ಟೈಟಾನಿಕ್ ಅವಶೇಷ ನೋಡಲು ಸಬ್ ಮೆರೀನ್ ಬಾಡಿಗೆ ಪಡೆದು ಸಮುದ್ರದಾಳ ಹೊಕ್ಕ ಶ್ರೀಮಂತರು ಜಲಸಮಾಧಿಯಾದರು. ಈ ಸುದ್ದಿ ಓದಿದಾಗ ಒಂದು ರೂಮಿ ಕತೆ ನೆನಪಾಯ್ತು... । ಚೇತನಾ ತೀರ್ಥಹಳ್ಳಿ
ಸಾವಿನ ದೂತ ಅಜ್ರಾಯಿಲ್’ನಿಂದ ತಪ್ಪಿಸಿಕೊಳ್ಳಲು ಬಗ್ದಾದಿನ ವ್ಯಾಪಾರಿಯೊಬ್ಬ ದೊರೆ ಸಾಲೊಮನ್ನನ ಮೊರೆ ಹೋಗ್ತಾನೆ. ಪೂರ್ವದ ಮಾರುತಗಳಿಗೆ ಹೇಳಿ ನನ್ನನ್ನು ಹಿಂದೂಸ್ತಾನಕ್ಕೆ ಡ್ರಾಪ್ ಕೊಡಿಸಿ. ನನಗೆ ಇಷ್ಟು ಬೇಗ ಸಾಯಲು ಇಷ್ಟವಿಲ್ಲ, ಹೇಗೋ ಬೆಲ್ಲ ಬೇಡಿ ಬದುಕಿಕೊಳ್ತೀನಿ ಅಂತಾನೆ.
ಸಾಲೊಮನ್ ಪೂರ್ವದ ಮಾರುತಗಳಿಗೆ ಹೇಳಿ ವ್ಯಾಪಾರಿಗೆ ಡ್ರಾಪ್ ಕೊಡಿಸ್ತಾನೆ. ಅವ ಸಂಜೆಯೊಳಗೆ ಹಿಂದೂಸ್ತಾನ ತಲುಪಿ ನಿಸೂರಾಗ್ತಾನೆ.
ಮಾರನೆ ದಿನ ಬಗ್ದಾದಿನ ಬೀದಿ ಅಲೆಯುತ್ತಿದ್ದ ಅಜ್ರಾಯೀಲನನ್ನು ಕರೆಸಿಕೊಂಡ ಸಾಲೊಮನ್, “ನೀನ್ಯಾಕೆ ನನ್ನ ಪ್ರಜೆಗಳನ್ನ ಹೆದರಿಸೋದು? ಪಾಪ ಅವರು ಭಯ ಬಿದ್ದು ದೇಶಾಂತರ ಹೋಗ್ತಿದ್ದಾರೆ. ನೆನ್ನೆ ತಾನೆ ಒಬ್ಬ ವ್ಯಾಪಾರಿ ನಿನಗೆ ಹೆದರಿ ಹಿಂದೂಸ್ತಾನಕ್ಕೆ ಹೋದ” ಅನ್ನುತ್ತಾನೆ.
ಅಜ್ರಾಯೀಲನಿಗೆ ಅಚ್ಚರಿ! “ನನ್ನ ಕೆಲಸ ಸುಗಮ ಮಾಡಿದ್ದು ನೀನೇ ಏನು? ಧನ್ಯವಾದ ನಿನಗೆ” ಅನ್ನುತ್ತ ಖುಷಿಯಾಗ್ತಾನೆ.
ವಿಷಯ ಏನೆಂದು ಕೇಳಲಾಗಿ,
“ನನಗೆ ಆ ವ್ಯಾಪಾರಿಯ ಪ್ರಾಣ ಹಿಂದೂಸ್ತಾನದಿಂದ ಪಿಕಪ್ ಮಾಡುವ ಆದೇಶವಿತ್ತು. ಬೆಳಗ್ಗೆ ನೋಡಿದರೆ ಅವ ಇಲ್ಲೇ ಬಗ್ದಾದಿನಲ್ಲಿ ಕೀಮಿಯಾ ಮಾರುತ್ತಿದ್ದ. ಅಂವ ನೂರು – ಸಾವಿರ ರೆಕ್ಕೆ ಹಚ್ಚಿಕೊಂಡಿದ್ದರೂ ಸಂಜೆಗೆ ಹಿಂದೂಸ್ತಾನ ತಲುಪಲು ಸಾಧ್ಯವಿರಲಿಲ್ಲ. ನನ್ನ ಕೆಲಸ ಪೂರೈಸೋದು ಹೇಗಪ್ಪಾ ಅಂತ ಯೋಚನೆ ಆಗಿಬಿಟ್ಟಿತ್ತು. ಆಗಿದ್ದಾಗಲಿ ಅಂತ ಸಂಜೆ ಹಿಂದೂಸ್ತಾನಕ್ಕೆ ಹೋದರೆ, ಅಲ್ಲಿ ಆ ವ್ಯಾಪಾರಿ ರಸ್ತೆ ಬದಿಯಲ್ಲಿ ಕಾಲು ಚಾಚಿ ಕುಳಿತಿದ್ದ. ಅಲ್ಲಿಂದಲೇ ಅವನ ಪ್ರಾಣ ಹೊತ್ತೊಯ್ದೆ” ಅಂದ.
ಅಜ್ರಾಯೀಲನ ಮಾತು ಕೇಳಿ ಸಾಲೊಮನ್, “ಅಲ್ಲಾಹುವಿನ ಮರ್ಜಿಯ ಮುಂದೆ ಯಾರದೇನು ಮಹಾ” ಅನ್ನುತ್ತಾ ಅಂಗೈ ಅಗಲಿಸಿ ಆಕಾಶದತ್ತ ಮುಖ ಮಾಡಿದ.
—
ಅದು ಹಾಗೇ. ಪ್ರಾಣ ಹೋಗಲೇಬೇಕು ಅಂತಿದ್ದರೆ, ಇಂಥಲ್ಲೇ – ಹೀಹೀಗೇ ಹೋಗಬೇಕು ಅಂತಿದ್ದರೆ, ಅದು ಹೋಗೇ ತೀರುವುದು. ಹೇಗೆ ಹೋಗಬೇಕೋ ಹಾಗೇ ಹೋಗುವುದು.