ಮೌನದ ಪಾಠ : ಜೆನ್ ಕ್ಷಣ #8

ನಿಜವಾದ ಮೌನವೆಂದರೆ ಕೇವಲ ಮಾತನಾಡದಿರುವುದಲ್ಲ; ಅಹಂಕಾರ, ಪೂರ್ವಾಗ್ರಹ ಮತ್ತು ತನ್ನನ್ನು ತಾನು ಶ್ರೇಷ್ಠನೆಂದು ಭಾವಿಸುವ ಮನೋಭಾವವನ್ನೂ ಶಾಂತಗೊಳಿಸುವುದು । ಡಾ. ಸಹನಾ ಪ್ರಿಯದರ್ಶಿನಿ

ಒಮ್ಮೆ ನಾಲ್ವರು ಭಿಕ್ಷುಗಳು ಎರಡು ವಾರಗಳ ಕಾಲ ಸಂಪೂರ್ಣ ಮೌನದಲ್ಲಿ  ಧ್ಯಾನ ಮಾಡುವ ಸಂಕಲ್ಪ ಮಾಡಿದರು. ಆ ಅವಧಿಯಲ್ಲಿ ಯಾರೂ ಒಂದು ಮಾತನ್ನೂ ಆಡಬಾರದು ಎಂದು ಅವರು ನಿರ್ಧರಿಸಿದರು.

ಮೊದಲ ದಿನದ ರಾತ್ರಿ, ಅವರ ಮುಂದೆ ಹೊತ್ತಿ ಉರಿಯುತ್ತಿದ್ದ ಮೊಂಬತ್ತಿ  ಮಿಣುಗುತ್ತಾ ನಿಧಾನವಾಗಿ ಆರಿಹೋಯಿತು.

ಮೊದಲ ಭಿಕ್ಷು ತಕ್ಷಣ,
“ಅಯ್ಯೋ! ಮೊಂಬತ್ತಿ ಆರಿಹೋಯಿತು!” ಎಂದು ಹೇಳಿದ.

ಅದಕ್ಕೆ ಎರಡನೇ ಭಿಕ್ಷು,
“ನಾವು ಮಾತನಾಡಬಾರದೆಂದು ಒಪ್ಪಿಕೊಂಡಿರಲಿಲ್ಲವೇ?” ಎಂದು ಕೇಳಿದ.

ಅದನ್ನು ಕೇಳಿದ ಮೂರನೇ ಭಿಕ್ಷು,
“ನೀವಿಬ್ಬರೂ ಏಕೆ ಮೌನವನ್ನು ಮುರಿದಿರಿ?” ಎಂದು ಗದರಿಸಿದ.

ಆಗ ನಾಲ್ಕನೇ ಭಿಕ್ಷು ನಗುತ್ತಾ ಹೇಳಿದ,
“ಹಾ! ನಾನು ಮಾತ್ರ ಮಾತನಾಡಲೇ ಇಲ್ಲ!”

ನಾಲ್ಕನೇ ಭಿಕ್ಷು ಆ ಮಾತು ಹೇಳಿದ ಕ್ಷಣವೇ, ಅವನೂ ತನ್ನ ಮೌನವನ್ನು ಮುರಿದಿದ್ದನು.

