ಮಸ್ನವಿ, ಜಲಾಲೂದ್ದೀನ್ ರೂಮಿಯ ಅನುಭಾವ ಕತೆಗಳ ಸಂಗ್ರಹ. ಮೇಲ್ನೋಟಕ್ಕೆ ಸರಳ ದೃಷ್ಟಾಂತ / ಸಾಮತಿ ಇಲ್ಲವೇ ಸರಳ ಕತೆಗಳಂತೆ ಕಂಡರೂ ಈ ಕೃತಿಯ ಪ್ರತಿಯೊಂದು ಕತೆಯೂ ಒಂದು ಗೂಢಾರ್ಥವನ್ನು, ಪರಮಾರ್ಥ ಚಿಂತನೆಯನ್ನು, ವ್ಯಕ್ತಿತ್ವ – ಆತ್ಮ ವಿಕಸನ ಪಾಠವನ್ನು ಹೊತ್ತುಕೊಂಡಿವೆ. ಅಂಥಹ ಕೆಲವು ಕತೆಗಳ ಕನ್ನಡ ನಿರೂಪಣೆ, ಅರಳಿಮರದಲ್ಲಿ ಪ್ರಕಟವಾಗಲಿವೆ… ~ ಚೇತನಾ ತೀರ್ಥಹಳ್ಳಿ
ಒಂದೂರಿನಲ್ಲಿ ಒಬ್ಬ ದಿನಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಅವನ ಬಳಿ ಒಂದು ಮುದ್ದಾದ ಗಿಳಿ ಇತ್ತು. ಅದು ಬಹಳ ಜಾಣ ಗಿಳಿ. ಚೆನ್ನಾಗಿ ಮಾತಾಡುತ್ತಿತ್ತು, ಹಾಡುತ್ತಿತ್ತು. ಅದು ಆ ಅಂಗಡಿಯವನ ಮೆಚ್ಚಿನ ಸಂಗಾತಿಯಷ್ಟೇ ಅಲ್ಲ, ಆ ಅಂಗಡಿ ಕಾಯುವ ಕಾವಲುಗಾರನೂ ಆಗಿತ್ತು. ಯಾರು ಹೋದರೂ ಬಂದರೂ ನಿಗಾ ವಹಿಸುತ್ತಿತ್ತು. ತನ್ನ ಮಾತುಗಳಿಂದ ಮೋಡಿ ಹಾಕಿ ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿತ್ತು.
ಒಂದು ದಿನ ಅಂಗಡಿಯವ ಗಿಳಿಯ ನಿಗರಾನಿಗೆ ಅಂಗಡಿ ಒಪ್ಪಿಸಿ ಊಟಕ್ಕೆ ಹೋದ. ಗಿಳಿಯೂ ಯಾವಾಗಿನಂತೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿತ್ತು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಒಂದು ಬೆಕ್ಕು ಇಲಿಯನ್ನು ಅಟ್ಟಾಡಿಸುತ್ತಾ ಅಂಗಡಿಯೊಳಕ್ಕೆ ನುಗ್ಗಿತು. ಅದು ನುಗ್ಗಿದ ರಭಸಕ್ಕೆ ಬೆಚ್ಚಿದ ಗಿಳಿ ಅಂಗಡಿಯೊಳಗೆ ಎರ್ರಾಬಿರ್ರಿ ಹಾರುತ್ತಾ, ಜೋಡಿಸಿಟ್ಟಿದ್ದ ಬಾದಾಮಿ ಎಣ್ಣೆ ಶೀಶೆಗಳಿಗೆ ಢಿಕ್ಕಿ ಹೊಡೆಯಿತು. ಆ ಶೀಶೆಗಳು ನೆಲಕ್ಕೆ ಬಿದ್ದು ಒಡೆದು ಹೋದವು. ಅದರಿಂದ ಹಾರಿದ ಎಣ್ಣೆ ಗಿಳಿಯ ಮೈ ತೋಯ್ದುಹೋಯಿತು. ಅಂಗಡಿಯ ನೆಲವೂ ಜಾರತೊಡಗಿತು.
