ನಸ್ರುದ್ದೀನನ ಪಂಚಾಯ್ತಿ : Tea time story

ವ್ಯಾಜ್ಯ ತಂದ ಮೂವರು ಹಳ್ಳಿಗರನ್ನು ನಸ್ರುದ್ದೀನ್ ಸಮಾಧಾನ ಪಡಿಸಿದ್ದು ಹೀಗೆ…

ಒಮ್ಮೆ ಮೂವರು ಹಳ್ಳಿಗರು ನಸ್ರುದ್ದೀನ್ ಹೋಜನ ಬಳಿ ಬಂದು, “ನಸ್ರುದ್ದೀನ್ ನಮ್ಮ ವ್ಯಾಜ್ಯ ಪರಿಹಾರ ಮಾಡು” ಅಂತ ಕೇಳುತ್ತಾರೆ. ಅದೇನು ನಿಮ್ಮ ವ್ಯಾಜ್ಯ ಅಂತ ನಸ್ರುದ್ದೀನ್ ಕೇಳಿದಾಗ ಅವರಲ್ಲೊಬ್ಬ ನಡೆದ ಘಟನೆ ವಿವರಿಸಲು ತನ್ನ ಉಳಿದಿಬ್ಬರು ಸಂಗಾತಿಗಳಿಗೆ ಹೇಳುತ್ತಾನೆ.

ಆ ಇಬ್ಬರಲ್ಲಿ ಒಬ್ಬ ತನ್ನ ಪಾಲಿನ ಕಥೆಯನ್ನು ಹೇಳಿ ತನ್ನ ವಾದ ಮುಂದಿಡುತ್ತಾನೆ. ನಸ್ರುದ್ದೀನ್ ತಲೆಯಾಡಿಸುತ್ತಾ “ನೀನು ಹೇಳ್ತಿರೋದು ಸರಿ” ಅನ್ನುತ್ತಾನೆ.

ಕೂಡಲೇ ಇನ್ನೊಬ್ಬ ತನ್ನ ಪಾಲಿನ ಕಥೆ ಹೇಳತೊಡಗಿ ತನ್ನ ವಾದ ಮುಂದಿಡುತ್ತಾನೆ. ನಸ್ರುದ್ದೀನ್ ಮತ್ತೆ ತಲೆಯಾಡಿಸುತ್ತಾ “ನೀನು ಹೇಳ್ತಿರೋದು ಸರಿ” ಅನ್ನುತ್ತಾನೆ.

ಆಗ ಮೊದಲು ಮಾತಾಡಿದ ವ್ಯಕ್ತಿ ನಡುವೆ ಬಾಯಿ ಹಾಕಿ “ತಮಾಷೆ ಮಾಡ್ತಿದೀಯಾ ನಸ್ರುದ್ದೀನ್, ಇಬ್ಬಿಬ್ಬರೂ ಒಟ್ಟಿಗೇ ಸರಿಯಾಗಿರಲು ಹೇಗೆ ಸಾಧ್ಯ?” ಅನ್ನುತ್ತಾನೆ. ನಸ್ರುದ್ದೀನ್ ಅದಕ್ಕೂ ತಲೆಯಾಡಿಸುತ್ತಾ, “ನೀನು ಹೇಳ್ತಿರೋದೂ ಸರೀನೇ” ಅನ್ನುತ್ತಾನೆ. ಬಂದ ಮೂವರೂ ಮುಖ ಮುಖ ನೊಡಿಕೊಳ್ಳುತ್ತಾರೆ. ಉತ್ತರ ಹೊಳೆದವರಂತೆ ನಸ್ರುದ್ದೀನನಿಗೆ ಧನ್ಯವಾದ ತಿಳಿಸಿಸಿ ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ಹೊರಟುಹೋಗುತ್ತಾರೆ.

Leave a Reply