಸಮಾನವಲ್ಲ. ಸಾಮಾನ್ಯ ಅಜ್ಞಾನವನ್ನು ನಿವಾರಿಸಲು ಒಬ್ಬರಿಗೆ ಪುಸ್ತಕವನ್ನೋ, ಸಾಕ್ಷ್ಯಚಿತ್ರವನ್ನೋ ಅಥವಾ ಹೊಸ ಅನುಭವವನ್ನೋ ನೀಡಬಹುದು. ಅದರಿಂದ ಅವರು ಹೊಸದನ್ನು ಕಲಿಯಬಹುದು. ಆದರೆ ಅಮಾಥಿಯಾ ಇನ್ನಷ್ಟು ಗಾಢವಾದ ಮತ್ತು ಅಪಾಯಕಾರಿ ಸ್ಥಿತಿಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಲೇಖಕ ಹಂಟರ್ ಆಶ್ ಒಮ್ಮೆ ಹೀಗೆ ವಾದಿಸಿದ್ದರು:
“ಹೆಚ್ಚಿನ ಜನರು, ಅವರು ಎಷ್ಟೇ ಬುದ್ಧಿವಂತರಾಗಿರಲಿ ಅಥವಾ ಉನ್ನತ ಶಿಕ್ಷಣ ಪಡೆದವರಾಗಿರಲಿ, ತಮಗೆ ತಿಳಿದಿರುವುದನ್ನು, ಜಗತ್ತನ್ನು ಅರ್ಥಮಾಡಿಕೊಳ್ಳಲು ಬಳಸುವುದಿಲ್ಲ. ಬದಲಾಗಿ, ತಮ್ಮ ಗುಂಪು ಅಥವಾ ಪಂಗಡದ ಪರವಾಗಿ ವಾದದಲ್ಲಿ ಗೆಲ್ಲಲು ಬಳಸುತ್ತಾರೆ. ನಿಜವಾಗಿಯೂ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರ ಸಂಖ್ಯೆ ಅತ್ಯಂತ ಕಡಿಮೆ.”

ಪ್ರಾಚೀನ ಗ್ರೀಕರು ಈ ಸಂಗತಿಯನ್ನು ‘ಅಮಾಥಿಯಾ’ (Amathia) ಎನ್ನುವ ಪದದಿಂದ ಗುರುತಿಸುತ್ತಾರೆ. ತಮ್ಮ ಅಜ್ಞಾನವನ್ನು ಅರಿಯದೆ, ತಾವು ಸತ್ಯವನ್ನು ಸಂಪೂರ್ಣವಾಗಿ ತಿಳಿದಿದ್ದೇವೆ ಎಂದು ಭಾವಿಸುವ ಮನೋಭಾವವನ್ನು ಇದು ಸೂಚಿಸುತ್ತದೆ. ಗ್ರೀಕರು ಇಂತಹ ಅಮಾಥಿಯಾ ಕೊನೆಗೆ ನಾಗರಿಕತೆಯ ಪತನಕ್ಕೆ ಕಾರಣವಾಗುತ್ತದೆ ಎಂದು ನಂಬಿದ್ದರು.

ಅಮಾಥಿಯಾ ಎನ್ನುವ ಪದವನ್ನು ಸಾಮಾನ್ಯವಾಗಿ “ಅಜ್ಞಾನ” ಎಂದು ಅನುವಾದಿಸಲಾಗುತ್ತದೆ. ಆದರೆ ಇದು ಸಾಮಾನ್ಯ ಅಜ್ಞಾನಕ್ಕೆ ಸಮಾನವಲ್ಲ. ಸಾಮಾನ್ಯ ಅಜ್ಞಾನವನ್ನು ನಿವಾರಿಸಲು ಒಬ್ಬರಿಗೆ ಪುಸ್ತಕವನ್ನೋ, ಸಾಕ್ಷ್ಯಚಿತ್ರವನ್ನೋ ಅಥವಾ ಹೊಸ ಅನುಭವವನ್ನೋ ನೀಡಬಹುದು. ಅದರಿಂದ ಅವರು ಹೊಸದನ್ನು ಕಲಿಯಬಹುದು. ಆದರೆ ಅಮಾಥಿಯಾ ಇನ್ನಷ್ಟು ಗಾಢವಾದ ಮತ್ತು ಅಪಾಯಕಾರಿ ಸ್ಥಿತಿ.

ಅಮಾಥಿಯಾ ಎಂದರೆ, ತಿಳಿದುಕೊಳ್ಳುವುದನ್ನು ಸಕ್ರಿಯವಾಗಿ ನಿರಾಕರಿಸುವುದು. ಇದು ಹೇಗೆಂದರೆ, ತಾನು ತುಂಬಾ ಶ್ರೇಷ್ಠನೆಂದು ಭಾವಿಸುತ್ತ, ತನ್ನ ಶಿಕ್ಷಕರ ಸಲಹೆಗಳನ್ನು ಸ್ವೀಕರಿಸಲು ನಿರಾಕರಿಸುವ ಪ್ರತಿಭಾವಂತ ವಿದ್ಯಾರ್ಥಿಯಂತೆ. ಇದು ಯಾರಾದರೂ ನಿಮ್ಮ ಹೆಸರನ್ನು ಸರಿಯಾಗಿ ಉಚ್ಚರಿಸುವುದನ್ನು ಕಲಿಯಲು ಸಿದ್ಧರಾಗದಿರುವಂತೆ. ಇದು ಬುದ್ಧಿವಂತನಾಗಿದ್ದರೂ ಸಹ, ತಾನು ಈಗಾಗಲೇ ಹೊಂದಿರುವ ನಂಬಿಕೆಗಳಿಗೆ ಸವಾಲು ಹಾಕಬಹುದಾದ ಯಾವುದನ್ನಾದರೂ ತಿಳಿದುಕೊಳ್ಳಲು ನಿರಾಕರಿಸುವ ವ್ಯಕ್ತಿಯ ಮನೋಭಾವದಂತೆ. ಅಮಾಥಿಯಾ ಎಂದರೆ ಜ್ಞಾನವಿಲ್ಲದಿರುವುದು ಅಲ್ಲ; ಸತ್ಯವನ್ನು ತಿಳಿಯುವ ಅವಕಾಶ ಇದ್ದರೂ ಅದನ್ನು ಸ್ವೀಕರಿಸಲು ಮನಸ್ಸಿಲ್ಲದಿರುವುದು. ಗ್ರೀಕರು ಇದನ್ನು ಅತ್ಯಂತ ಅಪಾಯಕಾರಿ ಅಜ್ಞಾನವೆಂದು ಪರಿಗಣಿಸಿದ್ದರು.

