ಭಜನ್ ಕ್ಲಬ್ಬಿಂಗ್ – Gen Z ಸೃಷ್ಟಿಸಿದ ಹೊಸಟ್ರೆಂಡ್

ನೈಟ್‌ಕ್ಲಬ್‌ಗಳ ಗದ್ದಲದ ಎಲೆಕ್ಟ್ರಾನಿಕ್ ಬೀಟ್ಸ್ ಮತ್ತು ಕಾಕ್‌ಟೇಲ್‌ಗಳ ಜಾಗವನ್ನು ಇದೀಗ ಸಾಮೂಹಿಕ ಸಂಕೀರ್ತನೆಗಳು ಆವರಿಸಿಕೊಳ್ಳುತ್ತಿವೆ. ವಾರಾಂತ್ಯಗಳನ್ನು ಪಬ್ಬಿಂಗ್, ಪಾರ್ಟಿ ಎಂದೆಲ್ಲ ಕಳೆಯುವ ಬದಲು ದಿವ್ಯ ಸಂಗೀತದ ಕಂಪನದಲ್ಲಿ ಜನರ ಸಂಪರ್ಕದಲ್ಲಿ ಕಳೆಯುವುದು ಉತ್ತಮ ಆಯ್ಕೆ ಅನ್ನೋದು ಈ ಯುವಜನರ ಚಿಂತನೆ. ಭಾರತದ ಮೆಟ್ರೋ ಸಿಟಿಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಈ ಟ್ರೆಂಡ್, ಹಿರಿಯರ ಹುಬ್ಬೇರಿಸುವಂತೆ ಮಾಡಿದೆ. ಜೆನ್ ಜೀ ಯುವಜನರ ದೃಷ್ಟಿಯಲ್ಲಿ ಇದು ಧಾರ್ಮಿಕ ಸಭೆಯಲ್ಲ; ಬದಲಿಗೆ, ಸಂಪ್ರದಾಯ ಮತ್ತು ಆಧುನಿಕ ಸಂಸ್ಕೃತಿಯನ್ನು ಬೆಸೆಯುವ ಒಂದು ಸಾಮಾಜಿಕ ಚಳವಳಿ । ಚೇತನಾ ತೀರ್ಥಹಳ್ಳಿ

ಸಾವಿರಾರು ವರ್ಷಗಳಿಂದಲೂ ಹೊಸ ಪೀಳಿಗೆಗಳು ಹಿಂದಿನ ಪೀಳಿಗೆಗಿಂತ ಹೆಚ್ಚು ಆಧುನಿಕ ಮತ್ತು ರೆಬೆಲ್ ಆಗಿ ಹೊಸ ಸಂಸ್ಕೃತಿಗಳನ್ನು ರೂಪಿಸುತ್ತಲೇ ಬಂದಿವೆ. ಹಾಗೇ ಇಂಥ ಪ್ರತಿಯೊಂದು ಬದಲಾವಣೆಯ ಕಾಲಘಟ್ಟದಲ್ಲೂ ಹೊಸ ಪೀಳಿಗೆಯ ಯುವಜನತೆಯನ್ನು ಹಾದಿ ತಪ್ಪಿದವರೆಂದು ಬ್ರಾಂಡ್ ಮಾಡುತ್ತ ಬರಲಾಗಿದೆ. ನಂತರದಲ್ಲಿ ಅವರು ತಂದ ಬದಲಾವಣೆಗಳೇ ಬಹುತೇಕರ ಜೀವನಶೈಲಿಯಾಗಿ ಬದಲಾಗಿದ್ದರೂ, ಈ ಆಪಾದನೆ ತಪ್ಪಿದ್ದಲ್ಲ.

