ಬದಲಾವಣೆ ಜೀವನದ ಸಹಜ ಧರ್ಮ. ಬದಲಾವಣೆ ಪ್ರಕೃತಿಯ ನಿಯಮ; ಶಾಶ್ವತ ಎನ್ನುವುದು ಯಾವುದೂ ಇಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳದಿದ್ದಾಗಲೇ ಹೆಚ್ಚು ನೋವು ಉಂಟಾಗುತ್ತದೆ. ಜೀವನವನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಅದನ್ನು ಸಹಜವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬಹುದು। ಡಾ. ಸಹನಾ ಪ್ರಿಯದರ್ಶಿನಿ
ಒಬ್ಬ ಶ್ರೀಮಂತ ವ್ಯಕ್ತಿ ಒಮ್ಮೆ ಝೆನ್ ಗುರುವರ್ಯರನ್ನು ಭೇಟಿಯಾಗಿ,
“ನನ್ನ ಕುಟುಂಬವು ಅನೇಕ ಪೀಳಿಗೆಗಳವರೆಗೆ ಸುಖ-ಸಮೃದ್ಧಿಯಿಂದ ಬದುಕಲು ಪ್ರೇರಣೆ ನೀಡುವಂತಹ ಮಾತೊಂದನ್ನು ಬರೆಯಿರಿ. ಅದು ನಮ್ಮ ಕುಟುಂಬದವರು ತಲೆಮಾರುಗಳಿಂದ ಕಾಪಾಡಿಕೊಳ್ಳುವಂತಿರಲಿ,” ಎಂದು ವಿನಂತಿಸಿದನು.
ಆಗ ಗುರುವರ್ಯರು ದೊಡ್ಡ ಕಾಗದದ ಮೇಲೆ ಹೀಗೆ ಬರೆದರು:
“ತಂದೆ ಸಾಯುತ್ತಾನೆ, ಮಗ ಸಾಯುತ್ತಾನೆ, ಮೊಮ್ಮಗ ಸಾಯುತ್ತಾನೆ.”
ಅದನ್ನು ನೋಡಿದ ಶ್ರೀಮಂತ ವ್ಯಕ್ತಿ ಕೋಪಗೊಂಡನು.
“ನಾನು ನನ್ನ ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿ ತರಬಲ್ಲ ಮಾತು ಬರೆಯಲು ಕೇಳಿದೆ. ಆದರೆ ನೀವು ಇಷ್ಟು ದುಃಖಕರವಾದ ಮಾತನ್ನು ಏಕೆ ಬರೆದಿದ್ದೀರಿ?” ಎಂದು ಕೇಳಿದನು.
ಗುರುವರ್ಯರು ಶಾಂತವಾಗಿ ಉತ್ತರಿಸಿದರು:
“ನಿನ್ನ ಮಗನು ನಿನಗಿಂತ ಮೊದಲು ಸತ್ತರೆ, ಅದು ನಿಮ್ಮ ಕುಟುಂಬಕ್ಕೆ ಅಸಹನೀಯ ದುಃಖ ತರುತ್ತದೆ. ಅದೇ ರೀತಿ, ನಿನ್ನ ಮೊಮ್ಮಗನು ನಿನ್ನ ಮಗನಿಗಿಂತ ಮೊದಲು ಸತ್ತರೂ ದೊಡ್ಡ ಶೋಕ ಉಂಟಾಗುತ್ತದೆ. ಆದರೆ ನಾನು ಬರೆದಿರುವ ಕ್ರಮದಂತೆ -ತಂದೆ, ನಂತರ ಮಗ, ನಂತರ ಮೊಮ್ಮಗ … ತಲೆಮಾರುಗಳು ಸಹಜ ಜೀವನಕ್ರಮದಂತೆ ಮುಂದುವರಿದರೆ, ಅದೇ ನಿಜವಾದ ಸಂತೋಷ ಮತ್ತು ಸಮೃದ್ಧಿ.”
