ಅಧ್ಯಾತ್ಮ ಡೈರಿ : ಸಹಜವಾಗಿರುವುದು ಬಹಳ ಸುಲಭ, ಅಷ್ಟೇ ಕಷ್ಟ…

ನಮಗೆ ಕಟ್ಟಿಗೆ ಕಡಿಯುವುದಕ್ಕಿಂತ ಹೆಚ್ಚಿನದೇನೋ ಬೇಕಾಗಿರುತ್ತದೆ. ಎಲ್ಲರ ದುಡಿಮೆಯೂ ಸಂತೃಪ್ತಿಯಿಂದ ಉಂಡು ಮಲಗುವುದಕ್ಕಾಗಿಯೇ ಆಗಿದ್ದರೂ ನಾವು ಅಷ್ಟಕ್ಕೆ ತೃಪ್ತರಾಗುವುದಿಲ್ಲ. ನಮ್ಮ ದುಡಿಮೆಯ ಹೆಚ್ಚುವರಿ ಲಾಭವಾಗಿ ನಮಗೆ ಕೀರ್ತಿ ಬರಬೇಕೆಂದು ಆಸೆಪಡುತ್ತೇವೆ. ಅಷ್ಟೇ ಅಲ್ಲ, ನಮಗೆ ಕಪ್ಪೆ ಅಥವಾ ಜೀರುಂಡೆ ಪಾಠವಾಗುವುದಿಲ್ಲ. ಅವು ನಮಗೆ ಸಂತಸವನ್ನೂ ಕೊಡುವುದಿಲ್ಲ. ಕಪ್ಪೆಯ ಕುಪ್ಪಳಿಕೆಯಿಂದ ಬೋಧೆ ಪಡೆಯುವಲ್ಲಿ, ಜೀರುಂಡೆಯ ಜೀಕಾರಕ್ಕೆ ಧ್ಯಾನಸ್ಥರಾಗುವಲ್ಲಿ ನಮಗೆ ನಮ್ಮ ಅಹಂಕಾರ ಅಡ್ಡವಾಗುತ್ತದೆ   ~ ಅಲಾವಿಕಾ

ಬ್ಬ ಝೆನ್ ಸಾಧಕ. ದಿನಾಲು ಕಟ್ಟಿಗೆ ಕಡಿಯುತ್ತಿದ್ದ, ಹೊರೆ ಕಟ್ಟಿ ಮಾರಾಟ ಮಾಡುತ್ತಿದ್ದ, ಉಣ್ಣುತ್ತಿದ್ದ, ಮತ್ತು ಮಲಗುತ್ತಿದ್ದ.  ಇದು ಅವನ ಜೀವನ ಶೈಲಿಯಾಗಿತ್ತು.
ಒಂದು ದಿನ ಅವನಿಗೆ ಜ್ಞಾನೋದಯವಾಯಿತು. ಅದರಿಂದೇನಾಯಿತು?
ಅನಂತರವೂ ಆತ ದಿನಾಲು ಕಟ್ಟಿಗೆ ಕಡಿಯುತ್ತಿದ್ದ, ಹೊರೆ ಕಟ್ಟಿ ಮಾರಾಟ ಮಾಡುತ್ತಿದ್ದ, ಉಣ್ಣುತ್ತಿದ್ದ, ಮತ್ತು ಮಲಗುತ್ತಿದ್ದ! ಇದೇ ಅವನ ಜೀವನ ಶೈಲಿಯಾಗಿ ಮುಂದುವರೆದಿತ್ತು.
ಅವನ ಬದುಕೇ ಒಂದು ಪಾಠದಂತಿತ್ತು. ಅವನ ಮೌನವೇ ಬೋಧನೆಯಾಗಿತ್ತು. ಅವನ ಬಳಿ ಝೆನ್ ಕಲಿಯಲು ದೂರದೂರದಿಂದ ಆಸಕ್ತರು ಅರಸಿಕೊಂಡು ಬಂದರು. ಆತನಿಗೆ ಝೆನ್ ಗುರುವೆಂಬ ಮಾನ್ಯತೆಯೂ ದಕ್ಕಿತು.
ತನ್ನ ಪಾಡಿಗೆ ಕಟ್ಟಿಗೆ ಕಡಿದು, ಮಾರಿ, ಉಂಡು ಮಲಗುತ್ತಿದ್ದವನಲ್ಲಿ ಜನರು ಅದೇನು ಕಂಡಿದ್ದರು? ಅವನಲ್ಲಿ ಅಂಥ ಯಾವ ಆಕರ್ಷಣೆ ಇತ್ತು?

