ನಾವು ಇಂದು ಮಾಡುವ ಕೆಲಸದ ಬಿತ್ತ ನಾವೇ ನಿನ್ನೆಯ ದಿನ ಬಿತ್ತಿದ್ದು ಆಗಿರಬಹುದು, ಮುನ್ನೂರು ವರ್ಷಗಳ ಹಿಂದೆ ನಮ್ಮ ಹಿರೀಕರು ಬಿತ್ತಿದ್ದು ಕೂಡ ಆಗಿರಬಹುದು. ನಾವು ಮಾಡುವ ಕೆಲಸಗಳ ಬಗ್ಗೆ ಅರಿವು ಮೂಡಿದಾಗ ನಮಗೆ ಹಾನಿ ತರುವಂಥದ್ದನ್ನು ಮತ್ತೊಮ್ಮೆ ಮಾಡದಿರುವ ನಿರ್ಧಾರ ಮಾಡಬಹುದು… ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್ ಬುಕ್, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ
ಭಾಗ 3.3: ಭಾವ-ಸಂಬಂಧ । ಬೀಜಗಳು
ಏನನ್ನೇ ಆಗಲಿ ಗಹನವಾಗಿ ಕಾಣುವುದೇ, ಬೇರನ್ನೂ ಕಾಣುವುದೇ ಧ್ಯಾನದ ಗುರಿ. ನಾವು ಮಾಡುವ ಯಾವುದೇ ಕೆಲಸವನ್ನು ಚೆನ್ನಾಗಿ ಗಮನಿಸಿದರೆ ಆ ಕೆಲಸದ ಕಾರಣವಾಗಿರುವ ಬೀಜ ಯಾವುದು ಅನ್ನುವುದು ಗೊತ್ತಾಗುತ್ತದೆ. ಆ ಬೀಜ ನಮ್ಮ ಹಿರೀಕರಿಂದ ಬಂದಿರಬಹುದು, ನಾವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಮ್ಮ ಹಿರೀಕರೂ ನಮ್ಮೊಡನೆ ಇದ್ದೇ ಇರುತ್ತಾರೆ. ತಂದೆ, ತಾತ, ಮುತ್ತಾತ, ಅಮ್ಮ, ಅಜ್ಜಿ, ಮುತ್ತಜ್ಜಿ ಎಲ್ಲರೂ ನಿಮ್ಮೊಡನೆ ಆ ಕೆಲಸ ಮಾಡುತಿರುತ್ತಾರೆ. ನಮ್ಮ ಮೈಯ ಕಣಕಣದಲ್ಲೂ ನಮ್ಮ ಹಿರೀಕರು ಇದ್ದೇ ಇರುತ್ತಾರೆ. ನೀವು ಬದುಕಿರುವ ಕಾಲದಲ್ಲಿ ಬಿತ್ತಿದ ಬಿತ್ತಗಳ ಹಾಗೆ ನೀವು ಈ ಮೈಯನ್ನು ಪಡೆಯುವ ಮೊದಲು ಬಿತ್ತಿದ ಬಿತ್ತಗಳೂ ಇರುತ್ತವೆ.