ಆದರೆ ಇತಿಹಾಸದ ಈವರೆಗಿನ ಈ ಟ್ರೆಂಡ್‌ಗೆ ಅಚ್ಚರಿಯ ಶಾಕ್ ನೀಡ್ತಿರೋದು ಜೆನ್ ಜಿ (Gen z). ಈ ಹೊಸ ಪೀಳಿಗೆಯ ಯುವಜನತೆಯಲ್ಲಿ ಬಹುತೇಕರು ಆಲ್ಕೋಹಾಲ್‌ಗೆ ಬೆನ್ನು ತಿರುಗಿಸುತ್ತಿದ್ದಾರೆ. ಮಿನಿಮಲಿಸಮ್ ರೂಢಿಸಿಕೊಳ್ಳುತ್ತಿದ್ದಾರೆ. ಹತ್ತು ಗಂಟೆಗಿಂತ ಹೆಚ್ಚು ದುಡಿದು ದುಡ್ಡು ಗುಡ್ಡೆ ಹಾಕೋದು ಅರ್ಥಹೀನ ಅನ್ನುತ್ತಿದ್ದಾರೆ ಮತ್ತು ಸ್ವಂತದ ಮನೆ, ವೆಹಿಕಲ್ ಈ ಎಲ್ಲವನ್ನು ಹೊಂದುವ ಬಯಕೆ ಕಳೆದುಕೊಂಡಿದ್ದಾರೆ. ಒಂದು ರೀತಿಯಲ್ಲಿ ಈಗಿನ ನಡುವಯಸ್ಕರಿಗೆ ಮಾದರಿ ಅನ್ನಬಹುದಾದ ಆಸಕ್ತಿಗಳನ್ನು ಈ ಹೊಸ ಪೀಳಿಗೆ ತೋರಿಸುತ್ತಿದೆ. ಅವುಗಳಲ್ಲಿ ಇತ್ತೀಚೆಗೆ ಗಮನ ಸೆಳೆಯುತ್ತಿರೋದು, ಭಜನ್ ಕ್ಲಬ್ಬಿಂಗ್.

ನೈಟ್‌ಕ್ಲಬ್‌ಗಳ ಗದ್ದಲದ ಎಲೆಕ್ಟ್ರಾನಿಕ್ ಬೀಟ್ಸ್ ಮತ್ತು ಕಾಕ್‌ಟೇಲ್‌ಗಳ ಜಾಗವನ್ನು ಇದೀಗ ಸಾಮೂಹಿಕ ಸಂಕೀರ್ತನೆಗಳು ಆವರಿಸಿಕೊಳ್ಳುತ್ತಿವೆ. ವಾರಾಂತ್ಯಗಳನ್ನು ಪಬ್ಬಿಂಗ್, ಪಾರ್ಟಿ ಎಂದೆಲ್ಲ ಕಳೆಯುವ ಬದಲು ದಿವ್ಯ ಸಂಗೀತದ ಕಂಪನದಲ್ಲಿ ಜನರ ಸಂಪರ್ಕದಲ್ಲಿ ಕಳೆಯುವುದು ಉತ್ತಮ ಆಯ್ಕೆ ಅನ್ನೋದು ಈ ಯುವಜನರ ಚಿಂತನೆ. ಭಾರತದ ಮೆಟ್ರೋ ಸಿಟಿಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಈ ಟ್ರೆಂಡ್, ಹಿರಿಯರ ಹುಬ್ಬೇರಿಸುವಂತೆ ಮಾಡಿದೆ. ಜೆನ್ ಜೀ ಯುವಜನರ ದೃಷ್ಟಿಯಲ್ಲಿ ಇದು ಧಾರ್ಮಿಕ ಸಭೆಯಲ್ಲ; ಬದಲಿಗೆ, ಸಂಪ್ರದಾಯ ಮತ್ತು ಆಧುನಿಕ ಸಂಸ್ಕೃತಿಯನ್ನು ಬೆಸೆಯುವ ಒಂದು ಸಾಮಾಜಿಕ ಚಳವಳಿ. ಗಂಟೆಗಟ್ಟಲೆ ಸೋಷಿಯಲ್ ಮೀಡಿಯಾದಲ್ಲಿ ಕಳೆಯುವ ಮನಸ್ಥಿತಿಯಿಂದ ಹೊರಬಂದು, ನೈಜ ಜಗತ್ತಿನೊಡನೆ ಬೆರೆಯಲು ಒಂದು ಅತ್ಯುತ್ತಮ ವೇದಿಕೆ. ಈ ಕಾರಣಕ್ಕೆಂದೇ, ಹಿಂದೆಲ್ಲ ದೇವಸ್ಥಾನ ಅಥವಾ ಮನೆಗಳಿಗೆ ಸೀಮಿತವಾಗಿದ್ದ ಭಜನೆಗಳಿಗೆ ಹೊಸರೂಪ ನೀಡಿದ್ದಾರೆ, ಭಜನೆ ಕಾನ್ಸರ್ಟ್‌ಗಳನ್ನು ನಡೆಸುತ್ತಿದ್ದಾರೆ. ಇವುಗಳ ವಿನ್ಯಾಸ ರಾಕ್ ಸಾಂಗ್ ಕಾನ್ಸರ್ಟ್‌ಗಳಂತೆಯೇ ಇದ್ದರೂ ಅನುಭವ ಮಾತ್ರ ಸಂಪೂರ್ಣ ಭಿನ್ನ. ಈ ಮದ್ಯಮುಕ್ತ ಗ್ಯಾದರಿಂಗ್‌ಗಳಲ್ಲಿ ಮಂತ್ರಗಳ ಕಂಪನದಲ್ಲಿ ಯುವಜನತೆ ತಾವು ‘ನ್ಯಾಚುರಲ್ ಹೈ’ (ಸಹಜಾನಂದ) ಅಥವಾ  ‘ಸೋಬರ್ ಹೈ’  (ಅಮಲಿಲ್ಲದ ಆನಂದ) ಅನುಭವಿಸುವುದಾಗಿ ಹೇಳಿಕೊಳ್ಳುತ್ತಾರೆ.


ಭಜನ್ ಕ್ಲಬ್ಬಿಂಗ್ ಆರಂಭಿಸಿದ್ದು ದೆಹಲಿಯ ನಿಕುಂಜ್ ಗುಪ್ತಾ. ಸಣ್ಣ ಕಚೇರಿಯೊಂದರಲ್ಲಿ, ಸೀಮಿತ ಆಡಿಯೆನ್ಸ್ ಸಮ್ಮುಖದಲ್ಲಿ ಪ್ರಾರಂಭವಾದ ಈ ಪ್ರಯೋಗ, ನಂತರ ಜೆನ್ ಜೀ ಗಮನ ಸೆಳೆದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಯಿತು. ನಂತರದಲ್ಲಿ ಮತ್ತಷ್ಟು ಸೇರ್ಪಡೆಯೊಂದಿಗೆ ವಿವಿಧ ಗುಂಪುಗಳು ಸಾಂಪ್ರದಾಯಿಕ ಭಜನೆ ಹಾಗೂ ಮಂತ್ರಗಳನ್ನು ಆಕರ್ಷಕ ಕಾನ್ಸರ್ಟ್ ರೀತಿಯಲ್ಲಿ ಪ್ರಸ್ತುತಪಡಿಸಲು ಆರಂಭಿಸಿದವು. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಭಜನ್ ಕ್ಲಬ್ಬಿಂಗ್, ಜೆನ್ ಜೀ ನಡುವೆ ವೀಕೆಂಡ್ ಪಬ್ಬಿಂಗ್‌ಗೆ ಪರ್ಯಾಯವಾಗಿ ಹೊರಹೊಮ್ಮಿತು. ವಾಸ್ತವದಲ್ಲಿ ಈ ಪರಿಕಲ್ಪನೆ ಇಸ್ಕಾನ್‌ನ ‘ಸಂಕೀರ್ತನ ಪಾರ್ಟಿ’ಯನ್ನು ಹೋಲುತ್ತದೆ. ಆರಂಭದಿಂದಲೂ ಇಸ್ಕಾನ್, ನಿರ್ಧಿಷ್ಟವಾಗಿ ಯುವಜನರನ್ನು ಒಳಗೊಳಿಸಿಕೊಂಡು ಸಮೂಹ ಭಜನೆ – ಮಂತ್ರಜಪ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಜನಪ್ರಿಯ ‘ಹರೇಕೃಷ್ಣ’ ಮಂತ್ರದ ಆಧುನಿಕ ಸಂಗೀತ ಸಂಯೋಜನೆಯ ಕ್ಯಸೆಟ್‌ಗಳನ್ನೂ ಹೊರತಂದಿದೆ. 