ವಿಷಯ ಇಷ್ಟೇ. ಆತ ಅತ್ಯಂತ ಸಹಜವಾಗಿದ್ದ. ಅವನಲ್ಲಿ ಘಟಿಸಿದ ಜ್ಞಾನೋದಯ ಕೂಡ ಅವನಿಗೆ ಸಹಜ ವಿದ್ಯಮಾನವಾಗಿತ್ತು. ಆ ಮೊದಲು ಮಾಡುತ್ತಿದ್ದ ಕೆಲಸಗಳನ್ನೇ ಆತ ಈಗ ಪ್ರಜ್ಞಾಪೂರ್ವಕವಾಗಿ, ಸಹಾನುಭೂತಿಯಿಂದ ಮಾಡತೊಡಗಿದ್ದ. ಅಲ್ಲಿ ಯಾವುದೇ ಕೃತಕತೆ, ತೋರುಗಾಣಿಕೆ ಅಥವಾ ಅಹಮಿಕೆಗೆ ಜಾಗವಿರಲಿಲ್ಲ. ಆತನ ಸಹಜತೆಯೇ ಜನಕ್ಕೆ ಮುಖ್ಯ ಆಕರ್ಷಣೆಯಾಗಿತ್ತು. ಸಾಮಾನ್ಯರಿಗೆ ಯಾವುದು ಅತ್ಯಂತ ಕಠಿಣವೋ ಅದು ಆತನಿಗೆಬಹಳ ಸುಲಭದ್ದಾಗಿತ್ತು.

ನಮಗೆಲ್ಲ ಸಹಜವಾಗಿರುವುದು ಅತ್ಯಂತ ಕಷ್ಟದ ಕೆಲಸ. ನಮಗೆ ಕಟ್ಟಿಗೆ ಕಡಿದು, ಮಾರಿ, ಉಂಡು ಮಲಗಿ ಜೀವನ ಕಳೆಯುವುದು ಕಷ್ಟದ ಕೆಲಸ. ಯಾವ ಗೊಣಗಾಟವೂ ಇಲ್ಲದೆ ಕೆಲಸ ಮಾಡುವುದು ನಮ್ಮ ಅಹಂಕಾರಕ್ಕೆ ಒಗ್ಗದ ವಿಚಾರ. ಆ ಝೆನ್ ಸಾಧಕ ತನ್ನ ಸರಳ ಜೀವನ ಶೈಲಿಯನ್ನು ಆನಂದಿಸುತ್ತಿದ್ದ. ತನ್ನ ಪಾಡಿಗೆ ಹಾಡಿಕೊಳ್ಳುತ್ತಿದ್ದ. ಹುಲ್ಲಿನ ಮೇಲೆ ಜೀಂಗುಡುವ ಜೀರುಂಡೆ, ಕೊಳದೊಳಕ್ಕೆ ಧುಮುಕುವ ಕಪ್ಪೆ – ಇವುಗಳು ಕೂಡ ಅವನ ತಿಳಿವನ್ನು ಉದ್ದೀಪಿಸಬಲ್ಲವಾಗಿದ್ದವು.
ನಮಗೆ ಹಾಗಲ್ಲ. ನಮಗೆ ಕಟ್ಟಿಗೆ ಕಡಿಯುವುದಕ್ಕಿಂತ ಹೆಚ್ಚಿನದೇನೋ ಬೇಕಾಗಿರುತ್ತದೆ. ಎಲ್ಲರ ದುಡಿಮೆಯೂ ಸಂತೃಪ್ತಿಯಿಂದ ಉಂಡು ಮಲಗುವುದಕ್ಕಾಗಿಯೇ ಆಗಿದ್ದರೂ ನಾವು ಅಷ್ಟಕ್ಕೆ ತೃಪ್ತರಾಗುವುದಿಲ್ಲ. ನಮ್ಮ ದುಡಿಮೆಯ ಹೆಚ್ಚುವರಿ ಲಾಭವಾಗಿ ನಮಗೆ ಕೀರ್ತಿ ಬರಬೇಕೆಂದು ಆಸೆಪಡುತ್ತೇವೆ. ಅಷ್ಟೇ ಅಲ್ಲ, ನಮಗೆ ಕಪ್ಪೆ ಅಥವಾ ಜೀರುಂಡೆ ಪಾಠವಾಗುವುದಿಲ್ಲ. ಅವು ನಮಗೆ ಸಂತಸವನ್ನೂ ಕೊಡುವುದಿಲ್ಲ. ಕಪ್ಪೆಯ ಕುಪ್ಪಳಿಕೆಯಿಂದ ಬೋಧೆ ಪಡೆಯುವಲ್ಲಿ, ಜೀರುಂಡೆಯ ಜೀಕಾರಕ್ಕೆ ಧ್ಯಾನಸ್ಥರಾಗುವಲ್ಲಿ ನಮಗೆ ನಮ್ಮ ಅಹಂಕಾರ ಅಡ್ಡವಾಗುತ್ತದೆ. ನಮಗೆ ತಿಳಿವು ದಪ್ಪದಪ್ಪನೆಯ ಗ್ರಂಥಗಳಿಂದಲೋ ವಿಖ್ಯಾತ ಧರ್ಮಬೋಧಕರಿಂದಲೋ ಬರಬೇಕೆಂದು ನಿರೀಕ್ಷಿಸುತ್ತೇವೆ. ನಮ್ಮ ಸುತ್ತಲಲ್ಲೇ ಇರುವ ಅದೆಷ್ಟೋ ಸಹಜ ಪ್ರಕ್ರಿಯೆಗಳನ್ನು ಅವಗಣಿಸುತ್ತೇವೆ. ಅವಗಣಿಸುವ ಮಾತಿರಲಿ, ಅವನ್ನು ಗಮನಿಸುವ ಗೋಜಿಗೇ ಹೋಗುವುದಿಲ್ಲ.