ಕೆಲವು ಸಲ ಗೊತ್ತಿರದೆ ಏನೇನೊ ಮಾಡುತೇವೆ. ಅದು ಕೂಡ ಕೆಲಸವೇ, ಕ್ರಿಯೆಯೇ. ʻಅಭ್ಯಾಸಬಲʼ ಅನ್ನುತ್ತೇವಲ್ಲ ಅದು ನಮ್ಮನ್ನು ಅರಿವೇ ಇಲ್ಲದ ಹಾಗೆ ಏನೇನೋ ಮಾಡುವಂತೆ ಮುಂದು ಮುಂದಕ್ಕೆ ದೂಡುತ್ತಾ ಇರುತ್ತದೆ. ಏನು ಮಾಡುತಿದ್ದೇವೋ, ಯಾಕೆ ಮಾಡುತಿದ್ದೇವೋ ಅದು ನಮಗೆ ಗೊತ್ತೇ ಇರುವುದಿಲ್ಲ. ಒಂದೊಂದು ಸಲ ಮಾಡುವ ಇಷ್ಟವಿರದ ಕೆಲಸವನ್ನೂ ಮಾಡುತ್ತೇವೆ. “ಹಾಗೆಲ್ಲ ಮಾಡಬೇಕು ಅಂತಿರಲಿಲ್ಲ, ಆದರೂ ಮಾಡದೆ ಇರಕ್ಕಾಗಲಿಲ್ಲ,” ಅನ್ನುತ್ತೇವೆ. ಇಂಥ ʻಅಭ್ಯಾಸಬಲʼವೊಂದು ಬೀಜ. ಹಿಂದಿನ ಎಷ್ಟೋ ತಲೆಮಾರುಗಳಿಂದ ನಮ್ಮೊಳಗೆ ಹುದುಗಿದ್ದ ಬೀಜ.
ನಮಗೇನು ಗೊತ್ತಿದೆಯೋ ಅದಕ್ಕಿಂತ ಬಹಳ ಹೆಚ್ಚಿನದನ್ನು ಹಿರೀಕರಿಂದ ಪಡೆದುಕೊಂಡಿದ್ದೇವೆ. ಈಗ ಇಲ್ಲದಿರುವ ಹಿರೀಕರಿಂದ ನಮ್ಮವರೆಗೂ ಸಾಗಿ ಬಂದಿರುವ ಅಭ್ಯಾಸದ ಬಲವನ್ನು ಎಚ್ಚರದ ಗಮನದ ಮೂಲಕ ಗುರುತಿಸಬಹುದು. ನಮ್ಮ ತಾತ, ಮುತ್ತಾತಂದಿರೂ ನಮ್ಮ ಹಾಗೇ ದುರ್ಬಲರಾಗಿದ್ದರು ಅನ್ನುವುದೂ ತಿಳಿಯಬಹುದು. ಕಳೆದ ತಲೆಮಾರುಗಳ ಬೇರುಗಳ ಮೂಲಕ ನಮ್ಮವರೆಗೂ ಸಾಗಿ ಬಂದಿರುವ ಒಳ್ಳೆಯದಲ್ಲದ ಅಭ್ಯಾಸಗಳನ್ನು ಕುರಿತು, ಸರಿ-ತಪ್ಪುಗಳ ತೀರ್ಮಾನವಿಲ್ಲದೆ, ಸಮರ್ಥಿಸದೆ, ವಿರೋಧಿಸದೆ ಎಚ್ಚರವನ್ನು ಹೊಂದಬಹುದು. ನಮ್ಮ ಮಿತಿಗಳ ಬಗ್ಗೆ, ʻಅಭ್ಯಾಸಬಲʼದ ಬಗ್ಗೆ ಕಿರುನಗೆ ಬೀರಬಹುದು. ಎಚ್ಚರ ಮೂಡಿತೆಂದರೆ ನಮಗೆ ಆಯ್ಕೆ- ಬೇರೆಯ ರೀತಿಯಲ್ಲಿ ವರ್ತಿಸುವ ಅಯ್ಕೆ-ಇರುತ್ತದೆ. ವೇದನೆ, ನರಳಾಟಗಳ ಚಕ್ರ ಸುತ್ತುವುದನ್ನು ಈಗಲೆ ನಿಲ್ಲಿಸಬಹುದು.
