ಅರಿಸ್ಟಾಟಲ್ ನ ಪ್ರಕಾರ, ಅತ್ಯುತ್ತಮ ಸ್ನೇಹಿತರು ಎಂದರೆ ನೀವು ಜೀವನದಲ್ಲಿ ಅರಳಬೇಕು ಎಂದು ಹಾರೈಸುವವರು । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಒಬ್ಬರನ್ನು ಒಳ್ಳೆಯ ಸ್ನೇಹಿತರನ್ನಾಗಿ ಮಾಡುವ ಗುಣ ಯಾವುದು? ಅತ್ಯುತ್ತಮ ಗೆಳೆಯರನ್ನಾಗಿ? ಅವರು, ನಿಮ್ಮ ಜೊತೆ ಕುಳಿತು ಡ್ರಿಂಕ್ಸ್ ಮಾಡಬಲ್ಲ, ನಿಮ್ಮ ಹೊಟ್ಟೆ ನೋಯುವಂತೆ ನಗಿಸಬಲ್ಲ ವ್ಯಕ್ತಿಯೇ?
ಅಥವಾ ಕೆಲಸದ ಸ್ಥಳದಲ್ಲಾಗಲಿ, ಶಾಲೆಯಲ್ಲಾಗಲಿ ನಿಮಗೆ ಸಹಾಯ ಮಾಡುವ, ನಿಮ್ಮ ರಹಸ್ಯವನ್ನು ಕಾಪಾಡಿಕೊಳ್ಳಬಲ್ಲ ವ್ಯಕ್ತಿಯೇ? ಬಹುಶಃ ಹೌದು. ಆದರೆ, ಅರಿಸ್ಟಾಟಲ್ ಅವರ ಪ್ರಕಾರ, ಒಬ್ಬ ಉತ್ತಮ ಸ್ನೇಹಿತರಾಗಲು ಇನ್ನೂ ಒಂದು ಅತ್ಯಗತ್ಯ ಗುಣವಿದೆ.
ನನಗೆ ಒಬ್ಬಳು ಸ್ನೇಹಿತೆಯಿದ್ದಾಳೆ. ಈಗ, ಅವಳನ್ನು ಆಗಾಗ ನೋಡುವುದು ನನಗೆ ಸಾಧ್ಯವಾಗುವುದಿಲ್ಲ, ಏಕೆಂದರೆ ಅವಳು ತುಂಬಾ ದೂರದಲ್ಲಿ ವಾಸಿಸುತ್ತಾಳೆ ಮತ್ತು ನಾವಿಬ್ಬರೂ ನಮ್ಮ ನಮ್ಮ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದೇವೆ. ಆದರೆ ಅರಿಸ್ಟಾಟಲ್ ನ ದೃಷ್ಟಿಯಲ್ಲಿ ಅವಳು ಒಬ್ಬ ಅತ್ಯುತ್ತಮ ಸ್ನೇಹಿತೆ. ಏಕೆಂದರೆ ನಾನು ನನ್ನ ಜೀವನದಲ್ಲಿ ನಡೆದ ಯಾವುದಾದರೂ ಘಟನೆ, ನಾಟಕೀಯ ಪರಿಸ್ಥಿತಿ ಅಥವಾ ಯಾರೊಂದಿಗಾದರೂ ಉಂಟಾದ ಸಂಘರ್ಷದ ಬಗ್ಗೆ ನಾನು ಆಕೆಗೆ ಹೇಳಿದಾಗ, ಆಕೆ ನನ್ನ ತಪ್ಪನ್ನು ನೇರವಾಗಿ ಹೇಳಲು ಎಂದಿಗೂ ಹೆದರುವುದಿಲ್ಲ. ಅವಳು ಹೇಳುತ್ತಾಳೆ: “ಈ ವಿಷಯದಲ್ಲಿ ತಪ್ಪು ಮಾಡಿರುವುದು ನೀನೇ ಎಂದು ನನಗೆ ಅನಿಸುತ್ತದೆ.” ಅಥವಾ, “ಈ ಸಂದರ್ಭದಲ್ಲಿ ನೀನು ಅಷ್ಟೊಂದು ಕರುಣೆಯಿಂದ ವರ್ತಿಸಲಿಲ್ಲ ಎಂದು ನನಗೆ ಅನಿಸುತ್ತದೆ.”
