ಗಂಡು ಹೆಣ್ಣುಗಳ ಧ್ರುವೀಕರಣ :  Art of love #1 6

ಗಂಡು-ಹೆಣ್ಣು ಧ್ರುವಗಳ ಒಂದಾಗುವಿಕೆಯ ತತ್ವ ಪ್ರಕೃತಿಯಲ್ಲೂ ಕಂಡುಬರುತ್ತದೆ ; ಇದು ಪ್ರಾಣಿ ಮತ್ತು ಸಸ್ಯ ಲೋಕದಲ್ಲಿಯಂತೆ ಸ್ಪಷ್ಟವಾಗಿ ಕಂಡುಬರದಿದ್ದರೂ, ಬದುಕಿನ ಎರಡು ಮೂಲಭೂತ ಕ್ರಿಯೆಗಳಾದ ಸ್ವೀಕರಿಸುವುದು (receiving ) ಮತ್ತು ತನ್ನನ್ನು ತಾನು ಕೊಡುವುದು (penetrating) ಇವುಗಳ ಗುಣ ಲಕ್ಷಣಗಳಲ್ಲಿ ತನ್ನ ಅಭಿವ್ಯಕ್ತಿಯನ್ನು ಪಡೆಯುತ್ತದೆ ಅನ್ನುವ ಎರಿಕ್ ಫ್ರಾಮ್; ಸಿಗ್ಮಂಡ್ ಫ್ರಾಯ್ಡ್, ಮನುಷ್ಯನ ಲೈಂಗಿಕ ಅಭೀಪ್ಸೆಯನ್ನ ಅವನ ಪ್ರೀತಿ ಮತ್ತು ಒಂದಾಗುವ ಬಯಕೆಯ ಅಭಿವ್ಯಕ್ತಿ ಎಂದು ಗುರುತಿಸದೇ, ಪ್ರೀತಿಯನ್ನ ಮನುಷ್ಯನ ಲೈಂಗಿಕ ಪ್ರವೃತ್ತಿಯ ಪ್ರಕಟಿತ, ಸಂಸ್ಕರಿತ ರೂಪವಾಗಿ ಗುರುತಿಸಿ ಮಾಡಿದ ತಪ್ಪಿನ ಬಗ್ಗೆ ವಿವರಿಸುತ್ತಾರೆ… । ಕನ್ನಡಕ್ಕೆ : ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2022/04/23/love-29/

ಗಂಡು ತತ್ವ ಮತ್ತು ಸ್ತ್ರೀ ತತ್ವ ಒಂದಾಗಿ, ಸಾಮರಸ್ಯ ಸಾಧಿಸುತ್ತ ತಮ್ಮ ಸೃಜನಶೀಲತೆಯನ್ನ ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ಸೃಷ್ಟಿಯ ಸಹಜ ಚಮತ್ಕಾರ, ಜಗತ್ತಿನ ಶ್ರೇಷ್ಠ ಸೂಫಿ ಕವಿ ಮತ್ತು ಅನುಭಾವಿ ರೂಮಿಯಲ್ಲಿ ಹೀಗೆ ಸುಂದರವಾಗಿ ವರ್ಣಿತವಾಗಿದೆ.

ಸಾಧ್ಯವೇ ಇಲ್ಲ ನಿಜದಲ್ಲಿ,

ಪ್ರಿಯತಮ ತನ್ನ ಬಯಸದೇ ಇರುವಾಗಲೂ
ಪ್ರೇಮಿ ಹುಡುಕುವುದು ತನ್ನ ಪ್ರೇಮವನ್ನ.