ಉದ್ದೇಶವಿರದೆ ಏನನ್ನೋ ಮಾಡಿ ಎಷ್ಟೊ ಸಲ ನಮ್ಮನ್ನೇ ನಾವು ಬೈದುಕೊಂಡಿರುತ್ತೇವೆ. ನಮ್ಮನ್ನು ನಾವು ವ್ಯಕ್ತಿಗಳಾಗಿ ಮಾತ್ರ ಕಂಡಿರುತ್ತೇವೆ. ನಮ್ಮಲ್ಲಿರುವ ಏನೇನೋ ಮಿತಿಗಳ ಬಗ್ಗೆ ಹಳಿದುಕೊಂಡಿರುತ್ತೇವೆ. ಗಮನದ ಎಚ್ಚರದ ಮೂಲಕ ʻಅಭ್ಯಾಸಬಲʼದ ಮೂಲಕ ವರ್ತಿಸುವುದನ್ನು ನಿಲ್ಲಿಸಿ ಬದಲಾಗಬಹುದು. ʻಅಭ್ಯಾಸಬಲʼ ಹೇಗೆ ಕೆಲಸಮಾಡುತ್ತದೆ ಎಂದು ತಿಳಿಯುವುದು ಮೊದಲ ಹೆಜ್ಜೆ. ನಮಗೆ ಕುತೂಹಲವಿದ್ದರೆ ಎಚ್ಚರದ ಗಮನ, ಒಮ್ಮುಖ ಗಮನದ ಮೂಲಕ ನಾವು ಮಾಡುವ ಕೆಲಸಗಳ ಬೇರನ್ನೂ ಕಾಣಬಹುದು.
ನಾವು ಇಂದು ಮಾಡುವ ಕೆಲಸದ ಬಿತ್ತ ನಾವೇ ನಿನ್ನೆಯ ದಿನ ಬಿತ್ತಿದ್ದು ಆಗಿರಬಹುದು, ಮುನ್ನೂರು ವರ್ಷಗಳ ಹಿಂದೆ ನಮ್ಮ ಹಿರೀಕರು ಬಿತ್ತಿದ್ದು ಕೂಡ ಆಗಿರಬಹುದು. ನಾವು ಮಾಡುವ ಕೆಲಸಗಳ ಬಗ್ಗೆ ಅರಿವು ಮೂಡಿದಾಗ ನಮಗೆ ಹಾನಿ ತರುವಂಥದ್ದನ್ನು ಮತ್ತೊಮ್ಮೆ ಮಾಡದಿರುವ ನಿರ್ಧಾರ ಮಾಡಬಹುದು. ನಮ್ಮೊಳಗಿನ ಅಭ್ಯಾಸಬಲದ ಅರಿವಿನಿಂದ ನಮ್ಮ ಆಲೋಚನೆ, ಮಾತು, ಕೆಲಸಗಳನ್ನು ಗಮನವಿರಿಸಿ, ಉದ್ದೇಶಪೂರ್ವಕವಾಗಿ ಮಾಡಲು ಸಾಧ್ಯವಾಗುತ್ತದೆ. ಹಾಗೆ ಮಾಡಿದಾಗ ನಾವು ಮಾತ್ರವಲ್ಲ, ನಮ್ಮ ಹಿರೀಕರೂ ಬದಲಾಗುತ್ತಾರೆ.
ನಾವು ಮಾಡುವ ಅನುಷ್ಠಾನದಿಂದ ನಮ್ಮ ಹಿರೀಕರು, ನಮ್ಮ ಮುಂದಿನ ಪೀಳಿಗೆಯವರೂ ಪ್ರಭಾವಿತರಾಗುತ್ತಾರೆ. ನಾವು ಮಾಡುವ ಅನುಷ್ಠಾನ ನಮಗಾಗಿ ಮಾತ್ರವಲ್ಲ, ಇಡೀ ಲೋಕಕ್ಕಾಗಿ. ಎಂಥದೇ ಪ್ರಚೋದನೆ ಎದುರಾದರೂ ಕೆರಳದೆ ನಸುನಗಲು ಆಗುವುದಾದರೆ ನಮಗೆ ಮಾತ್ರವಲ್ಲ ಇಡೀ ಲೋಕವೇ ಅದರ ಪರಿಣಾಮವನ್ನು ಅನುಭವಿಸುತ್ತದೆ
ಇದೆಲ್ಲ ನಡೆಯಬೇಕಾದರೆ ನಮ್ಮ ಎಲ್ಲ ಕೆಲಸಗಳ ಬಗ್ಗೆ ನಮಗೆ ಅರಿವು, ಎಚ್ಚರ ಇರಬೇಕು. ನಮ್ಮ ಎಚ್ಚರದ ಗಮನದಿಂದ ನಮ್ಮ ಕೆಲಸಗಳ ಸ್ವರೂಪ ತಿಳಿಯುತ್ತದೆ.
