ಆ ರಾತ್ರಿ ನಾಲ್ವರೂ ಅಣ್ಣತಂಗಿಯರು ತಡರಾತ್ರಿಯವರೆಗೆ ಎಚ್ಚರವಾಗಿದ್ದರು. ದೂರ ಹೋಗುತ್ತಿರುವ ತಂದೆಯಂತೆ ಸ್ವಸ್ತಿ ಅವರೆಲ್ಲರಿಗೂ ಒಬ್ಬರನ್ನೊಬ್ಬರು ಹೇಗೆ ನೋಡಿಕೊಳ್ಳಬೇಕು, ಮನೆಯನ್ನು ಹೇಗೆ ಸಂಭಾಳಿಸಬೇಕು ಎಂದೆಲ್ಲ ಸಲಹೆ ಸೂಚನೆಗಳನ್ನು ನೀಡಿದ. ತನ್ನ ಒಡಹುಟ್ಟಿದ ಜೀವಗಳನ್ನು ಬಹಳ ಪ್ರೀತಿಯಿಂದ ತಬ್ಬಿಕೊಂಡ. ಹಾಗೆ ತಬ್ಬಿಕೊಂಡಾಗ ಪುಟ್ಟ ಭೀಮಾ ಕಣ್ಣೀರು ತಡೆಯಲಾಗದೆ ಬಿಕ್ಕಿಬಿಕ್ಕಿ ಅತ್ತಳು. ಆದರೆ, ಬಹಳ ಬೇಗ ಸಾವರಿಸಿಕೊಂಡು ನಿಡಿದುಸಿರು ಎಳೆದುಕೊಂಡು ಅವನತ್ತ ನೋಡಿ ಮುಗುಳ್ನಕ್ಕಳು. ಸ್ವಸ್ತಿ ವಿಷಣ್ಣನಾಗುವುದು ಅವಳಿಗೆ ಬೇಕಿರಲಿಲ್ಲ... । ತಿ ನ್ಹಾತ್ ಹಾನ್, Old path white cloud; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
ನಡಿಗೆ, ನಡಿಗೆಗಾಗಿಯಷ್ಟೆ । ಧಮ್ಮದ ದಾರಿಯಲ್ಲಿ, ರಾಜಗೃಹದತ್ತ… #1.2
ರೂಪಕ ಮೈತೊಳೆದು ಶುಚಿ ಮಾಡಿದ್ದ ಒಂಭತ್ತು ಎಮ್ಮೆಗಳನ್ನು ಅವುಗಳ ಮಾಲೀಕನಾದ ರಾಮ್ ಬೋಲನ ಮನೆಯತ್ತ ಅಟ್ಟಿಕೊಂಡು ಹೋದ. ಬುದ್ಧನು ಸ್ವಸ್ತಿಯ ಗುಡಿಸಿಲಿನ ಅಂಗಳದಲ್ಲಿ ಒಂದು ಸಣ್ಣ ಮಣೆಯ ಮೇಲೆ ಕುಳಿತ. ಜೊತೆಯಲ್ಲಿದ್ದ ಬಿಕ್ಖುಗಳು ಅವನ ಹಿಂದೆ ನಿಂತರು. ಹುಲ್ಲಿನ ಚಾವಣಿ ಹೊದಿಸಿದ್ದ, ಮಣ್ಣಿನ ಗೋಡೆಯ ಆ ಪುಟ್ಟ ಮನೆಯೊಳಗೆ ಎಲ್ಲರೂ ಕೂರಲು ಸಾಕಾಗುವಷ್ಟು ಜಾಗವಿರಲಿಲ್ಲ.
“ಅಣ್ಣಾ, ನೀನು ದಯವಿಟ್ಟು ಬುದ್ಧನೊಂದಿಗೆ ಹೋಗು. ಈಗ ರೂಪಕನೂ ಸಾಕಷ್ಟು ಬೆಳೆದಿದಾನೆ, ಒಬ್ಬನೇ ಎಮ್ಮೆಗಳನ್ನು ನಿಭಾಯಿಸಬಲ್ಲಷ್ಟು ಬಲಶಾಲಿಯಾಗಿದಾನೆ. ಮನೆವಾಳ್ತೆ ನೋಡಿಕೊಳ್ಳಲು ನನಗಿರುವ ಅನುಭವವೇ ಸಾಕು. ಇಷ್ಟು ವರ್ಷ ನೀನು ನಮ್ಮೆಲ್ಲರನ್ನೂ ಸಾಕಿದೆ. ಈಗ ನಾವು ನಮ್ಮ ಬದುಕನ್ನು ನೋಡಿಕೊಳ್ಳುವಷ್ಟು ಬೆಳೆದಿದ್ದೀವಿ, ಸಮರ್ಥರಾಗಿದ್ದೀವಿ” ಬಾಲಾ ಸ್ವಸ್ತಿಗೆ ಹೇಳಿದಳು.