ಸ್ವಲ್ಪ ಹೊತ್ತಾದ ಮೇಲೆ ಅಂಗಡಿಯವ ಮರಳಿ ಬಂದ. ಮೊದಲೇ ಮಧ್ಯಾಹ್ನದ ಬಿಸಿಲು. ಅಂಗಡಿಯ ಅವಸ್ಥೆ ಅವನ ಪಿತ್ಥ ನೆತ್ತಿಗೇರಿಸಿತು. ನೆಲದ ಮೇಲೆ ಕಾಲಿಟ್ಟು ಜಾರಿ ಬೀಳಲಿಕ್ಕಾದ. ಒಡೆದ ಶೀಶೆಯ ಚೂರು ತೆಗೆಯಲು ಹೋಗಿ ಕೈಗೆ ಚುಚ್ಚಿಸಿಕೊಂಡ. ಮೈ ತುಂಬಾ ಎಣ್ಣೆ ಮೆತ್ತಿಕೊಂಡು ಮೂಲೆಯಲ್ಲಿ ಮುದುಡಿ ಕುಳಿತಿದ್ದ ಗಿಳಿಯನ್ನು ಕಂಡು ನಡೆದ ಘಟನೆ ಊಹಿಸಿದ. ಎಲ್ಲಾ ಇದರದ್ದೇ ಕಿತಾಪತಿ ಎಂದು ತೀರ್ಮಾನಿಸಿ ಸಿಟ್ಟಿನಿಂದ ಅದರ ತಲೆಯ ಮೇಲೆ ಕುಟ್ಟಿದ. ಅವನು ಕುಟ್ಟಿದ ಹೊಡೆತಕ್ಕೆ ಅದರ ತಲೆ ಮೇಲಿದ್ದ ಜುಟ್ಟು ಉದುರಿಹೋಯಿತು.
ಮೊದಲೇ ತನ್ನ ತಪ್ಪಿನ ಕಾರಣಕ್ಕೆ ಪಶ್ಚಾತ್ತಾಪದಿಂದ ಹಿಡಿಯಾಗಿದ್ದ ಗಿಳಿ, ಈಗ ನೋವು – ಒಡೆಯನ ಕೋಪಕ್ಕೆ ತುತ್ತಾದ ದುಃಖದಿಂದ ಪೂರ್ತಿ ಮುದುಡಿ ಹೋಯಿತು.
ಆ ಕ್ಷಣದಿಂದ ಗಿಳಿ ಮಾತು ನಿಲ್ಲಿಸಿತು. ಇನ್ನು ಹಾಡಿನ ವಿಷಯ ಕೇಳಲೇಬೇಡಿ!
ದಿನ ಕಳೆಯಿತು. ಅಂಗಡಿಯವನಿಗೆ ಗಿಳಿಯ ಮಾತಿಲ್ಲದೆ, ಹಾಡಿಲ್ಲದೆ ಕಸಿವಿಸಿಯಾಗತೊಡಗಿತು. ಅದರತ್ತ ನೋಡಿದಾಗೆಲ್ಲ ಗಿಳಿ ಕಣ್ ತಪ್ಪಿಸಿ ಕೊರಳು ಕೊಂಕಿಸುತ್ತಿತ್ತು.
ಮಾರನೇ ದಿನವೂ ಕಳೆಯಿತು. ಗಿಳಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅದು ಹಾಡುತ್ತಿಲ್ಲ, ಮಾತೂ ಆಡುತ್ತಿಲ್ಲ.
ಅಂಗಡಿಯವನಿಗೆ ಮುದ್ದಾದ ಸಂಗಾತಿಯ ಸಾಂಗತ್ಯ ಕಳೆದುಕೊಂಡ ದುಃಖ ಒಂದೆಡೆ, ಗಿಳಿಯ ಮಾತಿನ ಸ್ವಾರಸ್ಯವಿಲ್ಲದೆ ಅಂಗಡಿಗೆ ಗ್ರಾಹಕರ ಸಂಖ್ಯೆ ಇಳಿಯತೊಡಗಿದ ಆತಂಕ ಇನ್ನೊಂದೆಡೆ. ಏನು ಮಾಡಬೇಕೆಂದೇ ತೋಚಲಿಲ್ಲ.
“ಎಷ್ಟು ಕ್ರೂರಿ ನಾನು! ನನ್ನ ಮುದ್ದು ಗಿಳಿಯನ್ನು ದಂಡಿಸಿದ ಈ ಕೈಯನ್ನು ಕದಿದು ಬಿಸಾಡಬೇಕು!” ಎಂದೆಲ್ಲ ಶೋಕಿಸಿದ. ನಾನೊಬ್ಬ ದುಷ್ಟ, ನಾನೊಬ್ಬ ಕ್ರೂರಿ ಎಂದು ತನ್ನನ್ನು ತಾನು ಹಳಿದುಕೊಂಡ. ಅಂಗಡಿ ಮುಂದೆ ಸಾಗುವ ಅಲೆಮಾರಿಗಳನ್ನೆಲ್ಲ ಕರೆ-ಕರೆದು ದಾನ – ಧರ್ಮ ಮಾಡಿದ.
