ಜಗತ್ತು ಒಂದು ಎಚ್ಚರದ ಕನಸು : ಶ್ರೀರಾಮ – ವಸಿಷ್ಠರ ಸಂವಾದ

“ಈ ಜಗತ್ತು ಕನಸೇ ಆಗಿದ್ದರೆ, ಮನುಷ್ಯ ಇಲ್ಲಿ ಹೇಗೆ ಬಾಳಬೇಕು? ಯಾವ ರೀತಿ ವ್ಯವಹರಿಸಬೇಕು?” ಎಂಬ ಪ್ರಶ್ನೆಗೆ ವಸಿಷ್ಠರ ಉತ್ತರ… । ಮೂಲ : ಯೋಗ ವಾಸಿಷ್ಠ; ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ

ವಸಿಷ್ಠ: ರಾಮ, ನೀನು ‘ಜಗತ್ತು’ ಎಂದು ಕರೆಯುವುದು ಬೇರೇನೂ ಅಲ್ಲ, ಅದು ನಿನ್ನ ಮನಸ್ಸಿನ ಪ್ರತಿಬಿಂಬವಷ್ಟೇ. ಶಾಂತ ಮನಸ್ಸಿಗೆ ಜಗತ್ತು ದುಃಖದ ಮೂಲವಾಗಿ ತೋರುವುದಿಲ್ಲ. ಹೇಳು, ನಿನ್ನನ್ನು ನಿಜವಾಗಿ ಬಂಧಿಸಿರುವುದು ಯಾವುದು?

ರಾಮ: ಗುರುವರ್ಯ, ನನಗೇನೋ ಈ ಹುಟ್ಟು ಯಾವತ್ತೂ ಸುಖ – ದುಃಖಗಳ ನಿರಂತರ ಚಕ್ರವೆಂದೇ ಅನಿಸುತ್ತದೆ. ವಿಷಯ ವಾಸನೆಗಳು ಸತ್ಯವೆಂದು ತೋರಿ ಮನಸ್ಸು ಅವುಗಳಿಗೆ ಅಂಟಿಕೊಳ್ಳುತ್ತದೆ. ಇದರಿಂದಾಗಿ ನಾನು ಕಷ್ಟ ಅನುಭವಿಸುತ್ತಿದ್ದೇನೆ. ಇವೆಲ್ಲವೂ ನಿಜವೆಂದು ತೋರುತ್ತಿರುವಾಗ, ಈ ಮಾಯೆಯನ್ನು ದಾಟುವುದು ಹೇಗೆ?

ವಸಿಷ್ಠ: ರಾಮ, ನೀನು ನಿದ್ರಿಸುವಾಗ ಕನಸಿನ ಜಗತ್ತು, ಅಲ್ಲಿನ ಬೆಟ್ಟ ಗುಡ್ಡಗಳು, ನದಿಗಳು, ಸುಖ ದುಃಖಗಳು ಎಲ್ಲವೂ ಸತ್ಯವೆಂದೇ ಅನಿಸುತ್ತವೆ. ಆದರೆ ಎಚ್ಚರಗೊಂಡಾಗ ಅವು ಎಲ್ಲಿಗೆ ಹೋಗುತ್ತವೆ? ನೀನು ಎಚ್ಚರಗೊಂಡಾಗ ಅವು ಯಾವುವೂ ಇರುವುದಿಲ್ಲ, ಆದರೆ ಅವೆಲ್ಲವನ್ನೂ ಕಂಡ ನೀನು ಇರುತ್ತೀಯೆ. ಅದೇ ರೀತಿ ಈ ಜಗತ್ತು ಒಂದು ಎಚ್ಚರದ ಕನಸು. ನೀನು ನಿತ್ಯನಾದ ಶುದ್ಧಾತ್ಮ – ಚೈತನ್ಯ ಸ್ವರೂ. ಇದನ್ನು ಅರಿತು ಜಾಗೃತನಾದಾಗ, ಮಾಯೆ ತಾನಾಗಿಯೇ ಕರಗಿ ಹೋಗುತ್ತದೆ.

ರಾಮ: ಈ ಜಗತ್ತು ಕನಸೇ ಆಗಿದ್ದರೆ, ಮನುಷ್ಯ ಇಲ್ಲಿ ಹೇಗೆ ಬಾಳಬೇಕು? ಯಾವ ರೀತಿ ವ್ಯವಹರಿಸಬೇಕು?

ವಸಿಷ್ಠ: ರಂಗಭೂಮಿಯ ಮೇಲೆ ಅಭಿನಯಿಸುವ ನಟನಂತೆ ಬಾಳಬೇಕು. ನಿನ್ನ ಪಾತ್ರವನ್ನು ಶ್ರದ್ಧೆಯಿಂದ, ಸಂಪೂರ್ಣವಾಗಿ ನಿಭಾಯಿಸು; ಆದರೆ ನಿನ್ನ ಮನಸ್ಸಿನಲ್ಲಿ ನೀನು ಆ ಪಾತ್ರವಲ್ಲ ಎಂಬ ಅರಿವಿರಲಿ. ಫಲದ ಆಸೆಯಿಲ್ಲದೆ ನಿನ್ನ ಕರ್ತವ್ಯಗಳನ್ನು ಮಾಡು, ಆಂತರಂಗದಲ್ಲಿ ಸದಾ ಮುಕ್ತನಾಗಿರು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.