1980ರ ದಶಕದಲ್ಲಿ ಓಲ್ಡೆನ್‌ಬರ್ಗ್, ನಮ್ಮ ಜೀವನದ ‘ಮೂರನೇ ಜಾಗ’ ಎಂಬ ಪರಿಕಲ್ಪನೆಯನ್ನು ವಿವರಿಸಿದರು. ಮೂರನೇ ಜಾಗ ಎಂದರೆ, ನಮ್ಮ ಮನೆ ಅಥವಾ ಕೆಲಸದ ಸ್ಥಳವನ್ನು ಹೊರತುಪಡಿಸಿ, ನಾವು ಇತರರನ್ನು ಭೇಟಿಯಾಗುವ ಬೇರೆ ಯಾವುದೇ ಸ್ಥಳ… । ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನಿಮ್ಮ ಅಪ್ಪ ಅಮ್ಮಂದಿರಿಗಿಂತ, ಅಜ್ಜ ಅಜ್ಜಿಯರಿಗಿಂತ ನಿಮಗೆ ಬಹುಶಃ ಬಹಳ ಕಡಿಮೆ ಸ್ನೇಹಿತರಿರಬಹುದು. ನಾವು ದಿನದಿಂದ ದಿನಕ್ಕೆ ಹೆಚ್ಚು ಒಂಟಿಯಾಗುತ್ತಾ, ಸಾಮಾಜಿಕವಾಗಿ ಹೆಚ್ಚು ಪ್ರತ್ಯೇಕವಾಗುತ್ತಾ ಹೋಗುತ್ತಿದ್ದೇವೆ ಎನ್ನುವುದನ್ನ ಅಧ್ಯಯನಗಳ ಮೇಲೆ ಅಧ್ಯಯನಗಳು ತೋರಿಸಿ ಕೊಟ್ಟಿವೆ. ಹಲವು ವಿಭಿನ್ನ ದೇಶಗಳಲ್ಲಿಯೂ ನಮಗೆ ಇದೇ ಪ್ರವೃತ್ತಿ ಎದ್ದು ಕಾಣಿಸುತ್ತದೆ. ನಾವು ಹಿಂದೆಂದಿಗಿಂತಲೂ ಇಂದು ಬಹಳ ಕಡಿಮೆ ಸ್ನೇಹಿತರನ್ನು ಹೊಂದಿದ್ದೇವೆ ಮತ್ತು ಅವರನ್ನು ಬಹಳ ಕಡಿಮೆ ಬಾರಿ ಭೇಟಿಯಾಗುತ್ತಿದ್ದೇವೆ. ಇದಕ್ಕೆ ಸಾಮಾನ್ಯವಾಗಿ ಹೇಳಲಾಗುವ ಪ್ರಮುಖ ಕಾರಣಗಳಲ್ಲಿ ಒಂದು, ರೇ ಓಲ್ಡೆನ್‌ಬರ್ಗ್ (Ray Oldenburg) ಅವರು ‘ಮೂರನೇ ಜಾಗಗಳು’ (Third Spaces) ಎಂದು ಕರೆಯುತ್ತಿದ್ದ ಜಾಗಗಳ ಕೊರತೆ.
1980ರ ದಶಕದಲ್ಲಿ ಓಲ್ಡೆನ್‌ಬರ್ಗ್, ನಮ್ಮ ಜೀವನದ ‘ಮೂರನೇ ಜಾಗ’ ಎಂಬ ಪರಿಕಲ್ಪನೆಯನ್ನು ವಿವರಿಸಿದರು. ಮೂರನೇ ಜಾಗ ಎಂದರೆ, ನಮ್ಮ ಮನೆ ಅಥವಾ ಕೆಲಸದ ಸ್ಥಳವನ್ನು ಹೊರತುಪಡಿಸಿ, ನಾವು ಇತರರನ್ನು ಭೇಟಿಯಾಗುವ ಬೇರೆ ಯಾವುದೇ ಸ್ಥಳ.
ಮನೆ , ನಮ್ಮ ಮೊದಲ ಜಾಗ. ಅಲ್ಲಿ ನಾವು ಕುಟುಂಬದವರು ಅಥವಾ ನಮ್ಮೊಂದಿಗೆ ವಾಸಿಸುವವರೊಂದಿಗೆ ಜೀವನ ನಡೆಸುತ್ತೇವೆ. ಕೆಲಸದ ಜಾಗ, ನಮ್ಮ ಎರಡನೇ ಸ್ಥಳ. ಅಲ್ಲಿ ನಾವು ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತೇವೆ, ಮೀಟಿಂಗ್ ಗಳನ್ನು ಮಾಡುತ್ತೇವೆ ಮತ್ತು ಕೆಲಸ ಮಾಡುತ್ತೇವೆ. ಈ ಎರಡೂ ಸ್ಥಳಗಳಲ್ಲಿಯೂ ಒಂದು ನಿರ್ದಿಷ್ಟ ರೀತಿಯಲ್ಲಿ ನಡೆದುಕೊಳ್ಳುವ ಕ್ರಮವಿರುತ್ತದೆ. ಇಲ್ಲಿ ಹೇಗೆ ಮಾತನಾಡಬೇಕು, ಹೇಗೆ ಯೋಚಿಸಬೇಕು, ಕೆಲವೊಮ್ಮೆ ಹೇಗೆ ಭಾವಿಸಬೇಕು ಎನ್ನುವುದಕ್ಕೂ ಒಂದು ರೀತಿಯ ನಿಯಮಗಳಿರುತ್ತವೆ. ಖಂಡಿತವಾಗಿ, ಈ ಎರಡೂ ಜಾಗಗಳು ನಮಗೆ ಅವಶ್ಯಕ. ಬದುಕಿನಲ್ಲಿ ಬೆಳೆಯಲು ನಮಗೆ ಮನೆ ಮತ್ತು ಕುಟುಂಬ ಬೇಕು. ಕೆಲಸ ಮತ್ತು ಸಹೋದ್ಯೋಗಿಗಳೂ ಬೇಕು.
