ಬುದ್ಧಸ್ಮಿತ : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #2.14

 ತೋಟಗಾರರು ಹೂಗಳ ಬೆನ್ನುಹತ್ತಿ ಕಳೆ, ಕಸಗಳಿಂದ ದೂರ ಓಡಿಹೋಗುವುದಿಲ್ಲ. ಕಳೆ, ಹೂ ಎರಡರ ಬಗ್ಗೆಯೂ ಎಚ್ಚರದ ಕಳಕಳಿ ತೋರುತ್ತಾರೆ. ಎರಡರಲ್ಲಿ ಒಂದು ಮಾತ್ರ ಇರಲಿ ಎಂಬ ವ್ಯಾಮೋಹವೂ ಇರುವುದಿಲ. ಹೂವು-ಕಳೆ ಎರಡರದೂ ಒಂದರೊಳಗೊಂದು ಇರುವ ಒಳ ಇರುವಿಕೆ ಎಂದು ಗೊತ್ತಿರುತ್ತದೆ ಅವರಿಗೆ... ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 2: ಅರಿವಿನ ಬೆಳಕು । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 2.14: ಅರಿವಿನ ಬೆಳಕು । ಬುದ್ಧಸ್ಮಿತ

ಬೋಧಿಸತ್ವರು ನಮ್ಮೆಲ್ಲರ ಹಾಗೇ ಹುಟ್ಟು, ಸಾವು, ಶಾಶ್ವತತೆ, ನಾನುತನಗಳು ಇರುವ ಇದೇ ಭೂಮಿಯ ಮೇಲೆಯೇ ಬದುಕಿದ್ದರು. ಅಶಾಶ್ವತತೆ ಮತ್ತು ಇಲ್ಲದಿರುವಿಕೆಗಳನ್ನು ಗಹನವಾಗಿ ನೋಡಿದವರಾದ್ದರಿಂದ ಅವರು ಪರಮ ಸತ್ಯದ ಆಯಾಮದಲ್ಲಿದ್ದರು. ಇರುವುದು-ಇಲ್ಲವಾಗುವುದು, ಏಕ-ಅನೇಕ, ಬರುವುದು-ಹೋಗುವುದು, ಹುಟ್ಟು-ಸಾವು ಇಂಥ ಐಡಿಯಾಗಳೊಡನೆಯೇ ಬರುವ ಭಯದಿಂದ ಮುಕ್ತರಾಗಿದ್ದರು. ಹುಟ್ಟು ಸಾವುಗಳ ಅಲೆಯ ಮೇಲೆ ಸವಾರಿ ಮಾಡುತ್ತಿರುವಾಗಲೇ ನೀರಿನ ನಿಜಸ್ವಭಾವದಲ್ಲಿ ಸ್ಥಿರವಾಗಿರುತಿದ್ದರು.

ಹಟ್ಟು ಸಾವುಗಳ ಅಲೆಯ ಮೇಲೆ ಸವಾರಿ ಮಾಡುತ್ತಾ—ಬೋಧಿಸತ್ವರನ್ನು ಕುರಿತ ಈ ವರ್ಣನೆಯು ಪುಂಡರೀಕ ಸೂತ್ರದಲ್ಲಿ ಬರುತ್ತದೆ. ಅವಲೋಕತೇಶ್ವರ, ಸಮಂತಭದ್ರ, ಭೈಷಜ್ಯರಾಜ, ಗದ್ಗದಸ್ವರ ಈ ಎಲ್ಲ ಬೋಧಿಸತ್ವರೂ  ನೋವು ದುಃಖಗಳ ಲೋದದಲ್ಲಿ ಬದುಕಿದರೂ ಮರುಕವುಳ್ಳವರಾಗಿದ್ದರು, ನಿರ್ಭೀತರಾಗಿದ್ದರು, ನಗುಮುಖದವರಾಗಿದ್ದರು. ಅವರೆಲ್ಲರೂ ದುಃಖ ಮತ್ತು ತಿಳಿವಳಿಕೆಯ ಬೆಳಕುಗಳು ಬೇರೆಬೇರೆಯಲ್ಲ ಎಂದು ಅರಿತಿದ್ದರು. ನಿರ್ವಾಣದ ಸತ್ಯವನ್ನು ಸ್ಪರ್ಶಿಸಿದ್ದರು. ಬೋಧಿಸತ್ವರು ನಿರ್ಭೀತರಾಗಿದ್ದರಿಂದಲೇ ಅನೇಕ ಜನರಿಗೆ ಸಹಾಯಮಾಡಿದರು. ಪ್ರೀತಿಪಾತ್ರರಿಗೆ ಅಭಯ ನೀಡುವುದರಂಥ ಮಹಾ ದಾನ ಇನ್ನೊಂದಿಲ್ಲ. ಸ್ವತಃ ನಾವೇ ನಿರ್ಭೀತರಾಗದಿದ್ದರೆ ಬೇರೆಯವರಿಗೆ ಅಭಯ ನೀಡಲಾರೆವು. ಸತ್ಯದ ಪರಮ ಆಯಾಮವನ್ನು ನಾವು ಸ್ಪರ್ಶಿಸಿದ್ದರೆ ನಾವು ಕೂಡ ಬುದ್ಧರ ಹಾಗೆ ನಗುಮುಖದವರಾಗಬಹುದು.

