ನೀವು ಪೂರ್ಣರಾಗಲು ಬಯಸಿದರೆ, ಬುದ್ಧನ ಸಂದೇಶ ಸರಳವಾಗಿದೆ: ಖಾಲಿಯಾಗಿರಿ. ಏನೂ ಇಲ್ಲದಂತಾಗಿರಿ. ಕೇವಲ ಶೂನ್ಯತೆಯಾಗಿರಿ ~ ಓಶೋ / Zen Zest Zip Zap and Zing । ಕನ್ನಡಕ್ಕೆ: ಚಿದಂಬರ ನರೇಂದ್ರ
ನೆನಪಿಡಿ, ಬಾವಿ ಎಂದಿಗೂ ಬತ್ತುವುದಿಲ್ಲ. ಏಕೆಂದರೆ, ಆಳದಲ್ಲಿ ಬಾವಿಯು ಎಲ್ಲ ಸಾಗರಗಳೊಂದಿಗೆ ಸಂಪರ್ಕ ಹೊಂದಿರುತ್ತದೆ. ಸಾಗರಗಳು ಸಣ್ಣ ಸಣ್ಣ ಅಂತರ್ಜಲದ ಬುಗ್ಗೆಗಳ ಮೂಲಕ ನಿರಂತರವಾಗಿ ಬಾವಿಯನ್ನು ತಲುಪುತ್ತಿರುತ್ತವೆ. ವಾಸ್ತವವಾಗಿ, ನೀವು ಬಾವಿಯಿಂದ ನೀರನ್ನು ಸೇದದೆ ಹೋದರೆ, ಆ ಬಾವಿ ಸೊರಗಿಹೋಗುತ್ತದೆ. ಏಕೆಂದರೆ, ಶೀಘ್ರದಲ್ಲೇ ಆ ಬುಗ್ಗೆಗಳ ಅಗತ್ಯವೇ ಇಲ್ಲದಂತಾಗುತ್ತದೆ; ಅವು ಮುಚ್ಚಿಹೋಗುತ್ತವೆ. ಅವು ಬಳಕೆಯಲ್ಲಿಲ್ಲದೆ, ತಮ್ಮ ಕಾರ್ಯವನ್ನು ಕಳೆದುಕೊಳ್ಳುತ್ತವೆ. ಬಾವಿಯಲ್ಲಿರುವ ಹಳೆಯ ನೀರು ನಿಂತುಹೋಗಿ, ಕೊಳೆತು, ನಿರ್ಜೀವವಾಗಬಹುದು; ಬಹುಶಃ ವಿಷಕಾರಿಯಾಗಲೂಬಹುದು. ಆದ್ದರಿಂದ, ಬಾವಿಯ ಒಳಿತಿಗಾಗಿ ಅದರಿಂದ ನೀರನ್ನು ಸೇದುತ್ತಲೇ ಇರುವುದು ಒಳ್ಳೆಯದು. ನೀವು ಎಷ್ಟು ಹೆಚ್ಚು ನೀರನ್ನು ಹೊರತೆಗೆಯುತ್ತೀರೋ, ಅಷ್ಟು ಹೆಚ್ಚು ತಾಜಾ ನೀರಿನ ಬುಗ್ಗೆಗಳು ಬಾವಿಯನ್ನು ತಲುಪುತ್ತಲೇ ಇರುತ್ತವೆ. ಏಕೆಂದರೆ, ಬಾವಿಯು ಅಸ್ತಿತ್ವದಿಂದ ಬೇರ್ಪಟ್ಟಿಲ್ಲ.
ನಿಮ್ಮ ಹೃದಯವೂ ಖಂಡಿತವಾಗಿಯೂ ಒಂದು ಬಾವಿಯಂತೆಯೇ. ನೀವು ಅದನ್ನು ಮುಚ್ಚಿಟ್ಟುಕೊಂಡರೆ, ವಿಶ್ವದಿಂದ ನಿಮ್ಮೊಳಗೆ ಶಕ್ತಿಯ ಪ್ರವಾಹ ಹರಿದುಬರಲು ಸಾಧ್ಯವಾಗುವುದಿಲ್ಲ. ನಿಮ್ಮನ್ನು ನೀವು ನಿರಂತರವಾಗಿ ಬರಿದಾಗಿಸಿಕೊಳ್ಳುತ್ತಿರಿ. ಆಗ ನಿಮಗೆ ಒಂದು ಮಹತ್ತರವಾದ ಆಶ್ಚರ್ಯ ಕಾದಿದೆ ಎನ್ನುವುದನ್ನು ಕಂಡು ನೀವು ಬೆರಗಾಗುವಿರಿ:
ನೀವು ಎಷ್ಟು ಹೆಚ್ಚು ಖಾಲಿಯಾಗುತ್ತೀರೋ, ಅಷ್ಟು ಹೆಚ್ಚು ಪೂರ್ಣರಾಗುತ್ತೀರಿ.
