ಮೈದಾಸನ ಸ್ಪರ್ಶ ತಂದಿತ್ತ ಫಜೀತಿ  :  ಗ್ರೀಕ್ ಪುರಾಣ ಕಥೆಗಳು  ~ 22

“ಮೈದಾಸ್ ಟಚ್ – ಮೈದಾಸನ ಸ್ಪರ್ಶ” ಅನ್ನುವ ನುಡಿಗಟ್ಟನ್ನು ಕೇಳಿಯೇ ಇರುತ್ತೀರಿ. ಯಾರಾದರೂ ಏನನ್ನಾದರೂ ಮುಟ್ಟಿದರೆ ಚಿನ್ನದಂಥ ಫಲಿತಾಂಶ ಬರುತ್ತದೆ ಎಂದು ಸೂಚಿಸುವುದಕ್ಕೆ ಈ ನುಡಿಗಟ್ಟು ಬಳಕೆಯಾಗುತ್ತದೆ. ಇದರ ಮೂಲ ಗ್ರೀಕ್ ಪುರಾಣದಲ್ಲಿದೆ.

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

mitologia-grega-rei-midas3

ಮೈದಾಸ್, ಫ್ರಿಜಿಯ ದೇಶದ ದೊರೆ. ಅವನಿಗೆ ಗುಲಾಬಿ ಹೂವುಗಳೆದರೆ ಪಂಚಪ್ರಾಣ. ತನ್ನ ರಾಜ್ಯದ ತುಂಬೆಲ್ಲ ಗುಲಾಬಿಗಳನ್ನೆ ಬೆಳೆಸಿ, ಅದರಲ್ಲಿ ನಿತ್ಯವೂ ಹೂವರಳುವಂತೆ ವ್ಯವಸ್ಥೆ ಮಾಡಿದ್ದ ಮೈದಾಸ್. ಯಾರಾದರೂ ಅವನ ಗುಲಾಬಿ ತೋಟಗಳಿಗೆ ನುಗ್ಗಿದರೆ ಅವರಿಗೆ ಕಠಿಣ ಶಿಕ್ಷೆಯೇ ಕಾದಿರುತ್ತಿತ್ತು.

ಹೀಗಿರುವಾಗ ಒಮ್ಮೆ ಡಯೋನಿಸಸ್ ದೇವತೆಯ ಹಿಂದೆ ಕತ್ತೆಯ ಮೇಲೆ ಕುಳಿತುಕೊಂಡು ಆಕಾಶ ಮಾರ್ಗದಲ್ಲಿ ಹೋಗುತ್ತಿದ್ದ ಗುರು ಸೈಲೀನಸ್, ಆಯತಪ್ಪಿ ಕೆಳಗೆ ಬಿದ್ದುಬಿಟ್ಟ. ಅದು ಕೂಡಾ ಮೈದಾಸನ ಗುಲಾಬಿ ತೋಟದಲ್ಲಿ! ಕಾವಲುಭಟರು ಆತನನ್ನು ಹಿಡಿದು ರಾಜನ ಮುಂದೆ ಒಯ್ದು ನಿಲ್ಲಿಸಿದರು.

ಸೈಲೀನಸ್ ಬುದ್ಧಿವಂತ. ಮೈದಾಸನ ಸಂಪತ್ತಿನ ಮೋಹ ಅವನಿಗೆ ಗೊತ್ತಿತ್ತು. ಹೈಪರ್ ಬೋರಿಯನ್ನರ ಶ್ರೀಮಂತಿಕೆಯ ಕತೆಗಳನ್ನು ಹೇಳಿ ಅವನನ್ನು ಮರುಳು ಮಾಡಿದ. ಯೌವನ ನೀಡುವ ಹಣ್ಣುಗಳ ಕತೆ ಹೇಳಿದ. ಇದನ್ನೆಲ್ಲ ಕೇಳಿ ಮೈದಾಸನಿಗೆ ಆತನ ಬಗ್ಗೆ ಮೆಚ್ಚುಗೆ ಉಂಟಾಯ್ತು. ಇವನ್ಯಾರೋ ಮಹಾತ್ಮನಿದ್ದಾನೆ ಎಂದುಕೊಂಡು ಐದು ದಿನಗಳ ಕಾಲ ತನ್ನ ಅರಮನೆಯಲ್ಲೇ ಇರಿಸಿಕೊಂಡು ಆತಿಥ್ಯ ನೀಡಿದ.

