ಕಲ್ಲೆಂದರೆ ಬರಿ ಕಲ್ಲಲ್ಲ…. : ಚಿಕ್ಕ ಹುಡುಗನ ಪ್ರಬಂಧ ಕಥೆ

ಶಾಲೆಯಲ್ಲಿ ಶಿಕ್ಷಕಿ ಹೇಳಿದರು, “ನಿಮಗೆ ಇಷ್ಟವಾದ ವಿಷಯದ ಮೇಲೆ ಪ್ರಬಂಧ ಬರೆಯಿರಿ” ಎಂದು.

ಒಬ್ಬ ಹುಡುಗನು ಪ್ರಬಂಧ ಬರೆದ

ವಿಷಯ  : ಕಲ್ಲು

ಕಲ್ಲು ಎಂದರೆ ದೇವರು
ಕಾರಣವೇನೆಂದರೆ ಅದು ಸುತ್ತಮುತ್ತ
ಎಲ್ಲೆಡೆಯೂ ಇರುತ್ತದೆ.. ನೋಡಿದರೆ ಕಾಣುತ್ತದೆ..

ಅಪರಿಚಿತ ಬೀದಿಗಳಲ್ಲಿ ಅದು
ನಾಯಿಗಳಿಂದ ನಮ್ಮನ್ನು ರಕ್ಷಿಸುತ್ತದೆ

ಹೈವೇಯ ಮೇಲೆ ಊರು
ಇನ್ನೂ ಎಷ್ಟು ದೂರವಿದೆ ಎಂಬುದನ್ನು ತೋರಿಸುತ್ತದೆ
ಮನೆಯ ಸುತ್ತಲೂ ಬೇಲಿಯಂತೆ ರಕ್ಷಣೆ ನೀಡುತ್ತದೆ

ಅಡಿಗೆ ಮನೆಯಲ್ಲಿ
ಅಮ್ಮನಿಗೆ ರುಬ್ಬುವುದರಲ್ಲಿ ಸಹಾಯ ಮಾಡುತ್ತದೆ

ಹುಡುಗರಿಗೆ ಮರದ ಮೇಲಿನ
ಕಾಯಿ, ಹುಣಿಸೆಗಳನ್ನು ಬೀಳಿಸಿ ಕೊಡುತ್ತದೆ
.
ಒಮ್ಮೊಮ್ಮೆ ನಮ್ಮ ತಲೆಗೆ ತಾಗಿ
ಬಳಬಳನೆ ರಕ್ತ ಬರುವಂತೆ ಮಾಡುತ್ತದೆ
ನಮ್ಮ ಶತ್ರುಗಳು ಯಾರೆಂಬುದನ್ನು ಗೊತ್ತು ಮಾಡಿ ಕೊಡುತ್ತದೆ

ತಲೆತಿರುಗಿದ ಯುವಕರ ಕೈಗೆ ಸಿಕ್ಕರಂತೂ
ಗಾಜುಗಳನ್ನು ಒಡೆದು ಅವರ ಸಿಟ್ಟನ್ನು ಶಾಂತ ಮಾಡುತ್ತದೆ

ರಸ್ತೆಯ ಮೇಲಿನ ಕೆಲಸಗಾರರ
ಹೊಟ್ಟೆಪಾಡಿಗಾಗಿ
ತನ್ನನ್ನೇ ಒಡೆದುಕೊಳ್ಳಲು ಬಿಡುತ್ತದೆ

ಶಿಲ್ಪಿಗಳ ಮನಸ್ಸಿನಲ್ಲಿಯ
ಸೌಂದರ್ಯವನ್ನು ಸಾಕಾರ ಮಾಡಲು
ಉಳಿಯ ಪೆಟ್ಟನ್ನು ಸಹಿಸುತ್ತದೆ

ರೈತರಿಗೆ
ಮರಗಳ ಕೆಳಗೆ ಕೆಲಹೊತ್ತು ವಿಶ್ರಾಂತಿ ನೀಡುತ್ತದೆ

ಎಳೆಯ ವಯಸ್ಸಿನಲ್ಲಿ ಸ್ಟಂಪ್, ಕಲ್ಲಾಟ, ಲಗೋರಿಯಂತಹ
ಅನೇಕ ರೂಪಗಳಲ್ಲಿ ನಮ್ಮ ಜೊತೆ ಆಟವಾಡುತ್ತದೆ

ಯಾವಾಗಲೂ ನಮ್ಮ ಸಹಾಯಕ್ಕೆ
ಒದಗಿ ಬರುತ್ತದೆ ದೇವರ ಹಾಗೆ

ನನಗೆ ಹೇಳಿ
ದೇವರನ್ನು ಹೊರತುಪಡಿಸಿ ಯಾರಾದರೂ ಮಾಡುವರೆ
ನಮಗಾಗಿ ಇಷ್ಟೋಂದು??

ಶಿಕ್ಷಕಿ ಹೇಳುತ್ತಾರೆ –
ನೀನು ‘ಕಲ್ಲು’ ನಿನಗೆ ಗಣಿತ ಬರುವುದಿಲ್ಲ

ಅಮ್ಮ ಹೇಳುತ್ತಾರೆ –
ಏನೂ ತೊಂದರೆ ಇಲ್ಲ
ನೀನು ನನ್ನ ಮಮತೆಯ ‘ಕಲ್ಲು’ ಆಗಿರುವಿ 
ದೇವರಿಗೆಲ್ಲಿ ಗಣಿತ ಬರುತ್ತದೆ! ಇಲ್ಲದಿದ್ದರೆ
ಅವನು ಲಾಭ-ನಷ್ಟ ನೋಡಿರುತ್ತಿದ್ದ
ಅವನು ವ್ಯಾಪಾರಿಯಾಗಿರುತ್ತಿದ್ದ

ಅಮ್ಮ ಹೇಳುತ್ತಾರೆ –
ಕಲ್ಲಿಗೆ ಕುಂಕುಮವಿಟ್ಟು
ಅದರಲ್ಲಿ ಆಸ್ಥೆಯಿಟ್ಟರೆ
ಅದು ‘ದೇವ’ರಾಗುತ್ತದೆ
ಅಂದರೆ ‘ಕಲ್ಲೇ’ ದೇವರು

 ಹುಡುಗನಿಗೆ ಪ್ರಥಮ ಸ್ಥಾನದ ಬಹುಮಾನ ದೊರೆಯಿತು

ಮೂಲ : ಮರಾಠಿ | ಕನ್ನಡಕ್ಕೆ : ರೋಹಿತ್ ರಾಮಚಂದ್ರಯ್ಯ

Leave a Reply