ಅಡೆತಡೆ, ಗಂಟು, ಸಿಕ್ಕು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.5

ನಮ್ಮೊಳಗಿನ ಭಾವ ಸಂಯೋಜನೆಗಳನ್ನು ವೇದನೆಯ ಸರಪಳಿಯೆಂದೋ, ಗಂಟುಗಳೆಂದೋ ನೋಡಬಹುದು. ಬೇರೆಯವರ ಮಾತು, ಕೆಲಸಗಳಿಗೆ ನಾವು ಭಾವನಾತ್ಮವಾಗಿ ಪ್ರತಿಕ್ರಿಯೆ ತೋರಿದಾಗ ಭಾವಗಳು ಗಂಟುಬೀಳುತ್ತವೆ. ನಮಗೆ ಹಿತವಾದ ಅಥವಾ ಅಹಿತವಾದ ಭಾವಗಳನ್ನು ಮತ್ತೆ ಮತ್ತೆ ಅದುಮಿಡುತಿದ್ದರೆ ಆಗಲೂ ಭಾವಗಳು ಗಂಟುಗಂಟಾಗುತ್ತವೆ... ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.5: ಭಾವ-ಸಂಬಂಧ  ಅಡೆತಡೆ, ಗಂಟು, ಸಿಕ್ಕು

ಮೈಯೊಳಗಿನ ನೋವು, ಮನಸಿನ ನೋವುಗಳನ್ನು ವಿರೋಧಿಸುವುದು, ಪಕ್ಕಕ್ಕೆ ತಳ್ಳಿ ಮುಂದೆ ಸಾಗುವುದು, ಅಥವಾ ಅವು ಇಲ್ಲವೇ ಇಲ್ಲ ಅನ್ನುವ ಹಾಗೆ ನಟಿಸುವುದು—ಹೀಗೆಲ್ಲ ಮಾಡಿದರೆ ಆ ನೋವುಗಳೆಲ್ಲ ಮತ್ತಷ್ಟು ಹೆಚ್ಚುತ್ತವೆ, ಮೊನಚಾಗಿ ಇರಿಯುತ್ತವೆ.

ನಮ್ಮ ನೋವು ನಮ್ಮಿಂದ ಬೇರೆಯಾಗಿರುವುದಿಲ್ಲ. ನೋವೇ ನಾವು. ನೋವು ನಮ್ಮ ಒಂದು ಅಂಶ. ನೋವನ್ನು ಅಲ್ಲಗಳೆದರೆ ನಮ್ಮನ್ನೇ ನಾವು ಅಲ್ಲಗಳೆದ ಹಾಗೆ. ನಮ್ಮಲ್ಲಿರುವ ಭಾವಗಳನ್ನು ನಮ್ಮದೆಂದು ಒಪ್ಪಿದರೆ ಅದರಿಂದ ಎಷ್ಟೋ ಶಾಂತಿ  ಮೂಡುತ್ತದೆ, ನೆಮ್ಮದಿ ಅನಿಸುತ್ತದೆ, ನೋವಿನ ಬಾಧೆ ಒಂದಿಷ್ಟು ಕಡಿಮೆಯಾಗುತ್ತದೆ. ನಮ್ಮ ನೋವನ್ನು ಕಂಡು ನಾವೇ ನಗುವುದು ಅತ್ಯಂತ ಜಾಣತನದ, ವಿವೇಕದ, ಚೆಲುವಾದ ಕೆಲಸ. ಹಾಗಲ್ಲದೆ ಬೇರೆ ದಾರಿಯಿಲ್ಲ.

ಪ್ರತಿ ಬಾರಿ ನಮ್ಮ ನೋವಿನ ಭಾವವನ್ನು ಒಪ್ಪಿ, ಪರಿಚಯಮಾಡಿಕೊಂಡು, ನಮ್ಮದೆಂದುಕೊಂಡಾಗ ನಮ್ಮೊಡನೆಯೇ ನಮ್ಮ ಸಂಪರ್ಕ ಏರ್ಪಡುತ್ತದೆ. ಆಗುತ್ತಿರುವ ನೋವಿನ ಬೇರು ಎಲ್ಲಿದೆ, ನೋವಿನ ತಿರುಳೇನು, ಕಾರಣವೇನು ಅನ್ನುವುದು ಅರಿವಾಗುತ್ತದೆ. ಭಯ, ಅಭದ್ರತೆ, ಸಿಟ್ಟು, ಅಳಲು, ಹೊಟ್ಟೆಯಕಿಚ್ಚು, ಬೇಕು ಎಂಬ ಬಯಕೆ ಇವೆಲ್ಲವೂ ನಮ್ಮೊಳಗಿರುವ ಭಾವದ, ಚಿಂತನೆಯ ಅಡೆತಡೆಗಳು. ಇವೆಲ್ಲವೂ ನಮ್ಮ ಒಳಗಿನ ʻಸಂಯೋಜನೆʼಗಳು. ಸಂಯೋಜನೆ ಎಂದರೆ ನಮ್ಮೊಳಗೆ ಮೂಡುವ ಭಾವರೂಪಗಳು. ಇವು ಹೇಗೆ ರೂಪುಗೊಂಡಿವೆ ಎಂದು ತಿಳಿಯಲು, ನೋಡಿ ಒಪ್ಪಲು  ಸಮಯವೂ ಬೇಕು, ಅವಕಾಶವೂ ಇರಬೇಕು.

ಗಮನವಿರಿಸಿ ನಡೆಸುವ ಉಸಿರಾಟದ ಮೂಲಕ ನೋವಿನ ಭಾವಗಳನ್ನು ಸಹಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಗಮನದ ಎಚ್ಚರದಿಂದ ಈ ಭಾವಗಳು ನಮ್ಮೊಳಗೆ ಇರುವುದುನ್ನು ಗುರುತುಹಿಡಿಯಲು, ಒಪ್ಪಲು, ಸಂತೈಸಲು, ಅಡೆತಡೆಗಳ ಸ್ವರೂಪವನ್ನೂ ತಿರುಳನ್ನೂ  ತಿಳಿಯಲು ಸಾಧ್ಯವಾಗುತ್ತದೆ.

ನಮ್ಮ ಎಲ್ಲ ಬಗೆಯ ನೋವಿನ ಬೀಜಗಳೂ ನಮ್ಮೊಳಗೇ ಇವೆ. ನೋವನ್ನು ಬದಲಿಸಲು ಎಚ್ಚರದ ಗಮನವೊಂದೇ ದಾರಿ. ನೋವಿನ ಬೀಜಗಳು ನಮ್ಮೊಳಗಿಲ್ಲವೆಂಬ ಮರವೆಯಲ್ಲಿ  ಬದುಕುತ್ತೇವೆ. ಈ ಮರವೆಯೇ ನೋವಿನ ಬೀಜಕ್ಕೆ ನಾವು ದಿನವೂ ಎರೆಯುವ ನೀರು. ಕಾಲ ಕಳೆದ ಹಾಗೆ ನಮ್ಮೊಳಗಿನ ಅಡೆತಡೆಗಳು, ಅಡ್ಡಗೋಡೆಗಳು ಗಟ್ಟಿಯಾಗುತ್ತವೆ. ಗಮನದ ಎಚ್ಚರದೊಡನೆ ನಡೆಸುವ ಉಸಿರಾಟದಿಂದ ನಮ್ಮೊಳಗಿನ ನೋವಿನ ಭಾವದ ಸಂಯೋಜನೆಗಳು ಬದಲಾಗುತ್ತವೆ. 