ಇತ್ತ ಡಯೋನಿಸಸ್ ತನ್ನ ಗುರು ಐದು ದಿನವಾದರೂ ಪತ್ತೆ ಇಲ್ಲವಲ್ಲ ಎಂದು ಯೋಚಿಸುತ್ತಿದ್ದ. ಅವನಿಗೆ ಸೈಲೀನಸ್ ಫ್ರಿಜಿಯಾದ ಗುಲಾಬಿ ತೋಟದಲ್ಲಿ ಬಿದ್ದಿದ್ದು ಅರಿವಿಗೆ ಬಂದಿರಲಿಲ್ಲ.

ಆರನೇ ದಿನಕ್ಕೆ ಮೈದಾಸ, ಸೈಲೀನಸ್ ಕೋರಿಕೆಯ ಮೇರೆಗೆ ಆತನನ್ನು ಬೀಳ್ಕೊಡಲು ಮುಂದಾದ. ಖುದ್ದು ತಾನೇ ಆತನ ನೆಲೆ ತಲುಪಿಸಿಬರುವುದಾಗಿ ಹೊರಟ. ಮೈದಾಸ್ – ಸೈಲೀನಸ್ ಇಬ್ಬರೂ ಡಯೋನಿಸಸ್ ಇದ್ದಲ್ಲಿಗೆ ಬಂದರು. ಗುರುವನ್ನು ಕಂಡ ದೇವತೆ ಸಂತಸಪಟ್ಟ. ಅವರನ್ನು ಕಾಪಾಡಿ ಸತ್ಕರಿಸಿದ ಮೈದಾಸನಿಗೆ ಕೃತಜ್ಞತೆ ಸಲ್ಲಿಸಿದ. ಮತ್ತು ಸಂತುಷ್ಟನಾಗಿ, “ನಿನಗೇನು ವರ ಬೇಕೋ ಕೇಳು” ಅಂದ.

ಆಸೆಬುರುಕ ಮೈದಾಸ್, “ನಾನು ಮುಟ್ಟಿದ್ದೆಲ್ಲ ಚಿನ್ನವಾಗಲಿ” ಎಂದು ಬೇಡಿದ. ಡಯೋನಿಸಸ್ “ಹಾಗೆಯೇ ಆಗಲಿ” ಎಂದು ಅನುಗ್ರಹಿಸಿದ.

ಮೈದಾಸ್ ತನ್ನ ರಾಜ್ಯಕ್ಕೆ ಮರಳಿದವನೇ ಕೈಗೆ ಎಟುಕಿದ್ದೆಲ್ಲ ಮುಟ್ಟತೊಡಗಿದ. ಪ್ರತಿಯೊಂದೂ ಥಳಥಳಿಸುವ ಚಿನ್ನವಾಗಿ ಮಾರ್ಪಾಡಾದವು. ಅರ್ಧ ದಿನದಲ್ಲಿ ಅರ್ಧ ರಾಜ್ಯವನ್ನೇ ಚಿನ್ನವಾಗಿ ಮಾರ್ಪಡಿಸಿದ ಮೈದಾಸ್. ರಾತ್ರಿಯಾಗುವ ವೇಳೆಗೆ ಅವನಿಗೆ ಹಸಿವಾಗತೊಡಗಿತು. ತಿನ್ನಲು ಏನಾದರು ಕೊಡಿರೆಂದು ಸೇವಕರಿಗೆ ಹೇಳಿದ. ಅವರು ತಿನಿಸುಗಳನ್ನು ತಂದಿಟ್ಟರು. ಅವನ್ನು ಮುಟ್ಟುತ್ತಲೇ ಚಿನ್ನವಾಗಿ ಗಟ್ಟಿಯಾಗಿಬಿಟ್ಟವು. ಸೇವಕರು ಗಾಬರಿಯಾಗಿ ಹಣ್ಣುಗಳನ್ನು ತಂದಿಟ್ಟರು. ಅವು ಕೂಡಾ ಮೈದಾಸ್ ಮುಟ್ಟುತ್ತಲೇ ಚಿನ್ನವಾದವು!