ಹೊಸ ಪೀಳಿಗೆಯ ಈ ಆಯ್ಕೆ ಅಚ್ಚರಿ ಅನಿಸಿದರೂ ಸಕಾರಣವಾಗಿದೆ. ಈಗಾಗಲೇ ಸದ್ಯದ ಎರಡು ಹಿರಿಯ ತಲೆಮಾರುಗಳು ತಪ್ಪು ಆಯ್ಕೆಗಳು, ತಪ್ಪು ಜೀವನಶೈಲಿಗಳು, ತಪ್ಪು ಸಾಮಾಜಿಕ ಮಾನದಂಡಗಳಿಂದ ಬದುಕನ್ನು ಸಾಕಷ್ಟು ಅಸ್ತವ್ಯಸ್ತಗೊಳಿಸಿವೆ. ಪರಿಣಾಮವಾಗಿ, ಬದುಕಿರುವುದೇ ಹಣ ಗಳಿಕೆಗೆ ಅಥವಾ ಸಮಾಜದಲ್ಲಿ ಸ್ಥಾನಮಾನ ಕಾಯ್ದುಕೊಳ್ಳಲಿಕ್ಕೆ ಎಂದಾಗಿದೆ. ಅದೇ ರೀತಿ; ಮನರಂಜನೆ ಎಂದರೆ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಮದ್ಯಸೇವನೆ, ಕಿವಿಗಡಚಿಕ್ಕುವ ಸಂಗೀತದೊಡನೆ ಪ್ರಚೋದನಕಾರಿ ಸಾಹಿತ್ಯದ ಕಾನ್ಸರ್ಟ್‌ಗಳು, ಕ್ಲಬ್ಬಿಂಗ್ ಅಂದರೆ ಮೈಮರೆಸುವ ಮೋಜು – ಮಸ್ತಿ ಎಂದಾಗಿದೆ. ಈ ಎಲ್ಲದರ ಪರಿಣಾಮವನ್ನು ಕಣ್ಣಾರೆ ಕಂಡು, ಈ ಎಲ್ಲದರ ಫಲಿತಾಂಶಗಳನ್ನು ತಮ್ಮ ತಪ್ಪೇ ಇಲ್ಲದೆ ಅನುಭವಿಸುತ್ತಿರುವುದು ಹೊಸ ಪೀಳಿಗೆ. ಹಾಳಾದ ಪರಿಸರದಿಂದ ಹಿಡಿದು ಹಾಳಾದ ಮನಸ್ಥಿತಿಯವರೆಗೆ ಹಿರಿಯ ತಲೆಮಾರುಗಳ ತಪ್ಪಿಗೆ ಹೊಸ ತಲೆಮಾರು ದಂಡ ತೆರಬೇಕಾಗಿದೆ. ಇದನ್ನು ಸರಿಪಡಿಸಲಾಗದಿದ್ದರೂ ಹೆಚ್ಚಿನ ಹಾನಿ ತಡೆಯುವ ಮಹತ್ತರ ಜವಾಬ್ದಾರಿ ತಾನಾಗೇ ಹೆಗಲಿಗೇರಿಸಿಕೊಂಡಿರುವ ಹೊಸ ಪೀಳಿಗೆ, ತನ್ನದೇ ಧಾಟಿಯಲ್ಲಿ ರಿಪೇರಿ ಕೆಲಸ ಶುರು ಮಾಡಿದೆ. ಮೇಲ್ನೋಟಕ್ಕೆ ಅದರ ಕೆಲವು ವರ್ತನೆಗಳು  ಉಡಾಫೆಯಂತೆ ತೋರಿದರೂ, ಗಮನಿಸಿ ನೋಡಿದರೆ ಅದರ ಆಳದಲ್ಲಿ ಜೆನ್ ನಡವಳಿಕೆ ಕಾಣುತ್ತದೆ. ಅದರ ಮಾತುಗಳು ಅರ್ಥಹೀನವಾಗಿ ಕಂಡರೂ ಅದು ಜಿಬರಿಶ್‌ನ ಹೊಸರೂಪವಾಗಿದ್ದು, ಮನುಷ್ಯರ ಮಾತುಗಾರಿಕೆಯ ಅಹಂಕಾರಕ್ಕೆ ಸವಾಲೆಸೆಯುವಂತಿದೆ. ಇಂಥ ಮನಸ್ಥಿತಿಯ ಹೊಸ ತಲೆಮಾರು ತನ್ನ ಮನರಂಜನೆಯ ವ್ಯಾಖ್ಯಾನಗಳನ್ನೂ ರಿಡಿಫೈನ್ ಮಾಡಿಕೊಳ್ಳುತ್ತಿದ್ದು, ಸದ್ಯದ ಎರಡು ತಲೆಮಾರುಗಳ ತಪ್ಪುಗಳಿಗೆ ಕನ್ನಡಿ ಹಿಡಿಯುವಂತೆ ಅದಕ್ಕೂ ಹಿಂದಿನವರ ಆಯ್ಕೆಗಳನ್ನು ಎತ್ತಿ ಹಿಡಿಯುತ್ತಿವೆ. ಸರಳತೆ, ಸಹಜತೆ ಮತ್ತು ಆಧ್ಯಾತ್ಮಿಕತೆಯ ಸೂತ್ರವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದನ್ನು ಈ ಪೀಳಿಗೆ ಪ್ರಜ್ಞಾಪೂರ್ವಕವಾಗಿ ಮಾಡುತ್ತಿದೆ ಎಂದಲ್ಲ, ಕಾಲದ ಪರಿಸ್ಥಿತಿಯಿಂದ ಅಸ್ತಿತ್ವವೇ ಈ ಚಿಂತನೆಯನ್ನು ಈ ಹೊಸಪೀಳಿಗೆಯಲ್ಲಿ ಸಹಜವಾಗಿ ಮೂಡಿಸುತ್ತಿದೆ.

ವಿಶ್ವಪ್ರಜ್ಞೆ ಕೆಲಸ ಮಾಡುವುದೇ ಹೀಗೆ. ಸೃಷ್ಟಿಯ ಜಡಚೇತನಗಳೆಲ್ಲವೂ ಅದರ ನಿರ್ದೇಶನದಂತೆಯೇ ನಡೆಯುವವು. ಇದರಲ್ಲಿ, ಪ್ರಜ್ಞೆಯನ್ನು ಕಂಡುಕೊಳ್ಳಬಲ್ಲ ಮನುಷ್ಯ ಜೀವಿಗಳ ಪಾತ್ರ ಹೆಚ್ಚಿನದು. ಹಾಗೆಂದೇ ಮನುಷ್ಯ ಸಮುದಾಯದಲ್ಲಿ ಏನೇ ಅವಾಂತರ ಉಂಟಾದರೂ ಕಾಲಕಾಲಕ್ಕೆ ಸಮುದಾಯದ ಒಳಗಿಂದಲೇ ಪರಿಹಾರವೂ ಹುಟ್ಟಿಕೊಳ್ಳುವುದು. ಎಲ್ಲ ಧಾರ್ಮಿಕ – ಆಧ್ಯಾತ್ಮಿಕ – ಸಾಮಾಜಿಕ ಚಳವಳಿಗಳು ಈ ವಿಶ್ವಪ್ರಜ್ಞೆಯ ನಿರ್ದೇಶನದ ಪರಿಣಾಮವೇ ಆಗಿವೆ. ಇಲ್ಲವಾದರೆ, ಎಲ್ಲ ಕಾಲದಲ್ಲೂ ಇದ್ದ ತಿಳಿವು ಕೆಲವೊಮ್ಮೆ ಮಾತ್ರ ಚಳವಳಿಯಾಗಿ ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮನಸ್ಸನ್ನು ಏಕಾಗ್ರಗೊಳಿಸುವ ಮಂತ್ರ – ಗೀತೆಗಳನ್ನು ಹಾಡುವುದು ಮತ್ತು ಕೇಳುವುದು ಸದಾಕಾಲದ ಸಂಗತಿಯಾದರೂ ಅದೊಂದು ಟ್ರೆಂಡ್ ಆಗಿ ಯುವಜನರನ್ನು ಆರೋಗ್ಯಕರ ಆಯ್ಕೆಗೆ ಪ್ರೇರೇಪಿರುವುದೂ  ವಿಶ್ವಪ್ರಜ್ಞೆಯ ನಿರ್ದೇಶನವೇ.


(ಬೋಧಿವೃಕ್ಷ । ವಿಜಕರ್ನಾಟಕ; 27.06.2027)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.