Having: ಒತ್ತಾಯ – ಬಂಡಾಯ ~ To have or to be #32

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/06/10/fromm-28/

ತಮ್ಮ ಸ್ವಂತದ ಸ್ವಭಾವಕ್ಕನುಗುಣವಾಗಿ ಬೆಳವಣಿಗೆ ಹೊಂದುವ ಕುರಿತಾದ ಒಲವು (tendency) ಎಲ್ಲ ಜೀವಿಗಳಲ್ಲಿ ಸರ್ವೇ ಸಾಮಾನ್ಯ. ಹಾಗಾಗಿ ನಾವು ನಮ್ಮ ರಚನೆ ನಿರ್ಧರಿಸಿರುವ ಹಾದಿಯಲ್ಲಿ ಬೆಳವಣಿಗೆ ಹೊಂದುವ ಪ್ರಕ್ರಿಯೆಗೆ ವಿರುದ್ಧವಾಗಿ ಎದುರಾಗುವ ಯಾವುದೇ ಪ್ರಯತ್ನವನ್ನು ವಿರೋಧಿಸುತ್ತೇವೆ. ಇಂಥ ಪ್ರತಿರೋಧವನ್ನು ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಮುರಿಯಲು ದೈಹಿಕ ಅಥವಾ ಮಾನಸಿಕ ಸಾಮರ್ಥ್ಯದ ಅವಶ್ಯಕತೆಯಿದೆ. ಜಡ ಅಥವಾ ನಿರ್ಜೀವ ಚೇತನಗಳು ತಮ್ಮ ಭೌತಿಕ ಸಂಯೋಜನೆಯನ್ನು ಹತೋಟಿಗೆ ತೆಗೆದುಕೊಳ್ಳುವುದಕ್ಕೆ ಹಲವಾರು ಹಂತಗಳಲ್ಲಿ ತಮ್ಮ ಅಟಾಮಿಕ್ ಮತ್ತು ಮೊಲಿಕ್ಯೂಲರ್ ರಚನೆಯ ಒಳಗೆ ಇರುವ ಸಾಮರ್ಥ್ಯದ ಮೂಲಕ ಪ್ರತಿರೋಧ ಒಡ್ಡುತ್ತವೆ. ಆದರೆ ಅವು ತಮ್ಮನ್ನು ಬಳಸುವುದರ ವಿರುದ್ಧ ಪ್ರತಿಭಟನೆ ಮಾಡುವುದಿಲ್ಲ. ಮನುಷ್ಯ ಜೀವಿಗಳ ವಿರುದ್ಧ ಪಾರಂಪರಿಕ ಶಕ್ತಿಯ ( ನಮ್ಮ ರಚನೆ ಮತ್ತು ನಮ್ಮ ಬೆಳವಣಿಗೆಯ ದಿಕ್ಕಿಗೆ ವಿರುದ್ಧವಾಗಿ ನಮ್ಮನ್ನು ಬಾಗಿಸುವ ಶಕ್ತಿ – heteronomous force) ಬಳಕೆ ಪ್ರತಿರೋಧವನ್ನು ಹುಟ್ಟಿಸುತ್ತದೆ. ಈ ಪ್ರತಿರೋಧ ಎಲ್ಲ ರೂಪಗಳಲ್ಲೂ ಇರಬಹುದು; ಪ್ರಕಟ, ಪರಿಣಾಮಾತ್ಮಕ, ಪ್ರತ್ಯಕ್ಷ , ಕ್ರಿಯಾತ್ಮಕ ಪ್ರತಿರೋಧದಿಂದ ಹಿಡಿದು ಅಪ್ರತ್ಯಕ್ಷ, ನಿಷ್ಪರಿಣಾಮಕಾರಿ, ಮತ್ತು ಹಲವಾರು ಬಾರಿ ಅಪ್ರಜ್ಞಾಪೂರ್ವಕ ಪ್ರತಿರೋೊದದ ವರೆಗೆ.

