‘ಬುದ್ಧ’ನನ್ನು ಸುಟ್ಟು ಚಳಿ ಕಾಯಿಸಿಕೊಂಡ ಇಕ್ಕಿಯು : ಒಂದು ಝೆನ್ ಕಥೆ

ಇಕ್ಕಿಯು ಒಬ್ಬ ಸುಪ್ರಸಿದ್ಧ ಝೆನ್ ಗುರು.
ಒಂದು ಚಳಿಗಾಲದ ಸಂಜೆ ಅವನು ಎಲ್ಲಿಂದ ಎಲ್ಲಿಗೋ ಪ್ರಯಾಣ ಬೆಳೆಸಿದ. ನಡೆಯುತ್ತ ನಡೆಯುತ್ತ ರಾತ್ರಿಯಾಯ್ತು. ರಾತ್ರಿಯಾದಂತೆಲ್ಲ ಚಳಿಯೂ ಹೆಚ್ಚಿತು.
ದಾರಿ ಮಧ್ಯ ಸಿಕ್ಕ ಬುದ್ಧ ಮಂದಿರವೊಂದರ ಬಾಗಿಲು ಬಡಿದ ಇಕ್ಕಿಯು, ಅಲ್ಲೇ ಪಡಸಾಲೆಯಲ್ಲಿ ಮಲಗಲು ತನಗೆ ಜಾಗ ಕೊಡಿರೆಂದು ಕೇಳಿದ. ಮಂದಿರದ ಪೂಜಾರಿ ಆಗಲೆಂದು ಹೇಳಿ ಒಂದು ಚಾಪೆ ನೀಡಿದ.

ನಡು ರಾತ್ರಿಯ ಹೊತ್ತಿಗೆ ಕಿಟಕಿ ಗಾಜಿನ ಮೇಲೆ ಬೆಂಕಿ ಜ್ವಾಲೆಯ ಪ್ರತಿಫಲನ ಕಂಡು ಹೌಹಾರಿದ ಪೂಜಾರಿ ಗಾಬರಿಯಿಂದ ಹೊರಗೆ ಬಂದ. ಮಂದಿರದ ಅಂಗಳದಲ್ಲಿ ಬುದ್ಧ ಪ್ರತಿಮೆಯ ಕೈಕಾಲು ಮುರಿದು ಅಗ್ಗಿಷ್ಟಿಕೆ ಹೊತ್ತಿಸಿದ್ದ ಇಕ್ಕಿಯು, ಅಂಗೈ ಉಜ್ಜುತ್ತಾ ಚಳಿ ಕಾಯಿಸುತ್ತಿದ್ದ! ಪೂಜಾರಿ ಅದರ ಬಳಿ ಹೋಗುವ ವೇಳೆಗೆ ಬುದ್ಧನ ಪ್ರತಿಮೆಯ ತಲೆಯ ಭಾಗ ಬೆಂಕಿಯೊಳಗೆ ಇಳಿದು ಸುಟ್ಟು ಕರಕಲಾಗುತ್ತಿತ್ತು.

“ಮೂರ್ಖ! ಇದೇನು ಮಾಡ್ತಿದ್ದೀಯ! ಬುದ್ಧ ಭಗವಾನರನ್ನು ಉರಿಸಿ ಚಳಿ ಕಾಯಿಸ್ಕೊಳ್ತಿದ್ದೀಯಲ್ಲ!” ಎಂದು ಕಿರುಚಾಡಿದ.
ಇಕ್ಕಿಯು ಮುಖದ ಮಂದಹಾಸ ಚೂರೂ ಮಾಸಲಿಲ್ಲ. ಅವನು ಎದ್ದು ಒಂದು ಕೋಲನ್ನು ಹುಡುಕಿ ತಂದ. ಆ ಹೊತ್ತಿಗೆ ಪ್ರತಿಮೆ ಪೂರಾ ಉರಿದು ಅಗ್ಗಿಷ್ಟಿಕೆಯ ಜ್ವಾಲೆಗಳೂ ತಗ್ಗುತ್ತ ಬಂದಿದ್ದವು. ಇಕ್ಕಿಯು ಕೋಲನ್ನು ಅಗ್ಗಿಷ್ಟಿಕೆಗೆ ಹಾಕಿ ಏನನ್ನೋ ಕೆದಕತೊಡಗಿದ.

ಮೊದಲೇ ಸಿಟ್ಟು ನೆತ್ತಿಗೇರಿದ್ದ ಪೂಜಾರಿ “ನಿನಗೆ ತಲೆ ಸರಿ ಇಲ್ಲವೇ? ನಾನು ಕೇಳಿದ್ದೇನು, ನೀನು ಮಾಡ್ತಿರೋದೇನು?” ಅಂತ ಕೂಗಾಡಿದ.
ಇಕ್ಕಿಯು ಸಾವಧಾನವಾಗಿ “ನಾನು ಬುದ್ಧನ ಮೂಳೆಗಳನ್ನು ಹುಡುಕುತ್ತಿದ್ದೇನೆ” ಅಂದ.
“ನಿನಗೆ ಪೂರಾ ಹುಚ್ಚು! ಅದೊಂದು ಮರದ ಪ್ರತಿಮೆ. ಮೂಳೆ ಎಲ್ಲಿಂದ ಬಂದೀತು?” ಎಂದು ಕೋಪದಲ್ಲೇ ನಕ್ಕ ಪೂಜಾರಿ.

“ಓಹೋ! ಹಾಗಾದರೆ ಬುದ್ಧನನ್ನು ಸುಟ್ಟೆ ಅಂತ ಯಾಕೆ ಬೊಬ್ಬೆ ಹಾಕ್ತಿದ್ದೀಯ? ನಾನು ಸುಟ್ಟಿದ್ದು ಪ್ರತಿಮೆಯನ್ನಷ್ಟೆ. ರಾತ್ರಿ ಇನ್ನೂ ದೀರ್ಘವಿದೆ. ಚಳಿ ಮತ್ತೂ ಏರುತ್ತಲೇ ಹೋಗುವುದು. ನನ್ನೊಳಗಿನ ಜೀವಂತ ಬುದ್ಧನನ್ನು ಉಳಿಸಬೇಕಾದರೆ, ಅಗೋ ಅಲ್ಲಿ ಇನ್ನೆರಡು ಪ್ರತಿಮೆಗಳಿದ್ದಾವಲ್ಲ ಅವನ್ನು ತಾ… ಅಗ್ಗಿಷ್ಟಿಕೆ ಬೆಳಗಾಗುವ ತನಕ ಉರಿಯಬೇಕು” ಅಂದ ಇಕ್ಕಿಯು.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply