ಮಾಸ್ತಿಯವರ ಅಂತರಗಂಗೆಯಿಂದ; ವೇದ – ಸಂಹಿತೆಗಳು ~ ಭಾಗ 1

ಪ್ರಾಚೀನ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರ ಪರಿಚಯ ಸರಣಿಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಅಂತರಗಂಗೆ’ ಕೃತಿಯ ಆಯ್ದ ಅಧ್ಯಾಯಗಳನ್ನು ಪ್ರಕಟಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೊದಲ ಕಂತು ವೇದಗಳ ಪರಿಚಯ. ಈ ಸಂಚಿಕೆಯಲ್ಲಿ ಸಂಹಿತೆಗಳ ಬಗೆಗಿನ ಲೇಖನದ ಮೊದಲ ಕಂತನ್ನು ನೀಡಲಾಗಿದೆ. 

sam

ಪ್ರಾಚೀನ ಭಾರತದ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪರಿಚಯಿಸುವ ಕೃತಿ ‘ಅಂತರಗಂಗೆ’. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇದರ ಕರ್ತೃ. ವೇದೋಪನಿಷತ್ತುಗಳು, ಪುರಾಣಗಳು, ಪ್ರಮುಖ ಋಷಿಗಳು, ಜನಪದಗಳೆಲ್ಲದರ ಕಿರುಪರಿಚಯವನ್ನು ಈ ಕೃತಿಯು ಮಾಡಿಸುತ್ತದೆ. ಇಲ್ಲಿ ಕಿರುಪರಿಚಯವೆಂದರೆ, ಸಾಗರವನ್ನು ಹನಿಯಲ್ಲಿ ಹಿಡಿದಂತೆ! ಹನಿಯ ರುಚಿ ನೋಡಿದರೆ ಸಾಗರದ ರುಚಿ ತಿಳಿದುಹೋಗುತ್ತದಲ್ಲ, ಹಾಗೆಯೇ.

ಈ ಮಹತ್ವಪೂರ್ಣ ಕೊಡುಗೆಗಾಗಿ ಮಾಸ್ತಿಯವರನ್ನು ಆಭಾರದಿಂದ ನೆನೆಯುತ್ತಾ, ಕೃತಿಯ ಕೆಲವು ಆಯ್ದ ಭಾಗಗಳನ್ನು ‘ಅರಳಿ ಮರ’ದಲ್ಲಿ ಪ್ರಕಟಿಸುತ್ತಿದ್ದೇವೆ. ಈ ಕೃತಿ ನಿಮಗೆ ನಮ್ಮ ಸಂಸ್ಕೃತಿಯ ಮೂಲಬೇರುಗಳ ಪರಿಚಯವನ್ನು ಸಮರ್ಥವಾಗಿ ಮಾಡಿಸಿ, ಹೆಚ್ಚಿನ ಓದಿಗೆ ಉದ್ದೀಪಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ವೇದಗಳು ~ ಸಂಹಿತೆಗಳು (ಭಾಗ 1)

ಆರ್ಯ ಸಂಸ್ಕೃತಿಯ ಮೂಲಾಧಾರ ವೇದಗಳು. ಇವನ್ನು ರಚಿಸಿದವರು ಋಷಿಗಳು. ಇವರು ಇದ್ದರೆನ್ನುವುದಕ್ಕೆ ಅವರ ಸೂಕ್ತಗಳು ಸಾಕ್ಷಿಯಷ್ಟೆ. ಸೂಕ್ತಗಳು ಕೊಡುವ ಪ್ರಮಾಣಗಳ ಜೊತೆಗೆ ಋಷಿಗಳ ಈ ಹೆಸರುಗಳು ಸಾಕ್ಷಿ. ಮಧುಚ್ಛಂದ; ಮೇಧಾತಿಥಿ; ಕಾಣ್ವ; ಶುನಶ್ಶೇಫ; ಅಜಗರ್ತಿ; ಹಿರಣ್ಯಸ್ತೂಪ ಅಂಗೀರಸ; ಕಣ್ವಫೌರ; ಪ್ರಸ್ಕಣ್ವ; ಕಾಣ್ವ; ಸಹ್ಯ ಅಂಗೀರಸ; ಗೌತಮನೋಧಾ; ಶಕ್ತಿಪುತ್ರ ಪರಾಶರ; ರಹಗುಣಪುತ್ರ ಗೌತಮ; ಕುತ್ಸ ಆಂಗಿರಸ; ಕಕ್ಷಿವಾನ್; ಉತ್ಕೀಲ; ಕತ; ಕುಶಿಕಪುತ್ರ ಗಾಧಿ; ವಾಮದೇವ; ಪರುಚ್ಛೇಪ; ದೀರ್ಘತಮಸ್; ಅಗಸ್ತ್ಯ; ಗೃತ್ಸಮದ; ವಿಶ್ವಾಮಿತ್ರ; ಋಷಭ; ದೇವಶ್ರವ; ಅತ್ರಿ; ಭರದ್ವಾಜ; ವಸಿಷ್ಠ.