*
ಬಿತ್ತ ಅಥವಾ ಬೀಜದ ರೂಪಕವನ್ನು ಹಲವು ವಚನಕಾರರು ಬಳಸಿದ್ದಾರೆ.
೧. ಸೊಡ್ಡಳ ಬಾಚರಸರ ವಚನ:
ಹದನರಿದು ಹರಗುವ ಬೆದೆಯರಿದು ಬಿತ್ತುವ
ಸಸಿ ಮಂದವಾದಡೆ ತೆಗೆವನಯ್ಯಾ
ಒಂದೊಂದ ಹೊಕ್ಕು ಬೆಳವಸಿಯ ತೆನೆ ಮೆಲುವನಯ್ಯಾ
ಕೊಯಿವನಯ್ಯಾ ಕೊರೆವನಯ್ಯಾ ಒಕ್ಕುವನಯ್ಯಾ ತೂರುವನಯ್ಯಾ
ಲೋಕಾದಿಲೋಕಂಗಳ ಹಗೆಯನಿಕ್ಕುವನಯ್ಯಾ, ದೇವರಾಯ ಸೊಡ್ಡಳ
ಅನುಭವಗಳ ಬಿತ್ತ, ಅಭ್ಯಾಸದ ಬೆಳೆಯನ್ನು ಅರಿಯುವ ಧ್ಯಾನದ ದಾರಿಯ ವಿವರದಂತೆಯೇ ಈ ವಚನ ಇದೆ ಅನಿಸಿತು
೨. ಮೆರೆಮಿಂಡಯ್ಯನವರ ವಚನ
ಮೊದಲು ರೂಪಾದ ಬಿತ್ತು ಭೂಮಿಯಲ್ಲಿ ಬಿತ್ತಿ
ಅದು ಬೀಜ ನಾಮ ನಿಂದು ಸಸಿಯೆಂಬ ನಾಮವಾಯಿತ್ತು
ಸಸಿ ಬಲಿದು ಬೆಳೆದು ಉಂಡಿಗೆಯ ಬೀಜವೆಂಬ ಉಭಯನಾಮವ ತಾಳಿದುದು
ಬೀಜ ಒಂದೋ ಎರಡೋ ಎಂಬುದನರಿದಲ್ಲಿ
ಕ್ರೀ ಶೂನ್ಯವೆಂಬ ಉಭಯನಾಮವಡಗಿತ್ತು
ಐಘಟದೂರ ರಾಮೇಶ್ವರಲಿಂಗ[ದ] ಉಭಯನಾಮ ನಿಂದಿತ್ತು
೩. ಬಿಬ್ಬಿಬಾಚಯ್ಯನವರ ವಚನ
ಬೀಜವಿಲ್ಲದೆ ಬಿತ್ತು ಹುಟ್ಟುವ ತೆರನಾವುದು
ತೊಟ್ಟಿಲ್ಲದೆ ಹಣ್ಣು ಇಪ್ಪ ತೆರನಾವುದು
ಇಷ್ಟವಿಲ್ಲದೆ ಚಿತ್ತ ಅಪ್ಪುವ ಠಾವಾವುದು
ಇಂತೀ ಭೇದದಲ್ಲಿ ಭೇದಕನಾಗಿ
ಎರಡಳಿದು ವೇದ್ಥಿಸಿ ನಿಂದಲ್ಲಿಯೆ
ಏಣಾಂಕಧರ ಸೋಮೇಶ್ವರಲಿಂಗ…

