ಸಹಜೀವನದ ಒಂದಾಗುವಿಕೆ (ಭಾಗ 6) : Art of love #10

ಸಹಜೀವನದ ಒಂದಾಗುವಿಕೆಯ ಅನಾಸಕ್ತ (passive) ರೂಪ – ‘ಶರಣಾಗತಿಯ’ (submission) ಬಗೆಯದು, ಇದಕ್ಕೆ ಸಮವಾದ ಕ್ಲಿನಿಕಲ್ ಪದ masochism (ಸ್ವ ಪೀಡನೆ). ಶರಣಾಗತಿಯ ಮನುಷ್ಯ , ಒಂಟಿತನ ಮತ್ತು ಪ್ರತ್ಯೇಕತೆಯ ಸಹಿಸಲಸಾಧ್ಯವಾದ ಭಾವನೆಗಳಿಂದ ತಪ್ಪಿಸಿಕೊಳ್ಳಲು, ಇನ್ನೊಬ್ಬ ಮನುಷ್ಯನಿಗೆ ತನ್ನನ್ನು ತಾನು ಪೂರ್ಣವಾಗಿ ಅರ್ಪಿಸಿಕೊಂಡುಬಿಡುತ್ತಾನೆ, ಆ ಇನ್ನೊಬ್ಬನಿಂದ ನಿರ್ದೇಶನವನ್ನ, ಮಾರ್ಗದರ್ಶನವನ್ನ, ಮತ್ತು ರಕ್ಷಣೆಯನ್ನ ಬಯಸುತ್ತಾನೆ, ಆ ಮನುಷ್ಯನನ್ನೇ ತನ್ನ ಜಗತ್ತು, ತನ್ನ ಉಸಿರು ಎಂದು ತಿಳಿದುಕೊಳ್ಳುತ್ತಾನೆ… । Art of love – Erich Fromm, ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/03/26/love-22/

ಎಲ್ಲ ಶಬ್ದಾರ್ಥಗಳ ಸಮಸ್ಯೆಯಂತೆ, ಈ ಪ್ರಶ್ನೆಯ ಉತ್ತರ ಕೂಡ ಏನೋ ಒಂದು ಆಗಬಹುದು. ಯಾವುದು ಮುಖ್ಯ ಎಂದರೆ ನಾವು ಪ್ರೀತಿಯ ಬಗ್ಗೆ ಮಾತನಾಡುವಾಗ ಯಾವ ರೀತಿಯ ಒಂದಾಗುವಿಕೆಯ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಎನ್ನುವ ಸ್ಪಷ್ಟತೆಯ ನಮಗಿರುವುದು. ನಾವು ಪ್ರೀತಿಯನ್ನ ಮನುಷ್ಯನ ಅಸ್ತಿತ್ವದ ಸಮಸ್ಯೆಗೆ ಒಂದು ಪ್ರಬುದ್ಧ ಉತ್ತರವಾಗಿ ಉಲ್ಲೇಖ ಮಾಡುತ್ತಿದ್ದೇವಾ ಅಥವಾ ಯಾವವನ್ನ ನಾವು ಕೇವಲ, ಸಹಜೀವನ ಒಂದಾಗುವಿಕೆ (symbiotic union) ಎನ್ನುತ್ತೆವೆಯೋ, ಆ ಎಲ್ಲ ಅಪ್ರಬುದ್ಧ ಪ್ರೀತಿಯ ಬಗೆಗಳ ಬಗ್ಗೆ ಮಾತನಾಡುತ್ತಿದ್ದೀವಾ? ಮುಂದಿನ ಪುಟಗಳಲ್ಲಿ ನಾನು ಪ್ರೀತಿಯನ್ನ ಮೊದಲು ಹೇಳಿದ ಅರ್ಥದಲ್ಲಿ ಬಳಸುತ್ತೇನಾದರೂ, ಈಗ ಪ್ರೀತಿಯ ಕುರಿತಾದ ಚರ್ಚೆಯನ್ನ ನಂತರ ಹೇಳಿದ ಅರ್ಥದೊಂದಿಗೆ ಪ್ರಾರಂಭಿಸುತ್ತೇನೆ.

