ಉಲ್ಲಾಸವಿಲ್ಲದ ದೈಹಿಕ ಚಟುವಟಿಕೆಗಳು ಯಾವತ್ತಿದ್ದರೂ ಶ್ರಮವೇ. ಆದ್ದರಿಂದ ನಾವು ಕಾಳಜಿ ವಹಿಸಿ ದೇಹವನ್ನು ಸಂತೈಸಬೇಕಾಗುತ್ತದೆ. ಇದಕ್ಕೆ ನರ್ತನ ಅಥವಾ ಡ್ಯಾನ್ಸ್ ಮೆಡಿಟೇಶನ್ ಉತ್ತಮ ಮದ್ದಾಗಬಲ್ಲದು ~ ಚಿತ್ಕಲಾ
ವಾರ ಪೂರ್ತಿ ಒಂದು ಸ್ಥಳದಲ್ಲಿ ಕುಳಿತುಕೊಂಡು ಅಥವಾ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಓಡಾಡುತ್ತಾ ಕೆಲಸ ಮಾಡುವುದು ನಮ್ಮಲ್ಲಿ ಒಂದು ಬಗೆಯ ಸುಸ್ತನ್ನೂ ಅಸಹನೆಯನ್ನೂ ಹುಟ್ಟುಹಾಕುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ವಾರಕ್ಕೊಮ್ಮೆಯಾದರೂ ಬ್ರೇಕ್ ತೆಗೆದುಕೊಂಡು ದೇಹಕ್ಕೆ ಉಲ್ಲಾಸದ ಸ್ಪರ್ಶ ನೀಡುವುದು ಅಗತ್ಯ. ಉಲ್ಲಾಸವಿಲ್ಲದ ದೈಹಿಕ ಚಟುವಟಿಕೆಗಳು ಯಾವತ್ತಿದ್ದರೂ ಶ್ರಮವೇ. ಆದ್ದರಿಂದ ನಾವು ಕಾಳಜಿ ವಹಿಸಿ ದೇಹವನ್ನು ಸಂತೈಸಬೇಕಾಗುತ್ತದೆ. ಇದಕ್ಕೆ ನರ್ತನ ಅಥವಾ ಡ್ಯಾನ್ಸ್ ಮೆಡಿಟೇಶನ್ ಉತ್ತಮ ಮದ್ದಾಗಬಲ್ಲದು.
ನರ್ತನ ಧ್ಯಾನ ಅಥವಾ ಡ್ಯಾನ್ಸ್ ಮೆಡಿಟೇಶನ್ ನಿತ್ಯವೂ ಮಾಡಬಹುದಾದ ಧ್ಯಾನ ವಿಧಾನ. ಬೆಳಗ್ಗೆ ಎದ್ದ ಕೂಡಲೇ ಅಥವಾ ರಾತ್ರಿ ಮಲಗುವ ಒಂದು ಗಂಟೆ ಮೊದಲು ಡಾನ್ಸ್ ಮೆಡಿಟೇಶನ್’ಗೆ ಸಮಯ ಹೊಂದಿಸಿಕೊಂಡರೆ ಒಳ್ಳೆಯದು. ಅರ್ಧ ಗಂಟೆ ಇದಕ್ಕೆ ಮೀಸಲಿಟ್ಟರೂ ಸಾಕು.
ಡ್ಯಾನ್ಸ್ ಮೆಡಿಟೇಶನ್ ಅಂದರೆ ಸುಮ್ಮನೆ ಒಟ್ಟಾರೆ ಕುಣಿಯುವುದಲ್ಲ. ಹಾಗೆ ಕುಣಿಯುವುದರಿಂದ / ಡ್ಯಾನ್ಸ್ ಮಾಡುವುದರಿಂದ ದೇಹ ಉಲ್ಲಾಸಗೊಳ್ಳುತ್ತದೆಯೇನೋ ಸರಿ. ಆದರೆ ಅದು ಧ್ಯಾನವಾಗದೆ ಕೇವಲ ಕಸರತ್ತು ಅತವಾ ಕಲೆಯಾಗಿ ಉಳಿಯುತ್ತದೆ. ಅದನ್ನೇ ಪ್ರಜ್ಞಾಪೂರ್ವಕವಾಗಿ, ಸಂಪೂರ್ಣ ಅರಿವಿನೊಂದಿಗೆ, ನಿಮ್ಮ ನರ್ತನದ ಪ್ರತಿ ಚಲನೆಯನ್ನು, ನಿಮ್ಮ ಅಂಗಾಂಗಗಳ ಪ್ರತಿ ಹೊರಳನ್ನು ಅನುಭವಿಸುತ್ತಾ ಮಾಡಿದರೆ, ಆಗ ಅದು ಧ್ಯಾನವಾಗುತ್ತದೆ.