ಆದರೆ ನಮಗೆ ಸ್ನೇಹಿತರನ್ನು ಭೇಟಿಯಾಗಲು ಒಂದು ‘ಮೂರನೇ ಜಾಗ’ ಕೂಡ ಬೇಕು. ಅದು ಒಂದು ಕಾಫಿ ಶಾಪ್ ಆಗಿರಬಹುದು, ಪಬ್ ಆಗಿರಬಹುದು, ಗ್ರಂಥಾಲಯವಾಗಿರಬಹುದು, ಪುಸ್ತಕದ ಅಂಗಡಿಯಾಗಿರಬಹುದು, ಸಂಜೆ ನಡೆಯುವ ಯಾವುದಾದರೂ ತರಗತಿಯಾಗಿರಬಹುದು, ಅಥವಾ ಇನ್ಯಾವುದೇ ಸ್ಥಳವಾಗಿರಬಹುದು.
ನಮಗೆ ಇತರರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳಲು, ಹೊಸ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ ಸ್ವಲ್ಪ ಹೊತ್ತು ಸಹಜವಾಗಿ ಹರಟೆ ಹೊಡೆಯಲು, ಮನಸ್ಸು ಬಿಚ್ಚಿ ಮಾತನಾಡಲು ಒಂದು ಜಾಗ ಬೇಕು. ಅಂತಹ ಸ್ಥಳಗಳೇ ನಮ್ಮ ಜೀವನಕ್ಕೆ ಸಾಮಾಜಿಕ ಸಂಪರ್ಕವನ್ನು, ಸ್ನೇಹವನ್ನು ಮತ್ತು ಒಂದು ರೀತಿಯ ಸಮುದಾಯದ ಭಾವನೆಯನ್ನು ನೀಡುತ್ತವೆ.
ಆದರೆ ಸಮಸ್ಯೆ ಏನೆಂದರೆ, ತಂತ್ರಜ್ಞಾನ ಹಾಗೂ ವಿವಿಧ ರಾಜಕೀಯ ಮತ್ತು ಸಾಂಸ್ಕೃತಿಕ ಕಾರಣಗಳಿಂದಾಗಿ, ಈ ‘ಮೂರನೇ ಜಾಗಗಳು’ ನಿಧಾನವಾಗಿ ಕಣ್ಮರೆಯಾಗುತ್ತಿವೆ ಅಥವಾ ಕಡಿಮೆಯಾಗುತ್ತಿವೆ. ಅವುಗಳ ಬದಲಿಗೆ ನಾವು ಸಾಮಾಜಿಕ ಮಾಧ್ಯಮ, ಆನ್‌ಲೈನ್ ಗೇಮಿಂಗ್, ಟೆಕ್ಸ್ಟ್ ಮೆಸೇಜ್‌ಗಳು ಅಥವಾ ಇಂಟರ್ನೆಟ್ ಅನ್ನು ಬಳಸುತ್ತಿದ್ದೇವೆ. ಆದರೆ ಅವುಗಳು ಆ ಕೊರತೆಯನ್ನು ಸಂಪೂರ್ಣವಾಗಿ ತುಂಬಲು ಸಾಧ್ಯವಿಲ್ಲ. ನಮ್ಮ ಸುತ್ತಲಿರುವ ಈ ‘ಮೂರನೇ ಜಾಗಗಳಿಗೆ’ ನಾವು ಇನ್ನಷ್ಟು ಗಂಭೀರವಾಗಿ ಮಹತ್ವ ನೀಡಬೇಕಾಗಿದೆ. ನಮ್ಮ ಮನೆಗೂ ಸೇರದ, ನಮ್ಮ ಕೆಲಸದ ಸ್ಥಳವೂ ಅಲ್ಲದ ಯಾವುದಾದರೂ ಒಂದು ಸ್ಥಳದಲ್ಲಿ ಇತರ ಜನರೊಂದಿಗೆ ಸಂಪರ್ಕ ಮತ್ತು ಬಾಂಧವ್ಯ ಬೆಳೆಸಿಕೊಳ್ಳಲು ನಾವು ಮನಸ್ಸು ಮಾಡಬೇಕು. ಏಕೆಂದರೆ, ನಾವು ತುಂಬಾ ಕಳೆದುಕೊಂಡಿರುವ ಆಳವಾದ ಮಾನವ ಸಂಬಂಧಗಳನ್ನು ನಿಜವಾಗಿಯೂ ಬೆಳೆಸಿಕೊಳ್ಳಲು ಸಾಧ್ಯವಾಗುವುದು ಅಂತಹ ಜಾಗಗಳಲ್ಲಿಯೇ.

