ಏನನ್ನೂ ಗಳಿಸದೆ ಇರುವುದು, ಅಥವಾ ಶೂನ್ಯ-ಸಂಪಾದನೆಯ ಧ್ಯಾನ ಮುಖ್ಯವಾದದ್ದು. ನಾವು ಸಂಪಾದಿಸಲು ಬಯಸಿದ್ದನ್ನು ಆಗಲೇ ಸಂಪಾದಿಸಿದ್ದೇವೆ. ಆಗಲೇ ಅದರೊಳಗೇ ಇದ್ದೇವೆ. ಏನನ್ನೂ ಸಂಪಾದಿಸದೆ ಇರುವುದು ಗುರಿ ಇರದ ಸ್ಥಿತಿಯ ಸಾಧನೆ. ಸ್ವಾತಂತ್ರ್ಯದ ಮೂರು ಬಾಗಿಲು ಎಂಬ ಮಾತು ಎಲ್ಲ ಬೌದ್ಧ ಪಂಥಗಳಿಗೂ ಸಮಾನವಾದದ್ದು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 2.12: ಅರಿವಿನ ಬೆಳಕು । ಬಿಡುಗಡೆಯ ಮೂರು ಬಾಗಿಲು
“ನೀನು ಹುಟ್ಟುವ ಮೊದಲು ನಿನ್ನ ಮುಖ ಹೇಗಿತ್ತು?”
ಇದು ಪ್ರಸಿದ್ಧವಾದ ಝೆನ್ ಕೋಅನ್ ಅಥವಾ ಮುಂಡಿಗೆ.
ನಮ್ಮ ನಿಜ ಸ್ವಭಾವಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ ಎಂದು ಅರಿಯಲು ನೆರವಾಗಬಹುದಾದ ಧ್ಯಾನಕ್ಕೆ ಈ ಮುಂಡಿಗೆ ದಾರಿ ಮಾಡುತ್ತದೆ. “ಏನೂ ಹುಟ್ಟುವುದು ಇಲ್ಲ, ಯಾವುದೂ ಸಾಯುವುದು ಇಲ್ಲ” ಎಂದು ಹದಿನೆಂಟನೆಯ ಶತಮಾನದ ಫ್ರೆಂಚ್ ವಿಜ್ಞಾನಿ ಆಂಟೊನಿ ಲವೋಸಿಯೆ ಹೇಳಿದ. ಅವನು ಬೌದ್ಧನಲ್ಲ. ವಾಸ್ತವನ್ನು ಕಂಡ ವಿಜ್ಞಾನಿ. ಪ್ರಜ್ಞಾಪಾರಮಿತ ಸೂತ್ರವು ಕೂಡ “ಜನನವಿಲ್ಲ, ಮರಣವಿಲ್ಲ, ಸೃಷ್ಟಿಯಿಲ್ಲ, ವಿನಾಶವಿಲ್ಲ” ಎನ್ನುತ್ತದೆ. ನೀವು ಹುಟ್ಟಿಯೇ ಇಲ್ಲವಾದರೆ ಸಾಯುವುದಾದರೂ ಹೇಗೆ? ವಾಸ್ತವದ ಹೃದಯವನ್ನು ಕಂಡಾಗ ಮಾತ್ರ ನಿಜವನ್ನು ಮುಡಿಯಲು, ನಿಜವಲ್ಲದ್ದನ್ನು ಬಿಡಲು ಸಾಧ್ಯವಾಗುತ್ತದೆ.
