ಇಷ್ಟಕ್ಕೂ ಈ ‘ಕೊಡುವುದು’ ಅಂದರೆ… : Art of love #12

“ನಾನ್ ಪ್ರೊಡಕ್ಟಿವ್ ಮನೋಭಾವದ ಜನರಿಗೆ ಕೊಡುವುದೆಂದರೆ ಅಷ್ಟರ ಮಟ್ಟಿಗೆ ಬಡತನವನ್ನು ಅನುಭವಿಸುವುದು. ಈ ಸ್ವಭಾವದ ಬಹುತೇಕರು ಕೊಡುವುದನ್ನ ನಿರಾಕರಿಸುತ್ತಾರೆ. ಕೆಲವರು ಕೊಟ್ಟರೂ ಅದಕ್ಕೆ ತ್ಯಾಗದ ಹೆಸರಿಟ್ಟು ಮೌಲ್ಯದ ಪಟ್ಟ ಕಟ್ಟುತ್ತಾರೆ” ಅನ್ನುವ ಎರಿಕ್ ಫ್ರಾಮ್ (ಹಿಂದಿನ ಸಂಚಿಕೆ ಗಮನಿಸಿ : https://aralimara.com/2022/04/03/love-24/) ಪ್ರೊಡಕ್ಟಿವ್ ಮನೋಭಾವದ ಜನರ ಪಾಲಿಗೆ ‘ಕೊಡುವುದು’ ಅಂದರೇನೆಂದು ಹೀಗೆ ವಿವರಿಸುತ್ತಾರೆ… | ಮೂಲ: ಆರ್ಟ್ ಆಫ್ ಲವ್, ಎರಿಕ್ ಫ್ರೋಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರೊಡಕ್ಟಿವ್ ಮನೋಭಾವದ ಜನರದ್ದು ಕೊಡುವುದರ ಕುರಿತು ಪೂರ್ತಿ ಬೇರೆಯದೇ ಆದ ತಿಳುವಳಿಕೆ. ಅವರಿಗೆ ಕೊಡುವುದು ಎಂದರೆ ತಮ್ಮ ಸಾಮರ್ಥ್ಯದ ಅತ್ಯಂತ ಪರಿಪೂರ್ಣ ಅಭಿವ್ಯಕ್ತಿ. ಕೊಡುವ ಕ್ರಿಯೆಯಲ್ಲಿಯೇ ನಾನು ನನ್ನ ಸಾಮರ್ಥ್ಯದ, ನನ್ನ ಸಂಪತ್ತಿನ, ನನ್ನ ಅಧಿಕಾರದ ಸಾರ್ಥಕತೆಯನ್ನ ಅನುಭವಿಸುತ್ತೇನೆ. ಇಂಥ ಅತ್ಯುಚ್ಚ ಹುರುಪಿನ ಮತ್ತು ಪ್ರಭಾವಶಾಲಿ ಅನುಭವ ನನ್ನನ್ನು ಖುಶಿಯಿಂದ ತುಂಬಿ ತುಳುಕುವಂತೆ ಮಾಡುತ್ತದೆ. ನಾನು ನನ್ನನ್ನು ಉಕ್ಕಿ ಹರಿಯುವ, ಖರ್ಚುಮಾಡುವ, ಜೀವಂತಿಕೆಯ ಮನುಷ್ಯನನ್ನಾಗಿ ಅನುಭವಿಸುತ್ತೇನೆ, ಹಾಗಾಗಿ ಈ ಖುಶಿ, ಈ ಆನಂದ (4). ಕೊಡುವುದು, ಪಡೆದುಕೊಳ್ಳುವುದಕ್ಕಿಂತ ಹೆಚ್ಚು ಸಂತೋಷಕರವಾಗಿರುವುದು ಅದು ತ್ಯಾಗ ಎನ್ನುವ ಕಾರಣಕ್ಕಾಗಿಯಷ್ಟೇ ಅಲ್ಲ, ಕೊಡುವ ಪ್ರಕ್ರಿಯೆಯಲ್ಲಿ ನನ್ನ ಜೀವಂತಿಕೆಯ ಅಭಿವ್ಯಕ್ತಿಯನ್ನು ನಾನು ಗುರುತಿಸುತ್ತೇನೆ ಎನ್ನುವ ತಿಳುವಳಿಕೆಗಾಗಿ.