ಆಕೆ ನ್ಯಾಯಯುತವಾಗಿ ಯೋಚಿಸುವವಳು, ಬುದ್ಧಿವಂತಳು, ಮತ್ತು ನಾನು ನನ್ನ ಅತ್ಯುತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಯಾವಾಗಲೂ ನನ್ನನ್ನು ಪ್ರೇರೇಪಿಸುವವಳು.
ಅರಿಸ್ಟಾಟಲ್ ನ ದೃಷ್ಟಿಯಲ್ಲಿ ಆಕೆ ಒಬ್ಬ ಅತ್ಯುತ್ತಮ ಸ್ನೇಹಿತೆ. ಏಕೆಂದರೆ ಅವಳು, ನಾನು ಈಗ ಯಾರು ಎನ್ನುವುದನ್ನು ಮಾತ್ರವಲ್ಲ, ನಾನು ಯಾರು ಆಗಬಹುದು ಅಥವಾ ಯಾರು ಆಗಬೇಕು ಎನ್ನುವುದನ್ನೂ ತಿಳಿದಿದ್ದಾಳೆ. ನನ್ನಲ್ಲಿರುವ ದುರ್ಗುಣಗಳು, ನನ್ನ ಅನೇಕ ದೌರ್ಬಲ್ಯಗಳು ಮತ್ತು ಕೊರತೆಗಳನ್ನೂ ಅವಳು ಚೆನ್ನಾಗಿ ಅರಿತಿದ್ದಾಳೆ. ಆದರೆ ಅದೇ ಸಮಯದಲ್ಲಿ, ನಾನು ದಯಾಳುವಾಗಿರಬಲ್ಲೆ, ಧೈರ್ಯಶಾಲಿಯಾಗಿರಬಲ್ಲೆ ಮತ್ತು ಕನಿಷ್ಠ ಕೆಲವು ಸಂದರ್ಭಗಳಲ್ಲಿಯಾದರೂ ಶ್ರಮಜೀವಿಯಾಗಿರಬಲ್ಲೆ ಎನ್ನುವುದನ್ನು ತಿಳಿದಿದ್ದಾಳೆ.
ಅರಿಸ್ಟಾಟಲ್ ನ ಪ್ರಕಾರ, ಅತ್ಯುತ್ತಮ ಸ್ನೇಹಿತರು ಎಂದರೆ ನೀವು ಜೀವನದಲ್ಲಿ ಅರಳಬೇಕು (flourish) ಎಂದು ಹಾರೈಸುವವರು. ನೀವು ಒಂದು ಮೂಲೆಯಲ್ಲಿ ಕುಗ್ಗಿ ಹೋಗುವುದನ್ನಾಗಲಿ, ಜೀವನದ ಭಾರದಿಂದ ಉಸಿರುಗಟ್ಟಿ ನರಳುವುದನ್ನಾಗಲಿ ಅವರು ಸಹಿಸುವುದಿಲ್ಲ. ನೀವು ಯಶಸ್ವಿಯಾಗಬೇಕು, ಗೆಲ್ಲಬೇಕು ಮತ್ತು ನಿಮ್ಮ ಸಾಮರ್ಥ್ಯ ಹಾಗೂ ವ್ಯಕ್ತಿತ್ವವು ಪ್ರಕಾಶಮಾನವಾಗಿ ಹೊಳೆಯಬೇಕು ಎನ್ನುವುದೇ ಅವರ ಹಾರೈಕೆ.

