ರೂಮಿ ತನ್ನ ಪುಸ್ತಕದ ಕಡೆಗೆ ಒಮ್ಮೆ ನೋಡಿದ. ಆಮೇಲೆ ಎದುರಿಗೆ ನಿಂತಿದ್ದ ಶಮ್ಸನ ತೀಕ್ಷ್ಣ ಹಾಗೂ ತೇಜೋಮಯ ಕಣ್ಣುಗಳನ್ನು ನೇರವಾಗಿ ದಿಟ್ಟಿಸಿದ. ಕ್ಷಣಕಾಲ ಆ ಕೋಣೆಯಲ್ಲಿ ಮೌನ ಆವರಿಸಿತು । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ಮದರಸಾದ ಎತ್ತರದ ಕಿಟಕಿಯಿಂದ ಹರಿದುಬರುತ್ತಿದ್ದ ಮಧ್ಯಾಹ್ನದ ಬಿಸಿಲಿನಲ್ಲಿ, ಹಳೆಯ ಚರ್ಮದ ಹೊದಿಕೆಯ ಪುಸ್ತಕಗಳ ಮೇಲೆ ಲಕ್ಷಾಂತರ ಧೂಳಿನ ಕಣಗಳು ನರ್ತಿಸುತ್ತಿದ್ದವು. ಕಮಾನಿನ ಬಾಗಿಲ ಬಳಿ ನಿಂತಿದ್ದ ಶಮ್ಸ್, ತದೇಕಚಿತ್ತದಿಂದ ಓದುತ್ತಿದ್ದ ರೂಮಿಯನ್ನು ದಿಟ್ಟಿಸಿ ನೋಡಿದ.
ಶಮ್ಸ್: ಜಲಾಲ್, ಆ ಹಾಳೆಗಳನ್ನು ನೀನು ನಿನ್ನ ಆತ್ಮವೆಂಬಂತೆ ಹಿಡಿದುಕೊಂಡಿದ್ದೀಯಲ್ಲ! ಹೇಳು, ಆ ಒಣಗಿದ ಶಾಯಿಯಲ್ಲಿ ನೀನು ಏನನ್ನು ಹುಡುಕುತ್ತಿದ್ದೀಯ?
ರೂಮಿ: ನಮಗಿಂತ ಮುಂಚೆ ಆಗಿಹೋದ ಮಹಾಜ್ಞಾನಿಗಳ ಅರಿವನ್ನು ಹುಡುಕುತ್ತಿದ್ದೇನೆ. ಅವರ ಮಾತುಗಳು ಕತ್ತಲಲ್ಲಿ ಬೆಳಕಾಗಿ ದಾರಿ ತೋರುವವು.
ಶಮ್ಸ್ ಮೆಲ್ಲನೆ ಮುಂದೆ ಬಂದು, ಪುಟದ ಮೇಲಿದ್ದ ಅಕ್ಷರಗಳು ಮುಚ್ಚುವಂತೆ ತನ್ನ ಅಂಗೈ ಇಟ್ಟ.
ಶಮ್ಸ್: ಮಾತುಗಳು ಕೇವಲ ಹಣ್ಣಿನ ಒಣಗಿದ ಸಿಪ್ಪೆಯಂತಷ್ಟೇ. ನೀನು ಹಣ್ಣಿನ ಸಿಹಿ ಅನುಭವಿಸುವುದನ್ನು ಬಿಟ್ಟು, ಇಡೀ ದಿನ ಅದರ ಸಿಪ್ಪೆಯನ್ನೇ ಸವರುತ್ತ ಕುಳಿತುಬಿಡುತ್ತೀಯಲ್ಲ!
ರೂಮಿ: ಅಧ್ಯಯನದಿಂದ ಸತ್ಯವನ್ನು ತಿಳಿಯದೆ, ಅದರ ಸವಿಯನ್ನು ಅನುಭವಿಸಲು ಹೇಗೆ ಸಾಧ್ಯ?
ಶಮ್ಸ್: ನೀನು ಕನ್ನಡಿಯ ಮುಂದೆ ನಿಂತಾಗ ಅದರ ಚೌಕಟ್ಟನ್ನೋ ಗಾಜಿನ ಮೇಲ್ಮೈಯನ್ನೋ ಅಭ್ಯಾಸ ಮಾಡುತ್ತೀಯಾ, ಅಥವಾ ಅದರಲ್ಲಿ ಮೂಡುವ ನಿನ್ನ ಬಿಂಬ ನೋಡಿಕೊಳ್ಳುತ್ತೀಯಾ?
ರೂಮಿ: ಖಂಡಿತವಾಗಿಯೂ ನಾನು ನನ್ನ ಬಿಂಬವನ್ನೇ ನೋಡಿಕೊಳ್ಳುತ್ತೇನೆ.
ಶಮ್ಸ್: ಹಾಗಿದ್ದ ಮೇಲೆ, ಆ ಪರಮಾತ್ಮನೇ ನಿನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತಿರುವಾಗ ನೀನೇಕೆ ಈ ಒಣಗಿದ ಶಾಯಿ ಗೀಚಿದ ಕಾಗದಗಳನ್ನು ನೋಡುತ್ತಿರುವೆ? ಇದನ್ನು ಪಕ್ಕಕ್ಕಿಡು, ಜಲಾಲ್. ನೀರಿಗೆ ಧುಮುಕು. ಸಾಗರದ ಬಗ್ಗೆ ಅಧ್ಯಯನ ಮಾಡಿದ ಮಾತ್ರಕ್ಕೆ ಈಜು ಕಲಿಯಲು ಸಾಧ್ಯವಿಲ್ಲ.
ರೂಮಿ ತನ್ನ ಪುಸ್ತಕದ ಕಡೆಗೆ ಒಮ್ಮೆ ನೋಡಿದ. ಆಮೇಲೆ ಎದುರಿಗೆ ನಿಂತಿದ್ದ ಶಮ್ಸನ ತೀಕ್ಷ್ಣ ಹಾಗೂ ತೇಜೋಮಯ ಕಣ್ಣುಗಳನ್ನು ನೇರವಾಗಿ ದಿಟ್ಟಿಸಿದ. ಕ್ಷಣಕಾಲ ಆ ಕೋಣೆಯಲ್ಲಿ ಮೌನ ಆವರಿಸಿತು.
ರೂಮಿ: ನಾನು ಈ ಪುಸ್ತಕಗಳನ್ನು ಮುಚ್ಚಿಬಿಟ್ಟರೆ… ಆಮೇಲೆ ನನ್ನಲ್ಲಿ ಉಳಿಯುವುದಾದರೂ ಏನು?
ಶಮ್ಸ್: ಆಮೇಲೆ? ಆಮೇಲೆ ಉಳಿಯುವುದು ನಿನ್ನೊಳಗಿನ ಬೆಂಕಿ ಮಾತ್ರ. ಅದರ ಜ್ವಾಲೆಯಿಂದ ಹೊಮ್ಮುವ ದಿವ್ಯಗಾನ ಈ ಇಡೀ ಜಗತ್ತನ್ನೇ ಆವರಿಸಿಕೊಳ್ಳುವುದು.