ಯಾವುದನ್ನ ನಿರ್ಬಂಧಿಸಲಾಗಿದೆಯೆಂದರೆ, ಶಿಶುವಿನ, ಮಕ್ಕಳ, ಹದಿಹರೆಯದವರ, ಮತ್ತು ಕೊನೆಗೆ ವಯಸ್ಕರರ ಮುಕ್ತ ಮತ್ತು ಸಹಜ ಅಭಿವ್ಯಕ್ತಿಯನ್ನ, ಇಚ್ಛಾಶಕ್ತಿಯನ್ನ, ಜ್ಞಾನ ಮತ್ತು ಸತ್ಯದ ಕುರಿತಾಗಿನ ಅವರ ಹಸಿವನ್ನ ಹಾಗು, ವಾತ್ಸಲ್ಯಕ್ಕಾಗಿಯ ಅವರ ತೀವ್ರ ಬಯಕೆಯನ್ನ. ಬೆಳವಣಿಗೆ ಹೊಂದುತ್ತಿರುವ ವ್ಯಕ್ತಿ ತನ್ನ ಬಹುತೇಕ ಸ್ವಾಯತ್ತ, ನೈಜ ಬಯಕೆಗಳನ್ನ, ಆಸಕ್ತಿಗಳನ್ನ ಮತ್ತು ತನ್ನ ಸ್ವಂತ ಇಚ್ಛಾಶಕ್ತಿಯನ್ನ ಬಿಟ್ಟುಕೊಟ್ಟು, ಸ್ವಾಯತ್ತವಲ್ಲದ ಆದರೆ ಸಾಮಾಜಿಕ ವ್ಯವಸ್ಥೆಯ ವಿಚಾರ ಮತ್ತು ಭಾವನೆಗಳಿಂದ ಅತಿಕ್ರಮಿಸಲಾಗಿರುವ (superimposed) ಇಚ್ಛೆ, ಬಯಕೆ ಮತ್ತು ಭಾವನೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಸಮಾಜ, ತನ್ನ ಮಾನಸಿಕ ಪ್ರತಿನಿಧಿಯಂತಿರುವ ಕುಟುಂಬದ ಜೊತೆ ಸೇರಿ ಕಠಿಣ ಸಮಸ್ಯೆಯೊಂದನ್ನ ಪರಿಹರಿಸಿಕೊಳ್ಳಬೇಕಿದೆ : ಮನುಷ್ಯರ ಇಚ್ಛಾಶಕ್ತಿಯನ್ನು ಅವರಿಗೆ ಅರಿವಿಲ್ಲದಂತೆ ಹೇಗೆ ಮುರಿಯುವುದು? ಆದರೂ ಉಪದೇಶ, ಬಳುವಳಿ, ಶಿಕ್ಷೆ ಮತ್ತು ತಕ್ಕುದಾದ ಸಿದ್ಧಾಂತದಂಥ ಸಂಕೀರ್ಣ ಪ್ರಕ್ರಿಯೆಗಳ ಮೂಲಕ ಅದು ಈ ಸವಾಲನ್ನು ಬಹುತೇಕ ಹೇಗೆ ಪರಿಹರಿಸಿಕೊಳ್ಳುತ್ತದೆಯೆಂದರೆ, ಬಹಳಷ್ಟು ಜನರು ತಾವು ಇನ್ನೂ ತಮ್ಮ ಸ್ವಂತ ಇಚ್ಛಾಶಕ್ತಿಯನ್ನೇ ಹೊಂದಿದವರಾಗಿದ್ದೇವೆ ಎಂದು ತಿಳಿದುಕೊಂಡಿದ್ದಾರೆ ಮತ್ತು ಅವರು ತಮ್ಮ ಇಚ್ಛಾಶಕ್ತಿಯನ್ನ ಷರತ್ತುಬದ್ಧಗೊಳಿಸಲಾಗಿದೆ (conditioned) ಹಾಗು ಕಪಟತನದಿಂದ ಬದಲಾಯಿಸಲಾಗಿದೆ (manipulated) ಎನ್ನುವುದರ ಬಗ್ಗೆ ಅಜ್ಞಾತರಾಗಿದ್ದಾರೆ.