ಅದಕ್ಕಾಗಿಯೇ ಗೌತಮ ಬುದ್ಧನು ‘ಶೂನ್ಯ’ ಎಂಬ ಪದಕ್ಕೆ, ಅಂದರೆ ‘ಸೊನ್ನೆ’ಗೆ, ಅಷ್ಟೊಂದು ಮಹತ್ವ ನೀಡಿದ.
ಸೊನ್ನೆಯಾಗಿರಿ! ಖಾಲಿಯಾಗಿರಿ !
ನೀವು ಪೂರ್ಣರಾಗಲು ಬಯಸಿದರೆ, ಬುದ್ಧನ ಸಂದೇಶ ಸರಳವಾಗಿದೆ: ಖಾಲಿಯಾಗಿರಿ. ಏನೂ ಇಲ್ಲದಂತಾಗಿರಿ. ಕೇವಲ ಶೂನ್ಯತೆಯಾಗಿರಿ. ಏನನ್ನೂ ಒಳಗೊಂಡಿರದ, ಪರಿಶುದ್ಧವಾದ, ಅಪರಿಮಿತವಾದ ವಿಶಾಲ ಅವಕಾಶವಾಗಿರಿ. ನಿಮ್ಮನ್ನು ನೀವು ಸಂಪೂರ್ಣವಾಗಿ ಖಾಲಿ ಮಾಡಿಕೊಳ್ಳಿರಿ. ಆಗ ನಡೆಯುವ ಅದ್ಭುತವನ್ನು ನಂಬುವುದು ನಿಮಗೆ ಸಾಧ್ಯವಾಗುವುದಿಲ್ಲ. ನೀವು ಸಂಪೂರ್ಣವಾಗಿ ಖಾಲಿಯಾದಾಗ, ಇಡೀ ಅಸ್ತಿತ್ವವೇ ನಿಮ್ಮೊಳಗೆ ಪ್ರವೇಶಿಸುತ್ತದೆ. ಎಲ್ಲ ನಕ್ಷತ್ರಗಳೂ ನಿಮ್ಮೊಳಗಿವೆ. ಎಲ್ಲ ಹೂವುಗಳೂ ನಿಮ್ಮೊಳಗಿವೆ. ಸೂರ್ಯ ಮತ್ತು ಚಂದ್ರರೂ ನಿಮ್ಮೊಳಗಿದ್ದಾರೆ. ಆಗ, ಇದ್ದಕ್ಕಿದ್ದಂತೆ, ನೀವು ಇಡೀ ವಿಶ್ವದಷ್ಟೇ ವಿಶಾಲರಾಗಿರುವುದನ್ನು ಕಾಣುತ್ತೀರಿ.
ಏನೂ ಅಲ್ಲದಿರುವುದೇ ಎಲ್ಲವೂ ಆಗುವ ಏಕೈಕ ಮಾರ್ಗ.
ಯಾರೂ ಅಲ್ಲದಿರುವುದೇ ದೈವಿಕರಾಗುವ ಏಕೈಕ ಮಾರ್ಗ.
ಶೂನ್ಯತೆಯು ದೈವತ್ವವನ್ನು ತರುತ್ತದೆ.