ಗರ್ಭಿಣಿ ತಾಯಿ ಮತ್ತು ಅವಳ ಹೊಟ್ಟೆಯೊಳಗಿನ ಭ್ರೂಣದ ನಡುವಿನ ಸಂಬಂಧದ ವಿಷಯದಲ್ಲಿ ಸಹಜೀವನದ ಒಂದಾಗುವಿಕೆಗೆ ತನ್ನದೇ ಆದ ಜೈವಿಕ ಸ್ವರೂಪ ಇದೆ. ತಾಯಿ ಮಗು ಇಬ್ಬರೂ ‘ಸಹ-ಜೀವನ’ (Sym-biosis) ಮಾಡುತ್ತಿದ್ದಾರೆ, ಅವರಿಗೆ ಪರಸ್ಪರರ ಅಶ್ಯಕತೆಯಿದೆ. ಭ್ರೂಣ ತಾಯಿಯ ಒಂದು ಭಾಗವಾಗಿದೆ, ತನಗೆ ಬೇಕಾದ ಎಲ್ಲವನ್ನೂ ಅದು ತಾಯಿಯಿಂದ ಪಡೆಯುತ್ತಿದೆ ; ತಾಯಿ ಅದರ ಜಗತ್ತು ; ಅವಳು ಅದಕ್ಕೆ ಉಣಿಸುತ್ತಾಳೆ, ಅದನ್ನು ರಕ್ಷಿಸುತ್ತಾಳೆ, ಆದರೆ ಅವಳ ಸ್ವಂತದ ಬದುಕು ಕೂಡ ಈ ಮಗುವಿನ ಕಾರಣಕ್ಕೆ ವಿಸ್ತಾರಗೊಂಡಿದೆ. ಮಾನಸಿಕ ಸಹಜೀವನ ಒಂದಾಗುವಿಕೆಯಲ್ಲಿ (psychic symbiotic union), ಎರಡು ದೇಹಗಳು ಬೇರೆ ಬೇರೆಯಾಗಿದ್ದರೂ ತಾಯಿ-ಭ್ರೂಣ ರೀತಿಯ ಬಾಂಧವ್ಯವೇ ಮಾನಸಿಕವಾಗಿ ಸ್ಥಾಪಿತವಾಗಿದೆ.