ಎಷ್ಟು ಜನ ಹಿರಿಯರು! ಎಂಥ ಉದಾತ್ತ ರಚನೆ ಇವರು ಹಾಡಿದ ಸೂಕ್ತಗಳು! ಇಷ್ಟು ಉದಾತ್ತವೂ ಇಷ್ಟು ಪುರಾತನವೂ ಆದ ಮಾನವ ವಚನ ಬೇರೆ ಈ ಲೋಕದಲ್ಲಿ ಇಲ್ಲ. ಈ ಸೂಕ್ತಗಳ ಸ್ವರೂಪ ಏನು?

ವೇದಗಳಲ್ಲಿ ಮೊದಲ ವೇದ ಋಗ್ವೇದ; ಋಕ್ಕುಗಳ ವೇದ. ಋಕ್ಕುಗಳೆಲ್ಲ ಪದ್ಯಗಳೇ. ಇವು ‘ಸಂಹಿತೆ’. ವೇದದ ಮೊದಲ ಭಾಗ.

ಯಜುರ್ವೇದ, ಋಗ್ವೇದದ ಕೆಲವು ಭಾಗವನ್ನು ತೆಗೆದುಕೊಂಡು ಯಜ್ಞಗಳ ನಿರ್ವಾಹಕ್ಕೆ ಅವಶ್ಯವಾದ ಸಂಗತಿಗಳನ್ನು ರಚಿಸಿ ಜೋಡಿಸಿ ರೂಪುಗೊಂಡ ಎರಡನೆಯ ವೇದ. ಈ ಋಕ್ಕುಗಳಲ್ಲಿ ಕೆಲವನ್ನು ಹೀಗೆ ಹೀಗೆ ಹಾಡಬೇಕು ಎಂದು ಸಂಪ್ರದಾಯದ ನಡತೆ ನಿಶ್ಚಯಿಸಿ, ಹಾಡಿ, ರೂಪುಗೊಂಡಿದ್ದು ಸಾಮವೇದ. ನಾಲ್ಕನೆಯದಾದ ಅಥರ್ವ ವೇದ ಈ ಮೂರು ವೇದಗಳ ಕೆಲವು ಭಾಗವನ್ನು ವ್ಯವಹಾರದಲ್ಲಿ ಅವಶ್ಯಕವಾಗುವ ಹತ್ತಾರು ಮಂತ್ರ, ಮಾಯ, ಮಾಟ ಮುಂತಾದ ತತ್ತ್ವಗಳನ್ನು ಒಳಗೊಂಡ ಕೃತಿ. ಮಾಯ – ಮಾಟಗಳ ಕಾರಣದಿಂದಲೇ ಬಹುಶಃ ಈ ವೇದ ಉಳಿದ ಮೂರು ವೇದಗಳ ಯೋಗ್ಯತೆಗಿಂತ ಕಡಿಮೆ ಯೋಗ್ಯತೆಯ ಕೃತಿ ಎಂದು ಅನಾದರಕ್ಕೆ ಒಳಗಾಯಿತು. ಬಳಕೆಯಲ್ಲಿ ನಿಂತವು ನೊದಲ ಮೂರು ವೇದಗಳು ಮಾತ್ರ.

