ತನ್ನನ್ನು ಕಾಡುತ್ತಿದ್ದ ನಾಲ್ಕು ಪ್ರಶ್ನೆಗಳನ್ನು ಹೊತ್ತು ಮಾಲುಂಕ್ಯಪುತ್ತ ಬುದ್ಧನ ಬಳಿ ಬಂದ. ತನ್ನ ಪ್ರಶ್ನೆಗಳನ್ನು ಮುಂದಿಟ್ಟ. ‘‘ತಥಾಗತ, ನನ್ನ ಈ ಅನುಮಾನಗಳನ್ನು ನೀನು ಪರಿಹರಿಸಿದರೆ ಮಾತ್ರ ಸಂಘದಲ್ಲಿ ಉಳಿಯುತ್ತೇನೆ, ಇಲ್ಲವಾದರೆ ಪ್ರಾಪಂಚಿಕ ಬದುಕಿಗೆ ಮರಳಿ ಹೊರಟುಹೋಗುತ್ತೇನೆ,’’ ಅಂದ. ಆಗ ಬುದ್ಧ ಕೊಟ್ಟ ಉತ್ತರವೇನು ಗೊತ್ತೆ? ಈ ಸಂವಾದ ಓದಿ… । ಸಂಗ್ರಹ ಮತ್ತು ಅನುವಾದ: ಅಲಾವಿಕಾ
ಮಾಲುಂಕ್ಯಪುತ್ತ ಒಬ್ಬ ಬೌದ್ಧ ಭಿಕ್ಖು. ಅವನು ವಿಪರೀತ ಸಂಶಯದ ಮನುಷ್ಯ. ಏನಾದರೊಂದು ಪ್ರಶ್ನೆ ತಲೆಹೊಕ್ಕಿತೆಂದರೆ ಸಾಕು, ಅದು ಬಗೆಹರಿಯುವ ತನಕ ಅದರ ಬೆನ್ನು ಬಿಡುತ್ತಿರಲಿಲ್ಲ. ಒಮ್ಮೆ ಹೀಗೇ ಅವನಿಗೆ ನಾಲ್ಕು ಅನುಮಾನಗಳು ಒಟ್ಟಿಗೇ ಮುತ್ತಿಕೊಂಡವು. ಜೀವ ಎಂದರೇನು? ಅದು ಶರೀರವೆ ಅಥವಾ ಬೇರೆ ಏನಾದರೂನಾ? ಜಗತ್ತು ತಾತ್ಕಾಲಿಕವಾ ಶಾಶ್ವತವಾ? ಜಗತ್ತು ಕೊನೆಯಿಲ್ಲದ್ದಾ ಅಥವಾ ಮೊದಲಿಲ್ಲದ್ದಾ? ತಥಾಗತನು ಸಾವನ್ನು ಮೀರಿದವನಾ ಅಥವಾ ಅದರ ಅಂಕೆಗೆ ಒಳಪಟ್ಟವನಾ? ಎಂಬುದೇ ಅವನ ಆ ನಾಲ್ಕು ಪ್ರಶ್ನೆಗಳು.
ಈ ಪ್ರಶ್ನೆಗಳನ್ನು ಹೊತ್ತು ಮಾಲುಂಕ್ಯಪುತ್ತ ಬುದ್ಧನ ಬಳಿ ಬಂದ. ತನ್ನ ಪ್ರಶ್ನೆಗಳನ್ನು ಮುಂದಿಟ್ಟ. ‘‘ತಥಾಗತ, ನನ್ನ ಈ ಅನುಮಾನಗಳನ್ನು ನೀನು ಪರಿಹರಿಸಿದರೆ ಮಾತ್ರ ಸಂಘದಲ್ಲಿ ಉಳಿಯುತ್ತೇನೆ, ಇಲ್ಲವಾದರೆ ಪ್ರಾಪಂಚಿಕ ಬದುಕಿಗೆ ಮರಳಿ ಹೊರಟುಹೋಗುತ್ತೇನೆ,’’ ಅಂದ.
ಬುದ್ಧನಿಗೆ ನಗು ಬಂತು. ‘‘ಬಂಧು, ಸಂಘವನ್ನು ಸೇರಿದವರಿಗೆ ಇವನ್ನೆಲ್ಲ ತಿಳಿಸಿಕೊಡಲಾಗುವುದು ಎಂದು ನಾನು ಎಂದಾದರೂ ಹೇಳಿದ್ದೇನೆಯೇ?’’ ಎಂದು ಕೇಳಿದ. ‘‘ಇಲ್ಲ’’ ಅನ್ನುವ ಉತ್ತರ ಬಂತು.
ಬುದ್ಧ ಮುಂದುವರೆಸಿದ; ‘‘ಯಾರೋ ಒಬ್ಬನಿಗೆ ವಿಷದ ಬಾಣ ನಾಟಿದೆ ಎಂದಿಟ್ಟುಕೋ. ಆಗ ಅವನ ಬಂಧುಗಳು, ಹಿತೈಷಿಗಳು ಮಾಡುವ ಮೊದಲ ಕೆಲಸ ಯಾವುದು?’’ ಎಂದು ಕೇಳಿದ.