ಮಳೆನೀರನ್ನು ಹಿಡಿದಿಡುವ ಪೀಪಾಯಿಯ ಪಕ್ಕದಲ್ಲಿ ಕುಳಿತಿದ್ದ ಭೀಮಾ, ಒಂದು ಮಾತನ್ನೂ ಆಡದೆ ತನ್ನ ಅಕ್ಕನತ್ತ ನೋಡಿದಳು. ಸ್ವಸ್ತಿ ಭೀಮಾಳನ್ನು ನೋಡಿದ. ಅವಳಿನ್ನೂ ಮುದ್ದಾದ ಎಳೆಯ ಹುಡುಗಿ. ಸ್ವಸ್ತಿ ಬುದ್ಧನನ್ನು ಮೊದಲ ಸಲ ಭೇಟಿಯಾಗಿದ್ದಾಗ ಬಾಲಾಗೆ ಆರು ವರ್ಷ, ರೂಪಕನಿಗೆ ಮೂರು, ಮತ್ತು ಭೀಮಾ ಕೇವಲ ಎಳೆಗೂಸಾಗಿದ್ದಳು. ರೂಪಕ ಮರಳಿನಲ್ಲಿ ಆಟವಾಡುತ್ತಿದ್ದರೆ, ಬಾಲಾ ಅಡುಗೆ ಮಾಡುತ್ತಿದ್ದಳು.
ಅವರ ತಂದೆ ತೀರಿಕೊಂಡ ಆರು ತಿಂಗಳ ನಂತರ, ಅವರ ತಾಯಿ ಹೆರಿಗೆಯ ಸಮಯದಲ್ಲಿ ಅಸುನೀಗಿದ್ದಳು. ಇನ್ನೂ ಹನ್ನೊಂದು ವರ್ಷದ ಬಾಲಕನಾಗಿದ್ದ ಸ್ವಸ್ತಿಯೇ ಮನೆಯ ಜವಾಬ್ದಾರಿ ಹೊರಬೇಕಾಯಿತು. ಅವನು ಎಮ್ಮೆಕಾಯುವ ಕೆಲಸಕ್ಕೆ ಸೇರಿ ದುಡಿಮೆ ಶುರು ಮಾಡಿದ. ಕಷ್ಟಪಟ್ಟು ಕೆಲಸ ಮಾಡುತ್ತಿದ್ದ, ಸಂಪಾದನೆಯೂ ಸಾಕಷ್ಟಾಗುತ್ತಿತ್ತು. ಎಷ್ಟೆಂದರೆ, ಪುಟ್ಟ ಭೀಮಾಳಿಗಾಗಿ ಎಮ್ಮೆಯ ಹಾಲು ಕೊಳ್ಳಲು ಸಾಧ್ಯವಾಗುವಷ್ಟು.
ಅಣ್ಣ ತನ್ನ ಮುಖದ ಗೆರೆಗಳನ್ನು ಓದುತ್ತಿದ್ದಾನೆಂದು ಭೀಮಾಗೆ ಅನಿಸಿತು. ಕೂಡಲೇ ಅದನ್ನು ಮರೆಮಾಚಿ, ಮೆಲುದನಿಯಲ್ಲಿ “ಅಣ್ಣಾ, ನೀನು ಬುದ್ಧನೊಟ್ಟಿಗೆ ಹೋಗು” ಅನ್ನುತ್ತಾ, ಅವನಿಗೆ ತನ್ನ ಕಣ್ಣೀರು ಕಾಣದಂತೆ ಮುಖ ತಿರುಗಿಸಿಕೊಂಡಳು. ಬುದ್ಧನ ಬಳಿ ಧಮ್ಮವನ್ನು ಕಲಿಯಲು ಹೋಗಬೇಕೆಂದು ಸ್ವಸ್ತಿ ಆಗಾಗ ಹೇಳುತ್ತಿದ್ದುದು ಅವಳ ಕಿವಿಗೂ ಬಿದ್ದಿತ್ತು. ಅಣ್ಣನ ಆಸೆ ನೆರವೇರಲೆಂದು ಅವಳೂ ಬಯಸಿದ್ದಳಾದರೂ ಆ ಘಳಿಗೆ ಬಂದೇಬಿಟ್ಟಾಗ ದುಃಖ ಹತ್ತಿಕ್ಕಲು ಸಾಧ್ಯವಾಗಲಿಲ್ಲ.