ಋಕ್ಕುಗಳು

ಋಕ್ಕುಗಳಲ್ಲಿ ಬಹುಭಾಗ ಅಧ್ಯಾತ್ಮ – ತತ್ತ್ವಜ್ಞಾನಗಳ ಕುರಿತು ಹೇಳಲಾಗಿದೆ. ಈ ಕೃತಿಗಳಲ್ಲಿ ಆದಿಮ ಸ್ಥಿತಿಯ ಸಹಜತೆ, ಸರಳತೆ, ಪೂಜನಬುದ್ಧಿ, ಸಂತೋಷಗಳು ಕಾಣಸಿಗುತ್ತವೆ. ಆದಿಮ ಸ್ಥಿತಿಯ ಅಪೂರ್ಣತೆ, ಅಕೌಶಲ್ಯ, ನಯಹೀನತೆಗಳು ಇಲ್ಲಿಲ್ಲ. ಇದಕ್ಕೆ ಬಹಳ ಒಳ್ಳೆಯ ಉದಾಹರಣೆ, ಈ ಸೃಷ್ಟಿ ಹೇಗೆ ಮೊದಲಾಯಿತು ಎಂದು ವಿಚಾರ ನಡೆಸಿರುವ ಈ ಋಕ್ಕುಗಳ ಗುಚ್ಛ.

“ಸೃಷ್ಟಿಯ ಆರಂಭ ಮೊದಲುಗೊಂಡಾಗ ಅಸತ್ ಇರಲಿಲ್ಲ ಸತ್ ಕೂಡಾ ಇರಲಿಲ್ಲ. ಲೋಕ ಇರಲಿಲ್ಲ. ಆಚೆಯದು ಯಾವುದಿದೆ, ವ್ಯೋಮ… ಅದೂ ಇರಲಿಲ್ಲ. ಇದನ್ನೆಲ್ಲ ಸುತ್ತಿ ಬೇರೆ ಸತ್ವ ಯಾವುದಿತ್ತು, ಅದು ಇದ್ದದ್ದು ಯಾವುದರಲ್ಲಿ? ಯಾರ ಆಧೀನದಲ್ಲಿ? ಗಹನವಾಗಿ, ಗಂಭೀರವಾಗಿ, ನೀರು ಇದ್ದಿತೋ ಹೇಗೆ?

“ಮೃತ್ಯು ಇರಲಿಲ್ಲ ಎಂದಮೇಲೆ ಅದರ ವಿರುದ್ಧ ತತ್ತ್ವವೂ ಇರಲಿಲ್ಲ. ಇರುಳು ಎನ್ನುವುದರ, ಹಗಲು ಎನ್ನುವುದರ ಲಕ್ಷಣ ಇರಲಿಲ್ಲ. ಒಂದೇ ಒಂದು ತತ್ತ್ವ ಇದ್ದಿತು; ಅದು ಗಾಳಿ ಇಲ್ಲದೆ ತನ್ನ ಸ್ವಭಾವ ಮಾತ್ರದಿಂದ ಉಸಿರಾಡುತ್ತಿದ್ದಿತು. ಮೇಲಾಗಿ, ಅದರಿಂದ ಬೇರೆಯದಾದ, ಅದನ್ನು ಮೀರಿದ, ಯಾವುದೂ ಇರಲಿಲ್ಲ.

“ಕತ್ತಲೆ ಮುಚ್ಚಿದ ಕತ್ತಲಷ್ಟೇ ಇದ್ದಿತು ಆ ಮೊದಲ ದೆಸೆಯಲ್ಲಿ.  ಇದ್ದದ್ದೆಲ್ಲವೂ ಉಪಲಕ್ಷಣವಿಲ್ಲದೆ ಸಲಿಲವಾಗಿದ್ದಿತು. “ಶೂನ್ಯ”ವು ಅದನ್ನು ಸಂಪೂರ್ಣವಾಗಿ ಹೊದ್ದುಕೊಂಡಿತ್ತು. ಗಾಢ ತಪಸ್ಸಿನ ಫಲವಾಗಿ ಇದರಿಂದ ಆ “ಒಂದು” ಉಂಟಾಯಿತು. ಮೊದಲಲ್ಲಿ ಅದರಲ್ಲಿ ಕಾಮವು ಉತ್ಪನ್ನಗೊಂಡಿತು. ಅದು ಮನಸ್ಸಿನ ಮೊದಲ ಬೀಜತತ್ತ್ವ. ಜ್ಞಾನವಂತರು ತಮ್ಮ ಬುದ್ಧಿಯಿಂದ, ತಮ್ಮ ಹೃದಯದಲ್ಲಿ ಅರಸಿ, ಸತ್ ಆದದ್ದು ಅಸತ್ತಿನಲ್ಲಿ ಅಡಗಿ ಮಲಗಿರುವುದನ್ನು ಕಂಡರು.

“ಸತ್ ತತ್ತ್ವದ ಕಿರಣ, ಆವರಿಸಿದ್ದ ತಮಸ್ಸನ್ನು ತೂರಿ ಹೊರಗೆ ಹರಡಿತು. ಕೆಳಗೆ ಎಂದರೆ ಕೆಳಗೆ, ಮೇಲಕ್ಕೆಂದರೆ ಮೇಲೆ ವ್ಯಾಪಿಸಿಕೊಂಡಿತು. ಬೀಜ ಸತ್ವ ಆಯಿತು. ಫಲ ಸತ್ವ ಆಯಿತು. ಕೆಳಗೆ ಶಕ್ತಿ ಇದ್ದಿತು, ಮೇಲೆ ಪ್ರವೃತ್ತಿ ಇದ್ದಿತು.

“ಇದು ಹೀಗೆಯೇ ಎಂದು ಬಲ್ಲವರು ಯಾರು? ಯಾರು ಇದನ್ನು ಹೇಳಬಲ್ಲರು? ಸೃಷ್ಟಿ ಎಲ್ಲಿಂದ ಹುಟ್ಟಿತು ಎಂದು, ಇದರ ಮೂಲ ಎಲ್ಲೆಂದು ಯಾರು ಹೇಳಬಲ್ಲರು? ದೇವತೆಗಳು ಕೂಡಾ ಇದಾದಮೇಲೇ ಅಲ್ಲವೆ ಪ್ರಕಟಗೊಂಡಿದ್ದು? ಅಂದಮೇಲೆ, ಅವರಿಗೂ ಮೊದಲು ಉಂಟಾದದ್ದನ್ನು ಬಲ್ಲವರು ಯಾರು?

“ವಿಧವಿಧದ ಈ ಸೃಷ್ಟಿ ಎಲ್ಲಿಂದ ಆಯಿತು? ಇದೇನು ಯಾರಾದರೂ ಮಾಡಿ ಉಂಟಾದದ್ದೇ? ಅಥವಾ ಯಾರೂ ಏನನ್ನೂ ಮಾಡದೆಯೇ ಆದದ್ದೇ? ಇದರ ಅಧ್ಯಕ್ಷನಾಗಿ ಎಲ್ಲಕ್ಕೂ ಉನ್ನತವಾದ ವ್ಯೋಮದಲ್ಲಿ ಯಾರು ಇದ್ದಾರೋ, ಅವರು ಇದನ್ನು ಅರಿತಿರಬಹುದು. ಹಾಗೆಯೇ ಇದು ಅವರೂ ಅರಿಯದ ಸಂಗತಿಯಾಗಿರಲೂ ಸಾಧ್ಯ”.

ಈ ವಿಚಾರ ಸರಣಿ, ಈ ಉಕ್ತಿಯ ಭಂಗಿ ಯಾವುದೇ ಜನತೆಯ ಆದಿಮ ಮನೋಧರ್ಮಕ್ಕೆ ಎಟಕುವುದಿಲ್ಲ. ಇವು ಮುಟ್ಟಿರುವ ಎತ್ತರ ಇಂಥದ್ದು. ಈಗ ನಾವು, ಬಹು ಮುಂದುವರಿದವರೆಂದು ಭಾವಿಸಿಕೊಂಡಿರುವ ಜಾಣ ಜನರಾದ ನಾವು ಕೂಡಾ ನಮ್ಮ ಜಾಣ ಮಾತಿನಲ್ಲಿ ಈ ವಾಕ್ಯಗಳ ಎತ್ತರವನ್ನು ಮುಟ್ಟಬಲ್ಲೆವು ಎನ್ನಿಸುವುದಿಲ್ಲ.

(ಮುಂದುವರಿಯುವುದು)

(ಆಕರ : ಅಂತರಗಂಗೆ | ಮಾಸ್ತಿ ವೆಂಕಟೇಶ ಅಯ್ಯಂಗಾರ್)

1 Comment

Leave a Reply