ತೀವ್ರ ಭಾವಗಳಿಗೆ ಎದುರಾಗುವುದು : ಟಿಕ್ ನಾಟ್ ಹಾನ್ ಚಿಂತನೆಗಳ ವ್ಯಾಖ್ಯಾನ #3.6

ಯಾವುದೇ ಭಾವವೆಂಬುದು ಮೇಲೇಳುವ, ತುಸು ಹೊತ್ತು ಇರುವ, ಆಮೇಲೆ ಹೊರಟುಹೋಗುವ ಸಂಗತಿ ಅನ್ನುವುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಬಿರುಗಾಳಿಯೂ ಬರುತ್ತದೆ, ಸ್ವಲ್ಪ ಹೊತ್ತು ಇರುತ್ತದೆ, ಹೋಗುತ್ತದೆ. ನೀವು ಕೇವಲ ಭಾವವಲ್ಲ, ಭಾವಗಳಿಗಿಂತ ಮಿಗಿಲಾದವರು ಅನ್ನುವುದು ಬಿಕ್ಕಟ್ಟಿನ ಕ್ಷಣದಲ್ಲಿ ನಿಮಗೆ ನೆನಪಿರಬೇಕು ~ ಟಿಕ್ ನಾಟ್ ಹಾನ್: ಗಮನ-ಪಾಕೆಟ್‌ ಬುಕ್‌, ಭಾಗ 3: ಭಾವ-ಸಂಬಂಧ । ವ್ಯಾಖ್ಯಾನ ಓ.ಎಲ್.ನಾಗಭೂಷಣ ಸ್ವಾಮಿ

ಭಾಗ 3.6: ಭಾವ-ಸಂಬಂಧ  ತೀವ್ರ ಭಾವಗಳಿಗೆ ಎದುರಾಗುವುದು

ತೀವ್ರವಾದ ಭಾವವೆಂಬುದು ಬಿರುಗಾಳಿಯ ಹಾಗೆ. ಬಿರುಗಾಳಿಗೆ ಸಿಕ್ಕಿದ ಮರವನ್ನು ನೋಡಿದರೆ ಅದರ ಮೇಲ್ಭಾಗ ಅತ್ತಿತ್ತ ಹೊಯ್ದಾಡುತ್ತಾ ಯಾವಾಗ ಬೇಕಾದರೂ ಮುರಿದು ಬೀಳಬಹುದು, ಬೇರು ಸಡಿಲವಾಗಿ ಮರವೇ ಬುಡ ಸಮೇತ ನೆಲಕ್ಕೆ ಒರಗಬಹುದು ಅನಿಸುತ್ತದೆ. ನಿಮ್ಮ ಗಮನ ಮರದ ಕಾಂಡದತ್ತ ಹೋದರೆ, “ಬೇರು ನೆಲದ ಆಳಕ್ಕೆ ಇಳಿದಿವೆ, ದೃಢವಾಗಿವೆ, ಮರ ದೃಢವಾಗಿದೆ, ಬೀಳದು” ಎಂದು ಹೊಳೆಯುತ್ತದೆ.

ನೀವೂ ಮರದ ಹಾಗೆ. ಭಾವದ ಬಿರುಗಾಳಿ ಎದ್ದಾಗ ನೀವು ತಲೆಯಲ್ಲೋ ಹೃದಯದಲ್ಲೋ ಇರಬಾರದು; ತಲೆ, ಹೃದಯಗಳು ಮರದ ಮೇಲ್ಭಾಗದ ಹಾಗೆ, ಬಿರುಗಾಳಿಯ ಬೀಸಿಗೆ ಒಡ್ಡಿಕೊಂಡಿರುವ ಹೃದಯವನ್ನು ಬಿಟ್ಟು ಮರದ ಕಾಂಡಕ್ಕೆ ಮರಳಿ ಅಲ್ಲಿ ನೆಲೆಸಬೇಕು ನೀವು.