ಪ್ರೇಮದ ಮಿಂಚು ಈ ಹೃದಯಕ್ಕೆ ಅಪ್ಪಳಿಸಿದಾಗ
ತಿಳಿ, ಆ ಹೃದಯಲ್ಲಿ ಪ್ರೇಮಕ್ಕೆ ಜಾಗವಿದೆ ಎನ್ನುವುದನ್ನ

ಪ್ರೇಮದ ದೇವತೆ ನಿನ್ನ ಹೃದಯದಲ್ಲಿ ನೆಲೆ ನಿಂತದ್ದು ನಿಜವೇ ಆದರೆ
ಸಂಶಯ ಬಿಟ್ಟು ನಂಬು ದೇವರು ನಿನ್ನ ಪ್ರೇಮಿಯೆನುವುದನ್ನ

ಒಂದು ಕೈಯಿಂದ ಸಾಧ್ಯವಿಲ್ಲ, ಬೇಕೇ ಬೇಕು ಇನ್ನೊಂದು ಕೈ
ಕೇಳಬೇಕೆಂದರೆ ನೀವು ಚಪ್ಪಾಳೆಯ ಸಪ್ಪಳವನ್ನ.

ದಿವ್ಯ ಜ್ಞಾನ ನಮ್ಮ ನಿಯತಿ, ಮತ್ತು ನಿರ್ಧರಿಸಿಯಾಗಿದೆ
ವಿಧಿ ಲಿಖಿತ ಪ್ರೇಮಿಗಳಾಗಿ ನಮ್ಮಿಬ್ಬರನ್ನ

ಆ ಪೂರ್ವ ನಿಯಾಮಕ ಶಕ್ತಿ ಕಾರಣವಾಗಿಯೇ
ನಿರ್ಣಯಿಸಲಾಗಿದೆ ಜಗತ್ತಿನ ಪ್ರತಿ ಭಾಗಕ್ಕೂ ಜೊತೆಯೊಂದನ್ನ.

ಸ್ವರ್ಗ ಗಂಡು, ಭೂಮಿ ಹೆಣ್ಣು, ದ್ಯಾವಾ ಪೃಥುವಿಯ ಸಂಬಂಧ
ಪ್ರೀತಿಯಿಂದ ಬೆಳೆಯುತ್ತದೆ ಭೂಮಿ, ಸ್ವರ್ಗ ಮೇಲಿನಿಂದ ಸುರಿಸಿರುವುದನ್ನ

ನೆಲ ಕಾವು ಕಳೆದುಕೊಂಡಾಗ, ಧಾರೆಯೆರೆಯುತ್ತದೆ ಸ್ವರ್ಗ ತನ್ನ ಶಾಖವನ್ನ
ಕಳೆದುಕೊಂಡಾಗ ಆಕೆ ತನ್ನ ತಾಜಾತನ, ಆರ್ದ್ರತೆ
ಮತ್ತೆ ಸಾಧ್ಯಮಾಡುತ್ತದೆ ಸ್ವರ್ಗ ಎಲ್ಲವನ್ನ

ಸ್ವರ್ಗ ಯಾವತ್ತೂ ನಿರತ ತನ್ನ ಕೆಲಸದಲ್ಲಿ ಹಗಲಿರುಳು
ಸಾಧ್ಯ ಮಾಡಲು ತನ್ನ ಹೆಂಡತಿಗೆ ಎಲ್ಲ ಆರಾಮವನ್ನ

ಭೂಮಿ ಚುರುಕು ಹೆಂಡತಿಯಂತೆ ಸದಾ ಗಡಿಬಿಡಿಯಲ್ಲಿ
ಹುಟ್ಟಿಸುವುದು ಮತ್ತು ಪೊರೆಯುವುದು ಮರೆಯುವುದಿಲ್ಲ ಎಂದೂ ತನ್ನ ನೇಮವನ್ನ

ದ್ಯಾವಾ ಪೃಥುವಿಗಳ ಮೇಲಿದೆ ಜ್ಞಾನದ ಹಾರೈಕೆ
ಅವು ಯಾವಾಗಲೂ ಮಾಡುವುದು ಜ್ಞಾನಿಗಳ ಕೆಲಸಗಳನ್ನ

ಈ ಇಬ್ಬರು ಜೊತೆಗಾರರು ಪರಸ್ಪರರಲ್ಲಿ ಕಂಡುಕೊಂಡಿಲ್ಲವಾದರೆ ಸುಖ
ನಲ್ಲ ನಲ್ಲೆಯರಂತೆ ಹೀಗೆ ಸಾಗಿಸುತ್ತಿದ್ದರೆ ಬದುಕನ್ನ?

