“ಮೂಲಕ್ಕೆ ಮರಳುವುದೆಂದರೆ….” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.1

ಮನಸ್ಸು ಇರುವುದೇ ಭಾಗಗಳಾಗಿ. ಅವು ಒಂದಾಗುವುದು ಸಾಧ್ಯವೇ ಇಲ್ಲ. ಮನಸ್ಸಿನ ಸ್ವಭಾವ ತಿಳಿದುಕೊಳ್ಳಿ, ಆಗ ಸೊಸಾನ್ ನ ಸೂತ್ರಗಳು ಸ್ಪಷ್ಟವಾಗಿ ಅರ್ಥವಾಗುತ್ತವೆ  | ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ

Return to the root (ಭಾಗ 4.1)

ಮೂಲಕ್ಕೆ ಮರಳುವುದೆಂದರೆ, ಅರ್ಥಕ್ಕೆ ಲಗ್ಗೆ ಹಾಕಿದಂತೆ
ಆದರೆ ರೂಪವನ್ನು ಬಯಸುವುದೆಂದರೆ, ಮೂಲದ ವಿಳಾಸ ಮರೆತಂತೆ ಸೊಸಾನ್

****

ಪ್ರಜ್ಞೆಯ ಸ್ವಭಾವ ಕನ್ನಡಿಯಂತೆ
ಆಯ್ಕೆಗಳಿಲ್ಲ, ಆದ್ಯತೆಗಳಿಲ್ಲ, ಆದರ್ಶಗಳಿಲ್ಲ.
ಒಳ್ಳೆಯದು-ಕೆಟ್ಟದ್ದು, ಸುಂದರ-ಕುರೂಪ ಎನ್ನುವ ಭೇದಭಾವಗಳಿಲ್ಲ.
ಸುಮ್ಮನೇ ಪ್ರತಿಫಲಿಸುತ್ತದೆ.
ಪ್ರಜ್ಞೆಯ ಮೂಲ ಸ್ವಭಾವ ಥೇಟ್ ಕನ್ನಡಿಯಂತೆ.

ಮಗುವಿನ ವಿಷಯವೂ ಹಾಗೆಯೇ
ಮಾತನ್ನು ಬಗೆದು ನೋಡುವುದಿಲ್ಲ,
ಯಾವುದಕ್ಕೂ ಎದುರು ಮಾತನಾಡುವುದಿಲ್ಲ.
ಒಮ್ಮೆ ಅರ್ಥ ಹಚ್ಚುವ ಪ್ರಕ್ರಿಯೆ ಶುರುವಾಯಿತೆಂದರೆ
ಕನ್ನಡಿ ತನ್ನ ಕನ್ನಡಿತನವನ್ನ ಕಳೆದುಕೊಂಡಂತೆ.
ಆಗಲೇ ಅಲ್ಲಿ, ಗೊಂದಲಗಳು, ಅನಿಸಿಕೆಗಳು
ಛಿದ್ರಗೊಂಡ ವಿಚಾರಗಳು.
ಪೂರ್ತಿ ದ್ವಂದ್ವ ಪ್ರಕೃತಿ.

ಒಮ್ಮೆ ಪ್ರಜ್ಞೆ ತನ್ನ ಕನ್ನಡಿತನವನ್ನು ಕಳೆದುಕೊಂಡಿತೆಂದರೆ
ಮನಸ್ಸಿನ ರೂಪ ಧರಿಸುತ್ತದೆ ಹಾಗು
ಈ ಮನಸ್ಸು ಯಾವತ್ತಿದ್ದರೂ ಒಡೆದ ಕನ್ನಡಿಯೇ.

ಮೂಲದಲ್ಲಿ ಮನಸ್ಸು ಪ್ರಜ್ಞೆಯೇ.
ಆಯ್ಕೆಗಳಿಂದ, ತರತಮಗಳಿಂದ, ರಾಗ-ದ್ವೇಷಗಳಿಂದ
ಒಡಕಿನಿಂದ, ತನ್ನನ್ನು ತಾನು ಮುಕ್ತಗೊಳಿಸಿಕೊಂಡಾಗ
ಮನಸ್ಸು ಮತ್ತೆ ಪ್ರಜ್ಞೆಯಾಗುತ್ತದೆ.