ಹೀಗೆ ಮಾಡಿ. ಒಟ್ಟಾರೆಯಾಗಿ ಯಾವಾದಾದರೊಂದು ಮ್ಯೂಸಿಕ್ ಆನ್ ಮಾಡಿಕೊಳ್ಳಿ. ಸಿನೆಮಾ ಹಾಡಾದರೂ ಸರಿಯೇ. ಆದರೆ ಅದು ನೀವು ಬಹಳವಾಗಿ ಇಷ್ಟಪಡುವ ಹಾಡಾಗಿರದಿದ್ದರೆ ಒಳ್ಳೆಯದು. ನಿಮ್ಮ ಇಷ್ಟದ ಹಾಡು ನಿಮ್ಮ ಗಮನವನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ಅದನ್ನು ಅವಾಯ್ಡ್ ಮಾಡುವುದು ಕಷ್ಟ. ಆದ್ದರಿಂದ ಒಟ್ಟಾರೆಯಾಗಿ ಹಾಡುಗಳನ್ನು ಸೆಲೆಕ್ಟ್ ಮಾಡಿಕೊಂಡು ಪ್ಲೇ ಮಾಡಿ.
ಹಾಡು ಅಥವಾ ಸಂಗೀತ ಆರಂಭವಾದ ಮೇಲೆ ಅದರ ಲಯಕ್ಕೆ ನಿಮ್ಮ ದೇಹವನ್ನು ನಿಧಾನವಾಗಿ ಒಗ್ಗಿಸಿಕೊಳ್ಳಿ. ಶುರುವಿನಲ್ಲೇ ಇದ್ದಬದ್ದ ಶಕ್ತಿಯನ್ನೆಲ್ಲ ಹಾಕಿ ಕುಣಿಯಲು ಆರಂಭಿಸಬೇಡಿ. ನಿಧಾನವಾಗಿ ಕಾಲುಗಳ ಚಲನೆಯಿಂದ ಆರಂಭಿಸಿ, ಕೈಗಳ ಚಲನೆಯನ್ನು ಅದಕ್ಕೆ ಹೊಂದಿಸಿಕೊಂಡು ಕ್ರಮೇಣ ಇಡಿಯ ದೇಹವನ್ನು ಅಣಿಗೊಳಿಸಿ. ಹೀಗೆ ಸಂಗೀತದ ಲಯಕ್ಕೆ ನಿಮ್ಮ ದೇಹ ಹೊಂದಿಕೊಂಡ ಮೇಲೆ ನಿಮ್ಮ ಕೆಲಸ ಮುಗಿಯಿತು. ಇನ್ನು ಅದು ಅಪ್ರಯತ್ನಪೂರ್ವಕವಾಗಿ ಸ್ಪಂದಿಸುತ್ತಾ ಹೋಗುತ್ತದೆ. ನೀವು ನಿರ್ದಿಷ್ಟ ಪಟ್ಟುಗಳ ಬಗ್ಗೆ ತಲೆ ಕೆಡಿಸಿಕೊಂಡರೆ ಇದು ಸಾಧ್ಯವಾಗುವುದಿಲ್ಲ. ದೇಹವನ್ನು ಸಂಗೀತಕ್ಕೆ ಸ್ಪಂದಿಸಲು ಅದರಪಾಡಿಗೆ ಬಿಟ್ಟುಬಿಡಿ. ನಿಮ್ಮ ಮನಸ್ಸು ಸಂಗೀತ ಅಥವಾ ತಾಳದ ಮೇಲೆ ಅಲ್ಲ, ನಿಮ್ಮ ದೇಹದ ಮೇಲಿರಲಿ. ಅದರ ಪ್ರತಿ ಚಲನೆಯನ್ನೂ ಪ್ರಜ್ಞಾಪೂರ್ವಕವಾಗಿ ಗಮನಿಸುತ್ತಿರಿ. ಒಂದು ಹಂತದಲ್ಲಿ ನೀವು ನರ್ತಿಸುತ್ತಿದ್ದೀರೆಂಬುದನ್ನೆ ಮರೆಯುತ್ತೀರಿ. ನೀವು ನಿಮ್ಮ ನರ್ತನದಲ್ಲಿ ತಲ್ಲೀನರಾಗಿ ನೀವೇ ನೃತ್ಯವಾಗಿಬಿಡುತ್ತೀರಿ. ಈಗ ನಿಮಗೆ ಸಂಗೀತ ಕೇಳಿಸುತ್ತಿದ್ದರೂ ಅತ್ತ ಗಮನವಿಲ್ಲ. ನರ್ತಿಸುತ್ತಿದ್ದರೂ ಹೆಜ್ಜೆಯ – ಪಟ್ಟುಗಳ ಮೇಲೆ ಗಮನವಿಲ್ಲ. ಅಂಥದ್ದೊಂದು ತಲ್ಲೀನತೆ ಸಾಧ್ಯವಾಗುವಷ್ಟು ಹೊತ್ತೂ ಅದು ಧ್ಯಾನವೇ ಆಗಿರುತ್ತದೆ.