ಈ ಕಥೆ ನಮಗೆ, ನಮ್ಮ ಜೀವನದಲ್ಲಿ ನಿಜವಾದ ಸಂತೋಷವೆಂದರೆ ಏನು ಎಂಬುದನ್ನು ಹೇಳುತ್ತದೆ
“ನಿಜವಾದ ಸಂತೋಷ ಎಂದರೆ ದುಃಖವಿಲ್ಲದ ಜೀವನವಲ್ಲ;
ಪ್ರಕೃತಿಯ ಸಹಜ ಕ್ರಮವನ್ನು ಸಹಜವಾಗಿ ,ಶಾಂತವಾಗಿ ಸ್ವೀಕರಿಸುವ ಮನಸ್ಸು.”
ನಾವು ಸಾಮಾನ್ಯವಾಗಿ ಸಮೃದ್ಧಿ ಎಂದರೆ ಹಣ, ಆಸ್ತಿ, ಯಶಸ್ಸು ಎಂದು ಭಾವಿಸುತ್ತೇವೆ.
ಆದರೆ ಝೆನ್ ಗುರು ಹೇಳುವುದು:
ಕುಟುಂಬದಲ್ಲಿ ಎಲ್ಲವೂ ಸಹಜ ಕ್ರಮದಲ್ಲಿ ನಡೆಯುತ್ತಾ, ಪ್ರತಿಯೊಂದು ತಲೆಮಾರೂ ತನ್ನ ಪಯಣವನ್ನು ಪೂರ್ಣಗೊಳಿಸುವುದು ನಿಜವಾದ ಆಶೀರ್ವಾದ. ಇಂದಿನ ಜೀವನದಲ್ಲಿ ನಾವು ಮರಣ, ವೃದ್ಧಾಪ್ಯ, ಬದಲಾವಣೆ ಮತ್ತು ನಷ್ಟದ ಬಗ್ಗೆ ಮಾತನಾಡಲು ಹೆದರುತ್ತೇವೆ. ಎಲ್ಲವೂ ಸದಾ ನಮ್ಮ ಇಚ್ಛೆಯಂತೆ ಇರಬೇಕು ಎಂದು ಬಯಸುತ್ತೇವೆ.
ಆದರೆ ಜೀವನದ ಸತ್ಯವೇನೆಂದರೆ:
- ಹುಟ್ಟು ಇದೆ ಎಂದರೆ ಮರಣವೂ ಇದೆ.
- ಭೇಟಿಯಿದೆ ಎಂದರೆ ವಿದಾಯವೂ ಇದೆ.
- ಆರಂಭ ಇದೆ ಎಂದರೆ ಅಂತ್ಯವೂ ಇದೆ.
- ಗೆಲುವು ಇದೆ ಎಂದರೆ ಸೋಲೂ ಇದೆ.
- ಆಶೆ ಇದೆ ಎಂದರೆ ನಿರಾಶೆಯೂ ಇದೆ.
- ಪ್ರೀತಿ ಇದೆ ಎಂದರೆ ನೋವೂ ಇದೆ.
- ಕಾಲ ಇದೆ ಎಂದರೆ ಬದಲಾವಣೆಯೂ ಇದೆ.
ಬದಲಾವಣೆ ಜೀವನದ ಸಹಜ ಧರ್ಮ. ಬದಲಾವಣೆ ಪ್ರಕೃತಿಯ ನಿಯಮ; ಶಾಶ್ವತ ಎನ್ನುವುದು ಯಾವುದೂ ಇಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳದಿದ್ದಾಗಲೇ ಹೆಚ್ಚು ನೋವು ಉಂಟಾಗುತ್ತದೆ. ಜೀವನವನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಅದನ್ನು ಸಹಜವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬಹುದು.
ಆಗ ಪ್ರಕೃತಿಯ ಕ್ರಮವನ್ನು ಅರ್ಥಮಾಡಿಕೊಂಡ ಮನಸ್ಸಿಗೆ, ಜೀವನದ ಅನಿಶ್ಚಿತತೆಯೂ ಭಯ ಹುಟ್ಟಿಸುವುದಿಲ್ಲ.
ಹಾಗಾಗಿ ಜೀವನ ಒಂದು ಪ್ರಯಾಣ; ಅದರ ಗಮ್ಯಕ್ಕಿಂತ ಅನುಭವವೇ ಮುಖ್ಯ. ಕ್ಷಣಿಕವಾದ ಈ ಬದುಕಿನಲ್ಲಿ ಶಾಶ್ವತವಾದುದು ಬದಲಾವಣೆ ಮಾತ್ರ.
(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