***

ಇತರರ ತಪ್ಪನ್ನು ತೋರಿಸುವ ಆತುರದಲ್ಲಿ ನಾವು ನಮ್ಮದೇ ತಪ್ಪನ್ನು ಗಮನಿಸುವುದಿಲ್ಲ. ನಿಜವಾದ ಮೌನವೆಂದರೆ ಕೇವಲ ಮಾತನಾಡದಿರುವುದಲ್ಲ; ಅಹಂಕಾರ, ಪೂರ್ವಾಗ್ರಹ ಮತ್ತು ತನ್ನನ್ನು ತಾನು ಶ್ರೇಷ್ಠನೆಂದು ಭಾವಿಸುವ ಮನೋಭಾವವನ್ನೂ ಶಾಂತಗೊಳಿಸುವುದು.   ನಾವು ಆಗಾಗ ಇತರರ ತಪ್ಪುಗಳನ್ನು ಗಮನಿಸಿ, ಅವರ ನಡೆ-ನುಡಿಗಳನ್ನು ವಿಮರ್ಶಿಸಲು ಸಮಯ ಕಳೆಯುತ್ತೇವೆ. ಆದರೆ ನಮ್ಮದೇ ವರ್ತನೆ, ಮಾತು ಮತ್ತು ಮನೋಭಾವವನ್ನು ಪರಿಶೀಲಿಸಲು ಮರೆತುಬಿಡುತ್ತೇವೆ. ಝೆನ್ ತತ್ವಶಾಸ್ತ್ರದ ಪ್ರಕಾರ, ನಿಜವಾದ ಬೆಳವಣಿಗೆ ಹೊರಗಿನ ಜಗತ್ತನ್ನು ಬದಲಾಯಿಸುವುದರಿಂದ ಅಲ್ಲ, ನಮ್ಮೊಳಗಿನ ಮನಸ್ಸನ್ನು ಅರಿತು ಅದನ್ನು ರೂಪಿಸಿಕೊಳ್ಳುವುದರಿಂದ ಆರಂಭವಾಗುತ್ತದೆ. ಆತ್ಮಾವಲೋಕನ, ವಿನಯ ಮತ್ತು ಜಾಗೃತ ಮನಸ್ಸು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಶ್ರೇಷ್ಠ ಗುಣಗಳು. ವಿದ್ಯಾರ್ಥಿಗಳಾಗಿ, ಪ್ರತಿಯೊಂದು ದಿನವೂ “ಇಂದು ನಾನು ಏನು ಕಲಿತೆ? ನಾನು ಎಲ್ಲಿ ತಪ್ಪಿದೆ? ನಾನು ಹೇಗೆ ಉತ್ತಮ ವ್ಯಕ್ತಿಯಾಗಬಹುದು?” ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇತರರ ತಪ್ಪುಗಳನ್ನು ಹುಡುಕುವ ಕಣ್ಣಿಗಿಂತ, ನಮ್ಮನ್ನು ನಾವು ಅರಿತುಕೊಳ್ಳುವ ಮನಸ್ಸು ಅಮೂಲ್ಯವಾದುದು. ಏಕೆಂದರೆ ಯಶಸ್ಸು, ಜ್ಞಾನ ಮತ್ತು ನಿಜವಾದ ಸಂತೋಷ ಎಲ್ಲವೂ ಆತ್ಮಜ್ಞಾನದಿಂದಲೇ ಆರಂಭವಾಗುತ್ತವೆ.

ಇತರರನ್ನು ಬದಲಾಯಿಸಲು ಪ್ರಯತ್ನಿಸುವ ಮೊದಲು, ನಮ್ಮ ಮನಸ್ಸನ್ನು ಅಹಂಕಾರ, ಪೂರ್ವಗ್ರಹ ಮತ್ತು ‘ನಾನೇ ಶ್ರೇಷ್ಠ’ ಎಂಬ ಭಾವನೆಯಿಂದ ಮುಕ್ತಗೊಳಿಸೋಣ. ಮನಸ್ಸು ಖಾಲಿಯಾದಾಗಲೇ ಹೊಸ ಜ್ಞಾನವನ್ನು ಸ್ವೀಕರಿಸಲು ಸಾಧ್ಯ; ಆಗಲೇ ನಿಜವಾದ ಶಾಂತಿ ಮತ್ತು ಪ್ರಜ್ಞೆ ನಮ್ಮೊಳಗೆ ಅರಳುತ್ತದೆ.


(ಲೇಖಕರು ಇಂಗ್ಲಿಶ್ ಪ್ರಾಧ್ಯಾಪಕರು, ಬೆಂಗಳೂರು)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.