ಹಲವಾರು ನಿರ್ಧಿಷ್ಟ ವಿದ್ಯಮಾನಗಳಿಗೆ ಅನ್ವಯಿಸಿ, ಈ ತಿಳುವಳಿಕೆಯ ಸಿಂಧುತ್ವವನ್ನು ಗುರುತಿಸುವುದು ಅಂಥ ಕಷ್ಟವೇನಲ್ಲ. ಅತ್ಯಂತ ಪ್ರಾಥಮಿಕ ಉದಾಹರಣೆ ಸೆಕ್ಸ್ ನ ಪರಿಧಿಯಲ್ಲಿಯೇ ಇದೆ. ಗಂಡಿನ ಲೈಂಗಿಕ ಕ್ರಿಯೆಯ ಪರಾಕಾಷ್ಠತೆಯನ್ನ ಅವನ ‘ಕೊಡುವ’ ಪ್ರಕ್ರಿಯೆಯಲ್ಲಿ ಗುರುತಿಸಬಹುದು; ಇಲ್ಲಿ ಗಂಡು ತನ್ನನ್ನ, ತನ್ನ ಲೈಂಗಿಕ ಅಂಗವನ್ನ, ಲೈಂಗಿಕ ಪರಾಕಾಷ್ಠತೆಯ (orgasm) ಕ್ಷಣದಲ್ಲಿ ತನ್ನ ವೀರ್ಯವನ್ನ ಹೆಣ್ಣಿಗೆ ನೀಡುತ್ತಾನೆ. ಅವನು ಸಮರ್ಥನಾಗಿದ್ದಾಗ, ಹೀಗೆ ಕೊಡದೇ ಅವನಿಗೆ ಬೇರೆ ದಾರಿಯಲ್ಲ, ಅಕಸ್ಮಾತ್ ಅವನಿಗೆ ಕೊಡುವುದು ಸಾಧ್ಯವಾಗದಿದ್ದರೆ ಅವನು ಅಸಮರ್ಥ. ಹೆಣ್ಣಿನ ಸಂದರ್ಭದಲ್ಲಿ ಈ ಪ್ರಕ್ರಿಯೆ ಬೇರೆಯಲ್ಲವಾದರೂ, ಒಂದು ಬಗೆಯಲ್ಲಿ ಹೆಚ್ಚು ಸಂಕೀರ್ಣ. ಅವಳೂ ಕೂಡ ತನ್ನನ್ನು ಗಂಡಿಗೆ ಕೊಡುತ್ತಿದ್ದಾಳೆ, ತನ್ನ ಹೆಣ್ಣುತನದ ಅಂಗ ಸುಖವನ್ನು ಪಡೆಯಲು ಅವನಿಗೆ ಅವಕಾಶ ಮಾಡಿಕೊಡುತ್ತಿದ್ದಾಳೆ. ಅವನಿಂದ ಪಡೆಯುವ ಪ್ರಕ್ರಿಯಲ್ಲಿ ಆಕೆ ಅವನಿಗೆ ಕೊಡುತ್ತಿದ್ದಾಳೆ ಕೂಡ. ಈ ಕೊಡುವ ಕ್ರಿಯೆ ಅವಳಿಗೆ ಸಾಧ್ಯವಾದೇ ಹೋದರೆ, ಆಕೆ ಕೇವಲ ಪಡೆಯುವವಳಾಗಿದ್ದರೆ ಆಕೆ ಅಸಮರ್ಥಳು, ತಣ್ಣನೆಯ ಸ್ವಭಾವದವಳು. ಆದರೆ ಇವಳು ಕೂಡ ಕೊಡುತ್ತಾಳೆ ಆದರೆ ಪ್ರೇಮಿಯಾಗಿ ಅಲ್ಲ, ತಾಯಿಯಾಗಿ. ಆಕೆ ತನ್ನೊಳಗೆ ಬೆಳೆಯುತ್ತಿರುವ ಮಗುವಿಗೆ ತನ್ನನ್ನು ಧಾರೆಯೆರೆಯುತ್ತಾಳೆ. ಮಗುವಿಗೆ ತನ್ನ ಹಾಲುಣಿಸುತ್ತಾಳೆ, ಮಗುವಿಗೆ ಅವಶ್ಯಕವಾದ ತನ್ನ ದೇಹದ ಬೆಚ್ಚಗಿನ ಸ್ಪರ್ಶವನ್ನು ಕೊಡುತ್ತಾಳೆ. ಹೀಗೆ ಮಾಡದೇ ಅವಳಿಗೂ ಬೇರೆ ದಾರಿ ಇಲ್ಲ, ಹೀಗೆ ಕೊಡುವುದು ಸಾಧ್ಯವಾಗದಾಗ ಆಕೆ ನೋವು ಅನುಭವಿಸುತ್ತಾಳೆ.