ನಿಮ್ಮ ಕಾಂಡವೆನ್ನುವುದು ಹೊಕ್ಕುಳಿಗಿಂತ ಒಂದು ಸೆಂಟೀಮೀಟರ್‌ ಕೆಳಗಿರುತ್ತದೆ. ನಿಮ್ಮ ಗಮನವನ್ನು ಅಲ್ಲಿ ನೆಲೆಗೊಳಿಸಿ ಸಾವಕಾಶ ಉಸಿರಾಟ ಮುಂದುವರೆಸಬೇಕು. ಕಿಬ್ಬೊಟ್ಟೆಯಲ್ಲಿ ಆಗುತ್ತಿರುವ ಚಲನೆಗಳನ್ನು ಗಮನಿಸಬೇಕು. ಆಗ ಭಾವದ ಬಿರುಗಾಳಿ ನಿಮಗೆ ತೊಂದರೆ ಮಾಡದೆ ಹಾದು ಹೋಗುತ್ತದೆ.

ಯಾವುದೇ ಭಾವವೆಂಬುದು ಮೇಲೇಳುವ, ತುಸು ಹೊತ್ತು ಇರುವ, ಆಮೇಲೆ ಹೊರಟುಹೋಗುವ ಸಂಗತಿ ಅನ್ನುವುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಬಿರುಗಾಳಿಯೂ ಬರುತ್ತದೆ, ಸ್ವಲ್ಪ ಹೊತ್ತು ಇರುತ್ತದೆ, ಹೋಗುತ್ತದೆ. ನೀವು ಕೇವಲ ಭಾವವಲ್ಲ, ಭಾವಗಳಿಗಿಂತ ಮಿಗಿಲಾದವರು ಅನ್ನುವುದು ಬಿಕ್ಕಟ್ಟಿನ ಕ್ಷಣದಲ್ಲಿ ನಿಮಗೆ ನೆನಪಿರಬೇಕು.

ಈ ಸರಳ ಸಂಗತಿ ಎಲ್ಲರಿಗೂ ಗೊತ್ತು. ಆದರೂ ಅದನ್ನು ನೆನೆಯುವುದು ಮುಖ್ಯ: ನೀವು ನಿಮ್ಮ ಭಾವಗಳಿಗಿಂತ ಮಿಗಿಲಾದವರು. ಭಾವಗಳಿಗೆ ಹೇಗೆ ಒಡ್ಡಿಕೊಳ್ಳಬೇಕು ಅನ್ನುವುದು ಬಹಳಷ್ಟು ಜನಕ್ಕೆ ಅರಿವಿಲ್ಲ. ಹಾಗಾಗಿ ಅವರು ತಮ್ಮ ಭಾವಗಳಿಂದಲೇ ಸಂಕಟಪಡುತ್ತಾರೆ, ವೇದನೆಗೆ ಒಳಗಾಗುತ್ತಾರೆ. 

ಇಂಥ ಅನುಷ್ಠಾನ ಮಾಡಲು ಭಾವವು ತಲೆ ಎತ್ತುವವರೆಗೆ ಕಾಯಬಾರದು. ಹಾಗೆ ಮಾಡಿದೆ ಭಾವದ ಬಿರುಗಾಳಿ ನಿಮ್ಮನ್ನು ಹೊತ್ತೊಯ್ಯುತ್ತದೆ. ಈಗಲೇ, ಅಂದರೆ ಭಾವಗಳ ಚಲನೆ ಇಲ್ಲದಿರುವಾಗಲೇ ನೀವು ತರಬೇತಿ ಪಡೆಯಬೇಕು.

ಆರಾಮವಾಗಿ ಕುಳಿತು, ಅಥವಾ ಅಂಗಾತ ಮಲಗಿ ನಿಮ್ಮ ಉಸಿರಾಟವನ್ನು ಗಮನಿಸಿ. ನಿಮ್ಮ ಗಮನ ಕಿಬ್ಬೊಟ್ಟೆಯಲ್ಲಿ ಆಗುತ್ತಿರುವ ಚಲನೆಗಳ ಮೇಲೆ ಇರಲಿ. ದಿನಕ್ಕೆ ಹತ್ತು ನಿಮಿಷಗಳ ಕಾಲ, ಇಪ್ಪತ್ತು ದಿನಗಳವರೆಗೆ ಹೀಗೆ ಕಿಬ್ಬೊಟ್ಟೆಯಲ್ಲಿ ಆಗುವುದರ ಮೇಲೆ ಗಮನವಿರಿಸಿ, ಉಸಿರಾಟದ ಬಗ್ಗೆ ಎಚ್ಚರವಹಿಸಿಕೊಂಡರೆ ಸಾಕು. ಯಾವುದೇ ತೀವ್ರ ಭಾವ ಬೀಸಿ ಬಂದಾಗ ಎಚ್ಚರದ ಗಮನವನ್ನು ಹೇಗೆ ತಂದುಕೊಳ್ಳುವುದು ಎಂಬುದು ಗೊತ್ತಾಗುತ್ತದೆ. ಹತ್ತು ನಿಮಿಷ, ಹೆಚ್ಚೆಂದರೆ ಇಪ್ಪತ್ತು ನಿಮಿಷಗಳಲ್ಲಿ ಭಾವ ಹೊರಟು ಹೋಗುತ್ತದೆ, ನೀವು ಸುರಕ್ಷಿತವಾಗಿರುತ್ತೀರಿ.