ಇಚ್ಛಾಶಕ್ತಿಯ ಹತ್ತಿಕ್ಕುವಿಕೆಯಲ್ಲಿನ ಅತ್ಯಂತ ದೊಡ್ಡ ಸಮಸ್ಯೆ ಲೈಂಗಿಕತೆಯನ್ನು ಕುರಿತಾದದ್ದು, ಏಕೆಂದರೆ ಇಲ್ಲಿ ನಾವು, ಇತರ ಬಯಕೆಗಳಿಗಿಂತ ಮ್ಯಾನಿಪ್ಯುಲೇಟ್ ಮಾಡಲು ಕಡಿಮೆ ಸುಲಭವಾಗಿರುವ ಮನುಷ್ಯರ ಸಹಜ ಆದರೆ ಬಹಳ ಶಕ್ತಿಶಾಲಿ ಒಲವಿನ (tendency) ಜೊತೆ ವ್ಯವಹರಿಸುತ್ತಿದ್ದೇವೆ. ಈ ಕಾರಣವಾಗಿಯೇ ಮನುಷ್ಯರು ತಮ್ಮ ಲೈಂಗಿಕ ಬಯಕೆಗಳಿಗಾಗಿ ತಮ್ಮ ಇತರ ಎಲ್ಲ ಬಯಕೆಗಳಿಗಿಂತ ಹೆಚ್ಚು ಬಿರುಸಾಗಿ ಫೈಟ್ ಮಾಡುತ್ತಾರೆ. ನೈತಿಕತೆಯ ಪರಿಧಿಯಲ್ಲಿ (ಸೆಕ್ಸ್ ನ ಕೆಡಕುಗಳನ್ನು ಸೂಚಿಸುತ್ತ) ಮತ್ತು ಆರೋಗ್ಯದ ಪರಿಧಿಯಲ್ಲಿ (ಉದಾಹರಣೆಗೆ ಹಸ್ತಮೈಥುನ ಆರೋಗ್ಯಕ್ಕೆ ಹಾನಿಕರ ಎಂದು ಸೂಚಿಸುತ್ತ) ಲೈಂಗಿಕತೆಯನ್ನ ದೂಷಿಸುವ ಹಲವು ಬಗೆಗಳನ್ನ ಇಲ್ಲಿ ಮತ್ತೆ ಹೇಳುವ ಅವಶ್ಯಕತೆಯಿಲ್ಲ. ಚರ್ಚ್ ಗೆ ಬರ್ಥ್ ಕಂಟ್ರೋಲ್ ಮತ್ತು ವಿವಾಹೇತರ ಸಂಬಂಧಗಳನ್ನು ನಿಷೇಧಿಸುವ ಅವಶ್ಯಕತೆ ಇತ್ತು, ಮತ್ತು ಅದು ಇಂದಿಗೂ ತನ್ನ ಅದೇ ಹಳೆ ಸಿದ್ಧಾಂತಕ್ಕೆ ಅಂಟಿಕೊಂಡಿದೆ, ಇವತ್ತಿನ ವಿವೇಕ ಈ ಕುರಿತಾಗಿ ಹೆಚ್ಚು ಸಹನೆಯನ್ನು ಅಪೇಕ್ಷಿಸುತ್ತಿರುವಾಗಲೂ.

ಲೈಂಗಿಕತೆಯನ್ನ ಹತ್ತಿಕ್ಕುವ ಪ್ರಯತ್ನಗಳು ನಮ್ಮ ತಿಳುವಳಿಕೆಗೆ ನಿಲುಕಲಾರದವಾಗಿರುತ್ತಿದ್ದವು, ನಾವು ಈ ಪ್ರಯತ್ನಗಳು ಕೇವಲ ಸೆಕ್ಸ್ ನ ಕುರಿತಾದದ್ದು ಎಂದುಕೊಂಡಿದ್ದರೆ. ಇದು ಕೇವಲ ಸೆಕ್ಸ್ ಕುರಿತಾದ ವಿಷಯ ಅಲ್ಲ, ಸೆಕ್ಸ್ ನ ದೂಷಣೆ, ಮನುಷ್ಯರ ಇಚ್ಛಾಶಕ್ತಿಯನ್ನು ಮುರಿಯುವ ಕುರಿತಾದದ್ದು. ಬಹಳಷ್ಟು ಸಂಖ್ಯೆಯ ಪ್ರಾಚೀನ ಸಮಾಜಗಳಲ್ಲಿ ಸೆಕ್ಸ್ ಯಾವುದೇ ರೀತಿಯ ನಿರ್ಬಂಧಿತ ಸಂಗತಿಯಲ್ಲ. ಅವರು ಶೋಷಣೆ (exploitation) ಮತ್ತು ಅಧಿಪತ್ಯದ (domination) ಹೊರತಾಗಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಮನುಷ್ಯರ ಇಚ್ಛಾಶಕ್ತಿಯನ್ನ ಮುರಿಯುವ ಅವಶ್ಯಕತೆ ಇರಲಿಲ್ಲ. ಅವರಿಗೆ ಸೆಕ್ಸ್ ನ ಕಳಂಕಿತವಾಗಿಸದೇ ಇರುವ ಮತ್ತು ಲೈಂಗಿಕ ಸಂಬಂಧದ ಸುಖಗಳನ್ನು ಯಾವ ತಪ್ಪಿತಸ್ಥ ಭಾವವಿಲ್ಲದೇ ಅನುಭವಿಸುವ ಅವಕಾಶ, ಸಾಧ್ಯತೆ ಇತ್ತು. ಇಂಥ ಸಮಾಜಗಳಲ್ಲಿನ ಅಸಾಮಾನ್ಯ ಸಂಗತಿಯೆಂದರೆ ಈ ಲೈಂಗಿಕ ಸ್ವಾತಂತ್ರ್ಯ, ಲೈಂಗಿಕ ದುರಾಸೆಗೆ ಕಾರಣವಾಗಿಲ್ಲದೇ ಇರುವುದು ; ಲೈಂಗಿಕ ಸಂಬಂಧದ ಕೆಲ ಕಾಲದ ಅವಧಿಯ ನಂತರ ಲೈಂಗಿಕ ಜೋಡಿಗಳಿಗೆ ತಮ್ಮ ತಮ್ಮ ಪಾರ್ಟನರ್ ಗಳನ್ನ ಬದಲಾಯಿಸಿಕೊಳ್ಳುವ (swap) ಬಯಕೆ ಕಂಡು ಬರದೇ ಇರುವುದು ಆದರೆ, ಅವರಿಗೆ ಅವರ ನಡುವೆ ಪ್ರೀತಿ ಇಲ್ಲದಾದಾಗ ಇಬ್ಬರಿಗೂ ಬೇರೆ ಆಗುವ ಅವಕಾಶ ಇರುವುದು. ಆಸ್ತಿಯ ಕುರಿತಾದ ಯಾವ ಆಸ್ಥೆ ಇಲ್ಲದ ಇಂಥ ಗುಂಪುಗಳಲ್ಲಿ ಲೈಂಗಿಕ ಸುಖವನ್ನು ಅನುಭವಿಸುವುದು ಅವರ ವ್ಯಕ್ತಿತ್ವವನ್ನು ಅಭಿವ್ಯಕ್ತಿಸಿಕೊಳ್ಳುವ ಒಂದು ರೀತಿಯಾಗಿತ್ತೇ ಹೊರತು, ಸೆಕ್ಷುವಲ್ ಪೋಸೆಸ್ಸಿವ್ ನೆಸ್ ನ ಕಾರಣ ಆಗಿರಲಿಲ್ಲ. ಹೀಗೆ ಹೇಳುವ ಮೂಲಕ, ನಾವು ಮತ್ತೆ ಆ ಪ್ರಾಚಿನ ಕಾಲದ ರೀತಿ ನೀತಿಗೆ ಮರಳಬೇಕು ಎಂದು ನಾನು ಹೇಳುತ್ತಿಲ್ಲ, ನಮಗೆ ಹಾಗೆ ಪ್ರಾಚೀನ ಕಾಲಕ್ಕೆ ಹೋಗುವ ಬಯಕೆ ಇಲ್ಲ ಎಂದಲ್ಲ, ಬಯಕೆ ಇದ್ದರೂ ಹಾಗೆ ಆ ಕಾಲಕ್ಕೆೆ ನಾವು ಮರಳಬಾರದು ಎಂದು ಏಕೆಂದರೆ, ವೈಯಕ್ತೀಕತೆಯ ಪ್ರಕ್ರಿಯೆ (individualisation) ಮತ್ತು ವೈಯಕ್ತಿಕ ಪ್ರತ್ಯೇಕೀಕರಣದ ಪ್ರಕ್ರಿಯೆ (individual differentiation) ಹಾಗು, ನಾಗರೀಕತೆ ಇಲ್ಲಿಯವರೆಗೆ ಕ್ರಮಿಸಿರುವ ದಾರಿ ನಮಗೆ ಆ ಪ್ರಾಚೀನ ಕಾಲಕ್ಕಿಂತ ಭಿನ್ನವಾದ ವೈಯಕ್ತಿಕ ಪ್ರೀತಿಯ ಹೊಸದೊಂದು