ಭೂಮಿಯಿಲ್ಲದಿದ್ದರೆ, ಅರಳುವುದು ಸಾಧ್ಯವಿತ್ತೇ ಹೂವು ಮತ್ತು ಗಿಡ ಮರಗಳು
ಸ್ವರ್ಗದ ನೀರು ಮತ್ತು ಶಾಖ ಹುಟ್ಟಿಸಬೇಕಿತ್ತು ಬೇರೆ ಏನನ್ನ?

ಬಯಕೆಯ ಬೀಜ ಬಿತ್ತಿದ್ದಾನೆ ಭಗವಂತ, ಗಂಡು ಹೆಣ್ಣು ಇಬ್ಬರಲ್ಲೂ
ಮುಂದಿಟ್ಟುಕೊಂಡು, ಬದುಕು ಬೆಳೆಯಬೇಕೆನ್ನುವ
ಏಕೈಕ ಕಾರಣವನ್ನ

ಅಸ್ತಿತ್ವದ ಪ್ರತಿ ಭಾಗದಲ್ಲೂ ತುಂಬಿದ್ದಾನೆ ದೇವರು
ಇನ್ನೊಂದು ಭಾಗದ ಕುರಿತಾದ ಚಡಪಡಿಕೆಯನ್ನ

ಹೊರಗಿನಿಂದ ನೋಡಿದಾಗ ವೈರಿಗಳಂತೆ ಕಾಣುವ ಹಗಲು ರಾತ್ರಿಗಳಿಗೆ
ಆದೇಶಿಸಲಾಗಿದೆ ನಿರ್ವಹಿಸಲು ಒಂದೇ ಉದ್ದೇಶವನ್ನ

ಪ್ರತಿಯೊಂದೂ ಮಗ್ನವಾಗಿದೆ ಇನ್ನೊಂದರ ಜೊತೆ ಪ್ರೇಮದಲ್ಲಿ
ಪರಿಪೂರ್ಣವಾಗಿಸಲು ತಮಗೆ ವಹಿಸಲಾಗಿರುವ ಅಪರೂಪದ ಕೆಲಸವನ್ನ

ರಾತ್ರಿಯಿಲ್ಲದಿದ್ದರೆ ಯಾವ ಆದಾಯವೂ ಇಲ್ಲ ಮನುಷ್ಯನಿಗೆ
ಹಾಗಾದರೆ ಹಗಲು, ತಾನು ಖರ್ಚು ಮಾಡುವುದಾದರೂ ಏನನ್ನ ? (8)