ಸಹಜೀವನದ ಒಂದಾಗುವಿಕೆಯ ಅನಾಸಕ್ತ (passive) ರೂಪ – ‘ಶರಣಾಗತಿಯ’ (submission) ಬಗೆಯದು, ಇದಕ್ಕೆ ಸಮವಾದ ಕ್ಲಿನಿಕಲ್ ಪದ masochism (ಸ್ವ ಪೀಡನೆ). ಶರಣಾಗತಿಯ ಮನುಷ್ಯ , ಒಂಟಿತನ ಮತ್ತು ಪ್ರತ್ಯೇಕತೆಯ ಸಹಿಸಲಸಾಧ್ಯವಾದ ಭಾವನೆಗಳಿಂದ ತಪ್ಪಿಸಿಕೊಳ್ಳಲು, ಇನ್ನೊಬ್ಬ ಮನುಷ್ಯನಿಗೆ ತನ್ನನ್ನು ತಾನು ಪೂರ್ಣವಾಗಿ ಅರ್ಪಿಸಿಕೊಂಡುಬಿಡುತ್ತಾನೆ, ಆ ಇನ್ನೊಬ್ಬನಿಂದ ನಿರ್ದೇಶನವನ್ನ, ಮಾರ್ಗದರ್ಶನವನ್ನ, ಮತ್ತು ರಕ್ಷಣೆಯನ್ನ ಬಯಸುತ್ತಾನೆ, ಆ ಮನುಷ್ಯನನ್ನೇ ತನ್ನ ಜಗತ್ತು, ತನ್ನ ಉಸಿರು ಎಂದು ತಿಳಿದುಕೊಳ್ಳುತ್ತಾನೆ. ಶರಣಾಗತಿಯ ಮನುಷ್ಯ ಯಾರಿಗೆ ಶರಣಾಗುತ್ತಿದ್ದಾನೋ, ಆ ವ್ಯಕ್ತಿಯ ಸಾಮರ್ಥ್ಯವನ್ನ ಹಿಗ್ಗಿಸಲಾಗಿದೆ, ಆ ವ್ಯಕ್ತಿ ಮನುಷ್ಯನಾಗಿರಬಹುದು ಅಥವಾ ಭಗವಂತನಾಗಿರಬಹುದು; ಈಗ ಅವನೇ ಎಲ್ಲ, ಅವನ ಎದುರು ನಾನು ಏನೂ ಅಲ್ಲ, ನಾನು ಅವನ ಭಾಗ ಮಾತ್ರ. ನಾನು ಅವನ ಭಾಗವಾಗಿರುವ ಕಾರಣ, ಅವನ ಶ್ರೇಷ್ಠತೆಯ, ಅವನ ಸಾಮರ್ಥ್ಯದ ಭಾಗವೂ ಹೌದು. ಶರಣಾಗತಿಯ ಮನುಷ್ಯ ಯಾವ ಸ್ವಂತ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಕಾಗಿಲ್ಲ , ಯಾವ ರಿಸ್ಕ್ ಗಳನ್ನೂ ಆಹ್ವಾನಿಸಬೇಕಿಲ್ಲ; ಅವನು ಯಾವತ್ತೂ ಒಂಟಿಯಾಗಿರುವುದಿಲ್ಲ ಆದರೆ ಅವನು ಸ್ವತಂತ್ರನೂ ಅಲ್ಲ ; ಅವನಲ್ಲಿ ಸಮಗ್ರತೆ (integrity) ಇಲ್ಲ, ಅವನು ಇನ್ನೂ ಪೂರ್ಣವಾಗಿ ಹುಟ್ಟಿಯೇ ಇಲ್ಲ. ಧಾರ್ಮಿಕತೆಯ ಸಂದರ್ಭದಲ್ಲಿ, ಪೂಜಿಸಲ್ಪಡುವ ಸಂಗತಿಯನ್ನ ‘ಮೂರ್ತಿ’ ಎನ್ನಲಾಗುತ್ತದೆ ; ಧರ್ಮದ ಜೊತೆ ಸಮೀಕರಿಸದೇ ನೋಡಿದಾಗ, ಶರಣಾಗತಿಯ ಪ್ರೇಮ ಸಂಬಂಧಗಳಲ್ಲಿ ಕೆಲಸ ಮಾಡುವ ಮೆಕ್ಯಾನಿಸಂ ಕೂಡ ಮೂರ್ತಿ ಪೂಜೆಯಂಥದೇ. ಶರಣಾಗತಿಯ ಪ್ರೇಮ ಸಂಬಂಧ, ದೈಹಿಕ ಮತ್ತು ಲೈಂಗಿಕ ಬಯಕೆಗಳನ್ನೂ ಹೊಂದಿರಬಹುದು; ಆಗ ಈ ಸಂಬಂಧ ಕೇವಲ ಒಬ್ಬರ ಬುದ್ಧಿ ಭಾವ ಮಾತ್ರ ಭಾಗವಹಿಸುವ ಶರಣಾಗತಿಯ ಸಂಬಂಧವಲ್ಲ, ಈಗ ಇದರಲ್ಲಿ ದೇಹದ ಭಾಗವಹಿಸುವಿಕೆಯೂ ಸೇರಿಕೊಂಡಿದೆ. ಶರಣಾಗತಿಯ ಮನುಷ್ಯ ವಿಧಿಗೆ ಶರಣಾಗಬಹುದು, ಕಾಯಿಲೆಗೆ ಸೋಲಬಹುದು, ತಾಳ ಬದ್ಧ ಸಂಗೀತಕ್ಕೆ , ಮಾದಕ ದೃವ್ಯಗಳಿಗೆ, ಸಮ್ಮೋಹನ ಭಾವ ಸಮಾಧಿಗೆ (hypnotic trance) ತುತ್ತಾಗಿ ಭಾವೋನ್ನತಿಯ ಅನುಭವಕ್ಕೆ ಒಳಗಾಗಬಹುದು. ಆದರೆ ಈ ಎಲ್ಲ ಸಂದರ್ಭಗಳಲ್ಲೂ ಶರಣಾಗುವ ಮನುಷ್ಯ ತನ್ನ ಸಮಗ್ರತೆಯನ್ನ ತ್ಯಾಗ ಮಾಡಿ, ಇನ್ನೊಬ್ಬರ ಅಥವಾ ತನ್ನಿಂದ ಹೊರತಾದ ಸಂಗತಿಯೊಂದರ ಕೈಯಲ್ಲಿ ಆಟದ ವಸ್ತುವಾಗುತ್ತಾನೆ ; ಅವನಿಗೆ ತನ್ನ ಬದುಕಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಯಾವ ಪ್ರೊಡಕ್ಟಿವ್ ಕೆಲಸ ಮಾಡುವ ಅವಶ್ಯಕತೆಯಿಲ್ಲ.

Erich Fromm

ಸಹಜೀವನ ಒಂದಾಗುವಿಕೆಯ (symbiotic fusion) ಕ್ರಿಯಾತ್ಮಕ ರೀತಿ, ಪ್ರಭುತ್ವ (domination) ಹೊಂದುವ ಬಗೆಯದು. ಮನೋವಿಜ್ಞಾನದ ಪರಿಭಾಷೆಯಲ್ಲಿ sadism ಎಂದು ಕರೆಸಿಕೊಳ್ಳುವಂಥದು. ಪ್ರಭುತ್ವದ ಮನುಷ್ಯ ತನ್ನ ಒಂಟಿತನದಿಂದ, ತನ್ನ ಬಂಧನದ ಭಾವದಿಂದ ಪಾರಾಗಲು ಇನ್ನೊಬ್ಬರನ್ನು ತನ್ನ ಭಾಗವಾಗಿಸಿಕೊಳ್ಳುತ್ತಾನೆ. ತನ್ನನ್ನು ಪೂಜಿಸುವ ಇನ್ನೊಬ್ಬರನ್ನು ತನ್ನ ಭಾಗವಾಗಿಸಿಕೊಳ್ಳುವುದರ ಮೂಲಕ ತನ್ನನ್ನು ಹಿಗ್ಗಿಸಿಕೊಳ್ಳುತ್ತಾನೆ, ವಿಸ್ತಾರ ಮಾಡಿಕೊಳ್ಳುತ್ತಾನೆ.