ಭೀಮಾ “ಬುದ್ಧನೊಟ್ಟಿಗೆ ಹೋಗು” ಅಂದ ಮಾತು ಅದೇ ಸಮಯಕ್ಕೆ ಸರಿಯಾಗಿ ಮನೆಗೆ ಹಿಂದಿರುಗಿದ ರೂಪಕನ ಕಿವಿಗೂ ಬಿತ್ತು. ಅಣ್ಣನನ್ನು ಕಳಿಸಿಕೊಡುವ ಗಳಿಗೆ ಬಂದಿದೆ ಎಂದು ಅವನುಅರ್ಥ ಮಾಡಿಕೊಂಡ. “ಹೌದಣ್ಣ, ದಯವಿಟ್ಟು ನೀನು ಬುದ್ಧನೊಟ್ಟಿಗೆ ಹೋಗು” ಅಂದ.
ಇಡೀ ಕುಟುಂಬ ಮೌನಕ್ಕೆ ಶರಣಾಯಿತು. ರೂಪಕ ಬುದ್ಧನತ್ತ ನೋಡಿ, “ಗುರುದೇವ, ನಿಮ್ಮ ಸಂಘಕ್ಕೆ ಸೇರಿ ಧಮ್ಮವನ್ನು ಅಭ್ಯಾಸ ಮಾಡಲು ನನ್ನ ಅಣ್ಣನಿಗೆ ನೀವು ಅನುಮತಿ ಕೊಡ್ತೀರಲ್ಲವೆ? ನಾನು ನನ್ನ ಕುಟುಂಬವನ್ನು ನೋಡಿಕೊಳ್ಳುವಷ್ಟು ದೊಡ್ಡವನಾಗಿದ್ದೀನಿ, ಅದರ ಚಿಂತೆ ಇಲ್ಲ” ಅಂದ. ನಂತರ ಸ್ವಸ್ತಿಯತ್ತ ತಿರುಗಿ, “ಅಣ್ಣಾ, ಆಗಾಗ ಬಂದು ನಮ್ಮನ್ನು ನೋಡಿಕೊಂಡು ಹೋಗ್ತೀಯ ತಾನೆ? ದಯವಿಟ್ಟು ಬುದ್ಧನನ್ನು ಕೇಳು” ಅನ್ನುತ್ತ ಕಣ್ಣೀರು ನುಂಗಿಕೊಂಡ.
ಬುದ್ಧ ಎದ್ದುನಿಂತು ಭೀಮಾಳ ತಲೆಗೂದಲನ್ನು ಪ್ರೀತಿಯಿಂದ ಸವರಿದ. “ಮಕ್ಕಳೇ, ನೀವೀಗ ಊಟ ಮಾಡಿ. ನಾಳೆ ನಾವೆಲ್ಲರೂ ಒಟ್ಟಾಗಿ ರಾಜಗೃಹಕ್ಕೆ ಹೊರಡುತ್ತೀವಿ. ಬೆಳಗ್ಗೆ ನಾನು ಸ್ವಸ್ತಿಯನ್ನು ಕರೆದೊಯ್ಯಲು ಬರುತ್ತೀನಿ. ನಾನೂ ನನ್ನ ಜೊತೆಗಿರುವ ಬಿಕ್ಖುಗಳೂ ಈ ರಾತ್ರಿ ಬೋಧಿ ವೃಕ್ಷದ ಕೆಳಗೆ ವಿಶ್ರಮಿಸುತ್ತೀವಿ” ಅಂದ.
ಬಾಗಿಲನ್ನು ಸಮೀಪಿಸಿದ ಬುದ್ಧ, ಹಿಂತಿರುಗಿ ಸ್ವಸ್ತಿಯತ್ತ ನೋಡಿದ. “ನಾಳೆ ಬೆಳಗ್ಗೆ ಬರುವಾಗ ನೀನು ಏನನ್ನೂ ತರಬೇಕಿಲ್ಲ. ಉಟ್ಟ ಬಟ್ಟೆಯೊಂದೇ ಸಾಕು” ಅಂದ.