ಗಂಡು ಹೆಣ್ಣು ಗಳ ಧ್ರುವೀಕರಣದ ಸಮಸ್ಯೆಯ ಕುರಿತಾಗಿ ಪ್ರೇಮ ಮತ್ತು ಸೆಕ್ಸ್ ಗೆ ಸಂಬಂಧಿಸಿದಂತೆ , ಇನ್ನೂ ಒಂದಿಷ್ಟು ಚರ್ಚೆಗೆ ಈಗ ಅವಕಾಶವಿದೆ. ಫ್ರಾಯ್ಡ್, ಮನುಷ್ಯನ ಲೈಂಗಿಕ ಅಭೀಪ್ಸೆಯನ್ನ ಅವನ ಪ್ರೀತಿ ಮತ್ತು ಒಂದಾಗುವ ಬಯಕೆಯ ಅಭಿವ್ಯಕ್ತಿ ಎಂದು ಗುರುತಿಸದೇ, ಪ್ರೀತಿಯನ್ನ ಮನುಷ್ಯನ ಲೈಂಗಿಕ ಪ್ರವೃತ್ತಿಯ ಪ್ರಕಟಿತ, ಸಂಸ್ಕರಿತ ರೂಪವಾಗಿ ಗುರುತಿಸಿ ಮಾಡಿದ ತಪ್ಪಿನ ಬಗ್ಗೆ ನಾನು ಹಿಂದೆಯೇ ಹೇಳಿದ್ದೇನೆ. ಫ್ರಾಯ್ಡನ ಈ ತಪ್ಪು ತುಂಬ ಆಳವಾದ ಪರಿಣಾಮಗಳಿಗೆ ಕಾರಣವಾಗುತ್ತದೆ. ಅವನ ದೇಹಶಾಸ್ತ್ರೀಯ ವಸ್ತುವಾದದ ಪ್ರಕಾರ ; ಮನುಷ್ಯನ ಲೈಂಗಿಕ ಪ್ರವೃತ್ತಿ, ಅವನ ದೇಹದಲ್ಲಿ ಉಂಟಾಗಿರುವ ರಾಸಾಯನಿಕ ಕ್ರಿಯೆಯ ಒತ್ತಡದ ಪರಿಣಾಮ. ಈ ಒತ್ತಡ ನೋವು ಉಂಟುಮಾಡುವಂಥದು ಮತ್ತು ಈ ಒತ್ತಡವನ್ನು ಪರಿಹರಿಸಿಕೊಳ್ಳುವುದು ಮನುಷ್ಯನ ಲೈಂಗಿಕ ಬಯಕೆಯ ಏಕೈಕ ಗುರಿಯೆಂದೂ ಮತ್ತು ಈ ಒತ್ತಡ ಪರಿಹಾರವಾದಾಗ ಮಾತ್ರ ಅವನಿಗೆ ಲೈಂಗಿಕ ತೃಪ್ತಿ ದೊರಕುವುದು ಸಾಧ್ಯ ಎಂದೂ ಫ್ರಾಯ್ಡ್ ವಾದಿಸುತ್ತಾನೆ.