ಮೈದಾಸನಿಗೆ ಹಸಿವು ಹೆಚ್ಚತೊಡಗಿತ್ತು. ಮಕ್ಕಳಂತೆ ಕಣ್ಣೀರಿಟ್ಟು ಅಳತೊಡಗಿದೆ. ಅಪ್ಪ ಯಾಕೆ ಅಳುತ್ತಿದ್ದಾನೆಂದು ಗಾಬರಿಯಾದ ಅವನ ಪುಟ್ಟ ಮಗಳು ಓಡೋಡಿ ಬಂದು ಅವನನ್ನು ತಬ್ಬಿಕೊಂಡಳು. ಮೈದಾಸ್ ಅವಳ ತಲೆ ಸವರಿದ್ದಷ್ಟೆ… ಮರುಕ್ಷಣ ಅವಳು ಚಿನ್ನದ ಗೊಂಬೆಯಾಗಿಬಿಟ್ಟಳು!

ಈಗಂತೂ ಮೈದಾಸನಿಗೆ ಹುಚ್ಚು ಹಿಡಿಯುವುದು ಬಾಕಿ. ತನ್ನ ಪ್ರೀತಿಯ ಮಗಳೂ ಚಿನ್ನವಾಗಿಬಿಟ್ಟಳು! ಅವಳೀಗ ಜಡಗಟ್ಟಿದ ಕೇವಲ ಗೊಂಬೆ!! ಇದಕ್ಕಿಂತ ದುರಂತವಿದೆಯೇ? ಮೈದಾಸ್ ಗಟ್ಟಿಯಾಗಿ ರೋದಿಸುತ್ತಾ ಡಯೋನಿಸಸ್ ಬಳಿಗೋಡಿದ. ನನ್ನನ್ನು ಮೊದಲಿನ ಮನುಷ್ಯನನ್ನಾಗಿಯೇ ಮಾಡಿಬಿಡು ಎಂದು ಮೊರೆಯಿಟ್ಟ.

ಡಯೋನಿಸಸ್ ಇದನ್ನು ಮೊದಲೇ ಊಹಿಸಿದ್ದ. ನಗುತ್ತಾ ಮೈದಾಸನಿಗೆ “ಅತಿಯಾಸೆ ಮಾಡಬೇಡ” ಎಂದು ಬುದ್ಧಿ ಹೇಳಿದ. “ಪ್ಯಾಕ್ಟೋಲಸ್ ನದಿಯ ಮೂಲಕ್ಕೆ ಹೋಗಿ ಮೈತೊಳೆದುಕೋ. ನಿನ್ನ ವರ ಹೊರಟುಹೋಗಿ ಮೊದಲಿನಂತೆ ಆಗುತ್ತೀಯ” ಎಂದು ಸೂಚಿಸಿದ. ಮೈದಾಸ್ ಪ್ಯಾಕ್ಟೋಲಸ್ ನದಿಗೆ ಹೋಗೆ ಮೈತೊಳೆದುಕೊಂಡ. ಆ ನದೀ ದಡದ ಮರಳೆಲ್ಲ ಚಿನ್ನದ ಹುಡಿಯಾದವು. ಮಗಳೂ ಚೈತನ್ಯ ತುಂಬಿ ಓಡುತ್ತಾ ಬಂದಳು. ಮೈದಾಸ್ ಮೊದಲಿನಂತಾಗಿದ್ದ. ಇನ್ನೆಂದೂ ದುರಾಸೆಪಡುವುದಿಲ್ಲ ಎಂದು ತನಗೆ ತಾನೇ ಪ್ರಮಾಣ ಮಾಡಿಕೊಂಡ.

Leave a Reply