ಮನಸು ಭ್ರಮೆಗೆ ಒಳಗಾದಾಗ ದುಃಖವನ್ನು ಮಾತ್ರ ನೋಡುತ್ತದೆ, ಅರಿವು ಮೂಡಿದಾಗ ದುಃಖವಿರುವುದಿಲ್ಲ ಅರಿವು ಮಾತ್ರವಿರುತ್ತದೆ. ಒಳಇರುವಿಕೆಯ ಅರಿವು ದೊರೆತು ಹುಟ್ಟು-ಸಾವುಗಳ ಭಯ ನೀಗಿಕೊಳ್ಳುತ್ತೇವೆ. ಆಗ ಸಾಯುತಿರುವ ವ್ಯಕ್ತಿಯೊಡನೆ ಇದ್ದರೂ ನಾವು ಆ ವ್ಯಕ್ತಿಗೆ ಸಮಾಧಾನದ, ಸ್ಫೂರ್ತಿಯ ಆಕರವಾಗಬಹುದು. ನಿರ್ಭೀತಿಯು ಅತಿ ದೊಡ್ಡ ಬೌದ್ಧ ಅನುಷ್ಠಾನ. ಎಲ್ಲ ಬಗೆಯ ಭಯಗಳಿಂದ ಮುಕ್ತರಾಗುವುದೆಂದರೆ ಮರುಕ ಕರುಣಗಳ ನೋಟದ ಬೆಳಕನ್ನು ಕಾಣುವುದು.

ಬೋಧಿಸತ್ವ ಅವಲೋಕಿತೇಶ್ವರನು ಐದು ಸ್ಕಂಧಗಳು ಅನಾತ್ತವೆಂದು ಕಂಡು ತಿಳಿದವನಾದ್ದರಿಂದ ಶೂನ್ಯತೆಯನ್ನು ಪಡೆದಿದ್ದ, ಎಲ್ಲ ದುಃಖಗಳನ್ನು ನೀಗಿಕೊಂಡಿದ್ದ. ನಿರ್ಭಯನಾಗಿದ್ದ. ಹಾಗಾಗಿ ಎಲ್ಲರಿಗೆ ನೆರವಾದ.ನಾವೂ ಅವನಂತೆಯೇ ಹುಟ್ಟು ಸಾವುಗಳ ಅಲೆಯನೇರಿ ಸಾಗಬಹುದು.

ತೋಟಗಾರರು ಹೂಗಳ ಬೆನ್ನುಹತ್ತಿ ಕಳೆ, ಕಸಗಳಿಂದ ದೂರ ಓಡಿಹೋಗುವುದಿಲ್ಲ. ಕಳೆ, ಹೂ ಎರಡರ ಬಗ್ಗೆಯೂ ಎಚ್ಚರದ ಕಳಕಳಿ ತೋರುತ್ತಾರೆ. ಎರಡರಲ್ಲಿ ಒಂದು ಮಾತ್ರ ಇರಲಿ ಎಂಬ ವ್ಯಾಮೋಹವೂ ಇರುವುದಿಲ. ಹೂವು-ಕಳೆ ಎರಡರದೂ ಒಂದರೊಳಗೊಂದು ಇರುವ ಒಳ ಇರುವಿಕೆ ಎಂದು ಗೊತ್ತಿರುತ್ತದೆ ಅವರಿಗೆ. ಬೋಧಿಸತ್ವರಾದವರೂ ಕುಶಲ ತೋಟಗಾರರು ಹೂವು ಕಸಗಳನ್ನು ಸಮನಾಗಿ ನಿರ್ವಹಿಸವ ಹಾಗೆಯೇ ದುಃಖ, ಅರಿವಿನ ಬೆಳಕು ಮತ್ತು ಬದಲಾವಣೆಗಳನ್ನು ಭಯವಿಲ್ಲದೆ ನೋಡುತ್ತಾರೆ. ಅದರಿಂದ ಬೋಧಿಸತ್ವರ ಮುಖದಲ್ಲಿ ಬುದ್ಧಸ್ಮಿತವಿರುತ್ತದೆ.

*

[ಐದು ಸ್ಕಂಧಗಳು: ರೂಪ (Form): ಭೌತಿಕ ದೇಹ ಮತ್ತು ಇಂದ್ರಿಯಗಳು, ವೇದನಾ (Sensation/Feeling): ಸುಖ, ದುಃಖ ಅಥವಾ ತಟಸ್ಥ ಅನುಭವಗಳು, ಸಂಜ್ಞಾ (Perception): ವಿಷಯಗಳನ್ನು ಗುರುತಿಸುವ ಅಥವಾ ಅರ್ಥೈಸುವ ಸಾಮರ್ಥ್ಯ, ಸಂಸ್ಕಾರ (Mental Formations): ಆಲೋಚನೆಗಳು, ಇಚ್ಛೆಗಳು ಮತ್ತು ಮಾನಸಿಕ ಪ್ರವೃತ್ತಿಗಳು, ವಿಜ್ಞಾನ (Consciousness): ಇಂದ್ರಿಯಗಳ ಮೂಲಕ ಜಗತ್ತನ್ನು ಅರಿಯುವ ಅರಿವು. “ನಾನು” ಅನ್ನುವ ಕಲ್ಪನೆಗೆ ಇವು ಐದು ಸ್ಕಂಧಗಳೇ ಆಧಾರ. ನಿಜವಾಗಿ ಇವು ಸದಾ ಬದಲಾಗುತ್ತ ಇರುತ್ತವೆ.]

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.