ಕ್ವಾಲಿಟಿಯನ್ನ ಪರಿಚಯಿಸಿದೆ. ನಾವು ಹಿಂದೆ ಹೋಗುವ ಹಾಗಿಲ್ಲ; ಅದೇನೇ ಇದ್ದರೂ ನಾವು ಮುಂದೆ ಸಾಗಲೇ ಬೇಕು. ಯಾವುದು ಮುಖ್ಯ ಎಂದು ಆಸ್ತಿರಹಿತತೆಯ (propertylessness) ಹೊಸ ರೂಪಗಳು ಎಲ್ಲ having ಸಮಾಜಗಳ ಗುಣಲಕ್ಷಣವಾಗಿರುವ ಲೈಂಗಿಕ ದುರಾಸೆಯಿಂದ ಮುಕ್ತವಾಗಿರುತ್ತವೆ ಎನ್ನುವುದು.

ಲೈಂಗಿಕ ಬಯಕೆ ಎನ್ನುವುದು ಬಿಡುಗಡೆಯ ಒಂದು ಬಹುಮುಖ್ಯವಾದ ಅಭಿವ್ಯಕ್ತಿ ಮತ್ತು ಇದು ಬಹಳ ಮೊದಲೇ ಬದುಕಿನಲ್ಲಿ ಅಭಿವ್ಯಕ್ತಿ ಪಡೆದುಕೊಂಡಿದೆ (masturbation). ಇದನ್ನ ಬಿಟ್ಟುಬಿಡುವಂತೆ ಒತ್ತಾಯಿಸುವುದು ಮಗುವಿನ ಇಚ್ಛಾಶಕ್ತಿಯ ಮೇಲೆ ಪ್ರಹಾರ ಮಾಡಿದಂತೆ ಹಾಗು ಇದು ಮಗುವಿನಲ್ಲಿ ತಪ್ಪಿತಸ್ಥ ಭಾವವನ್ನ ಮೂಡಿಸುತ್ತದೆ ಮತ್ತು ಹಾಗಾಗಿ ಮಗುವನ್ನು ವಿಧೇಯತೆಯತ್ತ ನೂಕುತ್ತದೆ. ಬಹಳ ಮಟ್ಟಿಗೆ ಲೈಂಗಿಕ ನಿಷೇಧಗಳನ್ನು (sexual tabu) ಮೀರುವ ಕುರಿತಾಗಿ ಇರುವ ಒತ್ತಾಯ ಏನೆಂದರೆ, ಮನುಷ್ಯನ ಸ್ವಾತಂತ್ರ್ಯವನ್ನು ಮತ್ತೆ ಪುನರ್ಸ್ಥಾಪಿಸುವತ್ತ ಗುರಿ ಇಟ್ಚುಕೊಂಡಿರುವ ಬಂಡಾಯದ ಪ್ರಯತ್ನ. ಆದರೆ ಲೈಂಗಿಕ ನಿಷೇಧಗಳನ್ನು ಮುರಿಯುವುದು ಅಂಥ ಮಹಾ ಸ್ವಾತಂತ್ರ್ಯವನ್ನೇನೂ ಸಾಧ್ಯ ಮಾಡುವುದಿಲ್ಲ, ಲೈಂಗಿಕ ತೃಪ್ತಿಯಲ್ಲಿ ಮತ್ತು, ತದನಂತರ ವ್ಯಕ್ತಿಯಲ್ಲಿ ಮೂಡುವ ತಪ್ಪಿತಸ್ಥ ಭಾವದಲ್ಲಿ ಈ ಬಂಡಾಯ ಕೊಚ್ಚಿಕೊಂಡು ಹೋಗಿಬಿಡುತ್ತದೆ. ಕೇವಲ ಅಂತರಂಗದ ಸ್ವಾತಂತ್ರ್ಯದ ಸಾಧನೆ, ಬಿಡುಗಡೆಯ ಆಶಯಕ್ಕೆ ಪೂರಕವಾಗಿದೆ ಮತ್ತು ಇದು ಫಲರಹಿತ ಬಂಡಾಯದ ಅವಶ್ಯಕತೆಗೆ ಕೊನೆ ಹಾಡುತ್ತದೆ. ಇದು ಒಬ್ಬರ ಸ್ವಾತಂತ್ರ್ಯವನ್ನು ಪುನರ್ಸ್ಥಾಪಿಸುವ ಉದ್ದೇಶ ಇಟ್ಟುಕೊಂಡಿರುವ ನಿಷೇಧಿತ ಸಂಗತಿಗಳನ್ನು ಮುರಿಯವ ಎಲ್ಲಬಗೆಯ ಪ್ರಯತ್ನಗಳಿಗೂ ಅನ್ವಯವಾಗುತ್ತದೆ. ಖಂಡಿತವಾಗಿ ನಿಷೇಧಗಳು ಲೈಂಗಿಕ ಉನ್ಮಾದವನ್ನ ಹಾಗು ಲೈಂಗಿಕ ವಿಕೃತಿಯನ್ನ ಸೃಷ್ಟಿ ಮಾಡುತ್ತವೆ , ಆದರೆ ಈ ಲೈಂಗಿಕ ಉನ್ಮಾದಗಳು ಹಾಗು ವಿಕೃತಿಗಳು ಬಿಡುಗಡೆಯ ಆಶಯಗಳನ್ನು ಸಾಧ್ಯ ಮಾಡುವುದಿಲ್ಲ.

ಮಗುವಿನ ಬಂಡಾಯ ತನ್ನನ್ನು ತಾನು ಇನ್ನೂ ಹಲವಾರು ವಿಧಗಳಲ್ಲಿ ಅಭಿವ್ಯಕ್ತಿಗೊಳಿಸಿಕೊಳ್ಳುತ್ತದೆ : ಮಗು ಆರೋಗ್ಯದ ನಿಯಮಗಳನ್ನು ಪಾಲಿಸದಿರುವುದು ; ಕಡಿಮೆ ತಿನ್ನುವ ಮೂಲಕ, ಅಥವಾ ಹೆಚ್ಚು ತಿನ್ನುವ ಮೂಲಕ ; ಆಕ್ರಮಣಶೀಲತೆ ಮತ್ತು ಸೇಡಿಸಂ ಬೆಳೆಸಿಕೊಳ್ಳುವುದರ ಮೂಲಕ, ಮತ್ತು ಇನ್ನೂ ಹಲವಾರು ಬಗೆಯ ಸೆಲ್ಫ್ ಡಿಸ್ಟ್ರಕ್ಷನ್ ಕ್ರಿಯೆಗಳ ಮೂಲಕ. ಬಹುತೇಕ ಬಂಡಾಯ ತನ್ನನ್ನು ತಾನು ಅಭಿವ್ಯಕ್ತಗೊಳಿಸಿಕೊಳ್ಳುವುದು ಸಾಮಾನ್ಯವಾಗಿ “slow down strike” ನಂತಹ ಜಗತ್ತಿನ ವಿದ್ಯಮಾನಗಳಲ್ಲಿ, ಆಸಕ್ತಿಯನ್ನು ಹಿಂತೆಗೆದುಕೊಳ್ಳುವ, ಸೋಮಾರಿತನ, ಅನಾಸಕ್ತಿ ಬೆಳೆಸಿಕೊಳ್ಳುವ ಕ್ರಿಯೆಗಳ ಮೂಲಕ, ಕೊನೆಗೆ slow self destruction ನ ಅತ್ಯಂತ ಅನಾರೋಗ್ಯಕರ ಮಟ್ಟ ಮುಟ್ಟುವ ತನಕ. ಮಕ್ಕಳು ಮತ್ತು ತಂದೆ ತಾಯಿಯರ ನಡುವೆ ನಡೆಯುವ ಈ ಅಧಿಕಾರ ಸಂಘರ್ಷದ ಪರಿಣಾಮಗಳ ವಿಷಯ David E. Schecter’s ಬರೆದಿರುವ “Infant Development” ಎನ್ನುವ ಪೇಪರ್ ನ ವಸ್ತುವಾಗಿದೆ. ಇಲ್ಲಿ ಪ್ರಸ್ತುತಪಡಿಸಲಾಗಿರುವ ಮಾಹಿತಿ (data) ಸ್ಪಷ್ಟಪಡಿಸುವುದೇನೆಂದರೆ, ಮಗುವಿನ ಮತ್ತು ನಂತರದ ವ್ಯಕ್ತಿಯ ಬೆಳವಣಿಗೆಯ ಪ್ರಕ್ರಿಯೆಯ ಮೇಲಿನ ಖಂಡಿತವಾದಿ ಸಾಮಾಜಿಕ ನಿಯಮಗಳ ಒತ್ತಡದ (heteronomous interference) ಪ್ರಭಾವ, ಆಳ ಮಾನಸಿಕ ರೋಗ, ವಿಶೇಷವಾಗಿ ವಿನಾಶದ ಕುರಿತಾದ ಮಾನಸಿಕ ರೋಗದ ಕಾರಣವಾಗಿದೆ.

