ಧ್ಯಾನ ಮಾಡಲು ಕಲಿಯಿರಿ #1 : ದೇಹವನ್ನು ಅಣಿಗೊಳಿಸುವುದು

ದೇಹದ ಭಂಗಿಯ ಅಡಚಣೆಗಳೇ ಏಕಾಗ್ರತೆಗೆ ಭಂಗ ತರುವ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ ಧ್ಯಾನಕ್ಕೆ ಕುಳಿತುಕೊಂಡಾಗ, ಕಣ್ಣುಮುಚ್ಚುವ ಮೊದಲು ನಿಮ್ಮ ದೇಹವನ್ನು ಸರಿಯಾದ ಭಂಗಿಯಲ್ಲಿ ಸ್ಥಾಪಿಸಿಕೊಳ್ಳಿ.

dhyana1

ಧ್ಯಾನಕ್ಕೆ ಮನಸ್ಸನ್ನು ಅಣಿಗೊಳಿಸುವ ಬಗ್ಗೆ ಹಿಂದಿನ ಲೇಖನಗಳಲ್ಲಿ ನೋಡಿದ್ದೀರಿ. ಈಗ ದೇಹವನ್ನು ಅಣಿಗೊಳಿಸಲು ಕೆಲವು ಮೂಲ ಪಾಠಗಳನ್ನು ನೋಡೋಣ. ಪ್ರಾಯೋಗಿಕವಾಗಿ, ಧ್ಯಾನಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವುದು ಪೀಠ ಸಿದ್ಧಿ. ಅಂದರೆ ಕುಳಿತುಕೊಳ್ಳುವಿಕೆಯ ಆರಾಮ.

ನೀವು ಸರಿಯಾಗಿ, ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಹೋದರೆ ಧ್ಯಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ದೇಹದ ಭಂಗಿಯ ಅಡಚಣೆಗಳೇ ಏಕಾಗ್ರತೆಗೆ ಭಂಗ ತರುವ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ ಧ್ಯಾನಕ್ಕೆ ಕುಳಿತುಕೊಂಡಾಗ, ಕಣ್ಣುಮುಚ್ಚುವ ಮೊದಲು ನಿಮ್ಮ ದೇಹವನ್ನು ಸರಿಯಾದ ಭಂಗಿಯಲ್ಲಿ ಸ್ಥಾಪಿಸಿಕೊಳ್ಳಿ.

ಧ್ಯಾನಕ್ಕೆ ಕೂರುವಾಗ ನೇರವಾಗಿ ನೆಲದ ಮೇಲೆ ಕೂರುವ ಬದಲು ಚಿಕ್ಕದೊಂದು ಚಾಪೆಯ ಮೇಲೆ ಕುಳಿತುಕೊಳ್ಳುವುದು ಒಳ್ಳೆಯದು. ಧ್ಯಾನದ ಸಮಯದಲ್ಲಿ ದೇಹದ ಕಂಪನಗಳು ನೇರವಾಗಿ ನೆಲದ ಸಂಪರ್ಕಕ್ಕೆ ಬರದಿರಲಿ ಅನ್ನುವುದೊಂದು ಕಾರಣವಾದರೆ, ದೀರ್ಘಕಾಲ ಕುಳಿತುಕೊಳ್ಳುವುದರಿಂದ ನಿಮ್ಮ ದೇಹದಿಂದ ಹರಿಯುವ ಬೆವರನ್ನು ಹೀರಿಕೊಳ್ಳಲು ಚಾಪೆ ಅನುಕೂಲಕರ ಅನ್ನುವುದು ಮತ್ತೊಂದು ಕಾರಣ. ಹಾಗೆಯೇ ನೇರವಾಗಿ ನೆಲದ ಮೇಲೆ ಕುಳಿತರೆ ಕಾಲು ಜೋಮು ಹಿಡಿಯುವ ಸಾಧ್ಯತೆಗಳೂ ಇರುತ್ತವೆ.

ಚಾಪೆಯ ಮೇಲೆ ಕುಳಿತುಕೊಳ್ಳುವಾಗಲೂ ಮೂರು ಬಗೆಗಳಿವೆ.

ಮೊದಲನೆಯದಾಗಿ ವಜ್ರಾಸನ. ಮಂಡಿಗಳನ್ನು ಮಡಚಿ ಬೆನ್ನನ್ನು ನೇರವಾಗಿ ಇರಿಸಿಕೊಂಡು ನಿಮ್ಮ ದೇಹದ ವಜ್ಜೆಯನ್ನು ನಿಮ್ಮ ಸೊಂಟದ ಭಾಗದ ಮೇಲೆ ಸಮವಾಗಿ ಬೀಳುವಂತೆ ಅಣಿಗೊಳಿಸಿಕೊಳ್ಳುವುದು. ಈ ಭಂಗಿ ಧ್ಯಾನಕ್ಕೆ ಅತ್ಯುತ್ತಮ ಭಂಗಿ.

