ಧ್ಯಾನ ಎಂದರೇನು? : ಓಶೋ ವಿವರಣೆ

ನೀವು ಮನಸ್ಸಿನ ಮೂಲಕ ಧ್ಯಾನವನ್ನು ಪಡೆಯಲು ಅಸಾಧ್ಯ. ಧ್ಯಾನಕ್ಕೆ ಮನಸ್ಸೇ ಮೊದಲ ಅಡ್ಡಿಯಾಗಿದೆ. ಮನಸ್ಸು ಪ್ರತ್ಯೇಕವಾಗಿ ಇರಿಸಿದಾಗ ಮಾತ್ರ ಧ್ಯಾನವನ್ನು ಕಂಡುಕೊಳ್ಳುವಿರಿ | ಓಶೋ, ಭಾವಾನುವಾದ: ಸ್ವಾಮಿ ಧ್ಯಾನ್‌ ಉನ್ಮುಖ್

ಧ್ಯಾನವೆಂದರೆ ಅಮನ ಸ್ಥಿತಿ.ಧ್ಯಾನವೆಂದರೆ ಯಾವುದೇ ವಿಚಾರಗಳಿಲ್ಲದ ಶುದ್ಧ ಪ್ರಜ್ಞೆಯ ಸ್ಥಿತಿ.ಸಾಧಾರಣವಾಗಿ, ನಿಮ್ಮ ಪ್ರಜ್ಞೆಯು ಕಸದಿಂದ ತುಂಬಿಹೋಗಿದೆ, ಧೂಳಿನಿಂದ ಆವರಿಸಿದ ಕನ್ನಡಿಯಂತಾಗಿದೆ. ಮನಸ್ಸು ನಿರಂತರವಾಗಿ ಚಲನೆಯಲ್ಲಿರುವ ಟ್ರಾಫಿಕ್‌ ಆಗಿದೆ: ಅಲ್ಲಿ ವಿಚಾರಗಳು ಓಡುತ್ತಿವೆ, ಇಚ್ಛೆಗಳು ಓಡುತ್ತಿವೆ, ಮಹಾತ್ವಕಾಂಕ್ಷೆಗಳು ಓಡುತ್ತಿವೆ- ಹಗಲು ರಾತ್ರಿ ಎನ್ನದೇ ಈ ಟ್ರಾಫಿಕ್‌ ಜಾರಿಯಲ್ಲಿದೆ! ನೀವು ನಿದ್ರಿಸುತ್ತಿರವಾಗಲೂ ಸಹ ನಿಮ್ಮ ಮನಸ್ಸು ಕೆಲಸ ಮಾಡುತ್ತಲೇ ಇರುವುದು, ಅಲ್ಲಿ ಕನಸಿನ ರೂಪದಲ್ಲಿ ಕೆಲಸ ಮಾಡುತ್ತಿದೆ. ನಿದ್ರೆಯಲ್ಲೂ ಸಹ  ಯೋಚಿಸುತ್ತಿರುವಿರಿ; ಒತ್ತಡ ಹಾಗೂ ಚಿಂತೆಗಳಿಂದ ತುಂಬಿಹೋಗಿರುವಿರಿ. ನಾಳೆಯ ಬಗ್ಗೆ ತಯಾರಿ ನಡೆಸುತ್ತಿರುವಿರಿ; ಈ ಎಲ್ಲಾ ತಯಾರಿ ಒಳಒಳಗೆ ನಡೆಯುತ್ತಿದೆ.

ಇದು ಧ್ಯಾನರಹಿತ ಸ್ಥಿತಿ. ಇದರ ವಿರುದ್ಧ ಸ್ಥಿತಿಯೇ ಧ್ಯಾನ.ಧ್ಯಾನದಲ್ಲಿ ಯಾವುದೇ ವಿಚಾರಗಳ ಟ್ರಾಫಿಕ್‌ ಇಲ್ಲ, ಯಾವುದೇ ಕಾಮನೆಗಳಿಲ್ಲ ಪರಿಪೂರ್ಣವಾಗಿ ಮೌನವಾಗಿದ್ದೀರಿ- ಆ ಮೌನವೇ ಧ್ಯಾನ. ಇಂತಹ ಮೌನದಲ್ಲಿ ಮಾತ್ರ ಸತ್ಯ ಅರಿಯಲು ಸಾಧ್ಯ, ಬೇರೆ ದಾರಿಯಿಲ್ಲ.

ಧ್ಯಾನವೆಂದರೆ ಅಮನ ಸ್ಥಿತಿ. ನೀವು ಮನಸ್ಸಿನ ಮೂಲಕ ಧ್ಯಾನವನ್ನು ಪಡೆಯಲು ಅಸಾಧ್ಯ. ಧ್ಯಾನಕ್ಕೆ ಮನಸ್ಸೇ ಮೊದಲ ಅಡ್ಡಿಯಾಗಿದೆ. ಮನಸ್ಸು ಪ್ರತ್ಯೇಕವಾಗಿ ಇರಿಸಿದಾಗ ಮಾತ್ರ ಧ್ಯಾನವನ್ನು ಕಂಡುಕೊಳ್ಳುವಿರಿ. ಸ್ವಯಂ ಅನ್ನು ಮನಸ್ಸಿನಿಂದ ಹೊರಗಿಟ್ಟು ಶಾಂತವಾಗಿ, ಉದಾಸೀನ ಭಾವದಿಂದ ಆದರೆ ಅದರಿಂದ ಯಾವುದೇ ತಾಧ್ಯಾತ್ಮತೆ ಹೊಂದದೆ  ನೋಡುತ್ತ ಹೋಗಿ, “ಇದು ನಾನು”ಎಂಬ ಯಾವುದೇ ಕುರುಹುಗಳೊಂದಿಗೆ ಗುರುತಿಸಿಕೊಳ್ಳದಿರಿ, ಧ್ಯಾನವೆಂದರೆ ಮನಸ್ಸಿನೊಂದಿಗೆ ಯಾವುದೇ ರೀತಿ ಗುರುತಿಸಿಕೊಳ್ಳದಿರುವ ಸ್ಥಿತಿ. ಈ ಅನುಭವವು ಆಳವಾಗುತ್ತಿದ್ದಂತೆ ಮೌನದ ಕ್ಷಣ, ಶೂನ್ಯದ ಸ್ಥಿತಿ, ನಿಶ್ಚಲ ಸ್ಥಿತಿ ಘಟಿಸುವುದು. ಈ ನಿಶ್ಚಲದ ಸ್ಥಿತಿಯಲ್ಲಿ ನಿಮ್ಮ ಸ್ವಯಂನ ಪರಿಚಯವಾಗುವುದು, ಅಸ್ತಿತ್ವದ ರಹಸ್ಯ ಅರಿವಾಗುವುದು.

 

 

Leave a Reply