ನಮ್ಮೊಳಗಿನ ಭಾವ ಸಂಯೋಜನೆಗಳನ್ನು ವೇದನೆಯ ಸರಪಳಿಯೆಂದೋ, ಗಂಟುಗಳೆಂದೋ ನೋಡಬಹುದು. ಬೇರೆಯವರ ಮಾತು, ಕೆಲಸಗಳಿಗೆ ನಾವು ಭಾವನಾತ್ಮವಾಗಿ ಪ್ರತಿಕ್ರಿಯೆ ತೋರಿದಾಗ ಭಾವಗಳು ಗಂಟುಬೀಳುತ್ತವೆ. ನಮಗೆ ಹಿತವಾದ ಅಥವಾ ಅಹಿತವಾದ ಭಾವಗಳನ್ನು ಮತ್ತೆ ಮತ್ತೆ ಅದುಮಿಡುತಿದ್ದರೆ ಆಗಲೂ ಭಾವಗಳು ಗಂಟುಗಂಟಾಗುತ್ತವೆ. ಯಾವುದೇ ನೋವಿನ ಭಾವನೆ, ಅಥವಾ ಗೀಳಾಗಿ ಬದಲಾಗುವ ಯಾವುದೇ ಸಂತೋಷ, ದ್ವೇಷ, ಹೆಮ್ಮೆ, ಗುಮಾನಿ, ದುಃಖ ಅಥವ ಮೋಹದ ಭಾವನೆಗಳು ಸರಪಳಿಗಳಾಗಿ ನಮ್ಮನ್ನು ಕಟ್ಟಿಹಾಕುತ್ತವೆ. ಈ ಸಂಶಯದ ಕೊಂಡಿಗಳಿಗೆ ಗೊಂದಲ ಮತ್ತು ತಿಳಿವಳಿಕೆಯ ಕೊರತೆಯ ಬೆಸುಗೆ ಇರುತ್ತದೆ. ನಮ್ಮ ಬಗ್ಗೆ ನಮಗೆ ತೀರ ಕಡಿಮೆ ತಿಳಿದಿರುವುದು, ನಮ್ಮ ಬಗ್ಗೆ ನಮಗೆ ತಪ್ಪು ಗ್ರಹಿಕೆ ಇರುವುದು, ವಾಸ್ತವದ ಪೂರ್ತಿ ಅರಿವು ಇಲ್ಲದಿರುವುದು ಇವು ಯಾವುದು ಬೇಕಾದರೂ ನಮ್ಮನ್ನು ಕಟ್ಟಿಹಾಕುವ ಸರಪಳಿಯನ್ನು ಸಿದ್ಧಮಾಡುವ ಕುಲುಮೆಗಳಾಗಬಹುದು. ಎಚ್ಚರದ ಗಮನವನ್ನು ಬೆಳೆಸಿಕೊಳ್ಳುತ್ತ ನಮಗೆ ಹಿತವಲ್ಲದ ಭಾವಗಳು ತಲೆ ಎತ್ತಿದ ತಕ್ಷಣವೇ ಅವನ್ನು ಪತ್ತೆ ಹಚ್ಚಿ ಅವು ಸರಪಳಿಗಳಾಗಿ ಬದಲಾಗದಂತೆ ತಡೆಯಬಹುದು.

ಬೇರೆಯವರು ಆಡುವ ಮಾತು, ಮಾಡುವ ಕೆಲಸಗಳಿಗೆ ಪ್ರತಿಕ್ರಿಯೆ ತೋರದೆ ಇದ್ದರೆ, ನಮ್ಮ ಮನಸನ್ನು ಶಾಂತವಾಗಿ ಇರಿಸಿಕೊಂಡರೆ, ನಮ್ಮೊಳಗೆ ಭಾವ, ಚಿಂತನೆಗಳ ಸರಣಿಯ ಸಂಯೋಜನೆಯಾಗದೆ ನೆಮ್ಮದಿ, ಸಂತೋಷಗಳನ್ನು ಪಡೆಯಬಹುದು. ನಾವು ಹಾಗಿರುವಾಗ ನಮ್ಮ ಕುಟುಂಬ, ಗೆಳೆಯರು, ಪರಿಚಿತರು ಎಲ್ಲರಿಗೂ ನಮ್ಮ ತಿಳಿವಳಿಕೆ, ಪ್ರೀತಿ ದೊರೆಯುತ್ತವೆ.

*

ಈ ಭಾಗವನ್ನು ಅನುವಾದ ಮಾಡುವಾಗ ಬ್ಲೇಕ್‌ ಕವಿ ೧೭೯೪ರಲ್ಲಿ ಬರೆದ ಲಂಡನ್‌ ಎಂಬ ಹೆಸರಿನ ಪದ್ಯದಲ್ಲಿ ಬಳಸಿರುವ ʻಮನಸಿನ ಕುಲುಮೆಯಲ್ಲಿ ತಯಾರಾದ ಸರಪಳಿಗಳುʼ (mind forged manacles) ಎಂಬ ರೂಪಕ ನೆನಪಾಯಿತು. ಇಡೀ ಸಮಾಜವೇ ಇಂಥ ಸರಪಳಿಗಳ ಕಗ್ಗಂಟಿನಲ್ಲಿ ಸಿಕ್ಕಿಬಿದ್ದಿದೆ ಅನ್ನುವ ಭಾವ ಆ ಕವಿತೆಯಲ್ಲಿದೆ.