ಅವನ ಈ ನೋಟಕ್ಕೆ ವ್ಯಾಲಿಡಿಟಿ ಇರುವುದು, ಅಪೌಶ್ಟಿಕತೆಯಿಂದ ಬಳಲುತ್ತಿರುವ ಜೀವಿಯಲ್ಲಿ, ಹಸಿವು ಮತ್ತು ಬಾಯಾರಿಕೆ ಕೆಲಸ ಮಾಡುವ ರೀತಿಯಲ್ಲಿ ಮನುಷ್ಯನ ಲೈಂಗಿಕ ಬಯಕೆ ಕೆಲಸ ಮಾಡುತ್ತಿದ್ದರೆ ಮಾತ್ರ. ಈ ಪರಿಕಲ್ಪನೆಯಲ್ಲಿ ಲೈಂಗಿಕ ಬಯಕೆ ಒಂದು ರೀತಿಯ ‘ಕೆರೆತ’ದ (itch) ಥರ, ಲೈಂಗಿಕ ತೃಪ್ತಿಯೆಂದರೆ, ಕೆರೆತ ವಾಸಿಯಾದ ಥರ. ಲೈಂಗಿಕತೆಯ ಈ ವ್ಯಾಖ್ಯಾನದ ಪ್ರಕಾರ ಹಸ್ತಮೈಥುನದ ಮೂಲಕ ಪೂರ್ಣ ಲೈಂಗಿಕ ತೃಪ್ತಿಯನ್ನ ಹೊಂದುವುದು ಸಾಧ್ಯ. ಫ್ರಾಯ್ಡ್ ನ ಈ ಕಲ್ಪನೆಯ ವಿರೋಧಾಭಾಸ ಏನೆಂದರೆ, ಅವನು ಮನುಷ್ಯ ಲೈಂಗಿಕತೆಯ ಮನೋದೈಹಿಕ ಅಂಶವನ್ನು ನಿರ್ಲಕ್ಷಿಸುತ್ತಾನೆ, ಮನುಷ್ಯರಲ್ಲಿ ಗಂಡು ಹೆಣ್ಣುಗಳೆಂಬ ಎರಡು ಧ್ರುವಗಳಿರುವುದನ್ನೂ, ಮತ್ತು ಈ ಎರಡರ ಧ್ರುವೀಕರಣದ ಬಯಕೆ ಅವರ ಮಿಲನದಲ್ಲಿ ಮಾತ್ರ ಸಾಧ್ಯ ಎನ್ನುವುದನ್ನ ಫ್ರಾಯ್ಡ್ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಫ್ರಾಯ್ಡ್ ನ ಪಿತೃಪ್ರಧಾನ ಮನಸ್ಥಿತಿ, ಅವನ ಈ ಕುತೂಹಲಕರ ತಪ್ಪಿಗೆ, ಮತ್ತು ಲೈಂಗಿಕತೆಯನ್ನ ಗಂಡಿನ ದೃಷ್ಟಿಯಿಂದ ನೋಡುವುದಕ್ಕೆ ಹಾಗು ಹೆಣ್ಣಿನ ಲೈಂಗಿಕತೆಯನ್ನ ನಿರ್ಲಕ್ಷಿಸುವುದಕ್ಕೆ ಕಾರಣವಾಗಿರಬಹುದು. ಲೈಂಗಿಕತೆಯ ಕುರಿತಾದ ಈ ಅಭಿಪ್ರಾಯವನ್ನ ಫ್ರಾಯ್ಡ್ ತನ್ನ Three contribution to the theory of sex ಲ್ಲಿ “ ಗಂಡಿನಲ್ಲಾಗಲಿ ಹೆಣ್ಣಿನಲ್ಲಾಗಲಿ, ಮನುಷ್ಯನ ಕಾಮಾಸಕ್ತಿ ಯಾವಾಗಲೂ ಪುರುಷ ಲಕ್ಷಣಗಳನ್ನು ಹೊಂದಿದೆ “ ಎಂದು ಹೇಳುವ ಮೂಲಕ ವ್ಯಕ್ತಪಡಿಸಿದ್ದಾನೆ. ತನ್ನ ಇದೇ ಅಭಿಪ್ರಾಯವನ್ನ ಫ್ರಾಯ್ಡ್ ಒಂದು ವ್ಯವಸ್ಥಿತ ಸಿದ್ಧಾಂತವಾಗಿಯೂ ಮಂಡಿಸಿದ್ದಾನೆ. ಅವನ ಪ್ರಕಾರ ಚಿಕ್ಕ ಮಗುವಿಗೆ ಹೆಣ್ಣು, ಗಂಡು ಜನನಾಂಗ ಹೊಂದಿರದ ಗಂಡಸಿನಂತೆ ಕಾಣುತ್ತಾಳೆ ಮತ್ತು, ಅವಳು ತನಗೆ ಗಂಡು ಜನನಾಂಗವಿರದ ಕೊರತೆ ತುಂಬಿಕೊಳ್ಳಲು ಹಲವಾರು ಪರಿಹಾರದ ದಾರಿಗಳನ್ನ ಹುಡುಕುತ್ತಾಳೆ. ಆದರೆ ಹೆಣ್ಣು, ಪುರುಷ ಜನನಾಂಗ ಹೊಂದಿರದ ಗಂಡು ಅಲ್ಲ, ಮತ್ತು ಅವಳ ಲೈಂಗಿಕತೆ ವಿಶಿಷ್ಟವಾದ ಹೆಣ್ತನದ ಲಕ್ಷಣಗಳನ್ನು ಹೊಂದಿದೆಯೇ ಹೊರತು ಅವಳ ಲೈಂಗಿಕತೆಯಲ್ಲಿ ಯಾವ ಪುರುಷ ಲಕ್ಷಣಗಳೂ ಇಲ್ಲ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply