ತಿಳುವಳಿಕೆಯ ಜೊತೆ ನಂಬಿಕೆಯೂ ಇರಬೇಕು : ಒಂದು ಸೂಫಿ ಕಥೆ

“ನಂಬಿಕೆಯ ಹೊರತಾದ ತಿಳುವಳಿಕೆಯ ಕಾರಣವಾಗಿಯೇ ಮನುಷ್ಯ ಹಲವಾರು ಸಂಶಯಗಳಿಗೆ ಬಲಿಯಾಗಿದ್ದಾನೆ, ಸಂಕಟಗಳನ್ನು ಅನುಭವಿಸುತ್ತಿದ್ದಾನೆ” ಅನ್ನುತ್ತಾನೆ ಹಬೀಬ್ । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಒಂದು ದಿನ ಸಾಧಕ ಹಸನ್-ಅಲ್-ಬಸ್ರಿ, ಸೂಫಿ ಅನುಭಾವಿ ಹಬೀಬ್-ಅಲ್-ಅಜಮಿಯ ಮನೆಗೆ ಬಂದ. ಹಸನ್ ನನ್ನು ಸ್ವಾಗತಿಸಿದ ಹಬೀಬ್ ಅವನ ಮುಂದೆ ನಾಲ್ಕು ರೊಟ್ಟಿ ಮತ್ತು ಉಪ್ಪು ತಂದಿಟ್ಟ. ದೂರದ ಪ್ರಯಾಣದಿಂದ ದಣಿದಿದ್ದ ಹಸನ್, ರೊಟ್ಟಿ ತಿನ್ನಲು ಶುರುಮಾಡಿದ. ಅದೇ ಸಮಯಕ್ಕೆ ಹಬೀಬ್ ನ ಮನೆಯ ಬಾಗಿಲಲ್ಲಿ ಒಬ್ಬ ಭಿಕ್ಷುಕ ಕಾಣಿಸಿಕೊಂಡು, ಭಿಕ್ಷೆಗಾಗಿ ಕೂಗಿದ. ಭಿಕ್ಷುಕನ ದನಿ ಕೇಳಿದ ಕೂಡಲೇ ಹಬೀಬ್, ಹಸನ್ ತಿನ್ನುತ್ತಿದ್ದ ರೊಟ್ಟಿಯ ತಟ್ಟೆಯನ್ನು ಎತ್ತಿಕೊಂಡು ಹೋಗಿ ಭಿಕ್ಷುಕನಿಗೆ ಕೊಟ್ಟುಬಿಟ್ಟ. ಹಬೀಬ್ ನ ಈ ವರ್ತನೆಯನ್ನು ಕಂಡು ಹಸನ್ ಗೆ ದಿಗ್ಭ್ರಮೆಯಾಯ್ತು.

“ ಹಬೀಬ್, ನಿನ್ನ ಎಲ್ಲರೂ ಜ್ಞಾನಿ, ಅನುಭಾವಿ, ತಿಳುವಳಿಕೆಯ ಮನುಷ್ಯ ಎನ್ನುತ್ತಾರೆ. ಆದರೆ ನೀನು ನಾನು ತಿನ್ನುತ್ತಿದ್ದ ರೊಟ್ಟಿಯನ್ನ ಆ ಭಿಕ್ಷುಕನಿಗೆ ಕೊಟ್ಟುಬಿಟ್ಟೆ. ನಾನು ಕೂಡ ಹಸಿದಿದ್ದೆ ಈ ನಾಲ್ಕು ರೊಟ್ಟಿಗಳಲ್ಲಿ ಭಾಗ ಮಾಡಿ ನೀನು ಎರಡು ರೊಟ್ಟಿ ಆ ಭಿಕ್ಷುಕನಿಗೆ ಕೊಡಬಹುದಿತ್ತು. ನೀನು ಶ್ರೀಮಂತನೂ ಹೌದು ಆದರೆ ನಿನ್ನ ಈ ವರ್ತನೆಯಿಂದ ನನಗೆ ಅಸಮಾಧಾನವಾಗಿದೆ “ ಹಸನ್ ತನ್ನ ಬೇಸರವನ್ನ ಹಬೀಬ್ ನ ಎದುರು ಹೇಳಿಕೊಂಡ.

ಅಷ್ಟರಲ್ಲಿಯೇ ಸೇವಕ ಒಂದು ತಟ್ಟೆಯನ್ನು ತೆಗೆದುಕೊಂಡು ಬಂದ. ತಟ್ಟೆಯಲ್ಲಿ ಹುರಿದ ಆಡಿನ ಮಾಂಸ ಮತ್ತು ಇತರ ಸಿಹಿ ಮಾಂಸದ ಭಕ್ಷಗಳ ಜೊತೆ 500 ದಿರ್ರಹಂಗಳನ್ನು ಇರಿಸಲಾಗಿತ್ತು. ಹಬೀಬ್ 500 ದಿರ್ರಹಂಗಳನ್ನ ಭಿಕ್ಷುಕನಿಗೆ ಕೊಟ್ಟು, ಮಾಂಸದ ಭಕ್ಷಗಳ ತಟ್ಟೆಯನ್ನ ಹಸನ್ ನ ಮುಂದೆ ಇರಿಸಿದ.

ಹಸನ್ ಖುಶಿಯಿಂದ ಉಣ್ಣಲು ಶುರು ಮಾಡುತ್ತಿದ್ದಂತೆಯೇ, ಹಬೀಬ್ ಮಾತನಾಡಿದ, “ ಹಸನ್ ನೀನು ಒಳ್ಳೆಯ ಮನುಷ್ಯ, ನಿನಗೆ ತಿಳುವಳಿಕೆಯೆನೋ ಇದೆ ಆದರೆ ತಿಳುವಳಿಕೆಯ ಜೊತೆ ನಂಬಿಕೆಯೂ ಇದ್ದರೆ ಚೆನ್ನಾಗಿತ್ತು, ನಂಬಿಕೆಯ ಹೊರತಾದ ತಿಳುವಳಿಕೆಯ ಕಾರಣವಾಗಿಯೇ ಮನುಷ್ಯ ಹಲವಾರು ಸಂಶಯಗಳಿಗೆ ಬಲಿಯಾಗಿದ್ದಾನೆ, ಸಂಕಟಗಳನ್ನು ಅನುಭವಿಸುತ್ತಿದ್ದಾನೆ.”

( Source: Fariduddin Attar’s “Tadhkirat al-Awliyya” )

Leave a Reply