ಹೇಗೆ ಶರಣಾಗತಿಯ ಮನುಷ್ಯ, ಪ್ರಭುತ್ವದ ಮನುಷ್ಯನ ಮೇಲೆ ಅವಲಂಬಿತನಾಗಿದ್ದಾನೆಯೋ, ಹಾಗೆಯೇ ಪ್ರಭುತ್ವದ ಮನುಷ್ಯ ಕೂಡ ಅವಲಂಬಿತನಾಗಿರುವುದು ತನಗೆ ಶರಣಾಗಿರುವ ಮನುಷ್ಯನ ಮೇಲೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಚು ಇರಲಾರರು. ವ್ಯತ್ಯಾಸವೆಂದರೆ, ಪ್ರಭುತ್ವದ ಮನುಷ್ಯ ಅಧಿಕಾರ ಚಲಾಯಿಸುತ್ತಾನೆ, ಶೋಷಣೆ ಮಾಡುತ್ತಾನೆ, ನೋಯಿಸುತ್ತಾನೆ, ಅಪಮಾನ ಮಾಡುತ್ತಾನೆ, ಮತ್ತು ಶರಣಾಗತಿಯ ಮನುಷ್ಯ ಆಜ್ಞೆಗಳನ್ನು ಪಾಲಿಸುತ್ತಾನೆ, ಶೋಷಣೆಗೆ ಒಳಗಾಗುತ್ತಾನೆ, ಗಾಯಗೊಳ್ಳುತ್ತಾನೆ ಮತ್ತು ಅಪಮಾನಿತನಾಗುತ್ತಾನೆ. ವಾಸ್ತವಿಕ ದೃಷ್ಟಿಯಲ್ಲಿ ಈ ವ್ಯತ್ಯಾಸ ಬಹಳ ದೊಡ್ಡದು ; ಆಳ ಭಾವನಾತ್ಮಕ ದೃಷ್ಟಿಯಲ್ಲಿ ಇದು ಅಂಥ ದೊಡ್ಡ ವ್ಯತ್ಯಾಸವೇನಲ್ಲ ಏಕೆಂದರೆ ಇಬ್ಬರಿಗೂ ಬೇಕಾದದ್ದು ಸಮಗ್ರತೆ (integrity) ಹೊರತಾದ ಒಂದಾಗುವಿಕೆ. ಇದನ್ನ ಒಮ್ಮೆ ಅರ್ಥ ಮಾಡಿಕೊಂಡರೆ, ಬೇರೆ ಬೇರೆ ಮನುಷ್ಯರ, ವಸ್ತುಗಳ ಜೊತೆ, ಬೇರೆ ಬೇರೆ ಸಂದರ್ಭಗಳಲ್ಲಿ ಮನುಷ್ಯ, ಪ್ರಭುತ್ವದ ಹಾಗು ಶರಣಾಗತಿಯ ಎರಡೂ ರೀತಿಯಲ್ಲಿ ಪ್ರತಿಕ್ರಯಿಸುವುದು ನಮಗೆ ಆಶ್ಚರ್ಯ ತರಲಾರದು. ಹಿಟ್ಲರ್, ಜನರ ಜೊತೆ ಪ್ರಭುತ್ವದ ರೀತಿಯಲ್ಲಿ ವರ್ತಿಸಿದ ಆದರೆ ವಿಧಿ, ಇತಿಹಾಸ, ಪ್ರಕೃತಿಯ “ಮಹಾ ಶಕ್ತಿ” ಯ ಎದುರು ಶರಣಾಗತಿಯ ಮನುಷ್ಯನ ಹಾಗೆ ನಡೆದುಕೊಂಡ. ಬೇರೆಲ್ಲ ವಿಧ್ವಂಸಕ ಕೃತ್ಯಗಳ ಜೊತೆ ಅವನ ಕೊನೆ – ಆತ್ಮಹತ್ಯೆ, ಅವನ ಸಂಪೂರ್ಣ ಪ್ರಬುತ್ವದ ಕನಸಿನ ಯಶಸ್ಸಿನಷ್ಟೇ ವಿಶೇಷವಾಗಿತ್ತು . (1)

(1) For more detailed study of sadism and masochism refer, Escape from Freedom by Erich Fromm.

1 Comment

Leave a Reply