ವಸ್ತುಗಳ ಪ್ರಪಂಚದಲ್ಲಿ ಕೊಡುವುದೆಂದರೆ ತಾನು ಶ್ರೀಮಂತ ಎಂದೆನಿಸಿಕೊಳ್ಳುವುದು. ಐಶ್ವರ್ಯ ಇರುವವರು ಶ್ರೀಮಂತರಲ್ಲ, ಕೊಡುವವರು ಶ್ರೀಮಂತರು ಎನ್ನುವ ತಿಳುವಳಿಕೆ. ಸಂಪತ್ತನ್ನು ಕೂಡಿಡುವವ ಆದರೆ ಕಳೆದುಕೊಳ್ಳುವ ಆತಂಕ, ಚಿಂತೆಯಲ್ಲಿರುವವನು ಮಾನಸಿಕವಾಗಿ ಹೇಳುವುದಾದರೆ ಬಡವ, ಖಾಲೀ ಮನುಷ್ಯ , ಅವನ ಹತ್ತಿರ ಎಷ್ಟು ಶ್ರೀಮಂತಿಕೆಯಿದ್ದರೂ ಇದು ನಿಜ. ಯಾರಿಗೆ ತಮ್ಮನ್ನು ತಾವು ಕೊಡುವ ಸಾಮರ್ಥ್ಯವಿದೆಯೋ ಅವರು ಮಾತ್ರ ಶ್ರೀಮಂತರು. ಆಗ ಅವನಿಗೆ ತಾನು ಇನ್ನೊಬ್ಬರಿಗೆ ಕೊಡುವ ಸಾಮರ್ಥ್ಯವುಳ್ಳವ ಎನ್ನುವ ಅಭಿಮಾನದ ಅನುಭವವಾಗುತ್ತದೆ. ತಮಗೆ ಬದುಕಲು ಬೇಕಾಗುವ ಕನಿಷ್ಟ ಅವಶ್ಯಕತೆಗಿಂತ ಹೆಚ್ಚಿನದನ್ನು ಕಳೆದುಕೊಳ್ಳುವ ಸಂದರ್ಭಗಳಲ್ಲಿ, ಅವನಿಗೆ ವಸ್ತುಗಳನ್ನ ಕೊಡುವುದನ್ನು ಆನಂದಿಸುವ ಅವಕಾಶವಿಲ್ಲ. ದಿನ ನಿತ್ಯ ನಮ್ಮ ಕಣ್ಣ ಮುಂದೆ ನಡೆಯುತ್ತಿರುವುದನ್ನ ಗಮನಿಸಿದಾಗ, ಪ್ರತಿಯೊಬ್ಬನ ಬದುಕಲು ಬೇಕಾಗುವ ಕನಿಷ್ಟ ಅವಶ್ಯಕತೆ, ಅವನ ವ್ಯಕ್ತಿತ್ವದ ಮೇಲೆ ನಿರ್ಧರಿತವಾಗುತ್ತದೆ, ಅವನ ವಾಸ್ತವಿಕ ಒಡೆತನದ ಸ್ವತ್ತನ್ನ ಆಧರಿಸಿ. ಕೊಡುವ ಬಯಕೆ, ಶ್ರೀಮಂತರಿಗಿಂತ ಬಡವರಲ್ಲಿ ಹೆಚ್ಚು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಒಂದು ನಿರ್ದಿಷ್ಟ ಹಂತವನ್ನು ಮೀರಿದ ಬಡತನ ಕೊಡುವುದನ್ನ ಅಸಾಧ್ಯವಾಗಿಸಿಬಿಡುತ್ತದೆ, ಮತ್ತು ಇದು ತಂದೊಡ್ಡುವ ಸ್ಥಿತಿ ಹೀನಾಯಕರ ಎನಿಸಲು, ಕೇವಲ ಬಡತನ ನೇರವಾಗಿ ಸಾಧ್ಯಮಾಡುವ ಸಂಕಟಗಳಷ್ಟೇ ಕಾರಣ ಅಲ್ಲ, ಬಡವರು ಕೊಡುವ ಆನಂದಿಂದ ವಂಚಿತರಾಗಿರುವುದೂ ಕಾರಣ.

ಕೊಡುವುದರ ಅತ್ಯಂತ ಮುಖ್ಯ ಭಾಗ, ಕೇವಲ ವಸ್ತುಗಳಿಗೆ ಸಂಬಂಧಿಸಿದ್ದಾಗಿರದೇ, ಅದು ಒಂದು ನಿರ್ಧಿಷ್ಟ ಮನುಷ್ಯ ಸ್ವಭಾವಗಳಿಗೆ ಸಂಬಂಧಿಸಿದ್ದಾಗಿದೆ.
ಒಬ್ಬ ಮನುಷ್ಯ ಇನ್ನೊಬ್ಬರಿಗೆ ಏನನ್ನು ಕೊಡುತ್ತಾನೆ? ಆತ ತನ್ನನ್ನ, ತನ್ನ ಬಳಿ ಇರುವ ಅಮೂಲ್ಯವಾದುದನ್ನ, ಕೊನೆಗೆ ತನ್ನ ಬದುಕನ್ನೇ ಕೊಡಬಹುದು. ಹೀಗೆ ಹೇಳಿದರೆ, ಆತ ತನ್ನ ಬದುಕನ್ನೇ ಇನ್ನೊಬ್ಬರಿಗಾಗಿ ತ್ಯಾಗ ಮಾಡುತ್ತಾನೆ ಎಂದಲ್ಲ, ಆತ ತನ್ನೊಳಗಿರುವ ಜೀವಂತವಾಗಿರುವುದನ್ನ ಅವನಿಗೆ ಕೊಡುತ್ತಾನೆ ; ಅವನು ಇನ್ನೊಬ್ಬನಿಗೆ ತನ್ನ ಖುಶಿಯನ್ನ, ಆಸಕ್ತಿಯನ್ನ, ತಿಳುವಳಿಕೆಯನ್ನ, ಜ್ಞಾನವನ್ನ, ನಗುವನ್ನ, ಅಳುವನ್ನ – ಎಲ್ಲ ಭಾವಗಳನ್ನ ಮತ್ತು ತನ್ನೊಳಗೆ ಜೀವಂತವಾಗಿರುವ ಎಲ್ಲದರ ಅಭಿವ್ಯಕ್ತಿಗಳನ್ನ ಕೊಡುತ್ತಾನೆ. ಹೀಗೆ ಅವನು ತನ್ನ ಬದುಕನ್ನ ಕೊಡುವ ಮೂಲಕ ಇನ್ನೊಬ್ಬರ ಬದುಕನ್ನ ಶ್ರೀಮಂತಗೊಳಿಸುತ್ತಾನೆ, ಅವನು ತನ್ನ ಜೀವಂತಿಕೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಇನ್ನೊಬ್ಬರ ಜೀವಂತಿಕೆಯ ಭಾವವನ್ನು ವಿಸ್ತಾರಗೊಳಿಸುತ್ತಾನೆ. ಅವನು ಪಡೆಯುವ ಸಲುವಾಗಿ ಕೊಡುವುದಿಲ್ಲ; ಅವನಿಗೆ ಕೊಡುವುದೇ ಒಂದು ಅದ್ಭುತ ಖುಶಿ. ಆದರೆ ಹೀಗೆ ಕೊಡುವಾಗ ಇನ್ನೊಬ್ಬರಲ್ಲಿ ಏನೋ ಒಂದು ಜೀವಂತವಾಗುವುದನ್ನ ತಡೆಯುವಲ್ಲಿ ಅವನು ಅಸಹಾಯಕ ಮತ್ತು ಹೀಗೆ ಜೀವಂತಗೊಂಡಿರುವುದು ವಾಪಸ್ ಇವನನ್ನು ಪ್ರಭಾವಿಸುತ್ತದೆ. ಅದು ನಿಜವಾದ ಕೊಡುವಿಕೆಯಾಗಿದ್ದಾಗ, ಈ ಕೊಡುವಿಕೆ ಕಾರಣವಾಗಿ ಆತ ಪಡೆದಿರುವುದನ್ನ ನಿರಾಕರಿಸುವುದು ಅವನಿಗೆ ಅಸಾಧ್ಯ. ಕೊಡುವುದೆಂದರೆ, ಸ್ವೀಕರಿಸುವವನನ್ನೂ ಕೊಡುವಂತೆ ಮಾಡುವುದು ಮತ್ತು ಇಬ್ಬರೂ ಸೇರಿ ತಾವು ಜೀವಂತಗೊಳಿಸಿರುವದನ್ನ ಸಂಭ್ರಮಿಸುವುದು.

(4) Compare the definition of joy given by Spinoza.

(ಮುಂದುವರಿಯುವುದು…)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

Leave a Reply to ಪ್ರೀತಿಯಲ್ಲಿ ಗೌರವ, ಜವಾಬ್ದಾರಿ … : Art of love #13 – ಅರಳಿಮರ Cancel reply