ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಒಂದು ದಿನ, ಒಬ್ಬ ಯುವ ಭಿಕ್ಷು ನಿರಾಶೆಯಿಂದ ಬುದ್ಧನ ಬಳಿಗೆ ಬಂದ.
“ಗುರುವೇ, ನಾನು ನಿತ್ಯವೂ ಧ್ಯಾನ ಮಾಡುತ್ತೇನೆ, ನಿನ್ನ ಉಪದೇಶಗಳನ್ನು ಅನುಸರಿಸುತ್ತೇನೆ. ಆದರೂ ನನ್ನ ಜೀವನದಲ್ಲಿ ಅನೇಕ ಅಡೆತಡೆಗಳು ಎದುರಾಗುತ್ತಿವೆ. ನಾನು ಯಾವುದೇ ಪ್ರಗತಿಯನ್ನು ಸಾಧಿಸುತ್ತಿಲ್ಲವೆಂದು ಅನಿಸುತ್ತಿದೆ.” ಭಿಕ್ಷು ತನ್ನ ಸಮಸ್ಯೆಯನ್ನು ಬುದ್ಧನ ಎದುರು ನಿವೇದಿಸಿದ.
ಬುದ್ಧ ಮುಗುಳ್ನಗುತ್ತಾ ಅವನನ್ನು ನೆಲದ ಮೇಲೆ ಇದ್ದ ಒಂದು ದೊಡ್ಡ ಬಂಡೆಯ ಬಳಿಗೆ ಕರೆದೊಯ್ದು, ಭಿಕ್ಷುವಿಗೆ ಹೇಳಿದ
“ಈ ಬಂಡೆಯನ್ನು ಬದಿಗೆ ಸರಿಸುವ ಪ್ರಯತ್ನ ಮಾಡು ನೋಡೋಣ”
ಭಿಕ್ಷು ತನ್ನ ಸಂಪೂರ್ಣ ಶಕ್ತಿಯಿಂದ ಬಂಡೆಯನ್ನು ತಳ್ಳಲು ಪ್ರಯತ್ನಿಸಿದ. ಮತ್ತೆ ಮತ್ತೆ ಪ್ರಯತ್ನಿಸಿದರೂ, ಆ ಬಂಡೆ ಸ್ವಲ್ಪವೂ ಚಲಿಸಲಿಲ್ಲ. ಕೊನೆಗೆ ಆತ ದಣಿದು ಬುದ್ಧನ ಕಡೆ ತಿರುಗಿ,
“ಇದು ಅಸಾಧ್ಯ. ಎಷ್ಟೇ ಪ್ರಯತ್ನಿಸಿದರೂ ಈ ಬಂಡೆ ಚಲಿಸುತ್ತಿಲ್ಲ,” ಎಂದ.
ಆಗ ಬುದ್ಧ ಮುಗುಳ್ನಗುತ್ತ ಹೇಳಿದ ;
“ನಾನು ನಿನಗೆ ಬಂಡೆಯನ್ನು ಸರಿಸು ಎಂದು ಹೇಳಲಿಲ್ಲ. ಪ್ರಯತ್ನಿಸು ಎಂದು ಮಾತ್ರ ಹೇಳಿದೆ. ಉದ್ದೇಶ ಬಂಡೆಯನ್ನು ಸರಿಸುವುದಲ್ಲ; ನಿನ್ನ ಪ್ರಯತ್ನಗಳು ನಿನ್ನನ್ನು ಹೇಗೆ ರೂಪಿಸುತ್ತವೆ ಎನ್ನುವುದನ್ನ ನೋಡುವುದು. ಜೀವನದ ಸವಾಲುಗಳು ಈ ಬಂಡೆಯಂತೆಯೇ ಇರುತ್ತವೆ. ಅವು ಯಾವಾಗಲೂ ಬದಲಾಗದೇ ಇರಬಹುದು. ಆದರೆ ಅವುಗಳನ್ನು ಧೈರ್ಯದಿಂದ ಎದುರಿಸುವ ಪ್ರಕ್ರಿಯೆ ನಿನ್ನಲ್ಲಿ ತಾಳ್ಮೆ, ಪರಿಶ್ರಮ ಮತ್ತು ಜ್ಞಾನವನ್ನು ಬೆಳೆಸುತ್ತದೆ.”
ಭಿಕ್ಷು, ಬುದ್ಧನ ಮಾತುಗಳನ್ನು ಆಳವಾಗಿ ಮನನ ಮಾಡುತ್ತ, ಹೊಸ ಉತ್ಸಾಹ ಮತ್ತು ದೃಢಸಂಕಲ್ಪದೊಂದಿಗೆ ತನ್ನ ಸಾಧನೆಯನ್ನು ಮುಂದುವರಿಸಿದ.