ಸ್ವಾತಂತ್ರ್ಯ ಎಂದರೆ ಯಾವ ಹಸ್ತಕ್ಷೇಪ ಇಲ್ಲದೇ ಸಂಗತಿಗಳನ್ನು ಸುಮ್ಮನೇ ಅದರ ಪಾಡಿಗೆ ಆಗಗೊಡುವುದಲ್ಲ (laissez-faire), ನಿರಂಕುಶತೆ (arbitrariness) ಅಲ್ಲ. ಬಾಕಿ ಎಲ್ಲ ಪ್ರಜಾತಿಗಳಂತೆ ಮನುಷ್ಯ ಜೀವಿಗಳೂ ಒಂದು ನಿರ್ದಿಷ್ಟ ರಚನೆಗೆ ಬದ್ಧರಾಗಿದ್ದಾರೆ ಮತ್ತು ಅವರ ಬೆಳವಣಿಗೆ, ಈ ರಚನೆಯನ್ನು ಅನುಸರಿಸುತ್ತಲೇ ಆಗಬೇಕಿದೆ. ಸ್ವಾತಂತ್ರ್ಯ ಎಂದರೆ ಎಲ್ಲ ಮಾರ್ಗದರ್ಶಿ ಸೂತ್ರಗಳಿಂದ ಬಿಡುಗಡೆ ಹೊಂದುವುದಲ್ಲ. ಸ್ವಾತಂತ್ರ್ಯ ಎಂದರೆ ಮನುಷ್ಯನ ಅಸ್ತಿತ್ವದ ಸೂತ್ರಗಳಿಗೆ ಬದ್ಧರಾಗುತ್ತ ಅವುಗಳ ಅನುಸಾರವಾಗಿ ಬೆಳವಣಿಗೆ ಹೊಂದುವ ಅವಕಾಶ (ಸ್ವಾಯತ್ತ ನಿಯಂತ್ರಣ). ಸ್ವಾತಂತ್ರ್ಯ ಎಂದರೆ, ಸರಿಯಾದ ಮಾನವ ಪ್ರಗತಿಯನ್ನು (optimal human development) ನಿರ್ದೇಶಿಸುವ ನಿಯಮಗಳಿಗೆ ಬದ್ಧರಾಗುವುದು. ಈ ಗುರಿಗೆ ಸಹಾಯಕವಾಗುವ ಯಾವುದೇ ಅಥಾರಿಟಿಯನ್ನ, ಈ ಸಹಾಯಕತೆ ಮಗುವಿನ ಕ್ರಿಯೆಗಳನ್ನ, ಕ್ರಿಟಿಕಲ್ ಥಿಂಕಿಂಗ್ ನ, ಬದುಕಿನಲ್ಲಿಯ ವಿಶ್ವಾಸನ್ನ ಉದ್ಧೀಪನಗೊಳಿಸುವಲ್ಲಿ ಯಶಸ್ವಿಯಾದಾಗ, ಅದನ್ನ “ತಾರ್ಕಿಕ ಅಧಿಕಾರ ಕೇಂದ್ರ” (rational authority) ಎನ್ನಬಹುದು,
ಯಾವಾಗ ಈ ಅಥಾರಿಟಿ ಮಗುವಿನ ಮೇಲೆ, ತನಗೆ ಅನುಕೂಲವಾಗುವಂಥ ಆದರೆ ಮನುಷ್ಯನ ಸಹಜ ರಚನೆಗೆ ವಿರುದ್ಧವಾದ, ಮಗುವಿನ ನಿರ್ದಿಷ್ಟ ರಚನೆಗೆ ಯಾವುದೇ ರೀತಿಯಲ್ಲಿ ಸಹಾಯಕವಾಗದಂಥ ನಿಯಮಗಳನ್ನು (heteronomous norms) ಹೇರತೊಡಗಿದಾಗ ಆ ಅಥಾರಟಿ, “ಅತಾರ್ಕಿಕ ಅಧಿಕಾರ ಕೇಂದ್ರ” (irrational authority) ಆಗುತ್ತದೆ.