ತತ್ವಜ್ಞಾನ, ಸಿದ್ಧಾಂತ, ನ್ಯಾಯ ನಿರ್ಣಯ, ಆಯ್ಕೆಗಳಿಂದ
ಕಳಚಿಕೊಳ್ಳುವುದು ಹೇಗೆ?
ಇದು ಹುಡುಕಾಟದ ಹಿಂದೆ ಬಿದ್ದವನ ಮುಂದೆ ಇರುವ
ಏಕೈಕ ಪ್ರಶ್ನೆ.
ಆದರೆ ಈ ಪ್ರಶ್ನೆ ಕೂಡ ಆಯ್ಕೆಯ ಒಂದು ಭಾಗವಾಗಿರಬಾರದು
ಇದು ಕಷ್ಟ, ಇದು ಮುಖ್ಯ ಸಮಸ್ಯೆ.

ಪೂರ್ತಿಯಾಗಿ ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಿ
ಆಯ್ಕೆ ಮಾಡುವುದು ಮತ್ತು ಆಯ್ಕೆಗೆ ಮುಂದಾಗದಿರುವುದು
ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಿರಾದರೆ
ಮತ್ತೆ ಸಮಸ್ಯೆಗೆ ಮರಳಿದಂತೆ.

ಅಸ್ತಿತ್ವವೇ ಆಯ್ಕೆಯಾಗಿರುವಾಗ
ಆಯ್ಕೆ ರಹಿತವಾಗಿರುವುದು ಸಾಧ್ಯವಿಲ್ಲದ ಮಾತು.

ಮತ್ತೇನು ಪರಿಹಾರ?
‘ಏನೂ ಮಾಡಬೇಕಾಗಿಲ್ಲ’ ಇಷ್ಟು ತಿಳುವಳಿಕೆ ಸಾಕು.
ಈ ಎಚ್ಚರವೊಂದಿದ್ದರೆ ಸಾಕು.
‘ಬ್ರಹ್ಮ’ ಸಾಧ್ಯವಾಗುವುದು ಪ್ರಯತ್ನದಿಂದಲ್ಲ
ತಿಳುವಳಿಕೆಯಿಂದ, ಅರಿವಿನಿಂದ.

ಯಾವ ಪ್ರಯತ್ನವೂ ನಿಮ್ಮನ್ನು
ಅಪರಿಮಿತದೆಡೆಗೆ ಕರಮದೊಯ್ಯುವುದಿಲ್ಲ.
ಏಕೆಂದರೆ ಪ್ರಯತ್ನ ಯಾವತ್ತಿದ್ದರೂ
ದ್ವಂದ್ವ ಮನಸ್ಸಿನ ಕೈಗೊಂಬೆ.
ಆಗಲೇ ನೀವು ಜಗತ್ತನ್ನು ತಿರಸ್ಕರಿಸಿ
ದೈವವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಆಗ
ಶರಣಾಗತಿ ನಿಮ್ಮ ಆದ್ಯತೆಯಲ್ಲ
ಸ್ವಾತಂತ್ರ್ಯ ನಿಮ್ಮ ಆದ್ಯತೆ .
ಮೋಕ್ಷವನ್ನು ಬಯಸುತ್ತೀರಿ
ಆತ್ಯಂತಿಕ ಬಿಡುಗಡೆಯನ್ನು ಎದುರು ನೋಡುತ್ತೀರಿ.
ಆದರೆ ಮತ್ತೆ ಇಲ್ಲಿ ಮನಸ್ಸಿನ ಪ್ರವೇಶವಾಗಿದೆ.
ನಿಮಗೆ ಏನೂ ಸಾಧ್ಯವಾಗುವುದಿಲ್ಲ.
ಹಾಗಾಗರೆ ಏನು ಮಾಡುವುದು?
ಎಚ್ಚರವಾಗಿರಿ, ಸನ್ನಿವೇಶವನ್ನು ಜಾಗ್ರತೆಯಿಂದ ಗಮನಿಸಿ.

ಎಚ್ಚರದಿಂದಿರುವಾಗ
ಯಾವುದೋ ಒಂದು ಥಟ್ಟನೆ ಬೆಳಕಲ್ಲಿ
ಮನಸ್ಸು ತನ್ನ ಸ್ವಭಾವ ಕಳಚಿಕೊಳ್ಳುತ್ತದೆ,
ತನ್ನ ಕನ್ನಡಿತನವನ್ನು ಮತ್ತೆ ಪಡೆದುಕೊಳ್ಳುತ್ತದೆ.
ಆಗ ನೀವು ಮತ್ತೆ ಹುಟ್ಟುತ್ತೀರಿ
ಮೂಲಕ್ಕೆ ಮರಳುತ್ತೀರಿ.

ನೀವು ಮೂಲದ ಅಪಾರ ಆಳಕ್ಕೆ ಜಾರಿದಾಗ
ಇಡೀ ಅಸ್ತಿತ್ವವೂ ಮೂಲಕ್ಕೆ ಮರಳುತ್ತದೆ.
ನಿಮಗೆ ಅಸ್ತಿತ್ವ, ನೀವು ಇದ್ದ ಹಾಗೆ ಕಾಣಲು ಶುರುವಾಗುತ್ತದೆ.
ನಿಮ್ಮಲ್ಲಿ ಒಡಕು ಇದ್ದರೆ ಜಗತ್ತಿನಲ್ಲೂ ಒಡಕು,
ಮುಂಜಾವು ರಾತ್ರಿಗೆ ವಿರುದ್ಧವಾಗುತ್ತದೆ
ಆದರೆ ಅದು ಹಾಗಲ್ಲ;
ರಾತ್ರಿ ಮತ್ತು ಮುಂಜಾವು ಎರಡೂ
ಒಂದು ಇನ್ನೊಂದರ ಹಿಂದೆ ಸುತ್ತುತ್ತಿರುತ್ತವೆ.
ಒಂದಿಲ್ಲದೆ ಇನ್ನೊಂದಿಲ್ಲ
ಹಾಗಾಗಿ ಆಳದಲ್ಲಿ ಎರಡೂ ಒಂದೇ.

ನಿಮ್ಮಲ್ಲಿ ಒಡಕಿದ್ದರೆ
ಸಾವು, ಬದುಕು ಎರಡೂ ಪರಸ್ಪರ ವಿರುದ್ಧ
ಆದರೆ ಅದು ಹಾಗಲ್ಲ
ಸಾವು, ಬದುಕು ಒಂದು ಇನ್ನೊಂದರ ಹಿಂದೆ ಮುಂದೆ.
ನೀವು ಹುಟ್ಟಿದ ಕೂಡಲೆ ಸಾಯಲು ಶುರು ಮಾಡುತ್ತೀರಿ
ಸತ್ತ ತಕ್ಷಣದಲ್ಲಿಯೇ, ಇನ್ನೊಂದು ಹೊಸ ಬದುಕಿನ ಹುಟ್ಟು.

ಇದೊಂದು ವೃತ್ತ
ಚೀನಿಯರ ಯಿನ್ ಮತ್ತು ಯಾಂಗ್ ವೃತ್ತ.

ಈ ವೃತ್ತವನ್ನು
ಮತ್ತೆ ಮತ್ತೆ ನೆನಪಿನಲ್ಲಿಟಿಟುಕೊಳ್ಳಿ.
ಯಾವ ಕ್ರಾಸ್, ಯಾವ ಸ್ವಸ್ತಿಕ್, ಯಾವ ಓಂ ಸಂಕೇತಗಳೂ
ಯಿನ್ ಮತ್ತು ಯಾಂಗ್ ವೃತ್ತವನ್ನು ಮೀರಿಸಲಾರವು.

ಪ್ರೀತಿ-ದ್ವೇಷ, ರಾತ್ರಿ-ಬೆಳಗು,
ಬದುಕು-ಸಾವು, ಪ್ರಕೃತಿ-ಪುರುಷ
ಹೀಗೆ ಯಾವ ವೈರುಧ್ಯಗಳ ಅಸ್ತಿತ್ವವನ್ನೂ
ಬೇರೆ ಯಾವ ಸಂತೇತವೂ
ಇಷ್ಟು ಸ್ಪಷ್ಟವಾಗಿ ವಿವರಿಸುವುದಿಲ್ಲ.

ವೈರುಧ್ಯಗಳು ಕೂಡಿಯೇ ಅಸ್ತಿತ್ವದಲ್ಲಿವೆ.
ಒಳಗಿನಿಂದ ನೀವು ಇಬ್ಭಾಗವಾಗಿದ್ದೀರಿ
ಹೊರಗಿನಿಂದ ಅವು ಬೇರೆ ಬೇರೆಯಾಗಿವೆ.

ನೀವು ಒಂದಾದಾಗ, ಇಡೀ ಅಸ್ತಿತ್ವವೇ ಒಂದಾಗುತ್ತದೆ.
ಆಗಲೇ ಬ್ರಹ್ಮಕ್ಕೆ ಮುಖಾ ಮುಖಿಯಾಗುತ್ತೀರಿ.
ಒಂದು ಮಾತ್ರ ಒಂದನ್ನು ಸ್ವಾಗತಿಸುತ್ತದೆ
ಎರಡಾದರೆ, ಎರಡು ಎದುರಾಗುತ್ತವೆ.
ಆದರೆ ನೀವು ಹಲವಾರು
ಹಾಗಾಗಿ ನಿಮ್ಮೆದುರು ಹಲವಾರು ವೈರುಧ್ಯಗಳು.