ಆ ರಾತ್ರಿ ನಾಲ್ವರೂ ಅಣ್ಣತಂಗಿಯರು ತಡರಾತ್ರಿಯವರೆಗೆ ಎಚ್ಚರವಾಗಿದ್ದರು. ದೂರ ಹೋಗುತ್ತಿರುವ ತಂದೆಯಂತೆ ಸ್ವಸ್ತಿ ಅವರೆಲ್ಲರಿಗೂ ಒಬ್ಬರನ್ನೊಬ್ಬರು ಹೇಗೆ ನೋಡಿಕೊಳ್ಳಬೇಕು, ಮನೆಯನ್ನು ಹೇಗೆ ಸಂಭಾಳಿಸಬೇಕು ಎಂದೆಲ್ಲ ಸಲಹೆ ಸೂಚನೆಗಳನ್ನು ನೀಡಿದ. ತನ್ನ ಒಡಹುಟ್ಟಿದ ಜೀವಗಳನ್ನು ಬಹಳ ಪ್ರೀತಿಯಿಂದ ತಬ್ಬಿಕೊಂಡ. ಹಾಗೆ ತಬ್ಬಿಕೊಂಡಾಗ ಪುಟ್ಟ ಭೀಮಾ ಕಣ್ಣೀರು ತಡೆಯಲಾಗದೆ ಬಿಕ್ಕಿಬಿಕ್ಕಿ ಅತ್ತಳು. ಆದರೆ, ಬಹಳ ಬೇಗ ಸಾವರಿಸಿಕೊಂಡು ನಿಡಿದುಸಿರು ಎಳೆದುಕೊಂಡು ಅವನತ್ತ ನೋಡಿ ಮುಗುಳ್ನಕ್ಕಳು. ಸ್ವಸ್ತಿ ವಿಷಣ್ಣನಾಗುವುದು ಅವಳಿಗೆ ಬೇಕಿರಲಿಲ್ಲ. ಎಣ್ಣೆ ದೀಪದ ಬೆಳಕು ಮಂದವಾಗಿದ್ದರೂ ಅವಳ ನಗುವಿನ ಹೊಳಪು ಕಾಣಲು ಸಾಕಾಗಿತ್ತು. ಅದನ್ನು ಕಂಡ ಸ್ವಸ್ತಿ ಸಮಾಧಾನಪಟ್ಟುಕೊಂಡ.
ಮರುದಿನ ಮುಂಜಾನೆ, ಸ್ವಸ್ತಿಯ ಸ್ನೇಹಿತೆ ಸುಜಾತಾ ಅವನಿಗೆ ವಿದಾಯ ಹೇಳಲು ಬಂದಳು. ಹಿಂದಿನ ದಿನ ಸಂಜೆ ಅವಳು ಹೊಳೆ ದಂಡೆಗೆ ಹೋಗುವಾಗ ಬುದ್ಧನನ್ನು ನೋಡಿದ್ದಳು. ಸ್ವಸ್ತಿ ಬಿಕ್ಖುಗಳ ಸಂಘವನ್ನು ಸೇರುತ್ತಿರುವ ಬಗ್ಗೆ ಅವನು ಅವಳಿಗೆ ಹೇಳಿದ್ದ. ಹಳ್ಳಿಯ ಮುಖಂಡನ ಮಗಳಾದ ಸುಜಾತಾ ಸ್ವಸ್ತಿಗಿಂತ ಎರಡು ವರ್ಷ ದೊಡ್ಡವಳು, ಗೌತಮನು ಬುದ್ಧನಾಗುವ ಮುನ್ನ ಅವಳೂ ಅವನನ್ನು ಭೇಟಿಯಾಗಿದ್ದಳು. ಸುಜಾತಾ ಸ್ವಸ್ತಿಗೆ ತನ್ನ ಜೊತೆ ಒಯ್ಯಲು ಒಂದು ಸಣ್ಣ ಔಷಧಿ ಮೂಲಿಕೆಗಳ ಡಬ್ಬಿಯನ್ನು ಕೊಟ್ಟಳು. ಅವರಿಬ್ಬರು ಇನ್ನೂ ಮಾತನಾಡುತ್ತಿರುವಾಗಲೇ ಬುದ್ಧ ಮತ್ತವನ ಶಿಷ್ಯರು ಅಲ್ಲಿಗೆ ಬಂದರು.
ಅಣ್ಣನನ್ನು ಬೀಳ್ಕೊಡಲೆಂದೇ ಸ್ವಸ್ತಿಯ ಒಡಹುಟ್ಟಿದವರು ಬಹಳ ಬೇಗ ಎದ್ದು ಕುಳಿತಿದ್ದರು. ರಾಹುಲ ಅವರೆಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಧೈರ್ಯ ತುಂಬಿದ. ತಾನು ಈ ಕಡೆ ಬಂದಾಗಲೆಲ್ಲಾ ಉರುವೇಲಕ್ಕೆ ಬಂದು ಅವರನ್ನು ಭೇಟಿಯಾಗುವುದಾಗಿ ಭರವಸೆ ನೀಡಿದ. ಸ್ವಸ್ತಿಯ ಕುಟುಂಬ ಮತ್ತು ಸುಜಾತಾ, ಬುದ್ಧ ಮತ್ತು ಬಿಕ್ಖುಗಳೊಂದಿಗೆ ನದಿಯ ದಡದವರೆಗೂ ನಡೆದುಬಂದರು. ತಲೆಬಾಗಿ ಕೈಮುಗಿದು ಬುದ್ಧ, ಬಿಕ್ಖುಗಳು, ರಾಹುಲ ಹಾಗೂ ಸ್ವಸ್ತಿಗೆ ವಿದಾಯ ಕೋರಿದರು.
(ಮುಂದುವರಿಯುವುದು)