ಹೀಗೆ ಕನಿಷ್ಠ ಹದಿನೈದು ನಿಮಿಷ ತಾದಾತ್ಮ್ಯ ಸಾಧಿಸುವುದು ನಿಮಗೆ ಸಾಧ್ಯವಾಗಬೇಕು. ಅದಕ್ಕಿಂತ ಹೆಚ್ಚು ಹೊತ್ತು ಆರಂಭಿಕ ಹಂತದ ಧ್ಯಾನಿಗಳಿಗೆ ಸಾಧ್ಯವಾಗುವುದೂ ಇಲ್ಲ. ಯಾವಾಗ ನಿಮಗೆ ಸಂಗೀತ ಮತ್ತೆ ಕೇಳತೊಡಗುತ್ತದೆಯೋ, ನಿಮ್ಮ ಹೆಜ್ಜೆಯ, ನಿಮ್ಮ ಪಟ್ಟುಗಳ ಬಗ್ಗೆ ಅರಿವಾಗತೊಡಗುತ್ತದೆಯೋ ಆಗ ನಿಮ್ಮ ತಲ್ಲೀನತೆಯೂ ಕಳೆದು ಬಾಹ್ಯಪ್ರಪಂಚಕ್ಕೆ ಮರಳುತ್ತೀರಿ. ಈಗ ನಿಮ್ಮ ಧ್ಯಾನವು ಮುಗಿದಿರುತ್ತದೆ.
ನೃತ್ಯ ಮುಗಿದ ನಂತರ, ಬೇರೆ ಕೆಲಸ ಅಥವಾ ಕ್ರಿಯೆಗೆ ಮುಂದಾಗಬೇಡಿ. ನಿಮ್ಮ ಧ್ಯಾನ ಮುಗಿದ ನಂತರ ಮ್ಯೂಸಿಕ್ ಇನ್ನೂ ಚಾಲ್ತಿಯಲ್ಲಿ ಇರುವಂತೆಯೇ ಒಂದೆರಡು ನಿಮಿಷಗಳ ಕಾಲ ಸುಮ್ಮನೆ ನಿಂತುಕೊಳ್ಳಿ. ನರ್ತನದ ಉಲ್ಲಾಸ ನಿಮ್ಮ ಕಾಲ ಬೆರಳಿನ ತುದಿಯಿಂದ ತಲೆಯವರೆಗೂ ಹರಿಯುವುದನ್ನು ನೀವು ಅನುಭವಿಸುತ್ತೀರಿ. ಈ ಅನುಭವ ನಿಮ್ಮ ಮನಸ್ಸಿನಲ್ಲೂ ಉತ್ಸಾಹವನ್ನು ತುಂಬುತ್ತಾ ಇರುತ್ತದೆ.
ಹೀಗೆ ಎರಡು ನಿಮಿಷ ಕಳೆದ ಮೇಲೆ ಎರಡರಿಂದ ಮೂರು ನಿಮಿಷಗಳ ಕಾಲ ಶವಾಸನದಲ್ಲಿ ಮಲಗಿ ವಿಶ್ರಮಿಸಿ.
ನೆನಪಿಡಬೇಕಾದ ಅಂಶ : ಮಲಗುವ ಸರಿಹೊತ್ತಿನಲ್ಲಿ ಇದನ್ನು ಮಾಡಬೇಡಿ. ನರ್ತನಕ್ಕೆ ಸಾಧ್ಯವಾದಷ್ಟೂ ವಿಷಾದಗೀತೆಗಳನ್ನು ಅವಾಯ್ಡ್ ಮಾಡಿ. ನರ್ತಿಸಲು ಮುಜುಗರ ಪಡಬೇಡಿ. ನೀವು ಕಲಾಪ್ರದರ್ಶನ ಮಾಡುತ್ತಿಲ್ಲ, ಧ್ಯಾನ ನಡೆಸುತ್ತಿದ್ದೀರಿ ಎಂಬುದು ನೆನಪಿರಲಿ. ಡ್ಯಾನ್ಸ್ ಮೆಡಿಟೇಶನ್ ಗುಂಪಿನಲ್ಲಿ ಹೆಚ್ಚು ಫಲಪ್ರದ. ನಾಲ್ಕೈದು ಜನರಾದರೂ ಒಟ್ಟು ಸೇರಿ ಇದನ್ನು ಮಾಡಿದರೆ ಒಳ್ಳೆಯದು.