ಮತ್ತು ನಿಮ್ಮ ಪ್ರೀತಿ ಕಳೆದುಹೋಗುತ್ತದೆ ಎಂದು ಚಿಂತಿಸಬೇಡಿ. ಯಾವುದೂ ಎಂದಿಗೂ ಕಳೆದುಹೋಗುವುದಿಲ್ಲ. ಈ ಜಗತ್ತಿನಲ್ಲಿ ಪ್ರತಿಯೊಂದರ ಪ್ರಮಾಣವೂ ಯಾವಾಗಲೂ ಒಂದೇ ಆಗಿರುತ್ತದೆ; ಕಡಿಮೆಯೂ ಅಲ್ಲ, ಹೆಚ್ಚೂ ಅಲ್ಲ. ಇದು ಈಗ ಒಂದು ವೈಜ್ಞಾನಿಕ ಸತ್ಯವೂ ಹೌದು: ಹಿಂದೆ ಇದ್ದುದಕ್ಕಿಂತ ಒಂದೇ ಒಂದು ಪರಮಾಣುವೂ ಕಡಿಮೆಯಾಗಿಲ್ಲ; ಹಿಂದೆ ಇದ್ದುದಕ್ಕಿಂತ ಒಂದೇ ಒಂದು ಪರಮಾಣುವೂ ಹೆಚ್ಚಾಗಿಲ್ಲ. ವಿಶ್ವದ ಒಟ್ಟು ಪ್ರಮಾಣವು ಸಂಪೂರ್ಣವಾಗಿ ಅದೇ ಆಗಿ ಉಳಿದಿದೆ. ಏಕೆಂದರೆ, ಹೊಸದಾಗಿ ಯಾವುದಾದರೂ ಬರಲು ಸಾಧ್ಯವಿರುವ ಬೇರೆ ಸ್ಥಳ ಎಲ್ಲಿದೆ? ಅಸ್ತಿತ್ವವೇ ಎಲ್ಲವನ್ನೂ ಒಳಗೊಂಡಿದೆ; ‘ಬೇರೆಲ್ಲಿಯೂ’ ಎಂಬುದೇ ಇಲ್ಲ.
ಹಾಗಾದರೆ ಯಾವುದಾದರೂ ಹೊರಗೆ ಹೋಗಲು ಸಾಧ್ಯವಿರುವ ಸ್ಥಳ ಎಲ್ಲಿದೆ? ಹೋಗಲು ಬೇರೆಲ್ಲಿಯೂ ಸ್ಥಳವಿಲ್ಲ. ಆದ್ದರಿಂದ, ಯಾವುದೂ ಎಂದಿಗೂ ಕಳೆದುಹೋಗುವುದಿಲ್ಲ. ಬಹುಶಃ ಅದು ಸರಿಯಾದ ವ್ಯಕ್ತಿಯನ್ನು ತಲುಪಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಅದು ತಲುಪಿಯೇ ತಲುಪುತ್ತದೆ.
ಹಾಡನ್ನು ಹಾಡುತ್ತಿರಿ. ಚಿಂತಿಸಬೇಡಿ!
ಅದು ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಗಳನ್ನು ತಲುಪುತ್ತದೆ. ಇಂದು ತಲುಪದಿದ್ದರೆ ನಾಳೆ ತಲುಪಬಹುದು. ನಿಮ್ಮ ಜೀವಿತಾವಧಿಯಲ್ಲಿ ತಲುಪದಿದ್ದರೆ, ಬೇರೆ ಯಾವುದೋ ಸಮಯದಲ್ಲಿ ತಲುಪಬಹುದು. ಆದರೆ ಅದು ತಲುಪುತ್ತದೆ, ತಲುಪಲೇಬೇಕು! ಅದನ್ನು ಸ್ವೀಕರಿಸಬಲ್ಲ ಸರಿಯಾದ ವ್ಯಕ್ತಿಯನ್ನು ಅದು ಯಾವಾಗಲೂ ಕಂಡುಕೊಳ್ಳುತ್ತದೆ.
ನೀವು ಮಾಡಬೇಕಾದದ್ದು ಸರಳವಾಗಿ ಹಾಡನ್ನು ಹಾಡುವುದು ಮಾತ್ರ. ಅದು ಯಾರನ್ನು ತಲುಪುತ್ತದೆ ಎನ್ನುವುದರ ಬಗ್ಗೆ ನೀವು ಅತಿಯಾಗಿ ಚಿಂತಿಸಬಾರದು.
ನಿಮ್ಮ ಸಂಪೂರ್ಣ ಗಮನ ಇರಬೇಕಾದದ್ದು ಒಂದೇ ವಿಷಯದ ಮೇಲೆ: ನೀವು ಆ ಹಾಡನ್ನು ಸಂಪೂರ್ಣ ಸಮರ್ಪಣೆಯಿಂದ ಹಾಡುತ್ತಿದ್ದೀರಾ ಎನ್ನುವುದರ ಮೇಲೆ. ಅಷ್ಟೇ. ಅದಕ್ಕಿಂತ ಹೆಚ್ಚಿನದನ್ನು ಯಾರಿಂದಲೂ ನಿರೀಕ್ಷಿಸಲಾಗುವುದಿಲ್ಲ. ಅದನ್ನು ಯಾರಾದರೂ ಕೇಳಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದು ನಿಮ್ಮ ವ್ಯವಹಾರವಲ್ಲ.”