‘‘ಆತನನ್ನು ವೈದ್ಯರ ಬಳಿ ಕರೆದೊಯ್ಯುವುದು’’ ಎಂದು ಮಾಲುಂಕ್ಯ ಪುತ್ತ ಹೇಳಿದ.
‘‘ಆ ಹೊತ್ತು ಬಾಣ ನಾಟಿಸಿಕೊಂಡವನು ‘ನನಗೆ ಬಾಣ ಬಿಟ್ಟವನ ಹೆಸರೇನು? ಅವನ ಜಾತಿ ಯಾವುದು? ಅವನು ಕರ್ರಗಿದ್ದನೋ ಬೆಳ್ಳಗಿದ್ದನೋ? ಅವನು ಬಿಟ್ಟಿದ್ದು ಯಾವ ಥರದ ಬಾಣ? ಅದು ನೇರವಿತ್ತೋ ಡೊಂಕಾಗಿತ್ತೋ? ಅವನ ಬಿಲ್ಲು ಹೇಗಿತ್ತು ಅದು ಮರದ್ದೋ ಅಥವಾ ಮತ್ಯಾತರದ್ದೋ? ಬಾಣದ ಮೊನೆಗೆ ಲೇಪಿಸಿದ ವಿಷ ಯಾತರದ್ದು? ಅದರ ಗರಿಗಳು ಯಾವ ಹಕ್ಕಿಯದ್ದು? ನೀವು ಇದನ್ನೆಲ್ಲ ನನಗೆ ತಿಳಿಸಿಹೇಳುವವರೆಗೂ ನನ್ನ ಮೈಯಿಂದ ಬಾಣವನ್ನು ಹೊರತೆಗೆಯಲು ನಾನು ಬಿಡುವುದಿಲ್ಲ’ ಎಂದರೆ ಪರಿಣಾಮ ಏನಾಗುತ್ತದೆ ಹೇಳು?’’ ಎಂದು ಬುದ್ಧ ಪ್ರಶ್ನಿಸಿದ.
‘‘ಅಂಥಾ ಮೂರ್ಖತನ ಯಾರು ತಾನೆ ಮಾಡುತ್ತಾರೆ? ಜೀವ ಹೋಗುತ್ತದೆ ಅಷ್ಟೆ!’’ ಎನ್ನುವ ಈ ಉತ್ತರ ಕೊಡುವ ವೇಳೆಗಾಗಲೇ ಮಾಲುಂಕ್ಯಪುತ್ತ ಬುದ್ಧನ ಮಾತಿಗೆ ಸಿಲುಕಿದ್ದ.
‘‘ಬಂಧು, ದ್ವಂದ್ವ ಮತ್ತು ಬುದ್ಧಿವಂತಿಯ ಮೇಲೆ ಜೀವ ನಿಲ್ಲುತ್ತದೆ ಎಂದಾದರೆ ಅದು ಧರ್ಮದ ದಾರಿ ಆಗುವುದಿಲ್ಲ. ಇಲ್ಲಿ ಕೇಳು. ಜಗತ್ತು ಶಾಶ್ವತವೋ ಅಲ್ಲವೋ, ಆದರೆ ಹುಟ್ಟಂತೂ ಇದೆ. ಆದ್ದರಿಂದ ದುಃಖವೂ ಇದೆ. ಇದನ್ನು ಇಲ್ಲದಂತೆ ಮಾಡಿಕೊಳ್ಳುವ ದಾರಿಯನ್ನು ನಾನು ಹೇಳುತ್ತೇನಷ್ಟೆ. ನನಗೇನು ಹೇಳಬೇಕು ಅನಿಸ್ತದೆಯೋ ಅದನ್ನು ಹೇಳುತ್ತೇನೆ. ಬಯಸದ್ದನ್ನು ಹೇಳುವುದಿಲ್ಲ. ನೀನು ಕೇಳಿದ ವಿಚಾರಗಳನ್ನು ನಾನು ಹೇಳಿಲ್ಲ, ಹೇಳುವುದೂ ಇಲ್ಲ. ಯಾಕೆಂದರೆ ಅವು ನಮ್ಮ ಗುರಿಸಾಧನೆಗೆ ಲಾಭದಾಯಕವಾಗಿಲ್ಲ. ಈ ತರ್ಕಗಳು ನಿರ್ವಾಣದ ದಾರಿಗೆ ಅಡ್ಡ ಬರುವಂಥವು. ದುಃಖ ಹೇಗೆ ಉಂಟಾಗುತ್ತದೆ, ಅದನ್ನು ಹೇಗೆ ಶಮನ ಮಾಡಿಕೊಳ್ಳಬಹುದು ಎಂಬುದನ್ನು ನಾನು ಹೇಳುತ್ತೇನೆ. ದುಃಖ ನಿವಾರಣೆಯ ದಾರಿಯೇ ಧರ್ಮದ ದಾರಿ. ಇದು ಬೋಧಿಯನ್ನು ಪಡೆಯಲು ದಾರಿ ಮಾಡಿಕೊಡುತ್ತದೆ. ಇದೇ ನಿರ್ವಾಣದ ದಾರಿ. ಇದನ್ನೇ ನಾನು ಹೇಳುವುದು’’ ಅಂದ ಬುದ್ಧ.