ಗುರ್ಜೀಫ್ ಹೇಳುವ ಹಾಗೆ
ನೀವೊಂದು ಮನೆಯಂತೆ
ಅಲ್ಲಿ ಯಾರು ಅತಿಥೇಯರು? ಯಾರಿಗೂ ಗೊತ್ತಿಲ್ಲ.
ಮನೆಯಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ.
ಯಾರು ಅತಿಥೇಯರು ಎನ್ನುವುದು
ಯಾರಿಗೂ ಗೊತ್ತಿಲ್ಲದ ಕಾರಣ
ಎಲ್ಲರೂ ಅತಿಥಿಗಳೇ.
ಆ ಕ್ಷಣದಲ್ಲಿ, ಯಾರು ಬಲಶಾಲಿಗಳೋ
ಅವರೇ ಅತಿಥೇಯರ ಪಟ್ಟಕ್ಕೆ ಬರುತ್ತಾರೆ.

ಕ್ರೋಧ ಬಲಶಾಲಿಯಾದಾಗ, ಕ್ರೋಧವೇ ಅತಿಥೇಯ
ಪ್ರೀತಿಗೆ ಬಲ ಬಂದಾಗ, ಪ್ರೀತಿಯೇ ಮನೆಯೊಡೆಯ
ಅಸೂಯೆ ಯುದ್ಧ ಗೆದ್ದಾಗ, ಅಸೂಯೆ ಯಜಮಾನ.
ಈ ವ್ಯವಸ್ಥೆ ಸತತ, ನಿರಂತರ.

ದೂರದೂರಿಗೆ ಹೋದ ನಿಜದ ಮಾಲಿಕ
ಇನ್ನೂ ಮರಳಿ ಬಂದಿಲ್ಲ ಅಥವಾ
ಮಲಗಿರುವವನು ಇನ್ನೂ ಎದ್ದಿಲ್ಲ.
ಆದ್ದರಿಂದಲೇ, ಸಂತರು, ಪ್ರವಾದಿಗಳು
ಏಳಿ, ಎದ್ದೇಳಿ ಎಂದು ಅಂಗಲಾಚುತ್ತಾರೆ.

ಮಾಲಿಕ ಎಚ್ಚರಾದರೆ ಸಾಕು
ನೌಕರರೆಲ್ಲ ತಮ್ಮ ತಮ್ಮ ಜಾಗಕ್ಕೆ ಮರಳುತ್ತಾರೆ.
ಮನೆಯ ಮೇಲೆ ಮಾಲಿಕತ್ವ ಸಾಧಿಸುವುದನ್ನ ನಿಲ್ಲಿಸುತ್ತಾರೆ.

ಆದ್ದರಿಂದಲೆ ಸಮಸ್ಯೆ
ಸಿಟ್ಟಿನೊಂದಿಗೆ, ಅಸೂಯೆಯೊಂದಿಗೆ ಗುದ್ದಾಡುವುದಲ್ಲ,

ಸಮಸ್ಯೆ, ಮಾಲಿಕನನ್ನು ಎಚ್ಚರಿಸುವುದು.
ಅವನಿಗೆ ಅವನ ಅಧಿಕಾರವನ್ನು ತಿಳಿಸಿ ಹೇಳುವುದು.
ಒಮ್ಮೆ ಮಾಲಿಕ ಮನೆಯನ್ನು ಹತೋಟಿಗೆ ತೆಗೆದುಕೊಂಡನೆಂದರೆ
ಎಲ್ಲವೂ ಹತೋಟಿಗೆ ಬರುವುದು.
ಎಚ್ಚರ, ಅರಿವು ಸಾಧ್ಯವಾಗುವುದು.

ಮನಸ್ಸು ಇರುವುದೇ ಭಾಗಗಳಾಗಿ
ಅವು ಒಂದಾಗುವುದು ಸಾಧ್ಯವೇ ಇಲ್ಲ.
ಮನಸ್ಸಿನ ಸ್ವಭಾವ ತಿಳಿದುಕೊಳ್ಳಿ, ಆಗ
ಸೊಸಾನ್ ನ ಸೂತ್ರಗಳು ಸ್ಪಷ್ಟವಾಗಿ ಅರ್ಥವಾಗುತ್ತವೆ.

(ಮುಂದುವರೆಯುತ್ತದೆ…..)

1 Comment

Leave a Reply to “ಅಸ್ತಿತ್ವದಲ್ಲಿ ವೈರುಧ್ಯಗಳಿಲ್ಲ…” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.2 – ಅರಳಿಮರCancel reply