*

ಇದೇ ಹೋಲಿಕೆಯನ್ನು ಬಳಸುವ ಈ ವಚನ/ವಚನ ಭಾಗಗಳು ನೆನಪಾದವು. ಅಲ್ಲಮವಚನವೊಂದರ ಮಾತು ಇವು:

ಬಿರುಗಾಳಿ ಬೀಸಿ ಮರ ಮುರಿವಂತಹ ಸುಳುಹ ಸುಳಿಯದೆ
ತಂಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯಬೇಕು
ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು
ನಿಂದಡೆ ನೆಟ್ಟನೆ ಭಕ್ತನಾಗಿ ನಿಲ್ಲಬೇಕು

೨ ಸೊಡ್ಡಳ ಬಾಚರ ವಚನ

ಬೀಸುವ ಬಿರುಗಾಳಿ ಬೀಸಬಾರದು ಬೀಸದಿರಬಾರದು
ಸುರಿವ ಮಳೆ ಸುರಿಯಬಾರದು ಸುರಿಯದಿರಬಾರದು
ಉರಿವ ಕಿಚ್ಚು ಉರಿಯಬಾರದು ಉರಿಯದಿರಬಾರದು
ಚಂದ್ರಸೂರ್ಯರು ನಿಂದಾಗಲೇ ಸಂದಿತ್ತು
ಸೊಡ್ಡಳಾ ನಿಮ್ಮ ರಾಜತೇಜದ ಮಹಿಮೆ.

[ಬಿರುಗಾಳಿ, ಮಳೆ, ಬೆಂಕಿ ಬೀಸದೆ, ಸುರಿಯದೆ, ಉರಿಯದೆ ಇರಲಾರವು. ನಾವು ಹಾಗೆ ಬೀಸಿ, ಸುರಿದು, ಉರಿದು ಹೋಗಬಾರದು. ಸೂರ್ಯಚಂದ್ರ-ಕಾಲವನ್ನು ನಿಲ್ಲಿಸಲು ಸಾಧ್ಯವಾದರೆ, ಗಮನ ನೆಲೆನಿಂತರೆ, ರಾಜತೇಜದ ಮಹಿಮೆ ತಿಳಿಯುವುದು.]

೩. ಇನ್ನೊಂದು ಅಲ್ಲಮವಚನ, ಸ್ವಲ್ಪ ವಿವರವಾಗಿದೆ:

ನಾನೆಂಬ ಅಹಂಕಾರ ತಲೆದೋರಿದಲ್ಲಿ
ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು
ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು.
ಜ್ಞಾನಜ್ಯೋತಿ ಕೆಡಲೊಡನೆ
ಬಲ್ಲಿದರೆಂಬ ಅರುಹಿರಿಯರೆಲ್ಲರು
ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ.

[ನಾನತ್ವ ಎಲೆ ಎತ್ತಿದಾಗಲೇ ಮೋಸ, ಕುಹಕ, ಸುಳ್ಳು, ಮೋಸಗಳ ಬಿರುಗಾಳಿ ಬೀಸಿ, ಅರಿವಿನ ಬೆಳಕು ಆರಿ ಹೋಗುತ್ತದೆ, ಆಗ ಬಲ್ಲೆವು ಅಂದುಕೊಳ್ಳುವ ಹಿರಿಯರೆಲ್ಲರೂ ಕತ್ತಲಿಗೆ ಸಿಲುಕಿ, ಗಡಿಮೀರಿ ವರ್ತಿಸಿ (ಸೀಮೆತಪ್ಪಿ) ಕೆಟ್ಟರು]

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.