ಈ ಎಲ್ಲದರ ನಡುವೆ ನಮಗೆ ಅದು ಹೇಗೋ ಒಂದು ಮಹತ್ತರ ಬೋಧೆಯಾಯಿತು ಎಂದಿಟ್ಟುಕೊಳ್ಳಿ. ಆಗ ನಾವು ಮಾಡುವ ಮೊದಲ ಕೆಲಸ, ಅದನ್ನು ಪ್ರಚುರಪಡಿಸುವುದು. ನಾವು ತಿಳಿದುಕೊಂಡವರೆಂದು ತೋರ್ಪಡಿಸಿಕೊಳ್ಳಲು ಹರಸಾಹಸ ಮಾಡುತ್ತೇವೆ. ಅದೆಷ್ಟು ಮಾತಾಡುತ್ತೇವೆಂದರೆ, ನಮ್ಮ ಜ್ಞಾನವೆಲ್ಲ ಶಬ್ದ ಸಂತೆಯಲ್ಲೆ ಸೋರಿಹೋಗುವಷ್ಟು. ಕೊಂಚ ಓದಿಕೊಂಡರೆ, ಕೊಂಚ ಸಂಪತ್ತು ಹೆಚ್ಚಿದರೆ, ನಮ್ಮ ಚರ್ಯೆಗಳೇ ಬದಲಾಗುತ್ತವೆ. ನಮ್ಮ ನಡೆ ನುಡಿಗಳು ಮಾತ್ರವಲ್ಲ, ನಮ್ಮ ಆಪ್ತೇಷ್ಟರೊಂದಿಗೆ ಕೂಡ ಬೇರೆಯಾಗಿ ವರ್ತಿಸತೊಡಗುತ್ತೇವೆ. ಸಹಜತೆ ನಮ್ಮಿಂದ ದೂರವಾಗುತ್ತದೆ. ಹಾಗನ್ನುವುದಕ್ಕಿಂತ, ನಾವು ಸಹಜತೆಯನ್ನು ಮೆಟ್ಟಿ ನಿಂತು, ಅದರ ಮೇಲೆ ನಮ್ಮ ಎತ್ತರದ ಅಳತೆಯನ್ನು ನೋಡಿಕೊಳ್ಳತೊಡಗುತ್ತೇವೆ. ಸಹಜತೆಯನ್ನು ಹೂತು, ಅದರ ಮೇಲೆ ಕುಳಿತು ನಮ್ಮ ಸ್ಥಾನವನ್ನು ಸಾಬೀತುಪಡಿಸಲು ಹೆಣಗಾಡುತ್ತೇವೆ.