ಎರಡನೆಯದಾಗಿ ಪದ್ಮಾಸನ. ಎಡ ಮತ್ತು ಬಲ ಕಾಲುಗಳನ್ನು ಪರಸ್ಪರ ಒಳಹೆಣಿಗೆ ಮಾಡಿಕೊಂಡು ಕೂರುವುದು. ಈ ಭಂಗಿ ಅಭ್ಯಾಸವಿಲ್ಲದವರಿಗೆ ಸ್ವಲ್ಪ ತ್ರಾಸು ನೀಡುವುದು. ಹೆಚ್ಚು ಕಾಲದವರೆಗೆ ಈ ಭಂಗಿಯಲ್ಲಿ ಕೂರುವುದು ಆರಂಭಿಕ ಹಂತದಲ್ಲಿ ಸ್ವಲ್ಪ ಕಷ್ಟವೇ. ಆದ್ದರಿಂದ, ದಿನಕ್ಕೆ ಹತ್ತು – ಹದಿನೈದು ನಿಮಿಷಗಳ ಕಾಲ ಹೀಗೆ ಕುಳಿತುಕೊಂಡು ರೂಢಿ ಮಾಡಿಕೊಳ್ಳುವುದು ಒಳ್ಳೆಯದು.

ಮೂರನೆಯದಾಗಿ, ಸರಳವಾಗಿ ಚಕ್ಕಲಮಕ್ಕಲ ಹಾಕಿ ಕುಳಿತುಕೊಳ್ಳುವುದು. ಇದು ಬಹಳ ಸುಲಭ. ಆರಂಭಿಕ ಹಂತದಲ್ಲಿ ಧ್ಯಾನ ಅಭ್ಯಾಸಿಗಳಿಗೆ ಈ ಭಂಗಿ ಒಳ್ಳೆಯದು.

ಹೀಗೆ ನಿಮಗೆ ಅನುಕೂಲ ಎನ್ನಿಸುವ ಭಂಗಿಯಲ್ಲಿ ಕುಳಿತುಕೊಂಡ ನಂತರ ನೀವು ಗಮನ ಕೊಡಬೇಕಾಗಿರುವುದು ನಿಮ್ಮ ಹೆಗಲು ಮತ್ತು ಕೈಗಳ ಬಗ್ಗೆ. ನಿಮ್ಮ ಹೆಗಲು ವಿಶ್ರಾಮದಲ್ಲಿರಲಿ. ಅದನ್ನು ಬಿಗುವಾಗಿಟ್ಟುಕೊಳ್ಳಬೇಡಿ. ಕೈಗಳನ್ನು ಸಡಿಲವಾಗಿ ನಿಮ್ಮ ತೊಡೆಗಳ ಮೇಲೆ ಇರಿಸಿಕೊಳ್ಳಿ. ಪದ್ಮಾಸನ ಅಥವಾ ಚಕ್ಕಲಮಕ್ಕಲ ಹಾಕಿಕೊಂಡು ಕುಳಿತಿದ್ದರೆ ಕಾಲುಗಳು ಸೇರುವ ಕೇಂದ್ರದಲ್ಲಿ ಹಸ್ತದಲ್ಲಿ ಹಸ್ತವನ್ನು ಮೃದುವಾಗಿ ಇರಿಸಿಕೊಳ್ಳಿ. ತೊಡೆಗಳ ಮೇಲೆ, ಮಂಡಿಗೆ ತಾಕುವಂತೆ ಕೈಗಳನ್ನು ಇರಿಸಿಕೊಳ್ಳುವುದಾದರೆ ಸ್ನಾಯುಗಳನ್ನು ಸಡಿಲವಾಗಿಸಿಕೊಂಡು, ಆದರೆ ನೇರವಾಗಿ ಇರಿಸಿಕೊಳ್ಳಿ. 

ಈಗ ನಿಮ್ಮ ಕುತ್ತಿಗಯ ಪೊಸಿಶನಿಂಗ್. ಕುತ್ತಿಗೆಯನ್ನು ನೇರವಾಗಿ ಆದರೆ ಒತ್ತಡ ಹಾಕದೆ ಇರಿಸಿಕೊಳ್ಳಿ. ದೃಷ್ಟಿ ನೇರವಾಗಿರುವಂತೆ ತಲೆಯನ್ನು ಎತ್ತಿ ನೇರವಾಗಿ ಕುಳಿತುಕೊಳ್ಳಿ.

ಇಷ್ಟಾದ ಮೇಲೆ ನಿಮ್ಮ ಪಾದದ ತುದಿ ಬೆರಳಿನಿಂದ ತಲೆಯವರೆಗೆ ಕುಳಿತ ಭಂಗಿಯನ್ನೊಮ್ಮೆ ಪರಿಶೀಲಿಸಿಕೊಳ್ಳಿ. ನಿಮಗೆ ನೀವು ಕುಳಿತಿರುವುದು ಅನುಕೂಲಕರವಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ.

ಇನ್ನೀಗ ನೀವು ಧ್ಯಾನಕ್ಕೆ ದೈಹಿಕವಾಗಿ ಸಿದ್ಧವಾದಿರಿ.

(ಮುಂದುವರೆಯುವುದು)

 

 

3 Comments

Leave a Reply to ಧ್ಯಾನ ಮಾಡಲು ಕಲಿಯಿರಿ #3 : ಪೂರಕ ರೇಚಕ ಕುಂಭಕ ಮತ್ತು ಉಸಿರಾಟ – ಅರಳಿಮರCancel reply