ಅಸ್ತಿತ್ವದ having ವಿಧಾನ, ಆಸ್ತಿ ಮತ್ತು ಲಾಭ ಕೇಂದ್ರಿತ ಧೋರಣೆ, ಅವಶ್ಯಕವಾಗಿ ಅಧಿಕಾರದ ಬಯಕೆಯನ್ನ ಹುಟ್ಟುಹಾಕುತ್ತವೆ. ಬಾಕಿ ಎಲ್ಲ ಸಹ ಮನುಷ್ಯರನ್ನು ಹತೋಟಿಗೆ ತೆಗೆದುಕೊಳ್ಳಲು, ಅವರ ಪ್ರತಿರೋಧವನ್ನು ಹತ್ತಿಕ್ಕಲು ನಾವು ಅಧಿಕಾರವನ್ನು ಬಳಸಬೇಕಾಗುತ್ತದೆ. ಖಾಸಗೀ ಆಸ್ತಿಯ ಮೇಲಿನ ಹಕ್ಕನ್ನ ಉಳಿಸಿಕೊಳ್ಳಲು, ಆಸ್ತಿಯನ್ನು ನಮ್ಮಿಂದ ಕಸಿದುಕೊಳ್ಳುವವರಿಂದ (ಅವರಿಗೂ ನಮ್ಮ ಹಾಗೆ ಎಷ್ಟು ಆಸ್ತಿ ಇದ್ದರೂ ಸಾಕಾಗುವುದಿಲ್ಲ) ರಕ್ಷಿಸಿಕೊಳ್ಳಲು ನಾವು ಅಧಿಕಾರ ಬಳಸಬೇಕಾಗುತ್ತದೆ. ಖಾಸಗೀ ಆಸ್ತಿಯನ್ನು ಹೊಂದುವ ಬಯಕೆ, ಹಿಂಸೆಯನ್ನು ಬಳಸುವ ಬಯಕೆಯನ್ನು ನಮ್ಮಲ್ಲಿ ಹುಟ್ಟುಹಾಕುತ್ತದೆ ಇತರರನ್ನು ದೋಚಲು, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ.

Having ವಿಧಾನದಲ್ಲಿ ಒಬ್ಬರ ಸಂತೋಷ ಅವರು ಇತರರ ಮೇಲೆ ಹೊಂದಿರುವ ಶ್ರೇಷ್ಠತೆಯ (supremacy) ಮೇಲೆ, ಮತ್ತು ಅವರು ಹೊಂದಿರುವ ಅಧಿಕಾರದ ಮೇಲೆ ಹಾಗು ಕೊನೆಗೆ ಆಕ್ರಮಿಸಿಕೊಳ್ಳಲು, ದೋಚಲು, ಕೊಲ್ಲಲು ಅವರು ಹೊಂದಿರುವ ಶಕ್ತಿ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ being ವಿಧಾನದಲ್ಲಿ ಮನುಷ್ಯರ ಸಂತೋಷ, ಅವರ ಪ್ರೀತಿಸುವಿಕೆ, ಹಂಚಿಕೊಳ್ಳುವಿಕೆ ಮತ್ತು ಕೊಡುವ ಆಶಯದ ಮೇಲೆ ನಿರ್ಭರವಾಗಿರುತ್ತದೆ.

(ಮುಂದುವರೆಯುತ್ತದೆ…)

1 Comment

Leave a Reply