ಈ ಎಲ್ಲದರಿಂದ ಪ್ರಯೋಜನವಾದರೂ ಏನು? ಮೇಲೆ ಹೇಳಿದ ಝೆನ್ ಸಾಧಕ ಅತ್ಯಂತ ಸರಳ ಜೀವನ ನಡೆಸುತ್ತಿದ್ದ. ಸಹಜವಾಗಿದ್ದ. ಅವನಿಗೆ ಜ್ಞಾನೋದಯವಾಯಿತು. ಅನಂತರದಲ್ಲೂ ಅವನು ಹಾಗೆಯೇ ಇದ್ದ. ಅವನು ಪ್ರಚಾರಕ್ಕೆ ಇಳಿಯಲಿಲ್ಲ. ಜ್ಞಾನ ಪ್ರದರ್ಶನ ಮಾಡಲಿಲ್ಲ. ತನಗೆ ಉಂಟಾದ ಜ್ಞಾನೋದಯದ ಸಾರ ದಕ್ಕಿಸಿಕೊಳ್ಳುವುದರಲ್ಲಿ, ಅದನ್ನು ನಡೆದುಕೊಳ್ಳುವುದರಲ್ಲಿ ಆತ ವ್ಯಸ್ತನಾಗಿದ್ದ. ಹಾಗಿದ್ದರೂ ಜನ ಅವನನ್ನು ಅರಸಿಕೊಂಡು ಬಂದರು.

ಇದು ಹೇಗೆಂದರೆ, ಕೋಗಿಲೆ ಯಾವುದೇ ಮೆಚ್ಚುಗೆಯ ಅಪೇಕ್ಷೆಯಿಲ್ಲದೆ ತನ್ನ ಪಾಡಿಗೆ ತಾನು ಹಾಡುತ್ತದೆ. ಅದರ ದನಿ ಕಿವಿಗೆ ಬಿದ್ದ ಕೂಡಲೆ ಜನ ಕಿವಿ ಅಗಲಿಸುತ್ತಾರೆ. ಅದು ಕಾಣುತ್ತದೇನೋ ಎಂದು ಕಣ್ಣರಳಿಸುತ್ತಾರೆ. ಅದರ ಠಾವು ಹುಡುಕಾಡುತ್ತಾರೆ. ಹೂವು ತನ್ನ ಪಾಡಿಗೆ ಬಿರಿದು, ಘಮಿಸುತ್ತದೆ. ಸಹಜವಾಗಿ ಅದರ ಘಮ ಹರಡುತ್ತದೆ. ಜನ ಅದರ ಜಾಡು ಹಿಡಿದು ಬರುತ್ತಾರೆ. ಸೌಂದರ್ಯವನ್ನೂ ಸುಗಂಧವನ್ನೂ ಒಳಗಿಳಿಸಿಕೊಳ್ಳುತ್ತಾರೆ. ಹಾಗೆಯೇ ಆ ಸಾಧಕ ಕೋಗಿಲೆಯಂತೆ, ಹೂವಿನಂತೆ ತನ್ನ ಪಾಡಿಗಿದ್ದ. ಅವನ ಸಕಾರಾತ್ಮಕ ಕಂಪನಗಳು ವಿಶ್ವಪ್ರಜ್ಞೆಯನ್ನು ಸ್ಪಂದಿಸಿ, ಜನರನ್ನು ಅವನತ್ತ ಸೆಳೆದು ತಂದವು. ಅವನೇನೂ ವಿಶೇಷ ಪ್ರಯತ್ನ ಹಾಕಲಿಲ್ಲ. ತಾನೊಬ್ಬ ಗುರುವಿದ್ದೇನೆ ಎಂದು ಜಾಹೀರಾತು ನೀಡಲಿಲ್ಲ. ಜನ ತಮ್ಮ ಪಾಡಿಗೆ ಬಂದರು. ಅವನ ಶಿಷ್ಯತ್ವ ಬಯಸಿ ಗುರು ಸ್ಥಾನದಲ್ಲಿ ಕೂರಿಸಿದರು.

ಹೀಗೆ ನಮ್ಮ ಪಾಡಿಗೆ ನಾವು ಇರುವುದನ್ನು ಕಲಿತರೆ, ಸಹಜವಾಗಿ ಅರಳುವುದು ಕೂಡಾ ಸಾಧ್ಯವಾಗುತ್ತದೆ. ಮತ್ತು, ಅರಳಿದ ನಂತರ ಸಹಜವಾಗಿ ಇರುವುದು ಕೂಡಾ. 

 

Leave a Reply