ʻಹೆಸರು ಹೊತ್ತ ಒಂದೊಂದೂ ಬೀದಿಯಲ್ಲಿ ಅಲೆದೆ. ಗುರುತು ಮಾಡಿದ ಜಾಗದಲ್ಲಿ ಗುರುತು ಮಾಡಿದ ರೀತಿಯಲ್ಲಿ ಹರಿವ ಥೇಮ್ಸ್‌ ನದಿಯ ಸಮೀಪ ಹೋದೆ. ಎದುರಾದ ಒಂದೊಂದು ಮುಖದಲ್ಲೂ ದಣಿವಿನ, ದುಃಖದ ಗುರುತು ಕಂಡವು.

ʻಒಬ್ಬೊಬ್ಬ ಮನುಷ್ಯರ ಗೋಳಾಟದಲ್ಲಿ, ಒಂದೊಂದೂ ಮಗುವಿನ ಭಯದ ಚೀರಾಟದಲ್ಲಿ, ಪ್ರತಿಯೊಂದು ದನಿಯಲ್ಲಿ, ಪ್ರತಿಯೊಂದು ವಿಧಿ-ನಿಷೇಧದಲ್ಲಿ ಕೇಳುತಿದೆ ಮನದ ಕುಲುಮೆಯಲ್ಲಿ ಬಡಿದು ಮಾಡಿದ ಸರಪಳಿಗಳ ಸದ್ದು—

ʻಚಿಮಿಣಿ ಒರೆಸುವ ಮಕ್ಕಳ ಕೂಗಿನಲ್ಲಿ, ಕಪ್ಪು ಹಿಡಿದ ಚರ್ಚಿನ ಗೋಡೆಗಳು ಹುಟ್ಟಿಸುವ ಭಯದಲ್ಲಿ, ಅಸಹಾಯಕ ಸೈನಿಕರ ನಿಟ್ಟುಸಿರಿನಲ್ಲಿ, ಅರಮನೆಯ ಗೋಡೆಯ ಮೇಲೆ ಹರಿದಿರುವ ರಕ್ತದಲ್ಲಿ

ʻಎಲ್ಲಕಿಂತ ಮಿಗಿಲಾಗಿ, ನಡು ರಾತ್ರಿಯ ಬೀದಿಗಳಲ್ಲಿ ಕೇಳುವ ಎಳೆಯ ಸೂಳೆಯರು ಹಾಕು ಶಾಪ ಆಗ ತಾನೇ ಹುಟ್ಟಿದ, ಮದುವೆಯೆಂಬ ಹೆಣದ ಬಂಡಿಯ ಮುಂದಿನ ಗೋಳಾಟದಂತಿರುವ ಹಸುಗೂಸಿನ ಅಳುವನ್ನೂ ಛಿದ್ರಿಸಿರುವಲ್ಲಿ [ಮನಸಿನ ಕುಲುಮೆಯ ಸರಪಳಿಗಳ ಸದ್ದು ಕೇಳಿಸಿದೆ]


ನಿಮ್ಮ ಓದಿಗೊಂದು ಇಂಗ್ಲಿಶ್ ಪದ್ಯ

I wander thro’ each charter’d street,

Near where the charter’d Thames does flow. 

And mark in every face I meet

Marks of weakness, marks of woe.

In every cry of every Man,

In every Infants cry of fear,

In every voice: in every ban,

The mind-forg’d manacles I hear 

How the Chimney-sweepers cry

Every blackning Church appalls, 

And the hapless Soldiers sigh

Runs in blood down Palace walls 

But most thro’ midnight streets I hear

How the youthful Harlots curse

Blasts the new-born Infants tear 

And blights with plagues the Marriage hearse [London, William Blake]

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.