ಹೀಗೆ ಮೂರು ಹಗಲು, ಮೂರು ರಾತ್ರಿ ಕಳೆದ ಮೇಲೆ ಅವನ ಅದೃಷ್ಟ ಖುಲಾಯಿಸಿತು.
ನಾಲ್ಕನೇ ದಿನ ಅಂಗಡಿ ಬೀದಿಗೆ ಏಳು ಜನ ನುಣ್ಣಗೆ ತಲೆ ಬೋಳಿಸಿಕೊಂಡ ದರ್ವೇಶಿಗಳು ಬಂದರು. ಅವರನ್ನು ಕಂಡಿದ್ದೇ ಅಂಗಡಿಯವ ಅವರ ಬಳಿಗೋಡಿದ. ತನ್ನ ಅಂಗಡಿಗೆ ಬಂದು ಠಂಡಾಯಿ ಕುಡಿಯಬೇಕೆಂದು ಬಿನ್ನೈಸಿದ. ಅವರ ದುವಾದಿಂದಾದರೂ ತನ್ನ ಗಿಳಿ ಮಾತಾಡಲಿ ಅನ್ನೋ ಆಸೆ ಅವನದ್ದು.
ದರ್ವೇಶಿಗಳು ಅವನ ಅಂಗಡಿಗೆ ಬಂದರು. ಗಿಳಿ ಅವರನ್ನು ನೋಡಿದ್ದೇ, ರೆಕ್ಕೆ ಅಗಲಿಸಿ ಕುಂತಿತು. “ನೀವೂ ಬಾದಾಮಿ ಎಣ್ಣೆ ಚೆಲ್ಲಿದ್ದಿರಾ? ನಿಮ್ಮ ತಲೆ ಬೋಳಾಗಿರೋದು ಅದಕ್ಕೇನಾ?” ಎಂದು ಕೇಳಿತು!
ಅಂಗಡಿಯವನಿಗೆ ಸಂತೋಷ, ಅಚ್ಚರಿ. ದರ್ವೇಶಿಗಳ ದರ್ಶನ ಮಾತ್ರದಿಂದಲೇ ತನ್ನ ಗಿಳಿ ಮಾತಾಡತೊಡಗಿದೆ!!
ಅಂಗಡಿಯಲ್ಲಿದ್ದ ಗ್ರಾಹಕರಿಗೂ ಗಿಳಿಯ ಮಾತು ಕೇಳಿ ಖುಷಿಯಾಯಿತು.
“ಅದು ಹಾಗಲ್ಲ”. ಒಬ್ಬ ಗ್ರಾಹಕನೆಂದ. “ಅವರು ಯಾರೂ ನಿನ್ನ ಹಾಗೆ ಬಾದಾಮಿ ಎಣ್ಣೆ ಚೆಲ್ಲಿಲ್ಲ. ಅವರ ತಲೆ ಬೋಳಾಗಿರೋದು ಶಿಕ್ಷೆಯಿಂದಲೂ ಅಲ್ಲ. ಮತ್ತೊಬ್ಬರು ಮೇಲ್ನೋಟಕ್ಕೆ ನಮ್ಮ ಹಾಗೇ ಇರುವಂತೆ ಅಥವಾ ನಮ್ಮ ಪರಿಸ್ಥಿತಿಯನ್ನೇ ಅನುಭವಿಸುತ್ತಿರುವಂತೆ ಕಂಡರೂ ಅದು ಹಾಗಿರುವುದಿಲ್ಲ. ಪ್ರತಿಯೊಬ್ಬರ ಪರಿಸ್ಥಿತಿ – ಅನುಭವಗಳೂ ಬೇರೆ ಬೇರೆ” ಅನ್ನುತ್ತಾ ಮೆಲುವಾಗಿ ನಕ್ಕ.
ಪಾಪ ಆ ಪೆದ್ದು ಗಿಳಿ, ತಲೆ ಬೋಳಾಗುವುದು ಎಣ್ಣೆ ಚೆಲ್ಲಿದ ಶಿಕ್ಷೆಗೆ ಮಾತ್ರ ಅಂದುಕೊಂಡುಬಿಟ್ಟಿತ್ತು. ಸಮಯ – ಸನ್ನಿವೇಶ ಅರಿಯದೆ ಯಾರೂ ಯಾವತ್ತೂ ಮತ್ತೊಬ್ಬರೊಡನೆ ತಮ್ಮನ್ನು ಹೋಲಿಸಿಕೊಳ್ಳಬಾರದು ಎಂದು ಅಂಗಡಿಯಲ್ಲಿದ್ದ ಗ್ರಾಹಕ, ಮುದ್ದು ಗಿಳಿಗೆ ಪಾಠ ಹೇಳಿದ.