ನಾವು ಬದುಕನ್ನು ಬಿಗಿಯಾಗಿ ಹಿಡಿಯುತ್ತೇವೆ, ಸಾವಿನಿಂದ ದೂರ ಓಡಲು ಬಯಸುತ್ತೇವೆ. ಬುದ್ಧನ ಬೋಧನೆಯಂತೆ ಆದಿ ಎಂಬುದಿಲ್ಲ, ಎಲ್ಲವೂ ಅನಾದಿಯಿಂದಲೇ ನಿರ್ವಾಣದಲ್ಲಿವೆ. ಹಾಗಾಗಿ ಬದುಕು ಎಂಬ ಒಂದನ್ನು ಹಿಡಿದು ಸಾವು ಎಂಬ ಇನ್ನೊಂದನ್ನು ಬಿಡುವುದು ಯಾಕೆ? ನಾವು ಗಳಿಸಬೇಕಾದದ್ದು ಏನೋ ಇದೆ, ಅದು ನಮ್ಮಿಂದ ಹೊರಗೆ ಎಲ್ಲೋ ಇದೆ ಎಂದು ಅರಸುತ್ತೇವೆ. ನಿಜವಾಗಿ ಎಲ್ಲವೂ ಆಗಲೇ ಇಲ್ಲೇ ಇದೆ. ಒಳಗೆ-ಹೊರಗೆ, ಅಂತರಂಗ-ಬಹಿರಂಗ ಎಂಬ ಭೇದಗಳನ್ನು ಮೀರಿದಾಗ ನಾವು ಬಯಸುವುದೆಲ್ಲವೂ ಆಗಲೇ ನಮ್ಮೊಳಗೇ ಇದೆ ಎಂದು ಅರಿವಾಗುತ್ತದೆ.
ಏನನ್ನೂ ಗಳಿಸದೆ ಇರುವುದು, ಅಥವಾ ಶೂನ್ಯ-ಸಂಪಾದನೆಯ ಧ್ಯಾನ ಮುಖ್ಯವಾದದ್ದು. ನಾವು ಸಂಪಾದಿಸಲು ಬಯಸಿದ್ದನ್ನು ಆಗಲೇ ಸಂಪಾದಿಸಿದ್ದೇವೆ. ಆಗಲೇ ಅದರೊಳಗೇ ಇದ್ದೇವೆ. ಏನನ್ನೂ ಸಂಪಾದಿಸದೆ ಇರುವುದು ಗುರಿ ಇರದ ಸ್ಥಿತಿಯ ಸಾಧನೆ. ಸ್ವಾತಂತ್ರ್ಯದ ಮೂರು ಬಾಗಿಲು ಎಂಬ ಮಾತು ಎಲ್ಲ ಬೌದ್ಧ ಪಂಥಗಳಿಗೂ ಸಮಾನವಾದದ್ದು.
ಸ್ವಾತಂತ್ರ್ಯದ ಮೊದಲ ಬಾಗಿಲು—ಶೂನ್ಯತೆ. ಎಲ್ಲವೂ ಖಾಲಿ, ಎಲ್ಲವೂ ಶೂನ್ಯ. ಅಂದರೆ, ಪ್ರತ್ಯೇಕವಾದ ಸ್ವತಂತ್ರ ಘಟಕವೊಂದಿಲ್ಲ. ಹೂವೆಂಬ ಒಂದರಲ್ಲೇ ಇಡೀ ವಿಶ್ವ, ಸೂರ್ಯ, ಬಿಸಿಲು, ಮೋಡ, ಗಾಳಿ, ನೀರು, ಆಕಾಶ, ಭೂಮಿ ಎಲ್ಲವೂ ಇವೆ. ಇಲ್ಲದಿರುವುದು, “ಪ್ರತ್ಯೇಕತೆ” ಮಾತ್ರವೇ. ಪ್ರತ್ಯೇಕತೆಯನ್ನು ಸೊನ್ನೆಮಾಡಿಕೊಳ್ಳುವುದು ಮೊದಲ ಬಾಗಿಲು.
ಎರಡನೆಯ ಬಾಗಿಲು ಒಂಟಿತನವಿಲ್ಲದಿರುವುದು. ಹೂವನ್ನು ಹೂವು ಮಾತ್ರ ಎಂದು ನೋಡುವುದಾದರೆ ಅದು ಒಂಟಿ ನೋಟ. ಹೂವಿನಲ್ಲೇ ಸೃಷ್ಟಿ ಸಕಲವನ್ನೂ ಕಾಣುವುದು ಪೂರ್ಣ ನೋಟ. ಹೂವನ್ನು ಮಾತ್ರವೇ ನೋಡುತ್ತಿದ್ದೀರಾದರೆ “ಹೂವು” ಎಂಬ ಪ್ರತ್ಯೇಕ ಸಂಕೇತಕ್ಕೆ ಸಿಕ್ಕಿಬಿದ್ದಿರುತ್ತೀರಿ. ಹೂವಿನ ನಿಜಸ್ವಭಾವ ಅರಿವಾದಾಗ ಅದರಲ್ಲಿ ಸಕಲವೂ ಇರುವುದು ತಿಳಿಯುತ್ತದೆ. ನೀವು ವ್ಯಕ್ತಿಯೊಬ್ಬರನ್ನು ಮಾತ್ರ ನೋಡಿದರೆ, ಆ ವ್ಯಕ್ತಿಯ ಸಮಾಜ, ಶಿಕ್ಷಣ, ಪೂರ್ವಜರು, ಸಂಸ್ಕೃತಿ, ಪರಿಸರ ಇವೆಲ್ಲವನ್ನೂ ಕಾಣಲಾಗದಿದ್ದರೆ ಆ ವ್ಯಕ್ತಿಯನ್ನು ನಿಜವಾಗಿ ನೋಡಿಯೇ ಇಲ್ಲ. ವ್ಯಕ್ತಿ ಎಂಬ ಸಂಕೇತ ಮಾತ್ರ ನಿಮಗೆ ಗೊತ್ತಾಗಿದೆ ಅಷ್ಟೇ.
ಮೂರನೆಯ ಬಾಗಿಲು- ʻಇರದ ಗುರಿʼ. ನಾವು ಏನಾಗಬೇಕೋ ಅದು ಆಗಲೇ ಆಗಿದ್ದೇವೆ. ನಾವು ಮತ್ತೆ ಯಾರೋ ಆಗಬೇಕಾಗಿಲ್ಲ. ನಾವು ಪೂರ್ತಿಯಾಗಿ ನಾವಾಗಿದ್ದರೆ ಸಾಕು. ಇಡೀ ವಿಶ್ವವೇ ನಮ್ಮೊಳಗಿದೆ. ಎಚ್ಚರದ ಗಮನದೊಂದಿಗೆ ನಾವು ನಮ್ಮಲ್ಲಿಗೇ ಮರಳುತ್ತೇವೆ, ನಮ್ಮೊಳಗೂ ಹೊರಗೂ ಇರುವ ಶಾಂತಿ-ಆನಂದಗಳನ್ನು ಸ್ಪರ್ಶಿಸುತ್ತೇವೆ. ಆಗಲೇ ಅಲ್ಲಿದ್ದೇನೆ, ಆಗಲೇ ಆಗಿದ್ದೇನೆ, ಯಾವ ಗುರಿಯೂ ಇಲ್ಲ, ಏನೂ ಮಾಡಬೇಕಾಗಿಲ್ಲ.
ಹುಟ್ಟು ಸಾವುಗಳ ಅಲೆಯ ಮೇಲೆ ಶಾಂತವಾಗಿ ಸಾಗಬಹುದು. ಭ್ರಮೆಯ ಕಡಲಲ್ಲಿ ನಿರ್ಭೀತಿಯ ನಗುವಿನೊಡನೆ ಕಾರುಣ್ಯದ ದೋಣೆಯಲ್ಲಿ ಸಾಗಬಹುದು. ಒಳ ಇರುವಿಕೆಯನ್ನು ಅರಿತಾಗ ಹೂವಿನಲ್ಲಿ ಕಸವನ್ನೂ ಕಸದಲ್ಲಿ ಹೂವನ್ನೂ ಕಾಣಬಲ್ಲೆವು. ವೇದನೆಯಲ್ಲೇ ಸಂತೋಷವನ್ನು ಕಾಣಬಲ್ಲೆವು. ವೇದನೆಯ ಕೆಸರಿನಲ್ಲೇ ಸಂತೋಷದ ಕಮಲ ಅರಳುವುದು ಎಂದು ಅರಿಯಬಲ್ಲೆವು.
ಜನನವಿರದ, ಮರಣವಿರದ, ಅನಾದಿ ಅನಂತದ ಸತ್ಯವನ್ನು ಅರಿತವರು ಬೋಧಿಸತ್ವರು. ಆದ್ದರಿಂದಲೇ ಅವರದು ಭಯವಿರದ ಬದುಕು. ಸ್ವತಂತ್ರ ಬದುಕು, ನೋಯುವ ನರಳುವ ಜನಕ್ಕೆ ನೆರವು ನೀಡುವ ಬದುಕು. ವೇದನೆ ದುಃಖಗಳ ಮೂಲಕವೇ ನಾವು ಬುದ್ಧರಾಗಬಲ್ಲೆವು.
*
[ಈ ಭಾಗವನ್ನು ಬರೆಯುತಿರುವಾಗ ಅರಿವಿನ ಮಾರಿತಂದೆಯ ಈ ವಚನ ನೆನಪಾಯಿತು. ಬಿಡುಮುಡಿ ಎಂಬ ನುಡಿಯನ್ನು ಬಿಡಬೇಕಾದದ್ದು, ಮುಡಿಯಬೇಕಾದದ್ದು ಅಥವಾ ಹಿಡಿಯಬೇಕಾದದ್ದು ಎಂದು ಓದಿಕೊಂಡರೆ ಅರ್ಥ ಶ್ರೀಮಂತಿಕೆ ಹೆಚ್ಚುತ್ತದೆ.
ಮರನ ತಾಳೂದಕ್ಕೆ ಪೃಥ್ವಿ ಆಧಾರವಾಗಿ
ಶಾಖೆಯ ತಾಳೂದಕ್ಕೆ ಮರನಾಧಾರವಾಗಿ
ಲತೆಯ ತಾಳೂದಕ್ಕೆ ಶಾಖೆ ಆಧಾರವಾಗಿ
ಲತೆಯ ಬಿಡುಮುಡಿಯಲ್ಲಿ ಕುಸುಮತೋರಿ
ಕುಸುಮದ ತೊಟ್ಟಿನಲ್ಲಿ ಕುಸುಮವಳಿದು
ಕಾಯಿ ಬಲಿದು ರಸ ಬಲಿದು ಹಣ್ಣಾದಂತೆ
ತೊಟ್ಟು ಬಿಡುವನ್ನಕ್ಕ ಕಾಯ ಶಿಲೆಯ ಪೂಜೆ ಆತ್ಮ ಅರಿವಿನ ಪೂಜೆ
ಉಭಯಸ್ಥಲ ನಿರುತವಾಗಿ ಬಿಟ್ಟು ನಿಂದುದು ವಸ್ತುವಿನ ಉಳುಮೆ
ಆ ಉಳುಮೆ ಲೇಪವಾಗಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.
ವಿಲಿಯಂ ಬ್ಲೇಕ್‌ನ Auguries of Innocence ಪದ್ಯದಲ್ಲಿ ಬರುವ
To see a World in a Grain of Sand
And a Heaven in a Wild Flower
Hold Infinity in the palm of your hand
ಸಾಲುಗಳು [ಮರಳ ಕಣದಲ್ಲಿ ಇಡೀ ಲೋಕವನ್ನು ಕಾಣುವುದು, ಕಾಡು ಹೂವಿನಲ್ಲಿ ಸ್ವರ್ಗವನ್ನು ಕಾಣುವುದು, ಅನಂತವನ್ನು ಅಂಗೈಯಲ್ಲಿ ಹಿಡಿಯುವುದು] ಕೂಡ ನೆನಪಾಗುತ್ತವೆ.