ಸ್ಟೋಯಿಕ್ ತತ್ವಜ್ಞಾನಿ Epictetus, ಅಮಾಥಿಯಾ ಮನುಷ್ಯನ ದುಷ್ಟತನದ ಪ್ರಮುಖ ಕಾರಣಗಳಲ್ಲಿ ಒಂದು ಎಂದು ವಾದಿಸಿದ. ಯಾರಾದರೂ ತಮಗೆ ಈಗಾಗಲೇ ಸಾಕಷ್ಟು ತಿಳಿದಿದೆ ಎನ್ನುವ ಅಹಂಕಾರಭರಿತ ಆತ್ಮವಿಶ್ವಾಸದೊಂದಿಗೆ ಬದುಕಿದರೆ, ಅವರು ಇನ್ನಷ್ಟು ಕಲಿಯಲು ಪ್ರಯತ್ನಿಸುವುದನ್ನೇ ನಿಲ್ಲಿಸುತ್ತಾರೆ. ಯಾರಾದರೂ ತಾವು ಪರಿಪೂರ್ಣರು ಎಂದು ಭಾವಿಸಿದರೆ, ಅವರು ತಮ್ಮನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳುವ ಪ್ರಯತ್ನವನ್ನು ಕೈಬಿಡುತ್ತಾರೆ.
ನಿಮ್ಮ ನಂಬಿಕೆಗಳನ್ನು, ಪ್ರಶ್ನಿಸಿ ಪರೀಕ್ಷಿಸಬೇಕಾದ ಊಹೆಗಳೆಂದು ನೋಡುವ ಬದಲು, ರಕ್ಷಿಸಬೇಕಾದ ಸ್ಥಾನಮಾನವೆಂದು ನೋಡಿದರೆ, ನಿಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ನೀವು, ಸತ್ಯವನ್ನು ಹುಡುಕುವ ಸಾಧನವಾಗಿ ಅಲ್ಲ, ಬದಲಾಗಿ ಒಂದು ಆಯುಧವಾಗಿ ಬಳಸಲು ಶುರು ಮಾಡುತ್ತೀರಿ.

ಅಮಾಥಿಯಾ ಎಂದರೆ ಅದು ಅಜ್ಞಾನವಲ್ಲ; “ನನಗೆ ಎಲ್ಲವೂ ಗೊತ್ತಿದೆ” ಎನ್ನುವ ಮನೋಭಾವ. ಈ ಮನೋಭಾವವು ವ್ಯಕ್ತಿ, ಹೊಸ ಸತ್ಯಗಳನ್ನು ಸ್ವೀಕರಿಸದಂತೆ ಮಾಡುತ್ತದೆ ಮತ್ತು ಅವನು ತನ್ನ ತಪ್ಪುಗಳನ್ನು ಅರಿತು ಸರಿಪಡಿಸಿಕೊಳ್ಳುವ ಅವಕಾಶವನ್ನು ಕಸಿದುಕೊಳ್ಳುತ್ತದೆ. ಅದಕ್ಕಾಗಿಯೇ ಎಪಿಕ್ಟೇಟಸ್ ಇದನ್ನು ಮನುಷ್ಯ ದುಃಖ ಮತ್ತು ದುಷ್ಟತನದ ಪ್ರಮುಖ ಮೂಲವೆಂದು ಪರಿಗಣಿಸಿದ.

ಸರಳ ಅಜ್ಞಾನ ಸಮಸ್ಯೆಯಲ್ಲ. ನಿಜವಾದ ಸಮಸ್ಯೆ ಏನೆಂದರೆ, ಯಾರಾದರೂ, ಯಾವುದೋ ಕಾರಣದಿಂದ “ನಾನು ಈಗಾಗಲೇ ಸರಿ, ನೀನು ಈಗಾಗಲೇ ತಪ್ಪು” ಎಂದು ನಿರ್ಧರಿಸಿಕೊಂಡಾಗ, ಆ ಕ್ಷಣದಿಂದ ಅವರು ಸತ್ಯವನ್ನು ಹುಡುಕುವುದನ್ನು ನಿಲ್ಲಿಸುತ್ತಾರೆ. ಅವರು ಕಲಿಯುವುದನ್ನೂ, ಪ್ರಶ್ನಿಸುವುದನ್ನೂ, ತಮ್ಮ ನಂಬಿಕೆಗಳನ್ನು ಪರಿಶೀಲಿಸುವುದನ್ನೂ ಬಿಟ್ಟುಬಿಡುತ್ತಾರೆ. ಇದು ಅಪಾಯಕಾರಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.